ಇಂದು ಪಂಚಮಸಾಲಿ ಮೀಸಲಾತಿ ಘೋಷಣೆ?

Published : Mar 24, 2023, 04:38 AM IST
ಇಂದು ಪಂಚಮಸಾಲಿ ಮೀಸಲಾತಿ ಘೋಷಣೆ?

ಸಾರಾಂಶ

ಇಂದು ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ನೀಡಲು ಅನುಮೋದನೆ ನೀಡಿ ಸರ್ಕಾರ ರಾಜ್ಯಪತ್ರ ಹೊರಡಿಸುವ ಸಾಧ್ಯತೆಯಿದೆ.

ಬೆಂಗಳೂರು(ಮಾ.24): ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ನಿರ್ದೇಶಿಸಿ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್‌ ಗುರುವಾರ ತೆರವುಗೊಳಿಸಿದೆ. ಇದರ ಬೆನ್ನಲ್ಲೇ ಶುಕ್ರವಾರ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ನೀಡಲು ಅನುಮೋದನೆ ನೀಡಿ ಸರ್ಕಾರ ರಾಜ್ಯಪತ್ರ ಹೊರಡಿಸುವ ಸಾಧ್ಯತೆಯಿದೆ.

ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂಬ ಆಗ್ರಹದೊಂದಿಗೆ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ 69 ದಿನಗಳಿಂದ ಧರಣಿ ನಡೆಯುತ್ತಿದೆ. ಇದು ಹೀಗೆಯೇ ಮುಂದುವರೆದಲ್ಲಿ ಚುನಾವಣೆಯಲ್ಲಿ ತೊಂದರೆಯಾಗಬಹುದು ಎಂಬ ಆತಂಕದಲ್ಲಿದ್ದ ಆಡಳಿತಾರೂಢ ಬಿಜೆಪಿಗೆ ನ್ಯಾಯಾಲಯದ ಆದೇಶ ನಿಟ್ಟುಸಿರು ಬಿಡುವಂತೆ ಮಾಡಿದೆ. 2ಎ ಮೀಸಲಾತಿ ಇಲ್ಲದಿದ್ದರೂ ಈಗ ನಿರ್ಧಾರ ಕೈಗೊಂಡಿರುವ 2ಡಿ ಮೀಸಲಾತಿಯನ್ನೇ ಅಧಿಕೃತಗೊಳಿಸಿ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ

ಸಿಎಂ ವಿರುದ್ಧ ವಿನಯ್‌ ಕುಲಕರ್ಣಿ ಸ್ಪರ್ಧೆ?: ತವರಲ್ಲೇ ಬೊಮ್ಮಾಯಿ ಕಟ್ಟಲು ಕಾಂಗ್ರೆಸ್‌ ಪ್ಲ್ಯಾನ್‌

ಮಧ್ಯಂತರ ಆದೇಶ:

ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲು ಕಲ್ಪಿಸುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇತ್ತೀಚೆಗೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಕಾನೂನುಬಾಹಿರವೆಂದು ಘೋಷಿಸುವಂತೆ ಕೋರಿ ಡಿ.ಜಿ.ರಾಘವೇಂದ್ರ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಗುರುವಾರ ತೆರವುಗೊಳಿಸಿದೆ.

ಇದರೊಂದಿಗೆ ಪಂಚಮಸಾಲಿ ಸೇರಿದಂತೆ ಲಿಂಗಾಯತ ಸಮುದಾಯದ ಉಪ ಜಾತಿಗಳನ್ನು ಹಿಂದುಳಿದ ವರ್ಗಗಳ 2ಡಿ ಪ್ರವರ್ಗಕ್ಕೆ ಮತ್ತು ಒಕ್ಕಲಿಗ ಸಮುದಾಯವನ್ನು 2ಸಿ ಪ್ರವರ್ಗಕ್ಕೆ ಸೇರಿಸಲು ರಾಜ್ಯ ಸರ್ಕಾರಕ್ಕೆ ಹಾದಿ ಸುಗಮವಾದಂತಿದೆ.

ಪ್ರಮಾಣ ಪತ್ರ ಸಲ್ಲಿಕೆ:

ಹಿಂದುಳಿದ ವರ್ಗಗಳ ಪ್ರವರ್ಗ 2ಎ ಮೀಸಲು ಕೋಟಾಗೆ ತೊಂದರೆಯಾಗುವಂತೆ ಯಾವುದೇ ಕೆಲಸ ಮಾಡುವುದಿಲ್ಲ. 2ಎ ಪ್ರವರ್ಗದಡಿ ಕಲ್ಪಿಸಿರುವ ಮೀಸಲು ಪ್ರಮಾಣ ಮತ್ತು ಸಮುದಾಯಗಳ ಸಂಯೋಜನೆಯನ್ನು (ಪಟ್ಟಿಗೆ ಯಾವುದೇ ಜಾತಿಯನ್ನು ಸೇರಿಸುವುದಿಲ್ಲ ಮತ್ತು ಕೈ ಬಿಡುವುದಿಲ್ಲ) ಬದಲಿಸುವುದಿಲ್ಲ. ಆದ್ದರಿಂದ ಯಥಾಸ್ಥಿತಿ ಆದೇಶವನ್ನು ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರದ ಪರ ಕೇಂದ್ರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಭರವಸೆ ನೀಡಿ ಗುರುವಾರ ಪ್ರಮಾಣ ಪತ್ರವನ್ನೂ ಸಹ ಸಲ್ಲಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ರಾಜ್ಯ ಸರ್ಕಾರದ ಹೇಳಿಕೆಯಿಂದ 2ಎ ಮೀಸಲು ಪಟ್ಟಿಯಲ್ಲಿ ಬದಲಾವಣೆಯಾಗಲಿದೆ ಎಂಬ ಅರ್ಜಿದಾರರ ಆತಂಕವೂ ದೂರವಾಗಿದೆ ಹಾಗೂ ಅವರಿಗೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ. ಆದ್ದರಿಂದ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರ ಮತ್ತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿ 2023ರ ಜ.12ರಂದು ಹೊರಡಿಸಿದ್ದ ಆದೇಶವನ್ನು ತೆರವುಗೊಳಿಸಲಾಗುತ್ತಿದೆ ಎಂದು ತಿಳಿಸಿತು.
ಅಲ್ಲದೆ, ಪ್ರಕರಣದಲ್ಲಿ ಮುಂದೆ ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮ ಸಹ ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಡುತ್ತದೆ ಎಂದು ಸ್ಪಷ್ಟಪಡಿಸಿತು.

ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ಕೇಂದ್ರ ಸರ್ಕಾರದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹಾಜರಾಗಿ, ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್‌ ಜ.12ರಂದು ಮಧ್ಯಂತರ ಆದೇಶ ಮಾಡಿದೆ. ಆದರೆ, ಪ್ರವರ್ಗ 2ಎ ಅಡಿಯಲ್ಲಿನ ಮೀಸಲಾತಿಗೆ ತೊಂದರೆಯಾಗುವಂತಹ ಯಾವುದೇ ಕೆಲಸವನ್ನು ಸರ್ಕಾರ ಮಾಡುವುದಿಲ್ಲ. ಈ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಳ್ಳಬಹುದು. ದಿನದ ಅಂತ್ಯದೊಳಗೆ ಈ ಕುರಿತು ಲಿಖಿತ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಅದರಂತೆ ಸಂಜೆಯ ವೇಳೆಗೆ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರು ಪ್ರಮಾಣ ಪತ್ರ ಸಲ್ಲಿಸಿ, 2-ಎ ಪ್ರವರ್ಗದಡಿ ಕಲ್ಪಿಸಿರುವ ಮೀಸಲು ಪ್ರಮಾಣವನ್ನು ಬದಲಿಸುವುದಿಲ್ಲ. 2ಎ ಮೀಸಲು ಪಟ್ಟಿಗೆ ಯಾವುದೇ ಜಾತಿಯನ್ನು ಸೇರಿಸುವುದಿಲ್ಲ. ಯಾವುದೇ ಜಾತಿಯನ್ನು ತೆಗೆಯುವುದಿಲ್ಲ ಎಂದು ಸ್ಪಷ್ಪಪಡಿಸಿದರು. ಸರ್ಕಾರದ ಈ ಭರವಸೆಯನ್ನು ಪರಿಗಣಿಸಿದ ನ್ಯಾಯಪೀಠ ಮಧ್ಯಂತರ ಆದೇಶವನ್ನು ತೆರವುಗೊಳಿಸಿತು.

