
ಬೆಂಗಳೂರು : ಅತೃಪ್ತ ಶಾಸಕರು ಬಿಜೆಪಿಯತ್ತ ವಾಲುವ ಸಾಧ್ಯತೆ ಇನ್ನೂ ಇದ್ದು, ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುವ ಸಾಧ್ಯತೆ ಬಗ್ಗೆ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್‌ನಲ್ಲಿ ಇನ್ನೂ ಆತಂಕವಿದೆ. ಹೀಗಾಗಿ, ಸರ್ಕಾರ ಅಲ್ಪಮತಕ್ಕೆ ಬೀಳದಂತೆ ತಡೆಯಲು ಬಿಜೆಪಿಗೆ ರಿವರ್ಸ್ ಆಪರೇಷನ್ ನಡೆಸುವುದೂ ಸೇರಿದಂತೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಾಂಗ್ರೆಸ್‌ನ ಅತೃಪ್ತ ಶಾಸಕರ ನೆರವಿನಿಂದ ಬಿಜೆಪಿ ಸತತವಾಗಿ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಅಲ್ಲ ಮುಂದಿನ ವಿಧಾನಮಂಡಲ ಅಧಿವೇಶನದ ವೇಳೆ ಅವಿಶ್ವಾಸ ನಿರ್ಣಯ ಮಂಡಿಸುವ ಮತ್ತು ಆ ವೇಳೆಗೆ ಉಭಯ ಪಕ್ಷಗಳ ಶಾಸಕರನ್ನು ಸೆಳೆದು ಪಕ್ಷ ಅಲ್ಪಮತಕ್ಕೆ ಬೀಳುವಂತೆ ಮಾಡುವ ತಂತ್ರಗಾರಿಕೆಯಲ್ಲಿ ನಿರತವಾಗಿದೆ. ಇದೇ ವೇಳೆ ಕಾಂಗ್ರೆಸ್‌ನ ನಾಲ್ಕು ಮಂದಿ ಅತೃಪ್ತ ಶಾಸಕರು ಇನ್ನೂ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿಯದಂತೆ ಮಾಡಲು ಅಗತ್ಯ ತಂತ್ರಗಾರಿಕೆ ಮಾಡಬೇಕಾದ ಅಗತ್ಯವಿದೆ ಎಂಬುದನ್ನು ಉಭಯ ಪಕ್ಷಗಳ ನಾಯಕರು ಸಭೆಯಲ್ಲಿ ಒಪ್ಪಿಕೊಂಡರು.
ಜತೆಗೆ, ರಿವರ್ಸ್ ಆಪರೇಷನ್ ಮೂಲಕ ಬಿಜೆಪಿಯ ಸಂಖ್ಯಾಬಲವನ್ನು ಕುಸಿಯುವಂತೆ ಮಾಡುವುದು ಹಾಗೂ ಕಾಂಗ್ರೆಸ್‌ನ ಅತೃಪ್ತ ಶಾಸಕರು ಪಕ್ಷ ತೊರೆಯದಂತೆ ತಡೆಯಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು. ಇದೇ ವೇಳೆ ಪಕ್ಷದ ಇನ್ಯಾವ ಶಾಸಕರು ಬಿಜೆಪಿಯ ಆಮಿಷಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸುವ ಕುರಿತು ತೀರ್ಮಾನಿಸಲಾಯಿತು.
ಬಿಜೆಪಿಯ ತಂತ್ರಗಾರಿಕೆಗೆ ಪ್ರತಿ ತಂತ್ರ ಹೂಡಲು ಆ ಪಕ್ಷದ ಶಾಸಕರನ್ನು ಸೆಳೆಯಬೇಕು. ಈ ಬಗ್ಗೆ ಅಂತಹ ಶಾಸಕರ ಪಟ್ಟಿಮಾಡಿ ಒಂದಿಬ್ಬರು ಶಾಸಕರನ್ನು ಸೆಳೆಯಬೇಕು. ಇದಕ್ಕೆ ಅಗತ್ಯವಾಗಿರುವ ಎಲ್ಲಾ ಸಹಕಾರವನ್ನು ಸರ್ಕಾರ ಹಾಗೂ ಉಭಯ ಪಕ್ಷಗಳು ನೀಡಬೇಕು ಎಂದು ಚರ್ಚಿಸಿದರು.
ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಬಿಜೆಪಿಯ ಹಲವು ಶಾಸಕರು ನಮ್ಮ ಸಂಪರ್ಕದಲ್ಲೂ ಇದ್ದಾರೆ. ಈ ಪೈಕಿ ಕೆಲವರು ಕಾಂಗ್ರೆಸ್ ಪಕ್ಷ ಸೇರುವ ಬಯಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹೈಕಮಾಂಡ್ನ ಜತೆ ಚರ್ಚಿಸಿ ಬಿಜೆಪಿಯಿಂದ ಬರುವ ಶಾಸಕರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಲು ಒಪ್ಪಿಗೆ ಪಡೆಯಬೇಕು ಎಂದು ಹೇಳಿದರು ಎನ್ನಲಾಗಿದೆ.
