ಮೈಸೂರು ಸಂಸದ ಪ್ರತಾಪ್ ಸಿಂಹ ಕಚೇರಿಗೆ ನುಗ್ಗಲು ಕಾಂಗ್ರೆಸ್ ಕಾರ್ಯಕರ್ತರು ಯತ್ನ!

By Kannadaprabha NewsFirst Published Dec 14, 2023, 11:36 AM IST
Highlights

ದೆಹಲಿಯ ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಲು ಕಾರಣರಾದ ಇಬ್ಬರಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಪಾಸ್ ನೀಡಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.

ಮೈಸೂರು (ಡಿ.14): ದೆಹಲಿಯ ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಲು ಕಾರಣರಾದ ಇಬ್ಬರಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಪಾಸ್ ನೀಡಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.

ಪ್ರತಾಪ ಸಿಂಹ ಕಚೇರಿಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಈ ವೇಳೆ ಜಟಾಪಟಿ ನಡೆದಿದೆ. ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಸ್ಫೋಟಕ ವಸ್ತು ಮತ್ತು ಕೆಲವು ಧಂಗೆ ಎಬ್ಬಿಸುವ ದಾಖಲೆಗಳು ಇವೆ ಎಂದು ಆರೋಪಿಸಿ ಹಾಗೂ ಅವುಗಳನ್ನು ಕೂಡಲೇ ವಶಕ್ಕೆ ಪಡೆಯಬೇಕು ಎಂದು ಸಂಸದರ ಕಚೇರಿಗೆ ನುಗ್ಗಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುತ್ತಿದ್ದಂತೆಯೇ ಪೊಲೀಸರು ಇಡೀ ಜಲದರ್ಶಿನಿ ಅತಿಥಿಗೃಹಕ್ಕೆ ಬೀಗ ಜಡಿದು ಪೊಲೀಸ್ ಸರ್ಪಗವಾಲು ಹಾಕಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಮುಖಂಡರು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಸಂಸತ್ ಭವನಕ್ಕೆ ನುಗ್ಗಿದ ಯುವಕರ ಸಿಸಿಟಿವಿ ಫೂಟೇಜ್ ಇದೆ. ಆ ಯುವಕರ ಜೊತೆ ಸಂಸದ ಪ್ರತಾಪ್ ಸಿಂಹ ಮಾತುಕತೆ ನಡೆಸಿರುವ ದಾಖಲೆಗಳಿವೆ. ಜೊತೆಗೆ ದೇಶದಲ್ಲಿ ಅಶಾಂತಿ ಎಬ್ಬಿಸಲು ಇದನ್ನು ಲ್ಯಾಬ್ ಮಾಡಿಕೊಳ್ಳಲಾಗಿದೆ. ಹಾಗಾಗಿ ಅವರ ಕಚೇರಿಯನ್ನು ಸೀಜ್ ಮಾಡಬೇಕು ಎಂದು ಪೊಲೀಸರಿಗೆ ಐದು ನಿಮಿಷ ಕಾಲಾವಕಾಶ ನೀಡಿದರು.

Latest Videos

ಪೊಲೀಸರನ್ನು ಪರೀಕ್ಷಿಸಲು ರಾಜಭವನಕ್ಕೆ ಬಾಂಬ್ ಬೆದರಿಕೆ ಹಾಕಿದ್ನಂತೆ ಆಸಾಮಿ!

ಇದಕ್ಕೆ ಅವಕಾಶ ನೀಡದ ಪೊಲೀಸರ ನಡೆಯಿಂದ ಮತ್ತಷ್ಟು ಕೆರಳಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಜಲದರ್ಶಿನಿ ಕಾಂಪೌಂಡ್ ಹತ್ತಿರ ಒಳನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ತಡೆದರು. ಈ ವೇಳೆ ಡಿಸಿಪಿ ಮತ್ತುರಾಜ್ ಮತ್ತು ಎಸಿಪಿ ಶಾಂತಮಲ್ಲೇಶ್ ಅವರೊಂದಿಗೆ ಮಾತಿನ ಚಕಮಕಿಯೇ ನಡೆದು ಹೋಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ತಡೆದಿದ್ದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗೆ ತೆರಳಿ ರಸ್ತೆ ತಡೆ ನಡೆಸಿದರು. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಪೊಲೀಸರು ರಸ್ತೆಯಲ್ಲಿ ಪ್ರತಿಭಟಿಸದಂತೆ ಮನವಿ ಮಾಡಿ ಅಲ್ಲಿಂದ ಜಲದರ್ಶಿನಿ ಗೇಟ್ ಬಳಿಗೆ ಕರೆದುಕೊಂಡು ಬಂದರು.

