
ಆತ್ಮಭೂಷಣ್
ಮಂಗಳೂರು[ಜ.24]: 2010ರಲ್ಲಿ ವಿಮಾನ ದುರಂತ ಬಳಿಕ ಟೇಬಲ್‌ಟಾಪ್ ವಿಮಾನ ನಿಲ್ದಾಣ ಎಂಬ ಕುಖ್ಯಾತಿಗೆ ಒಳಗಾಗಿದ್ದ, ಇದೀಗ ಸಜೀವ ಬಾಂಬ್ ಪತ್ತೆಯೊಂದಿಗೆ ಸುದ್ದಿಗೆ ಗ್ರಾಸವಾಗಿರುವ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಹಾಗೂ ವಿಮಾನಗಳ ನಿರ್ವಹಣೆ ಇಳಿಮುಖ ಕಾಣುತ್ತಿದೆ.
ಮಂಗಳೂರಿನಿಂದ 140 ಕಿ.ಮೀ. ದೂರದ ಕೇರಳದ ಕಣ್ಣೂರಿನಲ್ಲಿ 2018ರಲ್ಲಿ ಹೊಸ ವಿಮಾನ ನಿಲ್ದಾಣ ಆರಂಭವಾದ ಬಳಿಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಒಂದೊಂದೇ ಕೊರತೆ ಕಾಣಿಸತೊಡಗಿದೆ. ಇದೀಗ ಪ್ರಯಾಣಿಕರ ಕೊರತೆ ಹಾಗೂ ವಿಮಾನ ಸಂಚಾರ ಕುಂಠಿತವಾಗುವ ಹಂತಕ್ಕೆ ತಲುಪಿದೆ. ಈ ಮಧ್ಯೆ ಜಾಲತಾಣಗಳಲ್ಲಿ ಕೂಡ ಕಣ್ಣೂರು ವಿಮಾನ ನಿಲ್ದಾಣ ಬೆಂಬಲಿಸುವ ಮಾತುಗಳನ್ನು ಹರಿಯಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಇದಕ್ಕೆ ನಿಖರವಾದ ಕಾರಣವನ್ನು ಹೇಳದಿದ್ದರೂ, ಎಲ್ಲರೂ ಬೆರಳು ತೋರಿಸುವುದು ಕಣ್ಣೂರು ವಿಮಾನ ನಿಲ್ದಾಣದತ್ತ ಎಂಬುದು ಗಮನಾರ್ಹ.
ಎರಡು ದಿನ ಸ್ಫೋಟಕದ ಪಕ್ಕದಲ್ಲೇ ಮಲಗಿದ್ದ ಆದಿತ್ಯ!
ವಿಮಾನ ಸಂಖ್ಯೆ ಇಳಿಮುಖ:
ಮಂಗಳೂರು ವಿಮಾನ ನಿಲ್ದಾಣದಲ್ಲಿ ದಿನಂಪ್ರತಿ ದೇಶೀ ಹಾಗೂ ಅಂತಾರಾಷ್ಟ್ರೀಯ ಸೇರಿ ಸುಮಾರು 70 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಕಳೆದ ಒಂದು ವರ್ಷದಿಂದ ಇದರ ಸಂಖ್ಯೆ 46ಕ್ಕೆ ಇಳಿದಿದೆ. ಮಂಗಳೂರಿನಿಂದ ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈಗೆ ನೇರ ವಿಮಾನ ಹಾರಾಟ ಇದೆ. ಇದಲ್ಲದೆ, ಕುವೈಟ್ ಸೇರಿದಂತೆ ಗಲ್‌್ಫ ರಾಷ್ಟ್ರಗಳಿಗೂ ವಿಮಾನಯಾನ ಇದೆ.
