Onion Price: ಗ್ರಾಹಕರಿಗೆ ರಿಲೀಫ್‌, ಆದರೆ ಈರುಳ್ಳಿ ಬೆಳೆದ ರೈತನಿಗೆ ಆತಂಕ? ಆಡಳಿತದ ಹೊಸ ಪ್ಲಾನ್‌ ಅನ್ನದಾತನಿಗೆ ತಂದಿಡ್ತಾ ಸಂಕಷ್ಟ!

Published : Aug 24, 2026, 04:46 PM ISTUpdated : Aug 24, 2026, 05:06 PM IST
Onion Price

ಸಾರಾಂಶ

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಸರ್ಕಾರ 'ಕಾಂದಾ ಎಕ್ಸ್‌ಪ್ರೆಸ್' ಮೂಲಕ ಬಫರ್ ಸ್ಟಾಕ್ ಬಿಡುಗಡೆ ಮಾಡುತ್ತಿದೆ. ಈ ಕ್ರಮದಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿದು, ಕಡಿಮೆ ಇಳುವರಿ ಪಡೆದ ರೈತರು ತಮ್ಮ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಈ ನಿರ್ಧಾರವು ಗ್ರಾಹಕರಿಗೆ ತಾತ್ಕಾಲಿಕ ಸಮಾಧಾನ ನೀಡಿದರೂ, ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ದೂಡಿದೆ.

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೂ ತನ್ನ ತಪ್ಪನ್ನು ತಿದ್ದಿಕೊಳ್ಳಲು ಅಥವಾ ನ್ಯಾಯಕ್ಕಾಗಿ ಹೋರಾಡಲು ಕಾನೂನಿನಲ್ಲಿ ಒಂದು ಅವಕಾಶವಿರುತ್ತದೆ. ಆದರೆ, ಹಗಲಿರುಳೆನ್ನದೆ ಬೆವರು ಹರಿಸಿ ಇಡೀ ದೇಶಕ್ಕೆ ಅನ್ನ ನೀಡುವ ರೈತನಿಗೆ ಮಾತ್ರ ತನ್ನ ಬೆಳೆಗೆ ನ್ಯಾಯಯುತ ಬೆಲೆ ಕೇಳುವ ಹಕ್ಕೂ ಇಲ್ಲದಂತಾಗಿದೆ. ಇಂದು ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿಗದಿಪಡಿಸಲಾಗದೆ, ಸರ್ಕಾರದ ಮುಂದೆ ಕೈ ಒಡ್ಡಿ ನಿಲ್ಲುವಂತ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಇತ್ತೀಚೆಗೆ ಸರ್ಕಾರ ಜಾರಿಗೆ ತರಲು ಹೊರಟಿರುವ ಹೊಸ ಯೋಜನೆಯಂತೂ, ಸಾಲ ಸೋಲ ಮಾಡಿ ಕೃಷಿ ಮಾಡಿದ ಅನ್ನದಾತನ ಹೊಟ್ಟೆಯ ಮೇಲೆ ನೇರವಾಗಿ ಹೊಡೆಯುವಂತಿದೆ. ಅಷ್ಟಕ್ಕೂ ದೇಶದ ಲಕ್ಷಾಂತರ ಈರುಳ್ಳಿ ಬೆಳೆಗಾರರನ್ನು ಕಂಗಾಲು ಮಾಡಿರುವ ಆ ಯೋಜನೆ ಯಾವುದು? ಸರ್ಕಾರದ ಈ ನಿರ್ಧಾರದಿಂದ ರೈತನ ಬದುಕು ಹೇಗೆ ಕತ್ತಲಿಗೆ ತಳ್ಳಲ್ಪಡುತ್ತಿದೆ?

ಏನಿದು ಸರ್ಕಾರದ ಹೊಸ ಪ್ಲಾನ್?

