ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ವೃದ್ಧಾಪ್ಯ ವೇತನ

By Kannadaprabha NewsFirst Published Feb 29, 2020, 10:42 AM IST
Highlights

ವಯೋವೃದ್ಧರು ಅಲೆದಾಡಿಸುವುದನ್ನು ತಪ್ಪಿಸಲು ಅವರ ಮನೆಬಾಗಿಲಿಗೇ ಇನ್ಮುಂದೆ ವೃದ್ಧಾಪ್ಯ ವೇತನ ತಲುಪಲಿದೆ ಎಂದು ಸಚಿವ ಆರ್ ಅಶೋಕ್ ಹೇಳಿದರು.  

 ಕಲಬುರಗಿ [ಫೆ.29]:  ವೃದ್ಧಾಪ್ಯ ವೇತನ ಪಡೆಯಲು ಇನ್ಮುಂದೆ ಜಿಲ್ಲಾಧಿಕಾರಿಗಳ ಕಚೇರಿ, ತಹಸೀಲ್ದಾರ್‌ ಕಚೇರಿಗಳಿಗೆ ಅಲೆದಾಡಬೇಕಾಗಿಲ್ಲ. 60 ವರ್ಷ ಪೂರೈಸಿದ ಬಡವರಿಗೆ ಮನೆ ಬಾಗಿಲಿಗೇ ಸೌಲಭ್ಯ ಹುಡುಕಿಕೊಂಡು ಬರಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಅವರು ಹೇಳಿದ್ದಾರೆ.

 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಯೋಜನೆಯ ಲಾಭ ಪಡೆಯಲು ವಯೋವೃದ್ಧರು ಅಲೆದಾಡಿಸುವುದನ್ನು ತಪ್ಪಿಸಲು ಅವರ ಮನೆಬಾಗಿಲಿಗೇ ಯೋಜನೆ ತಲುಪಲಿದೆ. ತಾಲೂಕು ಕಚೇರಿಯಲ್ಲಿ ಆಯಾ ತಾಲೂಕಿನ ಬಡಜನರ ಆಧಾರ್‌ ಕಾರ್ಡ್‌ಗಳ ಪಟ್ಟಿಇದ್ದು, ಯಾರಿಗೆ 60 ವರ್ಷ ತುಂಬುತ್ತದೆಯೋ ಅವರಿಗೆ ಅಂಚೆ ಮೂಲಕ ಇಲ್ಲವೇ ಗ್ರಾಮಲೆಕ್ಕಿಗರೇ ಖುದ್ದಾಗಿ ಹೋಗಿ ವೃದ್ಧಾಪ್ಯ ವೇತನ ಯೋಜನೆಯ ಸೇರ್ಪಡೆ ಪತ್ರ ನೀಡಬೇಕು ಎಂದು ಸೂಚಿಸಿದರು.

ಅಲೆದಾಡಿಸಬಾರದು:

ಅರ್ಹರಿಂದ ಬ್ಯಾಂಕ್‌ ಪಾಸ್‌ ಪುಸ್ತಕ ಮಾತ್ರ ಪಡೆಯಬೇಕು. ತಾಲೂಕು ಕಚೇರಿಗೆ ಕರೆತಂದು ಕೇವಲ ಫೋಟೋ(ಭಾವಚಿತ್ರ) ತೆಗೆಸಿಕೊಂಡು ಸರಳವಾಗಿ ಯೋಜನೆಗೆ ಸೇರ್ಪಡೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಯಸ್ಸಾದವರನ್ನು ಅಲೆದಾಡಿಸಬಾರದು. ಪ್ರತಿವರ್ಷ ಬಜೆಟ್‌ನಲ್ಲಿ ವೃದ್ಧಾಪ್ಯ ವೇತನಕ್ಕಾಗಿಯೇ 7,500 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ. ಯೋಜನೆಯಲ್ಲಿ ಮಧ್ಯವರ್ತಿಗಳು ನುಸುಳದಂತೆ ತಡೆಯಬೇಕು ಎಂದು ತಹಸೀಲ್ದಾರರಿಗೆ ಸೂಚಿಸಿದರು.

