'ಪಿಎಂ ಕೇ​ರ್ಸ್ ವೆಂಟಿಲೇಟರ್ಗಳು‌ ನಕಲಿ'

By Kannadaprabha NewsFirst Published Apr 21, 2021, 9:45 AM IST
Highlights

 ರಾಜ್ಯಕ್ಕೆ ಬಂದಿರುವ 1500 ವೆಂಟಿಲೇಟರ್‌ಗಳು ನಕಲಿ. ಸರ್ಕಾರಿ ಆಸ್ಪತ್ರೆಯ ವೈದ್ಯರೂ ಈ ವೆಂಟಿಲೇಟರ್‌ಗಳನ್ನು ಬಳಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಲಾಗಿದೆ. 

 ಬೆಂಗಳೂರು (ಏ.21):  ನಾನೊಬ್ಬ ವೈದ್ಯನಾಗಿ ಹೇಳುತ್ತಿದ್ದೇನೆ. ಪ್ರಧಾನಿ ಪರಿಹಾರ ನಿಧಿ (ಪಿಎಂ ಕೇರ್ಸ್‌ ಫಂಡ್‌) ಯೋಜನೆಯಡಿ ರಾಜ್ಯಕ್ಕೆ ಬಂದಿರುವ 1500 ವೆಂಟಿಲೇಟರ್‌ಗಳು ನಕಲಿ. ಸರ್ಕಾರಿ ಆಸ್ಪತ್ರೆಯ ವೈದ್ಯರೂ ಈ ವೆಂಟಿಲೇಟರ್‌ಗಳನ್ನು ಬಳಸುತ್ತಿಲ್ಲ ಎಂದು ಕುಣಿಗಲ್‌ ಶಾಸಕ ಡಾ.ಎಚ್‌.ಡಿ.ರಂಗನಾಥ್‌ ಗಂಭೀರ ಆರೋಪ ಮಾಡಿದ್ದಾರೆ.

ಅಲ್ಲದೆ, ಸರ್ಕಾರ ವೆಂಟಿಲೇಟರ್‌ ಬೆಡ್‌ ಹಾಗೂ ರೆಮ್‌ಡೆಸಿವಿರ್‌ ಔಷಧ ಸಮಸ್ಯೆ ಇಲ್ಲ ಎಂದು ಹೇಳುತ್ತಿರುವುದೆಲ್ಲವೂ ಸುಳ್ಳು. ರೆಮ್‌ಡೆಸಿವಿರ್‌ ಔಷಧ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಬೆಂಗಳೂರಿನ ಯಾವುದೇ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಬೆಡ್‌ಗಳು ಖಾಲಿ ಇಲ್ಲ. ಮಾಧ್ಯಮದವರು ಸೇರಿ ಯಾರು ಬೇಕಾದರೂ ಪರಿಶೀಲಿಸಿ. ಒಂದೇ ಒಂದು ಬೆಡ್‌ ಖಾಲಿ ಇರುವುದನ್ನು ಹುಡುಕಿಕೊಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಐಸಿಯು ಬೆಡ್‌, ವೆಂಟಿಲೇಟರ್‌ ಸಿಗದೇ ನರಳಿ ನರಳಿ ಪ್ರಾಣ ಬಿಟ್ಟ ಸೋಂಕಿತ ...

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಪರಿಹಾರ ನಿಧಿಯ ಯೋಜನೆಯಿಂದ ರಾಜ್ಯಕ್ಕೆ ನೀಡಿರುವ 1500 ವೆಂಟಿಲೇಟರ್‌ಗಳು ನಕಲಿ. ವೆಂಟಿಲೇಟರ್‌ಗಳನ್ನು ಸರ್ಕಾರಿ ಆಸ್ಪತ್ರೆ ವೈದ್ಯರೂ ಬಳಸುತ್ತಿಲ್ಲ. ಬೇಕಿದ್ದರೆ ಯಾವುದೇ ಆಸ್ಪತ್ರೆಗೆ ಹೋಗಿ ವಿಚಾರಿಸಿ ನೋಡಿ. ಜನರ ಪ್ರಾಣ ಉಳಿಸಲು ಇನ್ವೇಸಿವ್‌ ವೆಂಟಿಲೇಟರ್‌ಗಳು ಬೇಕು. ಆಸ್ಪತ್ರೆಗಳಿಗೆ ನೀಡಿರುವ ವೆಂಟಿಲೇಟರ್‌ಗಳಲ್ಲಿ ಈ ಸೌಲಭ್ಯ ಇಲ್ಲ. ಸರ್ಕಾರ ಹೇಳುತ್ತಿರುವುದಕ್ಕೂ ವಾಸ್ತವ ಚಿತ್ರಣಕ್ಕೂ ಒಂದೂ ಸಂಬಂಧವಿಲ್ಲ. ಸರ್ಕಾರ ಎಲ್ಲವನ್ನೂ ಮುಚ್ಚಿಡುತ್ತಿದೆ. ಕೋವಿಡ್‌ ನಿಯಂತ್ರಣ, ಸೋಂಕಿತರಿಗೆ ಸೂಕ್ತ ಆರೋಗ್ಯ ಸೌಲಭ್ಯ, ಚಿಕಿತ್ಸೆ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಕೊರೋನಾದ ಎರಡನೇ ಅಲೆಗೆ ನಮ್ಮ ಸರ್ಕಾರಗಳೇ ಕಾರಣ. ಆಕ್ಸಿಜನ್‌ ಕೊರತೆಗೆ ಸರ್ಕಾರವೇ ನೇರ ಹೊಣೆ. ರಾಜ್ಯದಲ್ಲಿ ಕೈಗಾರಿಕಾ ಆಕ್ಸಿಜನ್‌ ಸಾಕಷ್ಟಿದೆ. ಇದನ್ನು ಹಾಸ್ಪಿಟಲ್‌ ಆಕ್ಸಿಜನ್‌ಗೆ ಪರಿವರ್ತಿಸಬಹುದು. ಆದರೂ ಸರ್ಕಾರ ಈ ಕೆಲಸ ಮಾಡುತ್ತಿಲ್ಲ. ಎಚ್ಚೆತ್ತು ಬಿಗಿ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ ಎಂದು ಎಚ್ಚರಿಸಿದರು.

- ಒಂದೇ ಒಂದು ಖಾಲಿ ಬೆಡ್‌ ತೋರಿಸಿ ನೋಡೋಣ

click me!