ಮೈಸೂರಿಗೆ ಹೋಗೋದಾಗಿ ಹೇಳಿ ಐಸಿಸ್‌ ಸೇರಿದರು!

By Web DeskFirst Published Dec 14, 2018, 8:25 AM IST
Highlights

10 ಯುವಕರು ಐಸಿಸ್‌ ಸೇರಿದ್ದಾರೆ ಎಂಬ ಆತಂಕಕಾರಿ ಮಾಹಿತಿ ತಿಳಿದುಬಂದಿದೆ.

ಕಣ್ಣೂರು(ಡಿ.14): ಕೇರಳದ ಅನೇಕ ಮುಸ್ಲಿಂ ಯುವಕರು ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಸಂಘಟನೆಯತ್ತ ಆಕರ್ಷಿತರಾಗುವುದು ಮುಂದುವರಿದಿದ್ದು, ಮತ್ತೆ 10 ಯುವಕರು ಐಸಿಸ್‌ ಸೇರಿದ್ದಾರೆ ಎಂಬ ಆತಂಕಕಾರಿ ಮಾಹಿತಿ ತಿಳಿದುಬಂದಿದೆ. ಈ 10 ಜನರಲ್ಲಿ ಐವರು ಅಪ್ರಾಪ್ತರು.

ವಿಚಿತ್ರವೆಂದರೆ ಕರ್ನಾಟಕದ ಮೈಸೂರಿಗೆ ಹೋಗಿಬರುವುದಾಗಿ ಹೇಳಿ ನವೆಂಬರ್‌ 20ರಂದು ಈ 10 ಮಂದಿ ತಮ್ಮ ತಮ್ಮ ಊರುಗಳಿಂದ ತೆರಳಿದ್ದು, ವಾಪಸ್‌ ಬಂದಿಲ್ಲ. ಲಭ್ಯ ಮಾಹಿತಿಯ ಪ್ರಕಾರ ಅವರು ದುಬೈಗೆ ತೆರಳಿದ್ದು, ಅಲ್ಲಿಂದ ಇರಾನ್‌ನ ತೆಹ್ರಾನ್‌ಗೆ ತೆರಳಿದ್ದಾರೆ. ಅಲ್ಲಿಂದ ಅವರು ಆಷ್ಘಾನಿಸ್ತಾನಕ್ಕೆ ತಮ್ಮ ನೆಲೆ ಬದಲಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಇವರು ಕಣ್ಣೂರು ಜಿಲ್ಲೆಯವರಾಗಿದ್ದು, ಇವರಲ್ಲಿ 9 ಜನ ಅಳಿಕ್ಕೋಡ್‌ನ 2 ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಇನ್ನೊಬ್ಬ ವ್ಯಕ್ತಿ ಕಣ್ಣೂರಿನ ಕುರುವ ಎಂಬ ಪ್ರದೇಶಕ್ಕೆ ಸೇರಿದವನಾಗಿದ್ದಾನೆ.

ಸಾಜಿದ್‌, ಆತನ ಪತ್ನಿ, ಇಬ್ಬರು ಮಕ್ಕಳು, ಅನ್ವರ್‌, ಆತನ ಪತ್ನಿ ಆಸೀಫಾ ಹಾಗೂ ಈ ದಂಪತಿಯ ಮೂವರು ಮಕ್ಕಳು- ಒಂದೇ ಕುಟುಂಬಕ್ಕೆ ಸೇರಿದ್ದು, ಐಸಿಸ್‌ ಸೇರಲು ದೇಶ ಬಿಟ್ಟು ಹೋಗಿದ್ದಾರೆ.

ಇವರನ್ನೆಲ್ಲ ಟಿ.ವಿ. ಶಂಶೀರ್‌ ಎಂಬಾತ ತಲೆಕೆಡಿಸಿ ಉಗ್ರವಾದದತ್ತ ಸೆಳೆದಿದ್ದ. ಶಂಶೀರ್‌ ಈಗಾಗಲೇ ಸಿರಿಯಾಗೆ ಹೋಗಿ ಭದ್ರತಾ ಪಡೆಗಳಿಂದ ಹತ್ಯೆಗೀಡಾಗಿದ್ದ ಎಂದು ಮೂಲಗಳು ಹೇಳಿವೆ. ಅನ್ವರ್‌ನ ಪತ್ನಿ ಆಸೀಫಾಗೆ ಶಂಶೀರ್‌ ಬಂಧು ಕೂಡ ಹೌದು.

ಈ ಶಂಕಿತರು ಮೊದಲು ದುಬೈನಲ್ಲಿ ಇದ್ದರು. ಒಟ್ಟಿಗೇ ಕೆಲಸ ಮಾಡುತ್ತಿದ್ದರು. ದುಬೈನಲ್ಲಿದ್ದಾಗಲೇ ಇವರು ಮತಾಂಧರಾದರು. ಉಗ್ರವಾದವನ್ನು ಇವರ ತಲೆಯಲ್ಲಿ ತುಂಬಲಾಗಿತ್ತು. ಕೇರಳದಲ್ಲಿ ಇದ್ದ ಇತರ ಐಸಿಸ್‌ ಅನುಕಂಪವಾದಿಗಳು ಕೂಡ ಇವರು ಪರಿಚಿತರಾಗಿದ್ದರು ಎಂದು ಮೂಲಗಳು ಹೇಳಿವೆ.

ಈ ನಡುವೆ, ಸಿರಿಯಾ-ಆಷ್ಘಾನಿಸ್ತಾನ ಗಡಿಯಲ್ಲಿ ನಡೆದ ಅಮೆರಿಕ ಕ್ಷಿಪಣಿ ದಾಳಿಯಲ್ಲಿ ಈ ಎಲ್ಲರೂ ಸತ್ತಿರಬಹುದು ಎಂದೂ ಮಾಧ್ಯಮ ವರದಿಗಳು ಹೇಳಿವೆ.

2016ರ ಜುಲೈನಲ್ಲಿ 21 ಮಂದಿ ಕೇರಳ ಬಿಟ್ಟು ಸಿರಿಯಾಗೆ ಹೋಗಿ ಐಸಿಸ್‌ ಸೇರಿದ್ದರು. ಅವರೆಲ್ಲ ಈಗ ಸೇನಾ ದಾಳಿಯಲ್ಲಿ ಮೃತಪಟ್ಟಿರಬಹುದು ಎನ್ನಲಾಗಿತ್ತು. ಇವರಲ್ಲಿ ಅನೇಕರು ಇತ್ತೀಚಿನ ವರ್ಷಗಳಲ್ಲಿ ಹಿಂದು/ಕ್ರೈಸ್ತ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದರೂ ಎಂದು ವರದಿಗಳು ಹೇಳಿದ್ದವು.

click me!