4ನೇ ದಿನಕ್ಕೆ ಸಾರಿಗೆ ಮುಷ್ಕರ: ಖಾಸಗಿ ಬಸ್ಸುಗಳ ದರ್ಬಾರ್, KSRTC ಸಿಬ್ಬಂದಿ ಅಮಾನತು

By Suvarna NewsFirst Published Apr 10, 2021, 11:52 AM IST
Highlights

ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್ ಕಾರ್ಯಾಚರಣೆಗೆ ಅನುಮತಿ| ಖಾಸಗಿ ಬಸ್, ಸಾರಿಗೆ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ| ಆಟೋ ಚಾಲಕರಿಗೆ ಸಾರಿಗೆ ನೌಕರರ ಮುಷ್ಕರದ ಎಫೆಕ್ಟ್| ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ| 

ಬೆಂಗಳೂರು(ಏ.10): ಸಾರಿಗೆ ನೌಕರರ ಮುಷ್ಕರ ಇಂದಿಗೆ(ಶನಿವಾರ) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದೂ ಕೂಡ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿಲ್ಲ. ಹೀಗಾಗಿ ಸರ್ಕಾರಿ ಬಸ್‌ಗಳು ಸಿಗದೆ ರಾಜ್ಯದ ಜನತೆ ಬಹಳಷ್ಟು ತೊಂದರೆಗಳನ್ನ ಅನುಭವಿಸುತ್ತಿದ್ದಾರೆ. 

ಹೆಚ್ಚು ಪ್ರಯಾಣ ಶುಲ್ಕ‌ ತೆಗೆದುಕೊಂಡರೆ ಕ್ರಮ

ಸರ್ಕಾರಿ ಬಸ್ ಸಂಚಾರ ಸ್ತಬ್ಧವಾದ ಹಿನ್ನೆಲೆಯಲ್ಲಿ ಖಾಸಗಿ‌ ವಾಹನಗಳಿಗೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸರ್ಕಾರಿ ನಿಗದಿ ಪಡಿಸಿದ ಪ್ರಯಾಣ ಶುಲ್ಕ ಮಾತ್ರ ತೆಗೆದುಕೊಳ್ಳಬೇಕು. ಹೆಚ್ಚು ಪ್ರಯಾಣ ಶುಲ್ಕ‌ ತೆಗೆದುಕೊಂಡರೆ ಕ್ರಮತೆಗೆದುಕೊಳ್ಳಲಾಗುತ್ತದೆ. ಇದರ ಜೊತೆಗೆ ವಾಹನಗಳ ದಾಖಲಾತಿಗಳೂ ಕೂಡ  ಸರಿಯಾಗಿರಬೇಕು. ಇನ್ಶುರೆನ್ಸ್ ಭರಿಸಿರಬೇಕು ಸೇರಿದಂತೆ ಎಂಬಿತ್ಯಾದಿ ನಿಯಮಗಳನ್ನ ಜಾರಿ ಮಾಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಹಿನ್ನಲೆ ಖಾಸಗಿ ಬಸ್‌ಗಳುಗೆ ತಾತ್ಕಾಲಿಕ ಅನುಮತಿ ನೀಡಲಾಗಿದೆ ಎಂದು ವಿಜಯಪುರ ಆರ್‌ಟಿಓ‌ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೂ ದಾವಣಗೆರೆ ನಗರದಲ್ಲಿಯೂ ಕೂಡ ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದೆ. ಆದ್ರೂ ಕೂಡ ಖಾಸಗಿ ಬಸ್‌ನವರಿಗೆ ನಿರೀಕ್ಷಿತ ಕಲೆಕ್ಷನ್ ಆಗುತ್ತಿಲ್ಲ ಎಂದುನ ತಿಳಿದು ಬಂದಿದೆ. ಮುಷ್ಕರದ ಮುಂದಾಳತ್ವ ವಹಿಸಿದ 17 ನೌಕರರನ್ನ ವರ್ಗಾವಣೆ ಮಾಡಲಾಗಿದೆ. 

