ಮಂಡ್ಯ ಬಸ್‌ ದುರಂತದಲ್ಲಿ ದೆವ್ವ, ಭೂತ ವದಂತಿ!

By Web DeskFirst Published Dec 14, 2018, 7:45 AM IST
Highlights

ಮಂಡ್ಯ ಬಸ್‌ ದುರಂತದಲ್ಲಿ ದೆವ್ವ, ಭೂತ ವದಂತಿ ಹಿನ್ನೆಲೆ 21ರಂದು ಕನಗನಮರಡಿಯಲ್ಲಿ ಶಾಂತಿ ಹೋಮ!

ಮಂಡ್ಯ[ಡಿ.14]: ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ಖಾಸಗಿ ಬಸ್‌ ದುರಂತ ನಡೆದ ವಿ.ಸಿ.ನಾಲೆ ಸುತ್ತಮುತ್ತಲು ಪ್ರೇತಾತ್ಮಗಳು ಓಡಾಡುತ್ತಿವೆ ಎಂಬ ವದಂತಿ ಹಬ್ಬಿದೆ. ಇದರಿಂದ ಭಯಭೀತರಾಗಿರುವ ಸುತ್ತಮುತ್ತಲ ಗ್ರಾಮಸ್ಥರು ಘಟನೆ ನಡೆದ ಸ್ಥಳದಲ್ಲಿ ಡಿ.21 ರಂದು ಶಾಂತಿ ಹೋಮ ನಡೆಸಲು ಮುಂದಾಗಿದ್ದಾರೆ.

ನ.24 ರಂದು ವಿ.ಸಿ.ನಾಲೆಗೆ ಬಸ್‌ ಉರುಳಿ 30 ಮಂದಿ ಅಮಾಯಕರು ಜಲಸಮಾಧಿಯಾಗಿದ್ದರು. ದುರಂತ ನಡೆದ ಕೆಲವೇ ದಿನಗಳಲ್ಲಿ ಅದೇ ಸ್ಥಳದಲ್ಲಿ ಕಾರು ಪಲ್ಟಿಯಾಗಿತ್ತು. ಮತ್ತೊಂದು ಬೈಕ್‌ ಅಪಘಾತಕ್ಕೀಡಾಗಿತ್ತು. ಈ ಎರಡು ಘಟನೆಗಳಿಂದ ಮಾನಸಿಕವಾಗಿ ಭೀತಿಗೊಳಗಾಗಿರುವ ಗ್ರಾಮಸ್ಥರು ಬಸ್‌ ಅಪಘಾತ ನಡೆದ ನಾಲೆಯ ಸುತ್ತಮುತ್ತ ದೆವ್ವ, ಭೂತಗಳು ಓಡಾಡುತ್ತಿವೆ ಎಂಬ ನಂಬಿಕೆ ಬೆಳೆಸಿಕೊಂಡಿದ್ದಾರೆ. ಈ ಕುರಿತು ಸಾಕಷ್ಟುವದಂತಿಗಳೂ ಹಬ್ಬಿರುವುದರಿಂದ ಈಗ ಆ ಸ್ಥಳದಲ್ಲಿ ಶಾಂತಿ ಹೋಮ ನಡೆಸಲು ನಿರ್ಧರಿಸಿದ್ದಾರೆ.

ಪಾಂಡವಪುರದ ಪುರೋಹಿತರೊಬ್ಬರ ಮಾರ್ಗದರ್ಶನದಂತೆ ಕನಗನಮರಡಿ, ವದೆಸಮುದ್ರ, ಚಿಕ್ಕಕೊಪ್ಪಲು, ದೊಡ್ಡಕೊಪ್ಪಲು ಗ್ರಾಮಸ್ಥರು ಸೇರಿ 50 ಸಾವಿರ ರುಪಾಯಿಗೂ ಹೆಚ್ಚು ಮೊತ್ತದಲ್ಲಿ ಶಾಂತಿ ಹೋಮ ನಡೆಸುತ್ತಿದ್ದಾರೆ.

ಏತನ್ಮಧ್ಯೆ, ದುರಂತ ನಡೆದ ಸ್ಥಳದಲ್ಲಿ ದೆವ್ವದ ಕಾಟದ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಜನರಲ್ಲಿ ಧೈರ್ಯ ತುಂಬಲು, ಜಾಗೃತಿ ಮೂಡಿಸಲು ಡಿ.7ರ ಅಮಾವಾಸ್ಯೆ ದಿನ ಪಾಂಡವಪುರ ವಿಜ್ಞಾನದ ಕೇಂದ್ರದ ಸದಸ್ಯರು ಡಾ. ಹುಲಿಕಲ… ನಟರಾಜು ನೇತೃತ್ವದಲ್ಲಿ ಇಡೀ ರಾತ್ರಿ ವಾಸ್ತವ್ಯವಿದ್ದು ಚರ್ಚೆ, ಸಂವಾದ ನಡೆಸಿದ್ದರು.

click me!