ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಆನ್‌ಲೈನ್ ಮೂಲಕ ವಿದ್ಯಾರ್ಥಿ ವೇತನ ವಿತರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ಬೆಂಗಳೂರು (ಜ.21): ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಆನ್‌ಲೈನ್ (Online) ಮೂಲಕ ವಿದ್ಯಾರ್ಥಿ ವೇತನ (Scholarship) ವಿತರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಚಾಲನೆ ನೀಡಿದ್ದಾರೆ.
ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯದ ಉದ್ಯೋಗ ನೀತಿಯಿಂದ ರಾಜ್ಯದ ಯುವಕರ ಬದುಕು ಹಸನಾಗಲಿದೆ. ಕೆಳಸ್ತರದ ದುಡಿಯುವ ವರ್ಗಕ್ಕೆ ಸಹಾಯಧನ ಬಹಳ ದೊಡ್ಡ ಆಸರೆಯಾಗಿದೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಈ ಕಾರ್ಯಕ್ರಮದಿಂದ ಮಕ್ಕಳು ಉತ್ತಮ ಶಿಕ್ಷಣ ಪಡೆದು ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡು ರಾಜ್ಯದ ಆರ್ಥಿಕತೆಯ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದರು.
ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ (Shivaram Hebbar) ಮಾತನಾಡಿ, ಪ್ರಸ್ತುತ ಪೋರ್ಟಲ್ ಮೂಲಕ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ 92,061 ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನಕ್ಕೆ 1,45,524 ಅರ್ಜಿಗಳು ಸ್ವೀಕೃತವಾಗಿದೆ. ಸುಮಾರು 39 ಸಾವಿರ ಮೆಟ್ರಿಕ್ ಪೂರ್ವ ಮತ್ತು 50 ಸಾವಿರ ಮೆಟ್ರಿಕ್ ನಂತರ ಸ್ವೀಕೃತ ಅರ್ಜಿಗಳ ದಾಖಲಾತಿಗಳು ಆಧಾರ್ ಮತ್ತು ಬ್ಯಾಂಕ್ ಲಿಂಕ್ ಆಗಿರುವುದು ಸರಿಯಾಗಿದೆ. 89 ಸಾವಿರ ಅರ್ಜಿಗಳಿಗೆ ಮಂಜೂರಾತಿ ನೀಡಿ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಸುಮಾರು 150 ಕೋಟಿ ರು. ಮೊತ್ತವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
Good News To Labours: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ಸರ್ಕಾರಿ ಬಸ್‌ಪಾಸ್: ಹೆಬ್ಬಾರ್
ಬಾಕಿ ಉಳಿದಿರುವ ವಿದ್ಯಾರ್ಥಿ ವೇತನ ಅರ್ಜಿಗಳಿಗೆ ಫೆಬ್ರವರಿ ಅಂತ್ಯದೊಳಗೆ ಫಲಾನುಭವಿಗಳು ಆಧಾರ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಒದಗಿಸಿ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿಗಳ ಸಾಂಸ್ಥಿಕ ಪರಿಶೀಲನೆ ನಂತರ ಅರ್ಹ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಸಹಾಯಧವನ್ನು ವರ್ಗಾಯಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಶಾಸಕ ಎಸ್.ರಾಮದಾಸ್, ಕಾರ್ಮಿಕ ಆಯುಕ್ತ ಅಕ್ರಂ ಪಾಷಾ, ಕಾರ್ಮಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಜಿ.ಕಲ್ಪನಾ ಇತರರು ಉಪಸ್ಥಿತರಿದ್ದರು.
ಏನಿದು ಯೋಜನೆ?: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುವ ಶೈಕ್ಷಣಿಕ ಸಹಾಯಧನವನ್ನು ಈ ಹಿಂದೆ ಸೇವಾಸಿಂಧು ತಂತ್ರಾಂಶದ ಮೂಲಕ ನೀಡಲಾಗುತ್ತಿತ್ತು. ಸದರಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಫಲಾನುಭವಿಗಳಿಗೆ ವಿದ್ಯಾರ್ಥಿ ವೇತನ ದೊರಕಿಸುವಂತೆ ಮಾಡಲು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ನಿರ್ದೇಶನದಂತೆ ಕಾರ್ಮಿಕರ ಮಕ್ಕಳಿಗೆ ನೀಡುವ ಶೈಕ್ಷಣಿಕ ಸಹಾಯಧನವನ್ನು ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ ಪ್ಲಾಟ್‌ಫಾರಂ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿ ನೇರ ವರ್ಗಾವಣೆ ಮೂಲಕ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ.
ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ಸರ್ಕಾರಿ ಬಸ್‌ಪಾಸ್: ನೋಂದಾಯಿತ ಕಾರ್ಮಿಕರಿಗೆ ಕೆಲಸದ ಸ್ಥಳಗಳಿಗೆ ತೆರಳಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಆರಂಭಿಸಲಾಗಿರುವ ಪಾಸ್ ನೀಡುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದ್ದು, ಶೀಘ್ರದಲ್ಲೇ ಕೆಎಸ್‌ಆರ್‌ಟಿಸಿ ಬಸ್ ಪಾಸ್ ವಿತರಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಘೋಷಿಸಿದ್ದಾರೆ.
ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಗುಡ್ ನ್ಯೂಸ್
ಯೋಜನೆ ವ್ಯಾಪ್ತಿ, ಪಾಸ್ ದೂರ ಮಿತಿ ಕುರಿತು ಅಂತಿಮ ಹಂತದ ಮಾತುಕತೆಗಳು ಕಾರ್ಮಿಕ ಇಲಾಖೆ ಮತ್ತು ಕೆಎಸ್‌ಆರ್‌ಟಿಸಿ ನಡುವೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ರಾಜ್ಯದ ಕಾರ್ಮಿರಿಗೆ ಉಚಿತ ಸಾರಿಗೆ ಸೌಲಭ್ಯ ಭಾಗ್ಯ ದೊರೆಯಲಿದೆ. ಈಗಾಗಲೇ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಲ್ಯಾಣ ಮಂಡಳಿಯ ನೊಂದಾಯಿತ ಕಾರ್ಮಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಪಾಸ್ ಸೌಲಭ್ಯ ನೀಡಲಾಗಿದೆ. ಮುಂದಿನ ಹಂತದಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.