
ಬೆಂಗಳೂರು[ಜ.25]: ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆಯ ವಿರುದ್ಧ ಗೆದ್ದು ಬಂದ ಒಂಬತ್ತು ಸಂಸದರ ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆಗಿನ ಹೊಂದಾಣಿಕೆ ವೇಳೆ ಬಿಟ್ಟುಕೊಡಬಾರದು ಎಂಬ ಪಕ್ಷದ ಹಾಲಿ ಸಂಸದರ ಬೇಡಿಕೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ‘ಗೆಲ್ಲುವ ಸಾಮರ್ಥ್ಯವಿರುವ ಹಾಲಿ ಸಂಸದರಿಗೆ ಮಾತ್ರ ಟಿಕೆಟ್ ನೀಡುತ್ತೇವೆ’ ಎಂದು ಹೇಳಿ ಶಾಕ್ ನೀಡಿದ್ದಾರೆ.
ಲೋಕಸಭಾ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ವೇಣುಗೋಪಾಲ್ ರಾಜ್ಯದ ಪ್ರತಿ ಜಿಲ್ಲಾವಾರು ಪಕ್ಷದ ಮುಖಂಡರ ಪೂರ್ವಭಾವಿ ಸಭೆ ನಡೆಸಲಾರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಮುಖಂಡರ ಸಭೆ ನಡೆಸಿದರು.
ಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಸಚಿವ ಶಿವಶಂಕರ ರೆಡ್ಡಿ, ಶಾಸಕರಾದ ಡಾ.ಕೆ. ಸುಧಾಕರ್, ಸುಬ್ಬಾರೆಡ್ಡಿ, ವೆಂಕಟರಮಣಯ್ಯ ಹಾಗೂ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದರು.
ಈ ವೇಳೆ ವೀರಪ್ಪ ಮೊಯ್ಲಿ ಅವರು, ‘ಕಳೆದ ಚುನಾವಣೆಯಲ್ಲಿ ಮೋದಿ ಅಲೆಯ ವಿರುದ್ಧ ಗೆದ್ದುಬಂದ ಒಂಬತ್ತು ಸಂಸದರ ಕ್ಷೇತ್ರಗಳನ್ನು ಜೆಡಿಎಸ್ ಜೊತೆಗಿನ ಹೊಂದಾಣಿಕೆ ವೇಳೆ ಬಿಟ್ಟುಕೊಡಬಾರದು. ಸಂಕಷ್ಟದ ಕಾಲದಲ್ಲಿ ಗೆದ್ದು ಪಕ್ಷಕ್ಕೆ ಆಸರೆಯಾದವರ ಕ್ಷೇತ್ರ ಬದಲಾವಣೆ ಮಾಡಬಾರದು ಎಂಬುದು ನನ್ನನ್ನೂ ಒಳಗೊಂಡಂತೆ ಪಕ್ಷದ ಹಾಲಿ ಒಂಬತ್ತೂ ಸಂಸದರ ಒಮ್ಮತದ ಅಭಿಪ್ರಾಯವಾಗಿದೆ’ ಎಂದು ವೇಣುಗೋಪಾಲ್ ಅವರ ಮುಂದೆ ತಿಳಿಸಿದರು.
ಇದಕ್ಕೆ, ಪ್ರತಿಕ್ರಿಯಿಸಿದ ವೇಣುಗೋಪಾಲ್ ಅವರು, ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವೊಂದೇ ಮಾನದಂಡ. ಪಕ್ಷವನ್ನು ಅಧಿಕಾರಕ್ಕೆ ತರಬೇಕಾದ ಸವಾಲು ಎಲ್ಲರ ಮುಂದೆಯೂ ಇದೆ. ಹಾಗಾಗಿ ಹಾಲಿ ಸಂಸದರ ಪೈಕಿ ಮತ್ತೆ ಗೆಲ್ಲುವ ಸಾಮರ್ಥ್ಯವಿರುವವರಿಗೆ ಮಾತ್ರ ಮತ್ತೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು. ಉಳಿದ ಕ್ಷೇತ್ರಗಳಲ್ಲಿ ಹೊಂದಾಣಿಕೆ ಅನಿವಾರ್ಯವಾಗಬಹುದು. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹಾಲಿ ಸಂಸದರು ಕೂಡ ಕೆಲ ತ್ಯಾಗಕ್ಕೆ ಸಿದ್ಧರಿರಬೇಕಾಗುತ್ತದೆ’ ಎಂದು ಹೇಳುವ ಮೂಲಕ ಗೆಲ್ಲುವ ಸಾಮರ್ಥ್ಯ ಇಲ್ಲದವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಪರೋಕ್ಷವಾಗಿ ನುಡಿದರು ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