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೊಂಚ ಏರಿಕೆಯಾಗುತ್ತಿದ್ದಂತೆ, ಗ್ರಾಹಕರನ್ನು ಮತ್ತು ನಗರವಾಸಿಗಳನ್ನು ಸಮಾಧಾನಪಡಿಸಲು ಕೇಂದ್ರ ಸರ್ಕಾರವು ತಕ್ಷಣವೇ ರಂಗಕ್ಕಿಳಿದಿದೆ. ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ದರ ನಿಯಂತ್ರಿಸಲು ಸರ್ಕಾರ ತನ್ನ ಬಳಿ ಇರುವ ‘ಬಫರ್ ಸ್ಟಾಕ್’ ಅಂದರೆ ತುರ್ತು ದಾಸ್ತಾನನ್ನು ಮಾರುಕಟ್ಟೆಗೆ ಮುಕ್ತವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಇದಕ್ಕಾಗಿಯೇ ‘ಕಾಂದಾ ಎಕ್ಸ್‌ಪ್ರೆಸ್’ (Kanda Express) ಎಂಬ ವಿಶೇಷ ರೈಲುಗಳ ಮೂಲಕ ನಾಸಿಕ್‌ನಂತಹ ಪ್ರಮುಖ ಉತ್ಪಾದನಾ ಕೇಂದ್ರಗಳಿಂದ ದೆಹಲಿ, ಚೆನ್ನೈ, ಗುವಾಹಾಟಿ ಹಾಗೂ ಕೊಚ್ಚಿಯಂತಹ ನಗರಗಳಿಗೆ ಭಾರಿ ಪ್ರಮಾಣದ ಈರುಳ್ಳಿಯನ್ನು ಕಡಿಮೆ ದರದಲ್ಲಿ ಸಾಗಾಟ ಮಾಡಿ ಪೂರೈಸಲಾಗುತ್ತಿದೆ. ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ, ಅದೆನೆಂದರೆ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಹೆಚ್ಚಿಸಿ, ಕೃತಕ ಅಭಾವವನ್ನು ತಪ್ಪಿಸಿ, ಗ್ರಾಹಕರಿಗೆ ಚಿಲ್ಲರೆ ದರದಲ್ಲಿ ಈರುಳ್ಳಿ ಅಗ್ಗವಾಗಿ ಸಿಗುವಂತೆ ಮಾಡುವುದು.

ಆದರೆ, ಈ ಯೋಜನೆಯಲ್ಲಿ ಅನ್ನದಾತ ನಲುಗುತ್ತಿರುವುದಾದರೂ ಹೇಗೆ?

ಬೆಲೆ ಇಳಿಕೆಯ ಈ ಸಂಭ್ರಮದ ಹಿಂದೆ ಕಣ್ಣೀರು ಹಾಕುತ್ತಿರುವುದು ಇದೇ ಈರುಳ್ಳಿಯನ್ನು ಬೆಳೆದ ರೈತ. ಕೃಷಿ ಎಂಬುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಜೂಜಾಟವಾಗಿದೆ. ಸಾಲ ಮಾಡಿ, ಬೀಜ, ಗೊಬ್ಬರ, ಕ್ರಿಮಿನಾಶಕ ತಂದು, ಅಕಾಲಿಕ ಮಳೆ ಮತ್ತು ಕ್ರಿಮಿಕೀಟಗಳ ಕಾಟವನ್ನು ಎದುರಿಸಿ ಬೆಳೆಯನ್ನು ಕೈಗೆ ತರುವುದು ಸಣ್ಣ ಮಾತಲ್ಲ. ಈ ಬಾರಿ ಮಹಾರಾಷ್ಟ್ರ ಸೇರಿದಂತೆ ಹಲವು ಭಾಗಗಳಲ್ಲಿ ಖಾರಿಫ್ ಈರುಳ್ಳಿ ಇಳುವರಿ ಶೇಕಡಾ 5 ರಿಂದ 7 ರಷ್ಟು ಕುಸಿದಿದೆ. ಅಂದರೆ, ರೈತನ ಕೈಯಲ್ಲಿ ಬೆಳೆ ಕಡಿಮೆಯಿದೆ. ಸಾಮಾನ್ಯ ಆರ್ಥಿಕ ನಿಯಮದಂತೆ, ಇಳುವರಿ ಕಡಿಮೆಯಾದಾಗ ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ಬೆಲೆಯಿಂದ ರೈತ ತನ್ನ ಹಿಂದಿನ ನಷ್ಟವನ್ನು ಸರಿದೂಗಿಸಿಕೊಳ್ಳಬೇಕಿತ್ತು. ಆದರೆ, ರೈತನಿಗೆ ಆ ನಾಲ್ಕು ಕಾಸು ಲಾಭ ಸಿಗುವ ಸಮಯ ಬಂದ ತಕ್ಷಣವೇ ಸರ್ಕಾರ ಮಧ್ಯಪ್ರವೇಶಿಸಿ ಬಫರ್ ಸ್ಟಾಕ್ ಬಿಡುಗಡೆ ಮಾಡುತ್ತಿದೆ.

