
ಬೆಂಗಳೂರು (ಸೆ.08): ರಾಜ್ಯ ಸರ್ಕಾರದ ವಿವಿಧ ನಿಗಮಗಳ ಅಡಿಯಲ್ಲಿ ಕಾರ್ಯನಿರ್ವಹಿಸಿದ ಗುತ್ತಿಗೆದಾರರಿಗೆ ದಸರಾ ಹಬ್ಬದೊಳಗೆ ಬಾಕಿ ಉಳಿಸಿಕೊಂಡಿರುವ ಬಿಲ್‌ಗಳನ್ನು ಪಾವತಿಸುವ ಭರವಸೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದಾರೆ. 3 ವರ್ಷಗಳಿಂದ ಹಣ ಪಾವತಿಯಾಗದೆ ಪರದಾಡುತ್ತಿದ್ದ ಗುತ್ತಿಗೆದಾರರ ಮನವಿಗೆ ಸ್ಪಂದಿಸಿ ಈ ನಿರ್ಧಾರ ಕೈಗೊಂಡಿರುವುದು ಅವರಿಗೆ ದೊಡ್ಡ ನೆಮ್ಮದಿ ತಂದಿದೆ.
ಗುತ್ತಿಗೆದಾರರ ಬೇಡಿಕೆ ಮತ್ತು ಸರ್ಕಾರದ ಪ್ರತಿಕ್ರಿಯೆ
ರಾಜ್ಯ ಗುತ್ತಿಗೆದಾರರ ಸಂಘವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿ, ತಮಗೆ ಪಾವತಿಯಾಗಬೇಕಿದ್ದ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿತ್ತು. ಈ ಮನವಿಯ ಬೆನ್ನಲ್ಲೇ ಡಿಸಿಎಂ ಅವರು ಕಾವೇರಿ ನೀರಾವರಿ ನಿಗಮ, ಕೃಷ್ಣಾ ಬೇಸಿನ್, ಕರ್ನಾಟಕ ನೀರಾವರಿ ನಿಗಮ, ಮತ್ತು ವಿಶ್ವೇಶ್ವರಯ್ಯ ಜಲ ನಿಗಮ (ಭದ್ರಾ)ದ ವ್ಯವಸ್ಥಾಪಕ ನಿರ್ದೇಶಕರುಗಳು ಮತ್ತು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಇನ್ನು ಗುತ್ತಿಗೆದಾರರೊಂದಿಗೆ ನಡೆಸಿದ ಚರ್ಚೆಯ ನಂತರ, ಡಿಸಿಎಂ ಡಿ.ಕೆ. ಶಿವಕುಮಾರ್ ಕೆಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದರು:
₹50 ಲಕ್ಷ ಒಳಗಿನ ಬಿಲ್‌ಗಳಿಗೆ ಆದ್ಯತೆ: ಮೊದಲ ಹಂತದಲ್ಲಿ, ₹50 ಲಕ್ಷದೊಳಗಿನ ಕಾಮಗಾರಿಗಳ ಬಾಕಿ ಹಣವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಲಾಗುವುದು. ಈ ನಿರ್ಧಾರದಿಂದ 4 ನಿಗಮಗಳ ಅಡಿಯಲ್ಲಿ ಬರುವ ಸುಮಾರು 10,000 ಗುತ್ತಿಗೆದಾರರಿಗೆ ದಸರಾ ಹಬ್ಬದೊಳಗಾಗಿ ಹಣ ದೊರೆಯಲಿದೆ ಎಂದು ಭರವಸೆ ನೀಡಿದ್ದಾರೆ. ಕೇವಲ ಒಂದು ನೀರಾವರಿ ನಿಗಮದಲ್ಲೇ ಸುಮಾರು 2,500 ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಬೇಕಿದೆ.
ದೊಡ್ಡ ಯೋಜನೆಗಳಿಗೆ ಭಾಗಶಃ ಪಾವತಿ: ₹1 ಕೋಟಿಯಿಂದ ₹3 ಕೋಟಿವರೆಗಿನ ಕಾಮಗಾರಿಗಳಿಗೆ ಸಂಪೂರ್ಣ ಹಣ ಪಾವತಿಗೆ ಗುತ್ತಿಗೆದಾರರ ಸಂಘ ಬೇಡಿಕೆ ಇಟ್ಟಿತ್ತು. ಆದರೆ, ಸದ್ಯಕ್ಕೆ ಶೇಕಡಾ 25ರಷ್ಟು ಹಣವನ್ನು ಮಾತ್ರ ಬಿಡುಗಡೆ ಮಾಡಲು ಉಪಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ.
ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ 'ಸೆಂಟ್ ಮೇರಿ' ಹೆಸರು ನಾಮಕರಣ; ಸಿಎಂ ಸಿದ್ದರಾಮಯ್ಯ!
ನೀರಾವರಿ ನಿಗಮಗಳಿಂದಲೇ ಒಟ್ಟು ₹12 ಸಾವಿರ ಕೋಟಿಗೂ ಹೆಚ್ಚು ಬಾಕಿ ಬಿಲ್‌ಗಳು ಪಾವತಿಯಾಗಬೇಕಿದೆ. ಸದ್ಯಕ್ಕೆ ಸ್ವಲ್ಪ ಮಟ್ಟದ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ನಿರ್ಧಾರವು ಗುತ್ತಿಗೆದಾರರಿಗೆ ಹಬ್ಬದ ಸಮಯದಲ್ಲಿ ಆರ್ಥಿಕವಾಗಿ ಸ್ವಲ್ಪ ಮಟ್ಟಿನ ನೆರವು ನೀಡಲಿದೆ.
ಗುತ್ತಿಗೆದಾರರ ಸಂಘದ ಪ್ರತಿಕ್ರಿಯೆ:
ಸಭೆಯ ನಂತರ ಮಾತನಾಡಿದ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳ ಮೇಲೆ ತಮಗೆ ಭರವಸೆಯಿದೆ ಎಂದು ಹೇಳಿದರು. 'ನೀರಾವರಿ ಇಲಾಖೆಯ 12 ಸಾವಿರ ಕೋಟಿ ಸೇರಿ, ಒಟ್ಟಾರೆ 8 ಇಲಾಖೆಗಳಿಂದ 32 ಸಾವಿರ ಕೋಟಿ ರೂಪಾಯಿಗಳ ಬಿಲ್ ಬಾಕಿ ಇದೆ. ದಸರಾ ಹಬ್ಬದೊಳಗೆ ಹಣ ಪಾವತಿ ಮಾಡುವುದಾಗಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ, ಇದು ನಮ್ಮಲ್ಲಿ ಸಂತಸ ಮೂಡಿಸಿದೆ' ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