ಪಂಚಮಸಾಲಿ ಹೋರಾಟಕ್ಕೆ ಎಂ.ಬಿ.ಪಾಟೀಲ ಬೆಂಬಲ

ಅರ್ಜಿದಾರರ ಆಕ್ಷೇಪವೇನು?

2000ನೇ ಇಸವಿಯಲ್ಲಿ ಲಿಂಗಾಯತ ಸಮುದಾಯದ ಕೆಲ ಉಪ ಪಂಗಡಗಳ ಮೀಸಲಾತಿ ಕೋರಿಕೆಯನ್ನು ತಿರಸ್ಕರಿಸಿ ಹಿಂದುಳಿದ ವರ್ಗಗಳ ಆಯೋಗವು ಕೆಲ ಶಿಫಾರಸ್ಸುಗಳನ್ನು ಮಾಡಿತ್ತು. ಆದರೂ, ಇತ್ತೀಚೆಗೆ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಮಧ್ಯಂತರ ವರದಿ ಆಧರಿಸಿ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸಲು ಸರ್ಕಾರ ಮುಂದಾಗುತ್ತಿದೆ. ಆದರೆ, ವೀರಶೈವ/ಲಿಂಗಾಯತ ಸಮುದಾಯದ ಉಪ ಪಂಗಡವನ್ನು ತಾತ್ಕಾಲಿಕ ಪ್ರಕ್ರಿಯೆಯ ಮೂಲಕ ಪ್ರವರ್ಗಕ್ಕೆ 2ಎಗೆ ಸೇರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಸರ್ಕಾರದ ಸಮರ್ಥನೆ:

ಈ ಹಿಂದೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಸರ್ಕಾರ, ಒಂದು ಸಮುದಾಯ ತಮ್ಮನ್ನು ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಮನವಿ ಸಲ್ಲಿಸಿದರೆ, ಅದನ್ನು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡುವುದಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಅವಕಾಶವಿದೆ. ಸರ್ಕಾರವು ಆಯೋಗದೊಂದಿಗೆ ಸಮಾಲೋಚಿಸಿ, ಪ್ರತಿ 10 ವರ್ಷಗಳಿಗೊಮ್ಮೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಅವಕಾಶವಿದೆ. ಹಿಂದುಳಿದ ವರ್ಗಗಳ ಆಯೋಗವು ಕಾಲ ಕಾಲಕ್ಕೆ ಸರ್ಕಾರಕ್ಕೆ ಹಲವು ಶಿಫಾರಸು ಮಾಡಿದ್ದು, ಅದಕ್ಕೆ ಅನುಗುಣವಾಗಿ ಸರ್ಕಾರ ಹಲವು ಹಿಂದುಳಿದ ವರ್ಗಗಳ ವರ್ಗೀಕರಣ ಮತ್ತು ಮರುವರ್ಗೀಕರಣ ಮಾಡಿಕೊಂಡು ಬಂದಿದೆ. ಅದೇ ರೀತಿ, ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಪಂಚಮಸಾಲಿ ಸಮುದಾಯ ಕೋರಿದ್ದು, ಆ ಬಗ್ಗೆ ಪರಿಶೀಲನೆ ನಡೆಸಿರುವ ಆಯೋಗ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ ಎಂದು ಸಮರ್ಥಿಸಿಕೊಂಡಿತ್ತು. ಅರ್ಜಿಯನ್ನು ಜ.12ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ಮಾಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!