'ಇನ್ಮುಂದೆ ಸೋಂಕಿತರ ಮನೆಗೆ ಬರುತ್ತೆ ಆಕ್ಸಿಜನ್ : ಸಂಪೂರ್ಣ ಉಚಿತ ಸೇವೆ'

By Kannadaprabha NewsFirst Published May 12, 2021, 2:15 PM IST
Highlights

ಕೋವಿಡ್‌ ಸೋಂಕಿತರಿಗೆ ಮನೆ ಬಾಗಿಲಿಗೇ ಓಲಾ ಕ್ಯಾಬ್‌ ಮೂಲಕ ಆಮ್ಲಜನಕ ಸಾಂದ್ರಕ

Oxygen Concentrator ಒದಗಿಸುವ ಕಾರ್ಯಕ್ರಮಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ್ ಚಾಲನೆ

ಕೋವಿಡ್ ರೋಗಿಗಳಿಗೆ ಇದು ಸಂಪೂರ್ಣ ಉಚಿತ ಸೇವೆ

ಬೆಂಗಳೂರು (ಮೇ.12): ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೋವಿಡ್‌ ಸೋಂಕಿತರಿಗೆ ಮನೆ ಬಾಗಿಲಿಗೇ ಓಲಾ ಕ್ಯಾಬ್‌ ಮೂಲಕ ಆಮ್ಲಜನಕ ಸಾಂದ್ರಕ (Oxygen Concentrator) ಒದಗಿಸುವ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇಂದು ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ  ಮಾತನಾಡಿದ ಡಿಸಿಎಂ ಮೊದಲು ಬೆಂಗಳೂರಿನಲ್ಲಿ ಈ ವ್ಯವಸ್ಥೆ ಆರಂಭವಾಗುತ್ತಿದ್ದು, ಕ್ರಮೇಣ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ. ಈ ಕೆಲಸದಲ್ಲಿ ಸರ್ಕಾರದ ಜತೆ ಗಿವ್‌ ಇಂಡಿಯಾ ಹಾಗೂ ಓಲಾ ಕ್ಯಾಬ್‌ ಕಂಪನಿಗಳು ಕೈಜೋಡಿಸಿವೆ ಎಂದರು. 

 ಇಡೀ ರಾಜ್ಯದಲ್ಲಿಯೇ ಮೊತ್ತ ಮೊದಲಿಗೆ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಕೆಲಸವನ್ನು ನಾನು ಆರಂಭ ಮಾಡಿದೆ. ಅದಕ್ಕೆ ಉತ್ತಮ ಫಲಿತಾಂಶ ಸಿಕ್ಕಿತು. ಈಗ ಇಡೀ ಬೆಂಗಳೂರಿಗೆ ವಿಸ್ತರಿಸುತ್ತಿದ್ದು, ಅದಕ್ಕೆ ಓಲಾ ಸಹಕಾರ ನೀಡುತ್ತಿರುವುದು ಖುಷಿಯ ವಿಚಾರ" ಎಂದರು. 

