ಎರಡು ದಿನ ಸ್ಫೋಟಕದ ಪಕ್ಕದಲ್ಲೇ ಮಲಗಿದ್ದ ಆದಿತ್ಯ| ಘಟನೆಗೆ 1 ದಿನ ಮುಂಚೆ ಕಾರ್ಕಳದ ಹೊಟೇಲಲ್ಲಿ ಕೆಲಸಕ್ಕೆ ಸೇರಿದ್ದ| ಬಾಂಬ್‌ನ ಅಂತಿಮ ಹಂತದ ಜೋಡಣೆ ಅಲ್ಲೇ ಮಾಡಿದ್ದ!
ಸಂಪತ್ ನಾಯಕ್
ಕಾರ್ಕಳ[ಜ.24]: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ.20ರಂದು ಸ್ಫೋಟಕ ಇರಿಸಿದ್ದ ಆರೋಪಿ ಆದಿತ್ಯ ರಾವ್ ಈ ಕಾರ್ಯ ನಡೆಸುವ ಕೇವಲ 1 ದಿನ ಮೊದಲು ಕಾರ್ಕಳದ ಹೊಟೇಲೊಂದರಲ್ಲಿ ವೇಟರ್ ಆಗಿ ಕೆಲಸ ಮಾಡಿದ್ದ. ಅಲ್ಲಿಯೇ ಸ್ಫೋಟಕದ ಅಂತಿಮ ಹಂತದ ಜೋಡಣೆಯ ಕಾರ್ಯ ಮಾಡಿದ್ದ ಅತ ಸ್ಫೋಟಕವಿದ್ದ ಬ್ಯಾಗನ್ನು ತನ್ನ ಜೊತೆಯಲ್ಲಿಯೇ ಇಟ್ಟುಕೊಂಡು ಓಡಾಡುತ್ತಿದ್ದ. ಅದರ ಪಕ್ಕದಲ್ಲಿಯೇ ಮಲಗುತ್ತಿದ್ದ!
ಒಂದು ವೇಳೆ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರೆ ಬಹುಶಃ ಆತ ಮಾತ್ರವಲ್ಲ, ಹೊಟೇಲಿನ ಇತರ ಸಿಬ್ಬಂದಿಗೂ ಪ್ರಾಣಾಪಾಯವಾಗುವ ಸಾಧ್ಯತೆಗಳಿದ್ದವು. ಇಷ್ಟಾದರೂ ಹೊಟೇಲು ಸಿಬ್ಬಂದಿಗೆ ಅನುಮಾನ ಕೂಡ ಬಂದಿರಲಿಲ್ಲ.
ಏನೇನು ನಡೆಯಿತು?:
ಜ.18ರಂದು ಮಂಗಳೂರಿನ ಹೊಟೇಲಿನಲ್ಲಿ ಕೆಲಸ ಬಿಟ್ಟು ತನ್ನ ಎರಡು ಬ್ಯಾಗುಗಳೊಂದಿಗೆ ಕಾರ್ಕಳ ತಲುಪಿದ ಆದಿತ್ಯ ರಾವ್ ಅದಾಗಲೇ ಗೂಗಲ್‌ನಲ್ಲಿ ಪಟ್ಟಣದ ಪ್ರಮುಖ ಹೊಟೇಲುಗಳ ವಿಳಾಸವನ್ನು ಗುರುತಿಸಿಕೊಂಡಿದ್ದಾನೆ. ಮೊದಲು ರಾಕ್ ಸೈಡ್ ಹೊಟೇಲ್‌ಗೆ ಹೋಗಿ ಕೆಲಸ ಕೇಳಿದ ಆತನಿಗೆ ಅಲ್ಲಿ ಕೆಲಸ ಖಾಲಿ ಇಲ್ಲ ಎಂಬ ಉತ್ತರ ದೊರಕಿದೆ. ಬಳಿಕ ಜೆಮ್ ಮಾಸ್ಟರ್ ಎಂಬ ಇನ್ನೊಂದು ರೆಸ್ಟೋರೆಂಟ್‌ಗೆ ಹೋದಾಗ ಅಲ್ಲಿಯೂ ಕೆಲಸ ಸಿಕ್ಕಿಲ್ಲ. ಬಳಿಕ, ಸಂಜೆ 7.20ಕ್ಕೆ ಅನಂತಶಯನ ರಸ್ತೆಯ ಕಿಂಗ್ಸ್ ಕೋರ್ಟ್ ರೆಸ್ಟೋರೆಂಟ್‌ಗೆ ಹೋದಾಗ ಹೊಟೇಲ್ ಮ್ಯಾನೇಜರ್ ಪದ್ಮನಾಭ ಅವರು, ಅತನಿಂದ ಆಧಾರ್ ಕಾರ್ಡ್ ಪಡೆದು, ಆತನ ಅನುಭವವನ್ನು ಪರೀಕ್ಷಿಸುವುದಕೊಸ್ಕರ ಹೊಟೇಲಿನ ಒಂದು ಟೇಬಲ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುವಂತೆ ಹೇಳಿದ್ದಾರೆ.
