ಏಕ ದೇಶ, ಏಕ ಚುನಾವಣೆಗೆ ಗದ್ದಲ: ಕಲಾಪ ಬಲಿ

By Kannadaprabha NewsFirst Published Mar 5, 2021, 7:14 AM IST
Highlights

‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತ ವಿಶೇಷ ಚರ್ಚೆ ಕೈಗೊಳ್ಳಲು ಸರ್ಕಾರ ಮುಂದಾದ ಹಿನ್ನೆಲೆಯಲ್ಲಿ ಬಜೆಟ್‌ ಅಧಿವೇಶನದ ಮೊದಲ ದಿನವೇ  ಕಲಾಫ ಬಲಿಯಾಯ್ತು

 ಬೆಂಗಳೂರು (ಮಾ.05):  ಪ್ರತಿಪಕ್ಷಗಳ ವಿರೋಧದ ನಡುವೆಯೂ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತ ವಿಶೇಷ ಚರ್ಚೆ ಕೈಗೊಳ್ಳಲು ಸರ್ಕಾರ ಮುಂದಾದ ಹಿನ್ನೆಲೆಯಲ್ಲಿ ಬಜೆಟ್‌ ಅಧಿವೇಶನದ ಮೊದಲ ದಿನವೇ ವಿಧಾನಮಂಡಲದ ಉಭಯ ಸದನಗಳ ಇಡೀ ದಿನದ ಕಲಾಪ ಬಲಿ ಆಯಿತು.

ಗುರುವಾರ ವಿಧಾನಸಭೆಯಲ್ಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಅವರು ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಎರಡು ದಿನಗಳ ಚರ್ಚೆಗೆ ಮುