ಬದುಕೋಕೆ ಸೂರಿಲ್ಲದೆ ದಿನ ದೂಡುತ್ತಿದೆ ಆಸ್ಕರ್‌ ಅವಾರ್ಡ್‌ ತಂದುಕೊಟ್ಟ ಬೆಳ್ಳಿ ಬೊಮ್ಮನ್‌ ಜೋಡಿ!

By Ravi JanekalFirst Published Jun 16, 2023, 1:44 PM IST
Highlights
  • ಸೂರಿಗಾಗಿ ಪರದಾಡುತ್ತಿದ್ದಾರೆ ಬೆಳ್ಳಿ ಬೊಮ್ಮನ್ ದಂಪತಿ!
  • ಆಸ್ಕರ್ ಪ್ರಶಸ್ತಿ ಗೆದ್ದ ಚಿತ್ರಕ್ಕೆ ಸ್ಫೂರ್ತಿಯಾದವ್ರಿಗೆ ಸೂರಿಲ್ಲ!
  • ಮನೆ ಕಟ್ಟಲು ಸಹಾಯ ಮಾಡುವಂತೆ ಕನ್ನಡಿಗರಲ್ಲಿ ಮೊರೆ.

ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು

ತುಮಕೂರು (ಜೂ.16) : ಆ ಒಂದು ಜೋಡಿಯ  ಮಾನವೀಯತೆಯ ಮನಸ್ಸಿಗೆ ಇಡೀ ವಿಶ್ವವೇ ತಲೆಬಾಗಿತ್ತು..ತಮ್ಮ ಕಾರ್ಯದಿಂದಾಗಿ ಇಡೀ ವಿಶ್ವದ  ಶಹಬ್ಬಾಸ್ ಗಿರಿ ಪಡೆದಿದ್ದರು, ಲಕ್ಷಾಂತರ ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರವೇ ಹರಿದುಬಂದಿತ್ತು.. ಸಾಧನೆಯ ಶಿಖರ ಏರಿದ್ದ ಆ ಜೋಡಿಯ ವ್ಯಥೆಯನ್ನ ಈಗ ಕೇಳೋರಿಲ್ಲದಂತಾಗಿದೆ. ದಿ ಎಲಿಫೆಂಟ್ ವಿಸ್ಪರರ್ಸ್ಸ್(The Elephant Whisperers) ಖ್ಯಾತಿಯ ಆಸ್ಕರ್ ಪ್ರಶಸ್ತಿ ಪುರಸ್ಕೃತ(Oscar Award Winner) ಬೆಳ್ಳಿ,ಬೊಮ್ಮನ್(Belli bomman) ಜೋಡಿ ತಮ್ಮ ಸೂರಿಗಾಗಿ ಪರದಾಡುವಂತಾಗಿದೆ.

Latest Videos

ಬೆಳ್ಳಿ,ಬೊಮ್ಮನ್,,ಇಬ್ಬರ ಹೆಸರು ಕೇಳಿದಾಕ್ಷಣ ನೆನಪಾಗೋದು,ಮುದ್ದಾದ ಪುಟಾಣಿ ಆನೆ. ಅದರ ಆರೈಕೆ. ಆ ಆರೈಕೆಯ ಹಿಂದಿನ ಮಾನವೀಯ ಕೈಗಳು. ಇತ್ತೀಚೆಗೆ ದಿ ಎಲಿಫೆಂಟ್ ವಿಸ್ಪರರ್ಸ್ ಅನ್ನೋ ಕಿರುಚಿತ್ರ,ಇಡೀ ವಿಶ್ವದ ಗಮನ ಸೆಳೆದಿತ್ತು. ಅತ್ಯುನ್ನತ ಆಸ್ಕರ್ ಪ್ರಶಸ್ತಿಯ ಗರಿ ಈ ಕಿರುಚಿತ್ರದ ಮುಡಿಗೇರಿತ್ತು. ಅಂದು ಇಡೀ ಭಾರತ ದೇಶವೇ ಬೆಳ್ಳಿ ಬೊಮ್ಮನ್ ದಂಪತಿಗಳನ್ನ ಕೊಂಡಾಡಿತ್ತು. ತಮಿಳುನಾಡಿನ ಮುದುಮಲೈ ಕಾಡಿನ ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರನ್ನೂ ದೇಶದ ಪ್ರಧಾನಿ ಮೋದಿ(PM narendra Modi) ಅವರೇ ಖುದ್ದಾಗಿ ಭೇಟಿ ನೀಡಿ ಇವರ ಕಾರ್ಯವನ್ನ ಮೆಚ್ಚಿ,ಶಹಬ್ಬಾಸ್ ಗಿರಿ ನೀಡಿದ್ದರು. ಆದರೇ ಇಂದು ಇವರ ಕಷ್ಟ ಆಲಿಸೋರು ಯಾರೂ ಇಲ್ಲದಂತಾಗಿದೆ. ಸೂರಿಲ್ಲದ ನಮಗೆ ಸೂರಿಗಾಗಿ ಸಹಾಯ ಮಾಡಿ ಅಂತಾ ಖುದ್ದು ಬೆಳ್ಳಿ ಬೊಮ್ಮನ ದಂಪತಿಗಳೇ ಅಂಗಲಾಚುತ್ತಿದ್ದಾರೆ.

