10 ಕೇಜಿ ಅಕ್ಕಿಗೆ ಹಣ ಕೊಡಬೇಕು: ಬಿಜೆಪಿ

By Kannadaprabha NewsFirst Published Jun 29, 2023, 8:00 AM IST
Highlights

ಕಾಂಗ್ರೆಸ್‌ ಪಕ್ಷ ಈಗ ಅಧಿಕಾರಕ್ಕೆ ಬಂದ ನಂತರ ಕೇವಲ ಐದು ಕೆ.ಜಿ.ಗೆ ಪರ್ಯಾಯವಾಗಿ ಹಣ ನೀಡುವ ನಿರ್ಧಾರ ಕೈಗೊಳ್ಳುವ ಮೂಲಕ ವಚನ ಭ್ರಷ್ಟವಾಗಿದೆ ಎಂದು ಆಪಾದಿಸಿದ ಬಿಜೆಪಿ 

ಬೆಂಗಳೂರು(ಜೂ.29): ಚುನಾವಣೆ ಪೂರ್ವದಲ್ಲಿ ನೀಡಿರುವ ಭರವಸೆಯಂತೆ ಕಾಂಗ್ರೆಸ್‌ ಸರ್ಕಾರ ತಲಾ 10 ಕೆ.ಜಿ. ಅಕ್ಕಿ ನೀಡಬೇಕು ಅಥವಾ ಅದಕ್ಕೆ ಸಮನಾಗಿ ಮಾರುಕಟ್ಟೆ ದರದಲ್ಲಿ ಹಣ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದೆ. ಕಾಂಗ್ರೆಸ್‌ ಪಕ್ಷ ಈಗ ಅಧಿಕಾರಕ್ಕೆ ಬಂದ ನಂತರ ಕೇವಲ ಐದು ಕೆ.ಜಿ.ಗೆ ಪರ್ಯಾಯವಾಗಿ ಹಣ ನೀಡುವ ನಿರ್ಧಾರ ಕೈಗೊಳ್ಳುವ ಮೂಲಕ ವಚನ ಭ್ರಷ್ಟವಾಗಿದೆ ಎಂದೂ ಬಿಜೆಪಿ ಆಪಾದಿಸಿದೆ.

ಬುಧವಾರ ವಿವಿಧೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಪ್ರಧಾನ ಕಾರ್ಯದರ್ಶಿಗಳಾದ ಎನ್‌.ರವಿಕುಮಾರ್‌, ಅಶ್ವತ್ಥನಾರಾಯಣ, ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

Latest Videos

ಅಕ್ಕಿ ಬದಲು ಹಣ ನೀಡಿ ಎಂದವರೇ ಬಿಜೆಪಿಗರು, ಈಗ ವಿರೋಧಿಸುತ್ತಿದ್ದಾರೆ: ಸಚಿವ ಎಚ್‌.ಕೆ.ಪಾಟೀಲ್‌

ಕೇಜಿಗೆ 60 ರು. ಕೊಡಿ: ಬೊಮ್ಮಾಯಿ:

ಬಸವರಾಜ ಬೊಮ್ಮಾಯಿ ಮಾತನಾಡಿ, ‘ಸರ್ಕಾರದ ಅನ್ನಭಾಗ್ಯ ಯೋಜನೆಯ ಮೊದಲ ತುತ್ತಿನಲ್ಲಿಯೇ ಕಲ್ಲು ಬಂದಿದೆ. ಕಾಂಗ್ರೆಸ್‌ನವರು ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದರು. ಈಗ ಐದು ಕೆಜಿ ಅಕ್ಕಿ ನೀಡಲಾಗುವುದು, ಆ ಅಕ್ಕಿಗೆ ಬದಲು ಕೆಜಿಗೆ 34 ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ 50ರಿಂದ 60 ರು. ಬೆಲೆ ಇದೆ. ಆದರೆ, ಇವರು ಕೊಡುವ ಹಣಕ್ಕೆ ಮಾರುಕಟ್ಟೆಯಲ್ಲಿ ಎರಡೂವರೆ ಕೆಜಿ ಅಕ್ಕಿ ಮಾತ್ರ ಬರುತ್ತದೆ’ ಎಂದರು.
‘ಒಟ್ಟಾರೆ ಕಾಂಗ್ರೆಸ್‌ ಸಕ್ರಾರ ಗ್ಯಾರಂಟಿ ಯೋಜನೆ ಜಾರಿಗೊಳಿಸುವಲ್ಲಿ ಜನರಿಗೆ ಮೋಸ ಮಾಡುವುದನ್ನು ಮುಂದುವರೆಸಿದೆ. ಚುನಾವಣೆಯಲ್ಲಿ ಕೊಟ್ಟಮಾತಿನಂತೆ ಹತ್ತು ಕೆಜಿ ಅಕ್ಕಿ ಕೊಡಿ. ಇಲ್ಲವೇ ಮಾರುಕಟ್ಟೆದರದಲ್ಲಿ ಕೆಜಿಗೆ 60 ರು.ಗಳಂತೆ ಹತ್ತು ಕೆಜಿಗೆ ತಗುಲುವ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಿ. ಇಲ್ಲದಿದ್ದರೆ ಮಾತಿಗೆ ತಪ್ಪಿದ್ದಕ್ಕಾಗಿ ಜನತೆಯ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