ಕಚೇರಿಗೆ ನುಗ್ಗಲು ಕಾಂಪೌಂಡ್ ಹತ್ತಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ವಿರುದ್ಧ ಏರು ದನಿಯಲ್ಲಿ ಡಿಸಿಪಿ ಮುತ್ತುರಾಜ್ ಗದರಿದರು. ಇದರಿಂದ ಸಿಟ್ಟಿಗೆದ್ದ ವಿಜಯ ಕುಮಾರ್, ಡಿಸಿಪಿ ಅವರೇ ಅವಾಜ್ ಹಾಕಬೇಡಿ, ನಾವೇನು ದೇಶ ದ್ರೋಹದ ಕೆಲಸ ಮಾಡುತ್ತಿಲ್ಲ. ದೇಶದ್ರೋದ ಕೆಲಸ ಮಾಡಿದ ವ್ಯಕ್ತಿ ಪ್ರತಾಪ ಸಿಂಹನ ಕಚೇರಿ ವಶಕ್ಕೆ ಪಡೆಯಿರಿ ಎಂದು ಹೇಳುತ್ತಿರುವುದು. ನೀವು ಪದೇ ಪದೇ ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ನಡೆದುಕೊಳ್ಳುತ್ತಿದ್ದೀರಿ. ನೀವು ಬಿಜೆಪಿ ಪರವಾಗಿದ್ದರೆ ಇರಿ. ಆದರೆ ದೇಶದ ಪರ ಕೆಲಸ ಮಾಡಿ ಕಾನೂನಿನ ಪ್ರಕಾರ ಕೆಲಸ ಮಾಡಿ ಎಂದು ಕಿಡಿಕಾರಿದರು.

ಹೆಣ್ಣು ಕೊಟ್ಟ ಅತ್ತೆಯನ್ನೇ ಕೊಂದ ಕಿರಾತಕ ಅಳಿಯ! ಕೊಲೆಯ ಕಾರಣ ಕೇಳಿ ಪತ್ನಿಯೇ ಶಾಕ್!

ಈ ವೇಳೆ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಮಾಜಿ ಮೇಯರ್ ಅಯೂಬ್ ಖಾನ್, ಕಾಂಗ್ರೆಸ್ ಮುಖಂಡರಾದ ಬಿ.ಎಂ. ರಾಮು, ಪ್ರೀತಂ ಗೌಡ ಪೊಲೀಸರ ಜೊತೆ ವಾಗ್ವಾದಕ್ಕಿಳಿದರು.

ಇದು ಸರ್ಕಾರಿ ಜಾಗ ಪ್ರತಾಪ್ ಸಿಂಹನ ವೈಯಕ್ತಿಕ ಆಸ್ತಿ ಅಲ್ಲ. ಹಾಗಾಗಿ ಏಕೆ ನಮ್ಮನ್ನು ಗೇಟಿನ ಬಳಿಯೇ ತಡೆಯುತ್ತೀರಿ ಎಂದು ಪ್ರಶ್ನಿಸಿದರು. ಕೂಡಲೇ ಜಿಲ್ಲಾಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯನ್ನು ವಶಕ್ಕೆ ಪಡೆಯಿರಿ ಎಂದು ಒತ್ತಾಯಿಸಿದರು.

ಇದಕ್ಕೆ ಅವಕಾಶ ಕೊಡದ ಪೊಲೀಸರ ನಡೆ ಖಂಡಿಸಿ ಗೇಟಿನ ಮುಂದೆಯೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮುಂದುವರೆಸಿದರು.

click me!