ಲಾಕ್‌ಡೌನ್‌ ಆತಂಕ: ಮಾರ್ಕೆಟ್‌ಗಳಲ್ಲಿ ಮುಗಿಬಿದ್ದ ಜನ

By Kannadaprabha News  |  First Published Apr 26, 2021, 8:21 AM IST

ತರಕಾರಿ, ದಿನಸಿ ಖರೀದಿಗೆ ಮುಗಿಬಿದ್ದ ಸಾರ್ವಜನಿಕರು| ಸೋಮವಾರದ ಬಳಿಕವೂ ಕರ್ಫ್ಯೂ ಮುಂದುವರಿಯಬಹುದೆಂಬ ಆತಂಕ| ಕೊರೋನಾ ಪರಿವೇ ಇಲ್ಲದ ತರಕಾರಿ ಖರೀದಿ ಮಾಡುವಲ್ಲಿ ತಲ್ಲೀನರಾದ  ಜನರು| 


ಬೆಂಗಳೂರು(ಏ.26): ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ಈಗಾಗಲೇ ಘೋಷಿಸಲಾಗಿರುವ ವೀಕೆಂಡ್‌ ಕರ್ಫ್ಯೂ ಸೋಮವಾರದ ಬಳಿಕವೂ ಮುಂದುವರಿಯಬಹುದೆಂಬ ಆತಂಕದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಾರುಕಟ್ಟೆಗಳಲ್ಲಿ ನಾಗರಿಕರು ಮುಗಿಬಿದ್ದಿದ್ದ ದೃಶ್ಯಗಳು ಭಾನುವಾರ ಕಂಡುಬಂದವು.

ವೀಕೆಂಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ 10 ಗಂಟೆ ವರಗೆ ಹಾಲು, ತರಕಾರಿ, ದಿನಸಿ ಮೊದಲಾದ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಕರ್ಫ್ಯೂ ಮುಂದುವರಿಯಬಹುದೆಂಬ ಭಯದಿಂದ ಬೆಂಗಳೂರು, ಮೈಸೂರು, ದಾವಣಗೆರೆ, ಬೆಳಗಾವಿ, ಬಾಗಲಕೋಟೆ, ಬೆಳಗಾವಿ, ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗ, ಚಿತ್ರದುರ್ಗ, ಮಂಡ್ಯ, ರಾಯಚೂರು ಮೊದಲಾದೆಡೆ ಮಾರುಕಟ್ಟೆಗಳಲ್ಲಿ ಭಾರೀ ಜನಸಂದಣಿ ಏರ್ಪಟ್ಟಿತ್ತು.
ಬಹುತೇಕ ಯಾವ ಮಾರುಕಟ್ಟೆಗಳಲ್ಲೂ ಸಾಮಾಜಿಕ ಅಂತರ ಪಾಲನೆಯಾಗಲಿಲ್ಲ. ಹೆಚ್ಚಿನವರು ಮಾಸ್ಕ್‌ ಕೂಡ ಧರಿಸಿರಲಿಲ್ಲ. ಕೊರೋನಾ ಪರಿವೇ ಇಲ್ಲದೆ ಜನರು ತರಕಾರಿ ಖರೀದಿ ಮಾಡುವಲ್ಲಿ ತಲ್ಲೀನರಾಗಿದ್ದರು. ವಿಜಯಪುರ ತರಕಾರಿ ಮಾರುಕಟ್ಟೆಯಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್‌ ಹಾಕಿದ್ದರೂ ಜನರು ಮಾತ್ರ ತಮ್ಮಿಚ್ಛೆಯಂತೆ ಸಾಮಾಜಿಕ ಅಂತರ ಮರೆತು ವ್ಯವಹರಿಸಿದರು.

Latest Videos

undefined

ವೀಕೆಂಡ್‌ ಕರ್ಫ್ಯೂ: ವೈರಸ್‌ಗೆ ಡೋಂಟ್‌ ಕೇರ್‌, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ..!

ದಾವಣಗೆರೆಯಲ್ಲಿ ವಾರದ ಸಂತೆ ಭಾನುವಾರವೇ ಆಗಿದ್ದರಿಂದ ಸಹಜವಾಗಿಯೇ ಜನಜಂಗುಳಿ ಏರ್ಪಟ್ಟಿತ್ತು. ಹಾವೇರಿ, ಕೊಪ್ಪಳಗಳ ತರಕಾರಿ ಮಾರುಕಟ್ಟೆಗಳಲ್ಲೂ ಇದೇ ದೃಶ್ಯಗಳು ಕಂಡುಬಂದಿದ್ದು, ಬೆಳಗ್ಗೆ 9.30ರ ಬಳಿಕ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸುವಲ್ಲಿ ಯಶಸ್ವಿಯಾದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಎಪಿಎಂಸಿ ಮಾರುಕಟ್ಟೆ ಆವರಣ ಹೊರಭಾಗದ ರಾಜ್ಯ ಹೆದ್ದಾರಿಯಲ್ಲಿ ತರಕಾರಿ ಖರೀದಿಗೆ ಜನ ಮುಗಿಬಿದ್ದ ಹಿನ್ನಲೆ ಪೊಲೀಸರು ಜನರನ್ನು ಚದುರಿಸಿ ಸಾಂಕ್ರಾಮಿಕ ಅಧಿನಿಯಮದಡಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ ಘಟನೆಯೂ ನಡೆದಿದೆ.

click me!