ಇದೇ ವೇಳೆ ಉಭಯ ಪಕ್ಷಗಳ ಶಾಸಕರು ಸರ್ಕಾರದ ಕಾರ್ಯ ವೈಖರಿ ಬಗ್ಗೆ ಅಸಮಾಧಾನಗೊಳ್ಳದಂತೆ ನೋಡಿಕೊಳ್ಳಬೇಕು. ಶಾಸಕರ ಕೆಲಸ ಕಾರ್ಯಗಳ ವಿಷಯದಲ್ಲಿ ತಾರತಮ್ಯ ಮಾಡಬಾರದು ಎಂಬ ಕಾಂಗ್ರೆಸ್ ನಾಯಕರ ಮನವಿಗೆ ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಮೊದಲಿಗೆ ಪಕ್ಷದ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ನಿಗಮ-ಮಂಡಳಿ, ಸಂಸದೀಯ ಕಾರ್ಯದರ್ಶಿ ಹುದ್ದೆಗಳ ನೇಮಕಾತಿ ಬಗ್ಗೆ ಆದೇಶ ಹೊರಡಿಸಬೇಕು. ಜತೆಗೆ ಇನ್ನಿಬ್ಬರು ಅತೃಪ್ತ ಶಾಸಕರಿಗೆ ನಿಗಮ-ಮಂಡಳಿ ಹುದ್ದೆ ನೀಡಲಿದ್ದು, ಅದನ್ನೂ ನೇಮಕ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆ ಚರ್ಚೆ ಇಲ್ಲ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಹಾಗೂ ಕ್ಷೇತ್ರ ಹಂಚಿಕೆ ವಿಚಾರವನ್ನು ಈ ಸಭೆಯ ಚರ್ಚೆಯ ವಿಷಯದಿಂದ ಹೊರಗಿಡಲು ಸಭೆಯ ಆರಂಭದಲ್ಲೇ ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದರು.
ಲೋಕಸಭೆ ಕ್ಷೇತ ಹಂಚಿಕೆ ವಿಚಾರವಾಗಿ ರಾಜ್ಯ ನಾಯಕತ್ವದ ಮಟ್ಟದಲ್ಲಿ ಪ್ರತ್ಯೇಕವಾಗಿ ಒಂದು ಸಭೆ ನಡೆಸೋಣ. ಈ ಸಭೆಯಲ್ಲಿ ಉಭಯ ಪಕ್ಷಗಳ ನಾಯಕರು ತಮ್ಮ ಅಭಿಪ್ರಾಯ ಮಂಡಿಸಲಿ. ಅನಂತರ ಈ ಅಭಿಪ್ರಾಯವನ್ನು ಹೈಕಮಾಂಡ್ಗೆ ತಿಳಿಸೋಣ. ಹೈಕಮಾಂಡ್ ಮಟ್ಟದಲ್ಲೇ ಈ ಬಗ್ಗೆ ತೀರ್ಮಾನವಾಗಲಿ ಎಂದು ಸಿದ್ದರಾಮಯ್ಯ ಅವರು ಸಭೆಗೆ ತಿಳಿಸಿದ್ದು, ಅದಕ್ಕೆ ಉಭಯ ಪಕ್ಷಗಳ ನಾಯಕರು ಒಪ್ಪಿದರು ಎಂದು ಮೂಲಗಳು ಹೇಳಿವೆ.
ಬಡ್ತಿ ಮೀಸಲಾತಿ ಮೂಡದ ಒಮ್ಮತ: ಸಭೆಯಲ್ಲಿ ಬಡ್ತಿ ಮೀಸಲಾತಿ ಜಾರಿಗೊಳಿಸುವ ವಿಷಯವೂ ಪ್ರಸ್ತಾಪಗೊಂಡಿದ್ದು, ಈ ಬಗ್ಗೆ ಒಮ್ಮತ ಮೂಡಿ ಬರಲಿಲ್ಲ ಎಂದು ತಿಳಿದು ಬಂದಿದೆ. ಬಡ್ತಿ ಮೀಸಲಾತಿ ನೀತಿ ಜಾರಿಗೊಳಿಸಬೇಕು ಎಂಬ ಕಾಂಗ್ರೆಸ್ ನಾಯಕರ ಆಗ್ರಹಕ್ಕೆ ಈ ಬಗ್ಗೆ ಸಾಧಕ ಬಾಧಕ ನೋಡಿ ನಂತರ ತೀರ್ಮಾನ ಕೈಗೊಳ್ಳುವುದಾಗಿ ಕುಮಾರಸ್ವಾಮಿ ತಿಳಿಸಿದರು ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