ಸಿದ್ದು ವಚನ ಭ್ರಷ್ಟ- ಕಟೀಲ್‌:

ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿ, ‘ಸಿದ್ದರಾಮಯ್ಯ ಸರ್ಕಾರ ವಚನ ಭ್ರಷ್ಟಆಗಿದೆ. ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದರು. ಈಗ ಐದು ಕೆಜಿ ನೀಡಲಾಗುವುದು. ಅಕ್ಕಿ ಬದಲು ಹಣ ನೀಡಲಾಗುವುದು ಎನ್ನುತ್ತಿದೆ. ಇದು ವಚನಭ್ರಷ್ಟಸರ್ಕಾರ. ಐದು ಕೆಜಿ ಅಕ್ಕಿ ಕೇಂದ್ರ ಸರ್ಕಾರ ನೀಡುತ್ತಿದೆ. ಇವರು ಹತ್ತು ಕೆಜಿ ನೀಡಬೇಕು. ಒಟ್ಟು 15 ಕೆಜಿ ಆಗಲಿದೆ. ಅಕ್ಕಿ ಕೊಡೊಕೆ ಆಗದೆ ಇದ್ದರೆ ಹಣ ನೀಡಿ ಎಂದಾಗ ಅದಕ್ಕೆ ಸಿದ್ದರಾಮಯ್ಯ, ಹಣ ತಿನ್ನೋದಕ್ಕೆ ಆಗುತ್ತಾ? ನಾವು ಅಕ್ಕಿಯನ್ನೇ ಕೊಡುತ್ತೇವೆ ಎಂದಿದ್ದರು. ಈಗ ಅಕ್ಕಿಯನ್ನೇ ನೀಡಿ. ಹಣ ನೀಡುವ ನಿಮ್ಮ ಡೋಂಗಿ ನಿರ್ಣಯ ಕೈಬಿಡಿ. ಈ ಬಗ್ಗೆ ನಾವು ಸದನದ ಒಳಗೆ ಹೊರಗೆ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಘೋಷಿಸಿದಂತೆ 10 ಕೆಜಿ ಅಕ್ಕಿಗೆ ಹಣ ನೀಡಿ: ರಾಜ್ಯ ಸರ್ಕಾರಕ್ಕೆ ಪ್ರಲ್ಹಾದ್‌ ಜೋಶಿ ಆಗ್ರಹ

ರವಿಕುಮಾರ್‌ ಮಾತನಾಡಿ, ನೈತಿಕತೆ ಇಲ್ಲದ ಸರ್ಕಾರ ಸಿದ್ದರಾಮಯ್ಯ ಸರ್ಕಾರ. ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ. ನಾವು ಈ ವಿಚಾರವಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಅಕ್ಕಿ ಅಭಿಯಾನ ಕೂಡ ಮಾಡ್ತೇವೆ ಎಂದರು.
ಅಶ್ವತ್ಥನಾರಾಯಣ ಮಾತನಾಡಿ, ‘ಎಳೆಯೋಕೆ ಆಗದ ಎತ್ತು ಮೆಳೆ ಮೇಲೆ ಬಿತ್ತು ಎನ್ನುವ ಸ್ಥಿತಿ ಈಗ ಕಾಂಗ್ರೆಸ್‌ ಪಕ್ಷದ್ದಾಗಿದೆ. ಅಕ್ಕಿಗೆ ದುಡ್ಡು ಕೊಡೋದೇ ಆದರೆ 10 ಕೆಜಿ ಲೆಕ್ಕಕ್ಕೆ ಕೊಡಬೇಕು. ಈಗ ಜನರಿಗೆ ಟೋಪಿ ಹಾಕಿದ್ದಾರೆ’ ಎಂದು ಟೀಕಿಸಿದರು.

ಬಿ.ವೈ. ವಿಜಯೇಂದ್ರ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರ ಜನರ ಕಿವಿಗೆ ಹೂವು ಇಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಉಚಿತ ಯೋಜನೆ ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದೆ. ನೀಡಿದ ಮಾತಿನಂತೆ ನಡೆದುಕೊಳ್ಳಬೇಕು.ಇಲ್ಲವಾದರೆ ಬೀದಿಗೆ ಇಳಿಯಬೇಕಾಗುತ್ತದೆ. ಚುನಾವಣೆಗೂ ಮುನ್ನ ಕಾಂಗ್ರೆಸ್‌ ಕೊಟ್ಟ ಮಾತಿನಂತೆ ನಡೆಯಬೇಕು. ಆಗದಿದ್ದಲ್ಲಿ ರಾಜ್ಯದ ಜನರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

click me!