‘2019ರಲ್ಲಿ ಬಿಜೆಪಿಗೆ 300 ಸ್ಥಾನ ಖಚಿತ : ಮತ್ತೆ ಮೋದಿಯೇ ಪ್ರಧಾನಿ’

By Web DeskFirst Published Feb 13, 2019, 1:16 PM IST
Highlights

ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು,  ಇದೇ ವೇಳೆ ವಿವಿಧ ಪಕ್ಷಗಳು ಗೆಲುವಿಗಾಗಿ ಸಿದ್ಧತೆ ನಡೆಸುತ್ತಿವೆ. ಇನ್ನು ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಮತ್ತೆ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. 

ಮಂಗಳೂರು :  ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕ ಬರಲಿ, ಪ್ರಿಯದರ್ಶಿನಿಯೇ ಬರಲಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾರಿಂದಲೂ ನರೇಂದ್ರ ಮೋದಿ ಗೆಲುವಿಗೆ ತಡೆಯಾಗದು. 2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಈ ಬಾರಿ 300ಕ್ಕೂ ಅಧಿಕ ಸ್ಥಾನ ಗಳಿಸಿ ಸರ್ಕಾರ ರಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ ಮೋದಿ ಹೇಳಿದ್ದಾರೆ.

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 282 ಸ್ಥಾನ ಗಳಿಸಿದ್ದ ಬಿಜೆಪಿ 2019ರ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸ್ಥಾನ ಪಡೆದು ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರ ಗದ್ದುಗೆಗೆ ಏರಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. 

ಮಂಗಳೂರಿನ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಲು ಆಗಮಿಸಿದ ಅವರು ಈ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಜನರ ಮನಸ್ಸಿನಲ್ಲಿದ್ದರೆ ಯಾರೂ ಅದನ್ನು ತಪ್ಪಿಸಲಾಗದು, ಜನರ ಆಶೀರ್ವಾದ ಅವರ ಮೇಲಿದೆ ಎಂದರು.
ಕಳೆದ ಐದು ವರ್ಷಗಳಲ್ಲಿ ಮೋದಿಜೀ ಏನು ಮಾಡಿಲ್ಲ ಹೇಳಿ. ಎಲ್ಲವನ್ನೂ ಮಾಡಿದ್ದಾರೆ. ಹೀಗಾಗಿ ಜನರೂ ಸರ್ಕಾರವನ್ನು ಸ್ವೀಕಾರ ಮಾಡಿದ್ದಾರೆ. ತಮ್ಮ ಮನೆಗೆ ಏನೂ ಕೊಂಡೊಯ್ಯಲು ಆಗಿಲ್ಲ ಎಂಬ ಕಾರಣಕ್ಕಾಗಿ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕ ವಿಚಾರಗಳನ್ನೇ ದೊಡ್ಡದು ಮಾಡುತ್ತಿದ್ದಾರೆ. ಆದರೆ ಅದು ಫಲ ನೀಡಲ್ಲ ಎಂದು ಟೀಕಿಸಿದರು. 

ಮಹಾಘಟಬಂಧನ್‌ನಿಂದ ಏನೂ ಆಗದು: ರಾಷ್ಟ್ರ ಮಟ್ಟದಲ್ಲಿ ಮಹಾ ಘಟಬಂಧನ್ ರಚನೆಯ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ ಮೋದಿ, ಘಟಬಂಧನ್ ಹಿಂದೆಯೂ ಎಷ್ಟೋ ಆಗಿದೆ. ಈಗಲೂ ಇದರಿಂದ ಏನೂ ಬದಲಾಗದು. ಆದರೆ ವಾಜಪೇಯಿ ಅವರಿದ್ದಾಗ ರಚನೆಯಾದ ಎನ್‌ಡಿಎ ಈಗಲೂ ಇದೆ, ಸದೃಢವಾಗಿದೆ ಎಂದು ಹೇಳಿದರು.

ಮಮತಾಗೆ ಬೆಂಬಲ ನೀಡಿಲ್ಲ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ನಾನು ಬೆಂಬಲ ಕೊಟ್ಟಿಲ್ಲ. ಮಾಧ್ಯಮದವರು ನನ್ನ ಹೇಳಿಕೆ ತಿರುಚಿ ಬರೆದಿದ್ದಾರೆ ಎಂದ ಪ್ರಹ್ಲಾದ ಮೋದಿ, ನರೇಂದ್ರ ಮೋದಿ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. ನಾನು ರೇಶನ್ ಅಂಗಡಿ ಡೀಲರ್‌ಗಳ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷನಾಗಿರುವುದರಿಂದ ಕೆಲವೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವುದು ಹೌದು. ಹಾಗೆಂದ ಮಾತ್ರಕ್ಕೆ ಎನ್‌ಡಿಎ ಸರ್ಕಾರದ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು.

click me!