ದಿ ಎಲಿಫೆಂಟ್​ ವಿಸ್ಪರರ್ಸ್​ ಖ್ಯಾತಿಯ ಬೆಳ್ಳಿ-ಬೊಮ್ಮನ್​ನನ್ನು ಭೇಟಿ ಮಾಡಲಿರುವ ಪ್ರಧಾನಿ

ಇವರ ಈ ಮಹಾನ್ ಸಾಧನೆಯನ್ನ ಗುರುತಿಸಿ ಇವರನ್ನ ಸನ್ಮಾನಿಸಿ ಗೌರವಿಸಬೇಕೆಂದು ತುಮಕೂರು ಜಿಲ್ಲೆಯ ಶಿರಾದ ವರ್ದಮಾನ್ ಶಾಲೆಯ ಆಡಳಿತ ಮಂಡಳಿ ಇವರನ್ನು ಆಹ್ವಾನಿಸಿದ್ದರು. ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನ(World Environment Day) ಕಾರ್ಯಕ್ರಮದಲ್ಲಿ ಇವರ ಸಾಧನೆಯನ್ನ ಮಕ್ಕಳಿಗೆ ತಿಳಿಸಿ,ಅವರೊಟ್ಟಿಗೆ ಸಂವಾದ ಮಾಡುವಂತಾ ವಿನೂತನ ಕಾರ್ಯಕ್ರಮ ನೆರವೇರಿತು. ಈ ವೇಳೆ ಖುದ್ದು ಬೊಮ್ಮನ್ ಅವರೇ ತಮ್ಮ ಕಷ್ಟವನ್ನ ಪರಿಪರಿಯಾಗಿ ಹೇಳಿಕೊಂಡಿದ್ದಾರೆ.‌ ಮನೆಯಿಲ್ಲದೇ ಪರಿತಪಿಸುತ್ತಿರೋ ನಮಗೆ ಮನೆ ನಿರ್ಮಿಸಿಕೊಡಲು ಸಹಾಯ ಮಾಡಿ ಅಂತಾ ಎಲ್ಲರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರ ಆಸ್ಕರ್ ಪ್ರಶಸ್ತಿ ಪಡೆಯುತ್ತಿದ್ದಂತೆ ಇವರಿಗೆ ಒಂದು ಲಕ್ಷ ಬಹುಮಾನ ನೀಡೋ ಮೂಲಕ ತಮಿಳುನಾಡಿನ ಸ್ಟಾಲಿನ್ ಸರ್ಕಾರ ಕೈತೊಳೆದುಕೊಂಡಿದೆ. ಪ್ರಧಾನಿ ಮೋದಿ ಅವರ ಭೇಟಿ ವೇಳೆಯೂ ಇವರಿಗೆ ಸಾಕಷ್ಟು ಭರವಸೆ ದೊರೆತಿದೆ. ಆದರೇ ಅದ್ಯಾವುದೂ ಈಡೇರದಿರುವುದು ವಿಪರ್ಯಾಸ. ಶಿರಾದ ಜನರು ಇವರ ಮನವಿಗೆ ಕರಗಿ ಇಂದು ಸಾಕಷ್ಟು ಸಹಾಯ ಮಾಡಿದ್ದಾರೆ. ವರ್ದಮಾನ್ ಶಾಲೆಯ ಮುಖ್ಯಸ್ಥ ಸಂಜಯ್ ಅವರು ಒಂದು ವಾರದಲ್ಲಿ ಖುದ್ದಾಗಿ ಮುದುಮಲೈಗೆ ತೆರಳಿ ಇವರ ಸೂರಿಗೆ ಬೇಕಾದ ಸಹಾಯ ಮಾಡೋದಾಗಿ ಬೆಳ್ಳಿಬೊಮ್ಮನ್ ದಂಪತಿಗಳಿಗೆ ಭರವಸೆ ನೀಡಿದ್ದಾರೆ.

The Elephant Whisperers ಚಿತ್ರದ ಬೊಮ್ಮನ್ - ಬೆಳ್ಳಿ ದಂಪತಿ ಸಾಕಿದ್ದ 4 ತಿಂಗಳ ಆನೆ ಮರಿ ಅನಾರೋಗ್ಯಕ್ಕೆ ಬಲಿ

ತಮಿಳುನಾಡಿನವರಾದರೂ ಅವರ ನೋವಿಗೆ ಕರಗಿದ ಶಿರಾದ ಜನರು ಸಾಕಷ್ಟು ರೀತಿಯಲ್ಲಿ ಸಹಾಯ ಹಸ್ತ ಚಾಚಲು ಮುಂದಾಗಿರೋದು ಖುಷಿಯ ಸಂಗತಿ. ಮುದ್ದಾದ ರಘು ಅನ್ನೋ ಆನೆಯನ್ನ ರಕ್ಷಿಸೋ ಮೂಲಕ ಮಾನವೀಯ ಮೌಲ್ಯದ ಅರ್ಥಕ್ಕೆ ಜೀವ ಕೊಟ್ಟ ಈ ಜೋಡಿ ಅಂದು ಇಡೀ ವಿಶ್ವದ ಗಮನಸೆಳೆದು, ಇಂದು ಸಹಾಯಕ್ಕಾಗಿ ಪರಿತಪಿಸುತ್ತಿರೋದು ನಿಜಕ್ಕೂ ವಿಪರ್ಯಾಸವೇ ಸರಿ.

click me!