ಸಾರಿಗೆ ನಿಗಮಗಳಲ್ಲಿ ಆದಾಯಕ್ಕಿಂತ ಖರ್ಚೇ ಅಧಿಕ

ರಸ್ತೆಗಿಳಿದ ಎರಡು ಸಾರಿಗೆ ಇಲಾಖೆ ಬಸ್

ಇಂದು ಚಿತ್ರದುರ್ಗದಲ್ಲಿ ಎರಡು ಸಾರಿಗೆ ಇಲಾಖೆ ಬಸ್‌ಗಳು ರಸ್ತೆಗಿಳಿದಿವೆ. ಸಾರಿಗೆ ಅಧಿಕಾರಿಗಳು ಸಿಬ್ಬಂದಿಯನ್ನ ಮನವೊಲಿಸಿ ಕರ್ತವ್ಯಕ್ಕೆ ಮರಳುವಂತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸ್ ಭದ್ರತೆಯಲ್ಲಿ ಒಂದು ಸಾರಿಗೆ ಬಸ್ ದಾವಣಗೆರೆಗೆ ಹೋಗಿದೆ. ಮತ್ತೊಂದು ಬಸ್‌ ದಾವಣಗೆರೆ ತೆರಳಲು ಸಿದ್ಧವಾಗಿದೆ. ಚಿತ್ರದುರ್ಗ ವಿಭಾಗದ ವ್ಯಾಪ್ತಿಯಲ್ಲಿ 10 ಜನ ನೌಕರರನ್ನ ವರ್ಗಾವಣೆ ಮಾಡಲಾಗಿದೆ. ಆಡಳಿತಾತ್ಮಕ ಕಾರಣ ನೀಡಿ ವರ್ಗಾವಣೆ ಆದೇಶವನ್ನ ಹೊರಡಿಸಲಾಗಿದೆ ಎಂದು ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.

ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಕೇವಲ ಐದು ಸರ್ಕಾರಿ ಬಸ್‌ಗಳು ಸಂಚಾರವನ್ನ ಆರಂಭಿಸಿವೆ. ಬೆಳಗಾವಿಯಿಂದ ಖಾನಾಪುರ, ನಿಪ್ಪಾಣಿ, ಬೈಲಹೊಂಗಲ, ಪಾಶ್ಚಾಪುರ, ಚಿಕ್ಕೋಡಿಗೆ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾಗಿದೆ. ಇನ್ನೊಂದೆಡೆ ಕೆಲವು ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ ಸಾರಿಗೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.

ಮೈಸೂರಿನಲ್ಲಿ ಸರ್ಕಾರಿ-ಖಾಸಗಿ ಬಸ್‌ ಒಡಂಬಡಿಕೆ 

ಮೈಸೂರಿನಲ್ಲಿ ಸರ್ಕಾರಿ ಬಸ್‌ ಹಾಗೂ ಖಾಸಗಿ ಬಸ್‌ಗಳು ಒಡಂಬಡಿಕೆ ಮಾಡಿಕೊಂಡಿವೆ. ಆದರೆ ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಸಾರಿಗೆ ಬಸ್‌ಗಳು ನಿಲ್ದಾಣಕ್ಕೆ ಬಂದ ಹಿನ್ನೆಲೆಯಲ್ಲಿ ಖಾಸಗಿ ಬಸ್ ಚಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಸಂಪೂರ್ಣ ಬಸ್ ನಿಲ್ದಾಣದಿಂದ ಹೊರ ಹೋಗುತ್ತೇವೆ ಎಂದು ಖಾಸಗಿ ಬಸ್‌ ಸಿಬ್ಬಂದಿ  ಬೆದರಿಕೆನ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ತಟ್ಟೆ, ಲೋಟ ಬಡಿದು ಧರಣಿ: ಕೋಡಿಹಳ್ಳಿ ಚಂದ್ರಶೇಖರ್‌

ಮಂಗ್ಳೂರಲ್ಲಿ 17 ಜನ ನೌಕರರು ಎತ್ತಂಗಡಿ

ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ 17 ಜನ ನೌಕರನ್ನ ಎತ್ತಂಗಡಿ ಮಾಡಲಾಗಿದೆ. ಬಸ್ ಬಂದ್‌ಗೆ ಪ್ರಚೋದನೆ ನೀಡಿದ ಆರೋಪದ ಅಡಿ 15 ಜನ ಚಾಲಕ-ನಿರ್ವಾಹಕರು, ಇಬ್ಬರು ಟೆಕ್ನಿಶಿಯನ್‌ಗಳನ್ನ ಟ್ರಾನ್ಸ್‌ಫರ್ ಮಾಡಲಾಗಿದೆ. ಕರ್ತವ್ಯಕ್ಕೆ ಹಾಜರಾಗದ ಎಲ್ಲ ಸಿಬ್ಬಂದಿಯನನ್ನ ಅಮಾನತು ಮಾಡುವ ಎಚ್ಚರಿಕೆ ನೀಡಿದ್ದಾರೆ. 