ನನ್ನ ಕನಸಿನ ಯೋಜನೆ:

ರಾಜ್ಯದಲ್ಲಿ 70ರಿಂದ 80 ಸಾವಿರ ವೃದ್ಧಾಪ್ಯ ವೇತನ ಪಡೆಯುವ ಬೋಗಸ್‌ ಫಲಾನುಭವಿಗಳಿದ್ದು, ಈ ಮೂಲಕ ಅವರಿಗೂ ಕಡಿವಾಣ ಬಿದ್ದಂತಾಗುತ್ತದೆ. ಬಳ್ಳಾರಿ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಯೋಜನೆಯನ್ನು ಮುಂದಿನ ತಿಂಗಳು ಜಾರಿಗೆ ತರಲಾಗುತ್ತಿದೆ. ಇದು ನನ್ನ ಕನಸಿನ ಯೋಜನೆಯಾಗಿದೆ. ಬಡವರಿಗೆ ಅನುಕೂಲವಾಗುವ ಈ ಯೋಜನೆ ಯಶಸ್ವಿ ಹಾಗೂ ಜನಪ್ರಿಯವಾಗಬೇಕು ಎಂಬ ಹಂಬಲ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ನಕುಲ್‌ ಅವರಿಗೆ ಈ ಬಗ್ಗೆ ಸಂಪೂರ್ಣ ಜ್ಞಾನವಿದ್ದು, ಅವರಿಂದ ಮಾಹಿತಿ ಪಡೆಯಬೇಕು. ಈ ಕುರಿತು ವಿಭಾಗ ಮಟ್ಟದ ಜಿಲ್ಲಾಧಿಕಾರಿಗಳ ಸಭೆ ಕರೆದು, ಪರಿಶೀಲನೆ ನಡೆಸಬೇಕೆಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಎನ್‌. ವಿ. ಪ್ರಸಾದ್‌ಗೆ ಸಚಿವರು ಸೂಚಿಸಿದರು.

ಅಶೋಕ್‌ಗೆ ಸಿಎಂ ಆಗೋ ಯೋಗ: ಸ್ವಾಮೀಜಿ ಭವಿಷ್ಯ!...

ಇದಕ್ಕೂ ಮೊದಲು, ಜಿಲ್ಲೆಯಲ್ಲಿನ ಬರಪರಿಸ್ಥಿಯ ಬಗ್ಗೆ ಸರಿಯಾಗಿ ಮಾಹಿತಿ ನೀಡದಿದ್ದಕ್ಕೆ ಅಫಜಲಪುರ ತಹಸೀಲ್ದಾರರನ್ನು ಸಚಿವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಕಲಬುರಗಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ, ಪ್ರತಿ ಸಭೆಯಲ್ಲಿ ಸರಿಯಾದ ಅಂಕಿ-ಅಂಶಗಳ ಮಾಹಿತಿ ನೀಡುತ್ತಿಲ್ಲ ಎಂದು ತಹಸೀಲ್ದಾರರ ಬಗ್ಗೆ ಗರಂ ಆದರು. ಪ್ರವಾಹ ಸಂದರ್ಭದಲ್ಲಿ ಅಫಜಲಪುರ ತಾಲೂಕಿನಲ್ಲಿ ಹಲವು ಮನೆಗಳು ಹಾನಿಗೀಡಾಗಿವೆ. ಕೇವಲ ಒಂದು ಮನೆ ಎಂದು ತಹಶೀಲ್ದಾರರು ಹೇಳುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಬೇಕೆಂದು ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ತಿಳಿಸಿ, ತಹಸೀಲ್ದಾರರು ಪಾಲಿಸಬೇಕಾದ ಕರ್ತವ್ಯಗಳು ಹಾಗೂ ನಿಯಮಗಳ ಬಗ್ಗೆ ತಿಳಿಹೇಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಶರತ್‌.ಬಿ ಮಾತನಾಡಿ, 2019 ಆಗಸ್ಟ್‌ನಿಂದ ಫೆಬ್ರುವರಿ 2020ರವರೆಗಿನ ಸಕಾಲದಲ್ಲಿ ಪ್ರಗತಿ ಬಗ್ಗೆ ವಿವರಿಸಿದರು. ಜನವರಿ ಮಾಹೆಯಲ್ಲಿ ಮೊದಲ ರಾರ‍ಯಂಕ್‌ ಸೇರಿದಂತೆ ಕಂದಾಯ ಇಲಾಖೆ ಜಿಲ್ಲೆಯಲ್ಲಿ ಸಾಧಿಸಿರುವ ಪ್ರಗತಿ ಬಗ್ಗೆ ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ರಾಜಕುಮಾರ ಪಾಟೀಲ ತೇಲ್ಕೂರ, ಸುಭಾಷ್‌ ಗುತ್ತೇದಾರ, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಡಾ. ಎನ್‌.ವಿ.ಪ್ರಸಾದ್‌, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಉಪಸ್ಥಿತರಿದ್ದರು.

click me!