
ಬೆಂಗಳೂರು (ಜೂ.21): ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಮತ್ತು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ದಾಖಲಾಗಿದೆ. ಈ ಸಂಬಂಧ ಅಶೋಕನಗರದ ನಿವಾಸಿ ಕೆ.ಕೆ. ಶರೀಫುದ್ದೀನ್ ತಕರಾರು ಅರ್ಜಿ ಸಲ್ಲಿಸಿದ್ದು, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ನಗರ ಪೊಲೀಸ್ ಆಯುಕ್ತರು ಮತ್ತು ಅಶೋಕ ನಗರ ಠಾಣಾ ಇನ್ಸ್‌ಪೆಕ್ಟರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಇಂಗ್ಲೀಷ್ ಖಾಸಗಿ ಸುದ್ದಿ ವಾಹಿನಿಯಲ್ಲಿ ಮೇ 27ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಕೋಮು ಸೌಹಾರ್ದತೆ ಕದಡುವ ಉದ್ದೇಶದಿಂದ ನೀಡಿರುವ ಇಂತಹ ಹೇಳಿಕೆಯಿಂದ ದೇಶದಲ್ಲಿ ಮುಸ್ಲಿಂ ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಕಾರ್ಯಕರ್ತರ ಮೇಲೆ ಪಕ್ಷಕ್ಕೆ ಹಿಡಿತ ಇಲ್ಲ, ಬಿಜೆಪಿ ತೊರೆದ ನಾಯಕಿ!
ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದಿವೆ. ಈ ವೇಳೆ ಕೋಮು ಸೌಹಾರ್ದತೆ ಕದಡಿದೆ ಹಾಗೂ ಶಾಂತಿಭಂಗ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನೂಪುರ್ ಶರ್ಮಾ ವಿರುದ್ಧ ಮೇ 30ರಂದು ದೂರು ದಾಖಲಿಸಲಾಗಿದೆ. ಆದರೆ, ಅಶೋಕ ನಗರದ ಠಾಣಾ ಇನ್ಸ್‌ಪೆಕ್ಟರ್ ಆ ದೂರು ಪರಿಗಣಿಸಿ ಎಫ್‌ಐಆರ್ ದಾಖಲಿಸಿಲ್ಲ ಹಾಗೂ ನೂಪುರ್ ಶರ್ಮಾ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಆದ್ದರಿಂದ ತಮ್ಮ ದೂರು ಆಧರಿಸಿ ನೂಪುರ್ ಶರ್ಮಾ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Prophet Row: ನೂಪುರ್ ಶರ್ಮಾ ಹೇಳಿಕೆ ವಿರೋಧಿಸಿ ಭಾರತದ ಮೇಲೆ ಸೈಬರ್ ದಾಳಿಗೆ ಮುಂದಾದ ಹ್ಯಾಕರ್ಸ್ ಗ್ರೂಪ್
ವಿಚಾರಣೆಗೆ 4 ವಾರ ಅವಧಿ ಕೇಳಿದ ನೂಪುರ್: ತಮಗೆ ಜೀವ ಭೀತಿ ಇರುವ ಹಿನ್ನೆಲೆಯಲ್ಲಿ ಪ್ರವಾದಿ ಅವಹೇಳನ ಮಾಡಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು 4 ವಾರಗಳ ಕಾಲಾವಕಾಶ ನೀಡುವಂತೆ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಕೋಲ್ಕತಾ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪ್ರವಾದಿ ಅವಹೇಳನ ಮಾಡಿದ್ದಕ್ಕೆ ಕೋಲ್ಕತಾದ ನಾರ್ಕೆಲ್‌ಡಂಗಾ ಪೊಲೀಸ್ ಠಾಣೆಯಲ್ಲಿ ನೂಪುರ್ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೂಪುರ್‌ಗೆ ಸಮನ್ಸ್ ನೀಡಿದ್ದರು. ಇದಕ್ಕೆ ಮೇಲ್ ಮೂಲಕ ಪ್ರತಿಕ್ರಿಯಿಸಿದ ನೂಪುರ್, ‘ಜೀವ ಬೆದರಿಕೆಯಿರುವ ಹಿನ್ನೆಲೆಯಲ್ಲಿ 4 ವಾರಗಳ ಬಳಿಕ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಿ’ ಎಂದು ವಿನಂತಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