ಆಂಧ್ರ ಅಂಗನವಾಡಿ ಮಕ್ಕಳಿಗೆ ನಂದಿನಿ ಹಾಲು!

By Kannadaprabha NewsFirst Published Feb 29, 2020, 9:11 AM IST
Highlights

ಆಂಧ್ರ ಪ್ರದೇಶದ ಅಂಗನವಾಡಿ ಮಕ್ಕಳು ಕರ್ನಾಟಕದ ನಂದಿನಿ ಹಾಲನ್ನು ಪಡೆಯಲಿದ್ದಾರೆ. ಈ ಬಗ್ಗೆ ಆಂಧ್ರ ಸರ್ಕಾರ ಕೆಎಂಎಫ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. 

ಬೆಂಗಳೂರು [ಫೆ.29]:  ರಾಜ್ಯದ ತಾಜಾ ನಂದಿನಿ ಹಾಲನ್ನು ಆಂಧ್ರಪ್ರದೇಶದ ಅಂಗನವಾಡಿಗಳಿಗೆ ಪೂರೈಕೆ ಮಾಡಲು ಕೆಎಂಎಫ್‌ ಜತೆಗೆ ಆಂಧ್ರಪ್ರದೇಶ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ಮಾರ್ಚ್ 1ರಿಂದ ಪ್ರತಿ ತಿಂಗಳು ಒಟ್ಟು 55 ಲಕ್ಷ ಲೀಟರ್‌ ನಂದಿನಿ ಹಾಲನ್ನು ಕೆಎಂಎಫ್‌ ಆಂಧ್ರಪ್ರದೇಶಕ್ಕೆ ಸರಬರಾಜು ಮಾಡಲಿದೆ.

ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಅವರು, ಅಲ್ಲಿನ ಅಂಗನವಾಡಿ ಮಕ್ಕಳಿಗೆ ಕೆಎಂಎಫ್‌ ಹಾಲು ಪೂರೈಸಲು ಮನವಿ ಮಾಡಿದ್ದರು. ಹೀಗಾಗಿ ಆಂಧ್ರಪ್ರದೇಶ ಸರ್ಕಾರ ಮತ್ತು ಕೆಎಂಎಫ್‌ ನಡುವೆ ಎರಡು ವರ್ಷದ ಅವಧಿಗೆ ನಂದಿನಿ ಹಾಲು ಸರಬರಾಜಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಕೆಎಂಎಫ್‌ ಮಾಚ್‌ರ್‍ 1ರಿಂದ ಪ್ರತಿ ದಿನ 1.75 ಲಕ್ಷ ಲೀಟರ್‌ನಂತೆ ತಿಂಗಳಿಗೆ 55 ಲಕ್ಷ ಲೀಟರ್‌ ಹಾಲು ಸರಬರಾಜು ಮಾಡಲಿದೆ ಎಂದು ತಿಳಿಸಿದರು.

ಲೀಟರ್‌ ಹಾಲಿಗೆ 30: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮನ್ಮುಲ್‌ ಭಾರೀ ಕೊಡುಗೆ...

ಕೆಎಂಎಫ್‌ ಲಾಭದಾಯಕ ದರದಲ್ಲಿಯೇ ಆಂಧ್ರಕ್ಕೆ ಟೆಟ್ರಾಪ್ಯಾಕ್‌ ಮತ್ತು ಫ್ಲೆಕ್ಸಿ ಪ್ಯಾಕ್‌ಗಳಲ್ಲಿ ಹಾಲು ಸರಬರಾಜು ಮಾಡಲಿದೆ. ಸಾರಿಗೆ ವೆಚ್ಚವನ್ನು ಕೆಎಂಎಫ್‌ ಭರಿಸಲಿದೆ. ಹಾಲು ಸರಬರಾಜಿನ ವೆಚ್ಚ ಮತ್ತು ಹಾಲಿನ ದರ ಒಟ್ಟು ಸೇರಿಸಿ ಸಂಸ್ಥೆಗೆ ಲಾಭ ಬರುವಂತೆ ದರವನ್ನು ನಿಗದಿಪಡಿಸಲಾಗಿದೆ. ಬಂದಂತ ಲಾಭವನ್ನು ಕೆಎಂಎಫ್‌ ರೈತರಿಗೆ ನೀಡಲಿದೆ ಎಂದು ಹೇಳಿದರು.

