
ಕೋಲಾರ (ಮೇ.2) ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ವ್ಯಾಪಾರ ನಿರ್ಬಂಧ ಹೇರಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಬೆಂಬಲವಾಗಿ ನಿಂತಿರುವ ಕೋಲಾರದ ರೈತರು ಪಾಕಿಸ್ತಾನಕ್ಕೆ ಟೊಮೆಟೋ ರಫ್ತು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ.
ಕೋಲಾರದ ಎಪಿಎಂಸಿ ಮಾರುಕಟ್ಟೆ ಇಡೀ ಏಷ್ಯಾ ಖಂಡದಲ್ಲಿಯೇ 2ನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಅದೇ ಕಾರಣಕ್ಕೆ ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ಟೊಮೆಟೋ, ದೇಶದ ಬಹುತೇಕ ರಾಜ್ಯಗಳಿಗೆ ಹಾಗೂ ಹೊರದೇಶಗಳಿಗೆ ರಫ್ತಾಗುತ್ತದೆ. ಇನ್ನು, ಜೂನ್ ಮತ್ತು ಜುಲೈ ತಿಂಗಳು ಟೊಮೆಟೋ ಸುಗ್ಗಿಯ ಕಾಲ. ಈ ಸಂದರ್ಭದಲ್ಲಿ ಕೋಲಾರದ ಟೊಮೆಟೋ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ದುಬೈ ಸೇರಿದಂತೆ ವಿವಿಧ ದೇಶಗಳಿಗೆ ರಫ್ತಾಗುತ್ತದೆ.
ಇದನ್ನೂ ಓದಿ: ಪಹಲ್ಗಾಂ ನರಮೇಧ: ದಕ್ಷಿಣ ಕಾಶ್ಮೀರದಲ್ಲಿ ಅಡಗಿ ಕುಳಿತಿದ್ದಾರಾ ಉಗ್ರರು?...
ಈ ಪೈಕಿ ಪಾಕಿಸ್ತಾನಕ್ಕೆ ಸಾಮಾನ್ಯವಾಗಿ ವಾರಕ್ಕೆ 800 ರಿಂದ 900 ಟನ್ ಟೊಮೆಟೋ ರಫ್ತಾಗುತ್ತಿತ್ತು. ಜೊತೆಗೆ, ಪಾಕಿಸ್ತಾನದ ಜೊತೆ ಇಲ್ಲಿನ ವರ್ತಕರು ಉತ್ತಮ ಸಂಬಂಧವನ್ನು ಹೊಂದಿದ್ದು, ಟೊಮೆಟೋ ಜೊತೆ ಮಾವು, ಇತರ ತರಕಾರಿಗಳನ್ನೂ ಸಹ ರಫ್ತು ಮಾಡುತ್ತಿದ್ದರು. ಆ ಮೂಲಕ ಕೋಟ್ಯಾಂತರ ರುಪಾಯಿ ವ್ಯವಹಾರವನ್ನು ಇಲ್ಲಿನ ರೈತರು, ವರ್ತಕರು ಮಾಡುತ್ತಿದ್ದರು. ಅದರಲ್ಲೂ, ಜೂನ್‌ನಲ್ಲಿ ಅತಿ ಹೆಚ್ಚು ಟೊಮೆಟೋವನ್ನು ರಪ್ತು ಮಾಡಲಾಗುತ್ತಿತ್ತು.
ಇಲ್ಲಿಂದ ಸುಮಾರು 42 ಗಂಟೆಗಳ ಪ್ರಯಾಣದ ಅವಧಿಯಲ್ಲಿ ಟ್ರಕ್, ಲಾರಿ, ಟೆಂಪೊಗಳ ಮೂಲಕ ರಸ್ತೆ ಮಾರ್ಗವಾಗಿ ಇವುಗಳನ್ನು ಪಾಕಿಸ್ತಾನದ ಗಡಿವರೆಗೆ ತಲುಪಿಸಲಾಗುತ್ತದೆ. ಅಲ್ಲಿಂದ ಪಾಕಿಸ್ತಾನ ಹಾಗೂ ವಿವಿಧ ನೆರೆ ದೇಶಗಳಿಗೆ ಅಲ್ಲಿನ ವರ್ತಕರು ತಮ್ಮ ವಾಹನಗಳಿಗೆ ತುಂಬಿಕೊಂಡು ಹೋಗುತ್ತಾರೆ. ಈಗ ಪಹಲ್ಗಾಂನಲ್ಲಿ ಉಗ್ರರು ನಡೆಸಿದ ನರಮೇಧದ ಹಿನ್ನೆಲೆಯಲ್ಲಿ ಇಲ್ಲಿನ ರೈತರು, ವರ್ತಕರು ಪಾಕಿಸ್ತಾನಕ್ಕೆ ಟೊಮೆಟೋ ಸರಬರಾಜು ಮಾಡದಿರಲು ನಿರ್ಧರಿಸಿದ್ದಾರೆ ಎನ್ನುತ್ತಾರೆ ಸಿ.ಎಂ.ಆರ್ ಮಂಡಿ ಮಾಲೀಕ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್.
ಇದನ್ನೂ ಓದಿ: ಭಾರತದೊಂದಿಗೆ ಯುದ್ಧವಾದರೆ ಪಂಜಾಬಿಗರು ಪಾಕ್ ಸೈನಿಕರಿಗೆ ಊಟ ಬಡಿಸುತ್ತಾರೆ: ಖಲಿಸ್ತಾನಿ ಉಗ್ರನ ಹೇಳಿಕೆ ವೈರಲ್!...
ಪಾಕ್‌ಗೆ ಒಂದೂ ಟೊಮೆಟೋ ನೀಡಲ್ಲ
ಪುಲ್ವಾಮ ಉಗ್ರ ದಾಳಿ ನಡೆದಾಗ ಕೂಡ ಪಾಕ್‌ಗೆ ಟೊಮೆಟೋ ರಫ್ತು ನಿಲ್ಲಿಸುವ ನಿರ್ಧಾರ ಕೈಗೊಂಡಿದ್ದೆವು. ಆದರೆ, ಇನ್ನುಳಿದ ಉಗ್ರರ ದಾಳಿ ವೇಳೆ ಮಾನವೀಯ ದೃಷ್ಟಿಯಿಂದ ಟೊಮೆಟೋ ಕೊಟ್ಟಿದ್ದೆವು. ಆದರೆ, ಈಗ ನಮಗೆ ನಷ್ಟವಾದರೂ ಪರವಾಗಿಲ್ಲ, ಒಂದು ಟೊಮೆಟೋ ಸಹ ಪಾಕಿಸ್ತಾನಕ್ಕೆ ಕೊಡಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