ಚಾಮರಾಜನಗರದಲ್ಲಿ 10 ಕ್ಕೂ ಹೆಚ್ಚು KSRTC ಬಸ್ ಸಂಚಾರವನ್ನ ಆರಂಭಿಸಿವೆ. ಚಾಮರಾಜನಗರ, ಮೈಸೂರು ಮಾರ್ಗದಲ್ಲಿ ಬಸ್‌ ಸಂಚಾರ ಪ್ರಾರಂಭವಾಗಿದೆ. ಇಷ್ಟಾದ್ರೂ ಕೂಡ ಪ್ರಯಾಣಿಕರು ಬಸ್ ನಿಲ್ದಾಣದತ್ತ ಮುಖ ಮಾಡಿಲ್ಲ. ಹೀಗಾಗಿ ಸಾರಿಗೆ ಬಸ್‌ನಲ್ಲಿ ಬೆರಳೆಣಿಕೆಯಷ್ಟು ಮಂದಿಯಿಂದ ಪ್ರಯಾಣ ಮಾಡಿದ್ದಾರೆ.

ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ 

ಹುಬ್ಬಳ್ಳಿ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಪ್ರಯಾಣಿಕರ‌ ಪರದಾಟ ನಡೆಸಿದ್ದಾರೆ. ಪರಿಸ್ಥಿತಿಯ ಲಾಭ ಪಡೆದ ಖಾಸಗಿ ವಾಹನಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ದುಪ್ಪಟ್ಟು ಹಣ ವಸೂಲಿಗೆ ವಿದ್ಯಾರ್ಥಿಗಳು, ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಹಳೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ ಸಿಬ್ಬಂದಿ ರಾಜಾರೋಷವಾಗಿ ಹಣ ಸುಲಿಗೆ ಮಾಡುತ್ತಿದ್ದಾರೆ. ಬೇಕಿದ್ರೆ ಹತ್ತರಿ ಇಲ್ಲಂದ್ರೆ ಬಿಡ್ರಿ ಎಂದು ಹೇಳುತ್ತಿದ್ದಾರೆ.

ಆಟೋ ಚಾಲಕರಿಗೆ ಸಾರಿಗೆ ನೌಕರರ ಮುಷ್ಕರದ ಎಫೆಕ್ಟ್

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬೀದರ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ಗ್ರಾಹಕರು ಇಲ್ಲ ಆಟೋ ಚಾಲಕರು ಕಂಗಾಲಾಗಿದ್ದಾರೆ. ಮುಷ್ಕರದಿಂದ ಪ್ರಯಾಣಿಕರು ಬಸ್ ನಿಲ್ದಾಣದ ಬರುತ್ತಿಲ್ಲ. ಇದರಿಂದ ಗ್ರಾಹಕರು ಇಲ್ಲದೇ ಆಟೋ ಚಾಲಕರು ಕಂಗೆಟ್ಟು ಹೋಗಿದ್ದಾರೆ.

ಖಾಸಗಿ ಬಸ್, ಸಾರಿಗೆ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ

ಚಿಕ್ಕಮಗಳೂರಿನಲ್ಲಿ ಖಾಸಗಿ ಬಸ್, ಸಾರಿಗೆ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಸ್ ನೀವು ಓಡಿಸಿ, ಇಲ್ಲ ನಮಗೆ ಬಿಡಿ ಎಂದು ಖಾಸಗಿ ಬಸ್ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಬಸ್ ಮಧ್ಯೆ ಒಂದೊಂದೆ ಸರ್ಕಾರಿ ಬಸ್ ರಸ್ತೆಗೆ ಇಳಿಯುತ್ತಿವೆ. ಇದರಿಂದ ಖಾಸಗಿ ಬಸ್ ಮಾಲೀಕರು ಆಕ್ರೋಶ ವ್ಯಕ್ತಪಡಿದ್ದಾರೆ.

click me!