ಕೆಎಂಎಫ್‌ ನಂದಿನಿ ಬ್ರಾಂಡ್‌ ಮಾರುಕಟ್ಟೆವಿಸ್ತರಿಸಲು ಕ್ರಮಕೈಗೊಂಡಿದೆ. ಆಂಧ್ರಪ್ರದೇಶದಂತೆ ತೆಲಂಗಾಣ, ಕೇರಳ, ದೆಹಲಿ, ಛತ್ತೀಸ್‌ಗಢ ಸರ್ಕಾರದೊಂದಿಗೆ ನಂದಿನಿ ಹಾಲು ಸರಬರಾಜು ಕುರಿತು ಮಾತುಕತೆ ನಡೆಸುತ್ತಿದೆ. ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿದೆ ಎಂದು ಮಾಹಿತಿ ನೀಡಿದರು.

ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನ ಎಂಬ ಖ್ಯಾತಿ ಗಳಿಸಿರುವ ತಿರುಪತಿ ತಿಮ್ಮಪ್ಪನ ದೇಗುಲದ ಪ್ರಸಾದ ತಯಾರಿಕೆಗಾಗಿ ಈಗಾಗಲೇ ಕೆಎಂಎಫ್‌ ನಂದಿನಿ ತುಪ್ಪ ಸರಬರಾಜು ಮಾಡುತ್ತಿದೆ ಎಂದರು.

ನಂದಿನಿ ಚಾಕೋಲೇಟ್‌ ಕಾರ್ಖಾನೆ:  ಕೆಎಂಎಫ್‌ ಕ್ಯಾಂಪ್ಕೋ ಚಾಕೋಲೇಟ್‌ ಕಂಪನಿಯ ಸಹಕಾರದಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ನಂದಿನಿ ಚಾಕೋಲೇಟ್‌ ಉತ್ಪಾದನೆ ಮಾಡುತ್ತಿದೆ. ಪ್ರಸ್ತುತ ಚಿಟ್‌ಚಾಟ್‌, ಕ್ರೀಮಿ ಬೈಟ್‌, ಗುಡ್‌ಲೈಫ್‌ ಮತ್ತು ಎಕ್ಲೈ​ರ್‍ಸ್ ಸೇರಿದಂತೆ 10 ಬಗೆಯ ನಂದಿನಿ ಚಾಕೋಲೇಟ್‌ಗಳು ಮಾರುಕಟ್ಟೆಯಲ್ಲಿವೆ. ಅಮೂಲ್‌ ಮಾದರಿಯಲ್ಲಿ ನಂದಿನಿ ಬ್ರಾಂಡಿನ ಚಾಕೋಲೇಟ್‌ ಉತ್ಪಾದನೆ ಹೆಚ್ಚಿಸುವ ಚಿಂತನೆಯನ್ನು ಕೆಎಂಎಫ್‌ ಮಾಡುತ್ತಿದೆ ಎಂದು ಬಾಲಚಂದ್ರ ಹೇಳಿದರು.

ಕೆಎಂಎಫ್‌ ಖಾಸಗಿ ಸಹಭಾಗಿತ್ವದಲ್ಲಿ ನಂದಿನಿ ಬ್ರಾಂಡ್‌ನಲ್ಲಿ ಚಾಕೋಲೇಟ್‌ ಉತ್ಪಾದನೆ ಮಾಡಲು ಪ್ರತ್ಯೇಕ ಚಾಕೋಲೇಟ್‌ ಫ್ಯಾಕ್ಟರಿ ಸ್ಥಾಪಿಸುವ ಚಿಂತನೆ ನಡೆಸಿದೆ. ನಂದಿನಿ ಹಾಲು ಬಳಸಿಕೊಂಡು ಚಾಕೋಲೇಟ್‌ಗಳನ್ನು ಉತ್ಪಾದಿಸುವ ಮೂಲಕ ಇತರ ಚಾಕೋಲೇಟ್‌ ಸಂಸ್ಥೆಗಳಿಗೆ ಸ್ಪರ್ಧೆಯೊಡ್ಡುವ ಉದ್ದೇಶ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಐಸ್‌ಕ್ರೀಂ ಸೇರಿದಂತೆ ಹಾಲಿನ ಉತ್ಪನ್ನಗಳಲ್ಲಿ ನಂದಿನಿ ಚಾಕೋಲೇಟ್‌ಗಳು ಕೂಡ ಸೇರಲಿದೆ. ಅದಕ್ಕಾಗಿ ಸಂಸ್ಥೆ ಸರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

click me!