ರೈತನಿಗಿಲ್ಲ ಸೂಕ್ತ ಬೆಲೆ!

ಸರ್ಕಾರ ಸಾಗರೋಪಾದಿಯಲ್ಲಿ ಕಡಿಮೆ ದರದ ಈರುಳ್ಳಿಯನ್ನು ಮಾರುಕಟ್ಟೆಗೆ ಸುರಿದಾಗ, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಧರಾಸಾಹಿಯಾಗಿ ಕುಸಿಯುತ್ತದೆ. ಪರಿಣಾಮವಾಗಿ, ಮಾರುಕಟ್ಟೆಗೆ ತನ್ನ ಬೆಳೆಯನ್ನು ತರುವ ಸಾಮಾನ್ಯ ರೈತನಿಗೆ ಸೂಕ್ತ ಬೆಲೆ ಸಿಗುವುದಿಲ್ಲ. ದಲ್ಲಾಳಿಗಳು ಮತ್ತು ವ್ಯಾಪಾರಿಗಳು "ಸರ್ಕಾರವೇ ಕಡಿಮೆ ದರಕ್ಕೆ ಈರುಳ್ಳಿ ಕೊಡುತ್ತಿದೆ" ಎಂಬ ನೆಪ ಹೇಳಿ ರೈತನಿಂದ ಕನಿಷ್ಠ ದರಕ್ಕೂ ಈರುಳ್ಳಿ ಖರೀದಿಸುವುದಿಲ್ಲ.

ಬೆಲೆ ಏರಿಕೆಯ ನಷ್ಟ ರೈತನಿಗೆ, ಲಾಭ ಯಾರಿಗೆ?

ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ಕೂಲಿ ಆಳುಗಳ ವೆಚ್ಚ, ಸಾಗಣೆ ವೆಚ್ಚ ಎಲ್ಲವೂ ಗಗನಕ್ಕೇರಿದೆ. ಆದರೆ ರೈತ ಬೆಳೆದ ಬೆಳೆಗೆ ಬೆಲೆ ಸಿಗಬೇಕಾದ ಕ್ಷಣದಲ್ಲಿ ಸರ್ಕಾರದ ಈ ರಿಲೀಫ್ ಪ್ಲಾನ್ ಅವನ ಕುತ್ತಿಗೆಗೆ ಉರುಳಾಗುತ್ತಿದೆ ಎನ್ನಲಾಗಿದೆ. ಗ್ರಾಹಕರಿಗೆ ರಿಲೀಫ್ ನೀಡುವುದು ತಪ್ಪಲ್ಲ, ಆದರೆ ಆ ರಿಲೀಫ್‌ನ ಸಂಪೂರ್ಣ ಹೊರೆಯನ್ನು ರೈತನ ಹೆಗಲ ಮೇಲೆಯೇ ಹಾಕುವುದು ಎಷ್ಟರ ಮಟ್ಟಿಗೆ ನ್ಯಾಯ? ಅಪರಾಧಿಗೂ ಸಿಗುವ ಕನಿಷ್ಠ ನ್ಯಾಯದ ಅವಕಾಶ, ಹಗಲಿರುಳು ಕಷ್ಟಪಟ್ಟು ದೇಶದ ಹಸಿವು ನೀಗಿಸುವ ಅನ್ನದಾತನಿಗೆ ಸಿಗದಿರುವುದು ದುರಂತವೇ ಸರಿ. ಸರ್ಕಾರ ತರುತ್ತಿರುವ ಈ ಯೋಜನೆಯು ಗ್ರಾಹಕರಿಗೆ ತಾತ್ಕಾಲಿಕ ಸಮಾಧಾನ ನೀಡಬಹುದಾದರೂ, ಈರುಳ್ಳಿ ಬೆಳೆದ ರೈತನ ಮನೆಯಲ್ಲಿ ಮಾತ್ರ ಕಣ್ಣೀರ ಕೊಳವನ್ನು ಸೃಷ್ಟಿಸುತ್ತಿದೆ.

ಪ್ರಮುಖ ನಗರಗಳಿಗೆ ಆಗಮನ!

ಸದ್ಯಕ್ಕೆ ನಾಸಿಕ್‌ನಿಂದ ಹೊರಟ ‘ಕಾಂದಾ ಎಕ್ಸ್‌ಪ್ರೆಸ್’ ದೆಹಲಿ, ಚೆನ್ನೈ, ಕೊಚ್ಚಿ ಹಾಗೂ ಗುವಾಹಟಿಯಂತಹ ನಾಲ್ಕು ಪ್ರಮುಖ ನಗರಗಳನ್ನಷ್ಟೇ ತಲುಪುತ್ತಿದ್ದು, ಅಲ್ಲಿನ ಮಾರುಕಟ್ಟೆಗಳಲ್ಲಿ ಬೆಲೆ ಸಮತೋಲನ ತರಲು ಸರ್ಕಾರ ಯತ್ನಿಸುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಈ ಸೌಲಭ್ಯ ಕರ್ನಾಟಕಕ್ಕೂ ವಿಸ್ತರಿಸುವ ಸಾಧ್ಯತೆಯಿದೆ. ಗ್ರಾಹಕರಿಗೆ ಸಮಾಧಾನ ತರುವ ಈ ಯೋಜನೆ ರಾಜ್ಯಕ್ಕೆ ಕಾಲಿಟ್ಟರೆ, ಇಲ್ಲಿನ ಈರುಳ್ಳಿ ಬೆಳೆಗಾರರ ಮೇಲಾಗುವ ಪರಿಣಾಮವೇನು ಎಂಬುದು ಆತಂಕದ ವಿಷಯ. ಗ್ರಾಹಕರ ಹಿತ ಕಾಯುವ ನೆಪದಲ್ಲಿ ಸ್ಥಳೀಯ ಕೃಷಿಕರ ಹೊಟ್ಟೆಗೆ ಹೊಡೆಯದೆ, ಸರ್ಕಾರ ಅನ್ನದಾತನಿಗೂ ನ್ಯಾಯಯುತ ಬೆಲೆ ಖಾತ್ರಿಪಡಿಸುವ ಸಮತೋಲಿತ ನೀತಿ ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಇಟಿ ತಾತ್ಕಾಲಿಕ ಫಲಿತಾಂಶ ರಾತ್ರಿ ಪ್ರಕಟ, ಸಂಜೆ 4ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ
SIR ಬಳಿಕ ರಾಜ್ಯದ ಕರಡು ಮತದಾರರ ಪಟ್ಟಿ ಇಂದು ಪ್ರಕಟ; ನಿಮ್ಮ ಹೆಸರು ಚೆಕ್ ಮಾಡೋದು ಹೇಗೆ?