ಸಿಎಂ ಬಿಎಸ್‌ವೈ ಆಪ್ತಗೆ ಮಹತ್ವದ ಪಟ್ಟ ಖಚಿತ

By Kannadaprabha NewsFirst Published Nov 23, 2020, 8:55 AM IST
Highlights

ರಾಜ್ಯದ ಮಹತ್ವದ ಪಟ್ಟ ಒಂದು ಮುಖ್ಯಮಂತ್ರಿ ಪರಮಾಪ್ತ ಮುಖಂಡಗೆ ಒಲಿಯುವುದು ಬಹುತೇಕ ಖಚಿತವಾಗಿದೆ

ಬೆಂಗಳೂರು (ನ.23):  ಪರ-ವಿರೋಧಗಳ ನಡುವೆ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಮೊದಲ ಅಧ್ಯಕ್ಷಗಿರಿಗೆ ತೀವ್ರ ಲಾಬಿ ಶುರುವಾಗಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರಮಾಪ್ತ ಬಿ.ಎಸ್‌.ಪರಮಶಿವಯ್ಯ ನೇಮಕ ಬಹುತೇಕ ಖಚಿತವಾಗಿದೆ.

"

ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿರುವ ಬಿ.ಎಸ್‌.ಪರಮಶಿವಯ್ಯ ಅವರು ಸಮುದಾಯದ ಕಲ್ಯಾಣಕ್ಕಾಗಿ ಉಚಿತ ಶಿಕ್ಷಣ, ವಸತಿ ನಿಲಯಗಳನ್ನು ನಡೆಯುತ್ತಿದ್ದಾರೆ. ಸಮುದಾಯದ ಅಭಿವೃದ್ಧಿಗೆ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ, ಪರಮಶಿವಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದಾರೆ. ಕಳೆದ ಬಾರಿ ಪರಮಶಿವಯ್ಯ ಅವರನ್ನು ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡಲು ಯಡಿಯೂರಪ್ಪ ಪ್ರಯತ್ನಿಸಿದ್ದರು. ಆದರೆ, ಪಕ್ಷಕ್ಕೆ ಅವರಿಂದ ಹೆಚ್ಚಿನ ಕೊಡುಗೆ ಇಲ್ಲ ಎಂದು ಪಕ್ಷದಲ್ಲಿಯೇ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ಪರಿಷತ್‌ಗೆ ನಾಮನಿರ್ದೇಶನ ಮಾಡಲು ಸಾಧ್ಯವಾಗಲಿಲ್ಲ. ಇದೀಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲು ಯಡಿಯೂರಪ್ಪ ಒಲವು ತೋರಿಸಿದ್ದಾರೆ.

ಯಡಿಯೂರಪ್ಪಗೆ ತಿರುಗುಬಾಣವಾದ ವೀರಶೈವ ಲಿಂಗಾಯತ ನಿಗಮ ರಚನೆ...! ...

ಉತ್ತರ ಕರ್ನಾಟಕದ ರಾಜಕಾರಣಿಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲು ಮೊದಲು ಆಸಕ್ತಿ ಹೊಂದಿದ್ದರು. ಶಾಸಕ ವೀರಣ್ಣ ಚರಂತಿಮಠ ಅವರಿಗೆ ಕರೆ ಮಾಡಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಬಗ್ಗೆ ಚರ್ಚಿಸಿದ್ದರು. ಆದರೆ, ಚರಂತಿಮಠ ಅವರು ಅಧ್ಯಕ್ಷ ಸ್ಥಾನವನ್ನು ತಿರಸ್ಕರಿ ಪರಮಶಿವಯ್ಯ ಅವರನ್ನು ನೇಮಕ ಮಾಡುವಂತೆ ಮನವಿ ಮಾಡಿದ್ದರು. ಚರಂತಿಮಠ ಅವರು ಈಗಾಗಲೇ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಹೀಗಾಗಿ ನಿಗಮದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.

ಚರಂತಿಮಠ ನಿರಾಕರಿಸಿದ ಬಳಿಕ ಪರಮಶಿವಯ್ಯ ಜತೆಗೂ ಮುಖ್ಯಮಂತ್ರಿಗಳು ಮಾತುಕತೆ ನಡೆಸಿದ್ದಾರೆ. ಪರಮಶಿವಯ್ಯ ಸಹ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಒಲವು ಹೊಂದಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಬಳಿಕ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ವಿ.ಸೋಮಣ್ಣ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಮನವಿ ಮಾಡಿದ್ದರು. ಮನವಿ ಸಲ್ಲಿಸಿದ ಬೆನ್ನಲ್ಲೇ ಮುಖ್ಯಮಂತ್ರಿಗಳು ನಿಗಮ ಸ್ಥಾಪನೆ ಮಾಡಿದ್ದರು.

click me!