HD Kumaraswamy: ನನಗಿಂತ ಉತ್ತಮ ಜನಪ್ರತಿನಿಧಿ ಬೇಕೆಂದರೆ ಆರಿಸಿಕೊಳ್ಳಲಿ

By Kannadaprabha NewsFirst Published Jan 21, 2022, 1:00 AM IST
Highlights

ನಾನು ಈ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುಕೆಲಸ ಮಾಡಿದ್ದೇನೆ. ಜನರಿಗೆ ಇನ್ನೂ ಅಭಿವೃದ್ಧಿ ಮಾಡುವ ಜನಪ್ರತಿನಿಧಿ ಬೇಕು ಎಂದರೆ ಆಯ್ಕೆ ಮಾಡಿಕೊಳ್ಳಲಿ. ಇದು ಕ್ಷೇತ್ರದ ಜನತೆಗೆ ಬಿಟ್ಟವಿಚಾರ. ನಾನೇನು ಶಾಶ್ವತವಾಗಿ ಇಲ್ಲೇ ಗೂಟ ಹೊಡೆದುಕೊಂಡು ಇರೋಕಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಚನ್ನಪಟ್ಟಣ (ಜ.21): ನಾನು ಈ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುಕೆಲಸ ಮಾಡಿದ್ದೇನೆ. ಜನರಿಗೆ ಇನ್ನೂ ಅಭಿವೃದ್ಧಿ ಮಾಡುವ ಜನಪ್ರತಿನಿಧಿ ಬೇಕು ಎಂದರೆ ಆಯ್ಕೆ ಮಾಡಿಕೊಳ್ಳಲಿ. ಇದು ಕ್ಷೇತ್ರದ ಜನತೆಗೆ ಬಿಟ್ಟವಿಚಾರ. ನಾನೇನು ಶಾಶ್ವತವಾಗಿ ಇಲ್ಲೇ ಗೂಟ ಹೊಡೆದುಕೊಂಡು ಇರೋಕಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ತಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ನಾನು ಮೂರುವರೇ ವರ್ಷದಲ್ಲಿ ಎಷ್ಟುಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದೀನಿ, ಬೇರೆಯವರು 20 ವರ್ಷ ಅವಧಿಯಲ್ಲಿ ಎಷ್ಟುಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಜನರೇ ಪರಾಮರ್ಶಿಸಲಿ, ಇದು ಕ್ಷೇತ್ರದ ಜನತೆಗೆ ಬಿಟ್ಟವಿಚಾರ, ಮಾಡಿದ ಕೆಲಸಗಳನ್ನು ನೆನೆಸಿಕೊಳ್ಳದೆ ಹೋದರೆ ಆಗುವ ಅನಾಹುತಗಳೇನು ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.

ಅಧಿಕಾರಿಗಳಿಂದ ಉತ್ತಮ ಕೆಲಸ: ಕೋವಿಡ್‌ (Covid19) ಕಾಂಗ್ರೆಸ್‌ ಪಾದಯಾತ್ರೆಯಿಂದ (Congress Padayatre) ಹೆಚ್ಚಳವಾಯ್ತೋ ಇಲ್ಲಾ ಬೇರೆ ಕಾರಣಕ್ಕೆ ಹೆಚ್ಚಳವಾಯ್ತೋ ಎಂದು ನಾನಿಲ್ಲಿ ಚರ್ಚೆ ಮಾಡುವುದಿಲ್ಲ. ಆದರೆ, ಜಿಲ್ಲೆಯ ವೈದ್ಯರು ಮತ್ತು ಅಧಿಕಾರಿಗಳು ಸಾಕಷ್ಟು ಸಮಸ್ಯೆಗಳ ನಡುವೆಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ಬಗ್ಗೆ ಟೀಕೆ ಮಾಡಿ ಅವರ ಮನೋಸ್ಥೈರ್ಯ ಕುಗ್ಗಿಸುವ ಕೆಲಸವಾಗಬಾರದು ಎಂದು ಸಲಹೆ ನೀಡಿದರು.

ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ, ಎಚ್‌ಡಿಕೆ ಕಿಡಿ

ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ: ನಾನೇನು ಸುಮ್ಮನೆ ಕುಳಿತಿಲ್ಲ. ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಹಲವಾರು ಸಮಸ್ಯೆಗಳನ್ನು ಖುದ್ದು ನಿಂತು ಪರಿಹರಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ನಾನು ಎಂದೂ ಹಿಂದೆ ಉಳಿದಿಲ್ಲ. ಮೊದಲ ಆದ್ಯತೆ ನೀಡಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಿದ್ದೇನೆ. ಮಾಧ್ಯಮಗಳು ವಿಪಕ್ಷದವರು ಆಧಾರ ರಹಿತ ಆರೋಪ ಕೇಳಿ ವರದಿ ಪ್ರಕಟಿಸುವ ಮೂಲಕ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯ ಬಾರದು ಎಂದರು.