ಬಾಂಬ್ ತಯಾರಿ ಬಗ್ಗೆ ರಿಸರ್ಚ್ ಮಾಡಿದ್ದ ಆದಿತ್ಯ, ಟೆಕ್ನಿಕಲಿ ಎಕ್ಸ್‌ಪರ್ಟ್
ಆತ ಕೆಲಸ ಕೇಳಿಕೊಂಡು ಬಂದಾಗ ಬಿಳಿಕ್ಯಾಪ್ ಧರಿಸಿದ್ದ. 2 ಬ್ಯಾಗುಗಳನ್ನು ತಂದಿದ್ದ, ಅದನ್ನು ಹೊಟೇಲಿನ ಸ್ಟಾಫ್ ರೂಮಿನಲ್ಲಿಟ್ಟಿದ್ದ. ರಾತ್ರಿ ಅದರ ಪಕ್ಕದಲ್ಲಿಯೇ ಮಲಗಿದ್ದ, ಈ ರೂಮಿನಲ್ಲಿ ಹೊಟೇಲಿನ ಇತರ 20 ಸಿಬ್ಬಂದಿಯೂ ಅಲ್ಲಿಯೇ ಮಲಗಿದ್ದರು. ಮೊದಲ ದಿನವಾದ್ದರಿಂದ ಸಿಬ್ಬಂದಿಗಳ್ಯಾರೂ ಆತನ ಬ್ಯಾಗಲ್ಲಿ ಏನಿದೆ ಎಂದು ಕೇಳಿರಲಿಲ್ಲ.
ಜ.19ರಂದು ಬೆಳಗ್ಗೆ ಎದ್ದು ಸ್ನಾನ ಮಾಡಿ ಅಚ್ಚುಕಟ್ಟಾಗಿ ವೇಟರ್ ಕೆಲಸ ನಿರ್ವಹಿಸಿದ್ದ. ಗ್ರಾಹಕರೊಂದಿಗೆ ವಿನಯದಿಂದಲೇ ಆರ್ಡರ್ ಪಡೆದು ಕೆಲಸ ಮಾಡುತ್ತಿದ್ದ. ಗ್ರಾಹಕರಿಲ್ಲದಿದ್ದರೆ ಮೂಲೆಯಲ್ಲಿ ಕೈಕಟ್ಟಿನಿಂತುಕೊಳ್ಳುತ್ತಿದ್ದ ಎಂದು ಮ್ಯಾನೇಜರ್ ಪದ್ಮನಾಭ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
20ರಂದು ಮುಂಜಾನೆ 5 ಗಂಟೆಗೆ ಎದ್ದು ಸ್ನಾನ ಮಾಡಿ, ಶುಭ್ರವಸ್ತ್ರವನ್ನು (ವಿಮಾನ ನಿಲ್ದಾಣದ ಸಿ.ಸಿ. ಕ್ಯಾಮೆರಾದಲ್ಲಿ ಕಂಡ ಉಡುಪು) ಧರಿಸಿದ. ತನ್ನ ಎರಡು ಬ್ಯಾಗುಗಳನ್ನು ಹಿಡಿದು ಲಾಕ್ ಮಾಡಲಾಗಿದ್ದ ರೆಸ್ಟೋರೆಂಟ್‌ನ ಗೇಟಿನ ಮೇಲೆ ಹತ್ತಿ, ಹೊರಗೆ ಜಿಗಿದಿದ್ದ. ಬಳಿಕ ಬೆಳ್ಳಗ್ಗೆ ಕಾರ್ಕಳದಿಂದ ಮಂಗಳೂರಿಗೆ ತೆರಳುವ ಮೊದಲ ಬಸ್ಸಿನಲ್ಲಿ ಮಂಗಳೂರು ಕಡೆ ಪ್ರಯಾಣ ಬೆಳೆಸಿದ್ದ. ಅದಕ್ಕೂ ಮೊದಲು 4.30ಕ್ಕೆ ಎದ್ದು ಹೊಟೇಲಿನ ಹಿಂಭಾಗದ ಖಾಲಿ ಪ್ರದೇಶದಲ್ಲಿ ಕೇವಲ ಚಡ್ಡಿಯೊಂದನ್ನು ಧರಿಸಿ ಬಹಳ ಹೊತ್ತು ಅಸಹನೀಯವಾಗಿ ಅತ್ತಿಂದಿತ್ತ ಓಡಾಡುತ್ತಿದ್ದುದು ಕೂಡ ಸಿ.ಸಿ. ಕ್ಯಾಮೆರದಲ್ಲಿ ದಾಖಲಾಗಿದೆ.
ಯೂಟ್ಯೂಬ್‌ನಲ್ಲಿ ಉಗ್ರರ ವಿಡಿಯೋ ನೋಡಿ ಪ್ರಭಾವಿತನಾಗಿದ್ದ ಆದಿತ್ಯ ರಾವ್
ಆತ ಕಾರ್ಕಳಕ್ಕೆ ಬರುವಾಗ ಒಂದು ಟ್ರಾಲಿ ಬ್ಯಾಗ್ ಮತ್ತು ಇನ್ನೊಂದು ಬೆನ್ನ ಮೇಲೆ ಧರಿಸುವ ಭಾರಿ ಭಾರದ ಬ್ಯಾಗುಗಳನ್ನು ಹಿಡಿದುಕೊಂಡ ಬಂದಿದ್ದ, ಆಗ ನೀಲಿ ಜೀನ್ಸ್ ಪ್ಯಾಂಟ್, ನೀಲಿ ಶರ್ಟ್, ಕನ್ನಡಕ ಧರಿಸಿದ್ದ, ಆಗಲೂ ತಲೆ ಮೇಲೆ ಬಿಳಿ ಕ್ಯಾಪ್ ಧರಿಸಿದ್ದ. ಎರಡು ರಾತ್ರಿ ಮತ್ತು ಒಂದ ಹಗಲು ಮಾತ್ರ ಈ ಹೊಟೇಲಿನಲ್ಲಿದ್ದ ಆದಿತ್ಯ ಅಲ್ಲಿಯೇ ಪೂರ್ತಿಯಾಗಿ ಸ್ಫೋಟಕ ತಯಾರಿಸಿರುವ ಸಾಧ್ಯತೆ ಇಲ್ಲ ಎಂದು ಹೊಟೇಲಿನ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.
ಆತ್ಮಹತ್ಯೆಗೆ ಯೋಚಿಸಿದ್ದನೇ?
ಆದಿತ್ಯ ರಾವ್ ಸಾಯುವುದಕ್ಕಾಗಿ ಸೈನೇಡ್‌ನ್ನು ತನ್ನ ಲಾಕರ್‌ನಲ್ಲಿ ಮೂರು ವರ್ಷಗಳ ಹಿಂದೆಯೇ ಶೇಖರಿಸಿ ಇಟ್ಟಿರುವ ಅಂಶ ಆತನ ಸಹೋದರನಿಂದ ತಿಳಿದಿತ್ತು ಎಂಬ ಅಂಶ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ವಿಮಾನ ನಿಲ್ದಾಣಗಳಲ್ಲಿ ಆರಂಭಿಕ ಹಂತದಲ್ಲಿ ಹ್ಯಾಂಡ್‌ಬ್ಯಾಗ್ ತಪಾಸಣೆಯೇ ಇಲ್ಲ