ಸದ್ಯ ಮಂಗಳೂರಿನಿಂದ ಏರ್‌ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ ಹಾಗೂ ಸ್ಪೈಸ್ ಜೆಟ್ ಈ ಮೂರು ವಿಮಾನಗಳು ಮಾತ್ರ ಸಂಚರಿಸುತ್ತಿವೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಾತ್ರ ಕುವೈಟ್ ಸಂಚಾರ ನಡೆಸುತ್ತಿದೆ. ಉಳಿದ ವಿಮಾನಗಳು ಸುತ್ತುಬಳಸಿ ವಿದೇಶಿ ಸಂಚಾರ ನಡೆಸುತ್ತವೆ. ಈ ಹಿಂದೆ ಜೆಟ್ ಏರ್‌ವೇಸ್ ಗಲ್‌್ಫ ರಾಷ್ಟ್ರಗಳಿಗೆ ಸಂಚಾರ ನಡೆಸುತ್ತಿತ್ತು. ಆದರೆ, ನಷ್ಟದ ಕಾರಣಕ್ಕೆ ಜೆಟ್ ಏರ್‌ವೇಸ್ ತನ್ನ ಸಂಚಾರವನ್ನು ಸ್ಥಗಿತಗೊಳಿಸಿತ್ತು.
ಬಾಂಬ್ ತಯಾರಿ ಬಗ್ಗೆ ರಿಸರ್ಚ್ ಮಾಡಿದ್ದ ಆದಿತ್ಯ, ಟೆಕ್ನಿಕಲಿ ಎಕ್ಸ್‌ಪರ್ಟ್
ಕುಂಠಿತ ಯಾಕಾಗಿ?:
ಮಂಗಳೂರಿಗೆ ಹೋಲಿಸಿದರೆ, ಕಣ್ಣೂರಿನಿಂದ ವಿದೇಶಕ್ಕೆ ಸಂಚರಿಸುವ ವಿಮಾನಯಾನದ ದರ ಕಡಿಮೆ ಇರುತ್ತದೆ. ಅಲ್ಲದೆ ವಿಮಾನ ಬಂದುಹೋಗುವ ಸಮಯ ಕೂಡ ಪ್ರಯಾಣಿಕ ಸ್ನೇಹಿಯಾಗಿದೆ. ಆದರೆ, ಮಂಗಳೂರಿಂದ ಕುವೈಟ್, ದುಬೈಗಳಿಗೆ ವಿಮಾನ ಸಂಚರಿಸುವ ಸಮಯ ಸಮರ್ಪಕವಾಗಿಲ್ಲ. ಟಿಕೆಟ್ ದರವೂ ದುಬಾರಿಯಾಗಿದೆ. ಸೀಸನ್ ಸಮಯದಲ್ಲಿ ಮಂಗಳೂರು-ಕುವೈಟ್ ಮಧ್ಯೆ ಸರಾಸರಿ ದರ 35 ಸಾವಿರ ರು. ಆಗಿದ್ದರೆ, ಕಣ್ಣೂರು-ಕುವೈಟ್ ಮಧ್ಯೆ ದರ ಕೇವಲ 14 ಸಾವಿರ ರು. ಆದ್ದರಿಂದ ಮಂಗಳೂರಿಗೆ ಆಗಮಿಸುವ ಹಾಗೂ ಇಲ್ಲಿಂದ ನಿರ್ಗಮಿಸುವ ಪ್ರಯಾಣಿಕರು ಕಣ್ಣೂರು ವಿಮಾನ ನಿಲ್ದಾಣ ಮೂಲಕ ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾರಂಭಿಸಿದ್ದಾರೆ.
ಗಣನೀಯ ಪ್ರಮಾಣ ಕುಂಠಿತ:
ಮಂಗಳೂರು ಮತ್ತು ಕಣ್ಣೂರು ವಿಮಾನ ನಿಲ್ದಾಣಕ್ಕೆ ಹೋಲಿಸಿದರೆ, ನಿತ್ಯ ಪ್ರಯಾಣಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಅಂತಾರಾಷ್ಟ್ರೀಯ ಹಾರಾಟದಲ್ಲಿ 2018ರ ನವೆಂಬರ್‌ನಲ್ಲಿ 61,840 ಮಂದಿ ಪ್ರಯಾಣಿಕರ ನಿರ್ವಹಣೆಯಾಗಿದ್ದರೆ, 2019 ನವೆಂಬರ್‌ನಲ್ಲಿ 45,742 ಮಂದಿ ಪ್ರಯಾಣಿಸಿದ್ದಾರೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಯಾಣಿಕರ ಸಂಖ್ಯೆ ಶೇ.26ರಷ್ಟುಇಳಿಮುಖವಾಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕಿಂತ ಕಣ್ಣೂರು ವಿಮಾನ ನಿಲ್ದಾಣವನ್ನು ಆಶ್ರಯಿಸುವಂತೆ ತಪ್ಪು ಮಾಹಿತಿಯ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದೂ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