ಯೋಗೇಶ್ವರ್‌ಗೆ ಪರೋಕ್ಷ ಟಾಂಗ್‌: ವಸತಿ ಸಚಿವರ ಜೊತೆ ಮೀಟಿಂಗ್‌ನಲ್ಲಿ ಕುಳಿತು ಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಂಡು, ತಾಲೂಕಿಗೆ ವಸತಿ ಯೋಜನೆಗಳು ಮಂಜೂರೇ ಆಗಿಲ್ಲ, ಹೆಚ್ಚುವರಿ ಮನೆ ಮಂಜೂರು ಮಾಡಿ ಎಂದು ಕೇಳಿದನ್ನು ನಾನು ನೋಡಿದ್ದೇನೆ. ಅವರು ಈ ಹಿಂದೆ ಹತ್ತಾರು ಸಾವಿರ ಮನೆಗಳನ್ನು ಕೊಡಿಸುತ್ತೇನೆ ಎಂದು ಚಿನ್ನದ ಬಣ್ಣದ ಲಾಂಛನ ಇರುವ ಪತ್ರ ಬರೆದು ಜನರನ್ನು ಮರಳು ಮಾಡಿದ ಕತೆ ಏನಾಯ್ತು ಎಂಬುದನ್ನು ನಾನು ನೋಡಿದ್ದೇನೆ ಎಂದು ಮಾಜಿ ಸಚಿವ ಯೋಗೇಶ್ವರ್‌ (Yogeshwar) ಹೆಸರೇಳದೆ ಎಚ್‌ಡಿಕೆ ವಾಗ್ದಾಳಿ ನಡೆಸಿದರು.

ಸರ್ಕಾರಕ್ಕೆ ಕೆಲ ಸಲಹೆ ಕೊಟ್ಟ ಕುಮಾರಸ್ವಾಮಿ: ಕರ್ನಾಟಕದಲ್ಲಿ ಕೊರೋನಾ ಮೂರನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದನ್ನು ನಿಯಂತ್ರಣ ಮಾಡಲು ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಇದರ ಮಧ್ಯೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಕೆಲ ಸಲಹೆಗಳನ್ನ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೊರೋನಾ ಪರಿಸ್ಥಿತಿ ಗಮನಿಸಿದರೆ ಶಾಲೆಗಳನ್ನು 15 ದಿನ ಮುಚ್ಚುವುದು ಒಳ್ಳೆಯದು. ಫೆಬ್ರವರಿ ಮೊದಲ ವಾರದೊಳಗೆ ಎಲ್ಲ ಕಾಲೇಜುಗಳನ್ನು ಮುಚ್ಚುವುದು ಸೂಕ್ತ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Save Aghanashini : ನದಿ ಉಳಿಸುವ ಹೋರಾಟಕ್ಕೆ ಎಚ್‌ಡಿಕೆ ಬಲ

ನೈಟ್ ಕರ್ಫ್ಯೂ ಬಗ್ಗೆ ಅಸಮಾಧಾನ ವ್ಯಕ್ತಿಪಡಿಸಿರುವ ಕುಮಾರಸ್ವಾಮಿ, ಇದರಿಂದ ರಾಜ್ಯದ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ನೈಟ್ ಕರ್ಫ್ಯೂ ಮುಂದುವರಿಸುವುದಾದರೆ ಜನರಿಗೆ ಸಹಾಯ ಮಾಡಬೇಕು. ಕೂಲಿಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸಲಹೆ ನೀಡಿದರು. ಇಂದು 22 ಸಾವಿರ ಕೇಸ್ ಬರಲಿದೆ ಎನ್ನಲಾಗುತ್ತಿದೆ. ಕರ್ಫ್ಯೂ ವಿಚಾರವಾಗಿ ಬಿಜೆಪಿ ಪಕ್ಷದ ನಾಯಕರಲ್ಲೇ ಗೊಂದಲಗಳಿವೆ. ಕೆಲವರು ನೈಟ್ ಕರ್ಫ್ಯೂ ಜಾರಿಗೆ ತಂದಿರೋದು ಸರಿಯಿಲ್ಲ ಎನ್ನುತ್ತಿದ್ದಾರೆ. ಕೆಲ ವ್ಯಾಪಾರಿ ಸಂಘಟನೆಗಳಿಂದಲೂ ಇದಕ್ಕೆ ವಿರೋಧ ವ್ಯಕ್ತವಾಗಿದೆ.

click me!