ಸಮುದ್ರ ಸೇತು; ಕುವೈತ್‌ನಿಂದ ಮಂಗಳೂರಿಗೆ ಬಂದಿಳಿದಿದ 100 MT ಆಕ್ಸಿಜನ್

ಹೋಮ್‌ ಐಸೋಲೇಷನ್‌ ಆಗಿರುವ ಯಾರೇ ಸೋಂಕಿತರಲ್ಲಿ ಆಮ್ಲಜನಕದ ಸ್ಯಾಚುರೇಶನ್ ಮಟ್ಟವು 94% ಗಿಂತ ಕಡಿಮೆ ಇದ್ದರೆ ಅವರಿಗೆ ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗುವುದು. ಅವರು ಓಲಾ ಆಪ್‌ ಮೂಲಕ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸಿದ 30 ನಿಮಿಷದೊಳಗೆ ಅವರಿಗೆ ತಲುಪುತ್ತದೆ. ಸೋಂಕಿತರು 5,000 ರು. ಭದ್ರತಾ ಠೇವಣಿ (ಡಿಜಿಟಲ್‌ ಮೂಲಕ) ಇಟ್ಟು ಇವುಗಳನ್ನು ಪಡೆಯಬೇಕು. ಈ ಸಾಂದ್ರಕಗಳನ್ನು ವಾಪಸ್‌ ಪಡೆಯುವಾಗ ಈ ಮೊತ್ತವನ್ನು ಹಿಂತಿರುಗಿಸಲಾಗುವುದು. ಜತೆಗೆ, ಸೋಂಕಿತರಿಗೆ ಈ ಯಂತ್ರವನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನೂ ಹೇಳಿಕೊಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು. 

ಸದ್ಯಕ್ಕೆ 500 ಆಮ್ಲಜನಕ ಸಾಂದ್ರಕಗಳ ಮೂಲಕ ಈ ನೆಟ್‌ವರ್ಕ್‌ ಮಾಡಲಾಗಿದೆ. ಇವತ್ತು ಮಲ್ಲೇಶ್ವರ ಮತ್ತು ಕೋರಮಂಗಲದಲ್ಲಿ ವಿದ್ಯುಕ್ತವಾಗಿ ಆರಂಭ ಮಾಡಲಾಗಿದೆ. ಕ್ರಮೇಣ ಮತ್ತಷ್ಟು ಪ್ರಮಾಣದಲ್ಲಿ ವಿಸ್ತರಣೆ ಮಾಡಲಾಗುವುದು. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. ಇದರ ಜತೆಯಲ್ಲೇ ಟೆಲಿಕನ್ಸಲ್‌ಟೆನ್ಸಿ ಕೊಡುವ ಚಿಂತನೆಯೂ ಇದೆ. ಅಗತ್ಯಬಿದ್ದರೆ ಅಂಥ ಸೋಂಕಿತರಿಗೆ ಔಷಧೋಪಾಚಾರವನ್ನೂ ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. 

ಸೆಕೆಂಡ್‌ ಡೋಸ್‌ನವರಿಗೆ ಸಮಸ್ಯೆ ಇಲ್ಲ: 

ಪ್ರಸ್ತುತ ದಿನಕ್ಕೆ 2.5 ಲಕ್ಷ ಡೋಸ್‌ ಲಸಿಕೆಯನ್ನು ಒದಗಿಸಲಾಗುತ್ತಿದೆ. ಹೀಗಾಗಿ ಎಲ್ಲಿಯೂ ಲಸಿಕೆ ಸಮಸ್ಯೆ ಇಲ್ಲ. ಮೊದಲು ಕೇವಲ 1 ಲಕ್ಷ ಡೋಸ್‌ ಮಾತ್ರ ನೀಡಲಾಗುತ್ತಿತ್ತು. ಸೆಕೆಂಡ್‌ ಡೋಸ್ ಪಡೆಯುತ್ತಿರುವವರಿಗೆ ಕೊರತೆ ಉಂಟಾಗುತ್ತಿಲ್ಲ. ಮೊದಲ ಡೋಸ್‌ ಪಡೆಯುತ್ತಿರುವರಿಗೆ ಮಾತ್ರ ಸಣ್ಣ ಪ್ರಮಾಣದಲ್ಲಿ ಸಮಸ್ಯೆ ಆಗುತ್ತಿದೆ ಎಂದು ಡಿಸಿಎಂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಕೊರೋನಾ ತುರ್ತು ಚಿಕಿತ್ಸೆಗಾಗಿ 'ಆಕ್ಸಿಬಸ್'ಗೆ ಸಿಎಂ ಬಿಎಸ್‌ವೈ ಚಾಲನೆ

