
ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಮೊದಲ ಹಂತ ಮುಗಿದಿದ್ದು, ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ 4.46 ಕೋಟಿ ಮತದಾರರ ಹೆಸರಷ್ಟೇ ಕರಡು ಮತದಾರರ ಪಟ್ಟಿಯಲ್ಲಿ ಇರಲಿದೆ. ಆಕ್ಷೇಪಣೆ ಸಲ್ಲಿಸಲು ಸೆ.23ರವರೆಗೆ ಅವಕಾಶವಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.
ಈ ಕರಡು ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಹೇಗೆ ಹುಡುಕಬೇಕು ಎಂಬ ಬಗ್ಗೆ ಚುನಾವಣಾ ಆಯೋಗ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಿದೆ.
ರಾಜ್ಯ ಮತದಾರರ ಪಟ್ಟಿಯಲ್ಲಿ ಒಟ್ಟು 5.54 ಕೋಟಿ ಮತದಾರರು ಇದ್ದಾರೆ. ಈ ಪೈಕಿ ಎಸ್‌ಐಆರ್ ಪ್ರಕ್ರಿಯೆ ವೇಳೆ 1.08 ಕೋಟಿ ಮತದಾರರನ್ನು ‘ಎಎಸ್‌ಡಿಡಿಒ’ ವರ್ಗಕ್ಕೆ ಸೇರಿಸಲಾಗಿದೆ. ಈ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಬರುವುದಿಲ್ಲ. ಉಳಿದ 4.46 ಕೋಟಿ ಮತದಾರರು ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗಲಿದೆ.
ಈ 4.46 ಕೋಟಿ ಮತದಾರರ ಪೈಕಿ ಮ್ಯಾಪಿಂಗ್ ಆಗದ 23.45 ಲಕ್ಷ ಮತದಾರರು ಮತ್ತು ದೋಷಪೂರಿತ ಮಾಹಿತಿ ಇರುವ (ಅನೋಮಲಿಸ್) 20.35 ಲಕ್ಷ ಮತದಾರರು ಸೇರಿದಂತೆ ಒಟ್ಟು 43.80 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಈ ಎಲ್ಲರೂ ಅಗತ್ಯ ದಾಖಲೆಗಳೊಂದಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಿದೆ. ಆ.31ರ ನಂತರ ನೋಟಿಸ್ ಸೃಜಿಸಿ, ಮತದಾರರಿಗೆ ನೀಡಲಾಗುತ್ತದೆ.
ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯುವ ಈ 1.08 ಕೋಟಿ ಮತದಾರರ (ಎಎಸ್‌ಡಿಡಿಒ) ಪೈಕಿ ಗೈರು, ಸ್ಥಳಾಂತರಗೊಂಡಿರುವ ಮತದಾರರು ನಿಗದಿತ ದಾಖಲೆಗಳೊಂದಿಗೆ ಹೊಸದಾಗಿ ಫಾರ್ಮ್ 6 ಸಲ್ಲಿಕೆ ಮಾಡಬೇಕು. ಇದರ ಜತೆಗೆ ಅ.1ಕ್ಕೆ 18 ವರ್ಷ ತುಂಬುವ ಯುವ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್ 6 ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಮತಗಟ್ಟೆ ಅಧಿಕಾರಿಗಳ ಪರಿಶೀಲನೆಯ ನಂತರ ಆ ಮತದಾರರ ಪಟ್ಟಿಯ ಪೌರತ್ವ ದೃಢಪಟ್ಟರಷ್ಟೇ, ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ. ಈಗಾಗಲೇ 17 ಲಕ್ಷಕ್ಕೂ ಹೆಚ್ಚು ಮತದಾರರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅ.27ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಇವರ ಹೆಸರು ಪ್ರಕಟಗೊಳ್ಳಲಿದೆ.
ಎಸ್‌ಐಆರ್ ಭಾಗವಾಗಿ ರಾಜ್ಯದ ಎಲ್ಲ ಮತದಾರರ ವಿವರ, ಪೌರತ್ವವನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು. ಮೊದಲ ಹಂತದಲ್ಲಿ ಅಷ್ಟೂ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿತ್ತು. 2026ರ ಮತದಾರರ ವಿವರ ಮತ್ತು 2002ರ ಮತದಾರರ ವಿವರಗಳನ್ನು ಭರ್ತಿ ಮಾಡಿ ಮತದಾರರು ಸಲ್ಲಿಸಬೇಕಿತ್ತು.
ಈ ಹಂತದಲ್ಲಿಯೇ 1.08 ಕೋಟಿ ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರಗೆ ಉಳಿದಿದ್ದಾರೆ. ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿದಾಗ ಪತ್ತೆಯಾಗಿಲ್ಲ ಎಂದು 15.17 ಲಕ್ಷ, ಸ್ಥಳಾಂತರ ಎಂದು 65.45 ಲಕ್ಷ, ಮೃತ ಎಂದು 16.39 ಲಕ್ಷ, ಒಂದಕ್ಕಿಂತೆ ಹೆಚ್ಚು ಕಡೆ ನೋಂದಣಿ ಎಂದು 7.09 ಲಕ್ಷ ಹಾಗೂ ಗಣತಿ ನಮೂನೆಗೆ ಸಹಿ ಮಾಡಿಲ್ಲ ಎಂದು 3.83 ಲಕ್ಷ ಮತದಾರರನ್ನು ವರ್ಗೀಕರಿಸಲಾಗಿತ್ತು. ಈ ಮತದಾರರ ಗಣತಿ ನಮೂನೆ ಸಲ್ಲಿಕೆಯಾಗದೇ ಇರುವ ಕಾರಣಕ್ಕೆ, ಇವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