ಒಂದೇ ದಿನ ಏಕಾಎಕಿ ಹೆಚ್ಚು ಜನ ಲಸಿಕೆ ಕೇಂದ್ರಕ್ಕೆ ನುಗ್ಗಬಾರದು. ಈ ಮುನ್ನ ಮೊದಲು ಬಂದರಿಗೆ ಲಸಿಕೆ ಕೊಡಲಾಗುತ್ತಿತ್ತು. ಇನ್ನು ಮುಂದೆ 45 ವರ್ಷ ಮೇಲ್ಪಟ್ಟವರು ಕೂಡ ಆನ್‌ಲೈನ್‌ ಮೂಲಕವೇ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು. 

 

Home Isolationನಲ್ಲಿರುವ ಸೋಂಕಿತರಿಗೆ ನೆರವಾಗುವ ದೃಷ್ಟಿಯಿಂದ , ಮತ್ತು ಸಹಯೋಗದೊಂದಿಗೆ ಗಳನ್ನು ಅಗತ್ಯ ಇರುವ ಸೋಂಕಿತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ರೂಪಿಸಲಾಗಿದೆ.

Oxygen Saturation ಮಟ್ಟ 94 ಕ್ಕಿಂತ ಕಡಿಮೆ ಇರುವ ಸೋಂಕಿತರಿಗೆ ಇದು ಸಹಾಯವಾಗಲಿದೆ.
1/2 https://t.co/mzsqtMOU5Y

— Office of Dr. Ashwathnarayan (@OfficeofAshwath)

ಈ ಸಂದರ್ಭದಲ್ಲಿ ಓಲಾ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್‌ ಪೋರ್‌ವಾಲ್‌ ಮಾತನಾಡಿ, ಇಂತಹ ಸಂಕಷ್ಟ ಸಂದರ್ಭದಲ್ಲಿ ಸರ್ಕಾರದ ಜತೆ ಕೈಜೋಡಿಸಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ಈ ಯೋಜನೆಯನ್ನು ಬೆಂಗಳೂರು ‌ಮಾತ್ರವಲ್ಲದೆ, ಇಡೀ ದೇಶದಲ್ಲಿ ವಿಸ್ತರಿಸಲಾಗುವುದು. 10,000 ಆಮ್ಲಜನಕ ಸಾಂದ್ರಕಗಳನ್ನು ಜನ ಬಳಕೆ ನೀಡುವ ಉದ್ದೇಶ ಇದೆ‌ ಎಂದರು. 

ಗಿವ್‌ ಇಂಡಿಯಾ-ಸರ್ಕಾರದ ಜತೆಗಿನ ಪಾಲುದಾರಿಕೆಯ ವ್ಯವಸ್ಥಾಪಕ‌ ನಿರ್ದೇಶಕ ಕೆ.ಪಿ.ವಿನೋದ್‌ ಮಾತನಾಡಿ, ಸರ್ಕಾರ ಮತ್ತು ಓಲಾ ಜತೆಗೆ ಗಿವ್ ಇಂಡಿಯಾ ಸೇರಿ‌ ಕೆಲಸ‌ ಮಾಡುತ್ತಿರುವುದು ಖುಷಿಯ ವಿಚಾರ. ಮೊದಲ ಹಂತದಲ್ಲಿ 500 ಸಾಂದ್ರಕ ಕೊಡುತ್ತಿದ್ದು  ಅಗತ್ಯ ನೋಡಿಕೊಂಡು ಇನ್ನೂ ಹೆಚ್ವು ಸರಬರಾಜು ಮಾಡಲಾಗುವುದು ಎಂದರು. 

ಗಿವ್ ಇಂಡಿಯಾ, ಓಲಾ ಜತೆ ಸಂಯೋಜನೆಯ ಕೆಲಸ‌ ಮಾಡಿದ ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ರಾಘವೇಂದ್ರ ಬೇಲೂರು ಈ ಸಂದರ್ಭದಲ್ಲಿ ಹಾಜರಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!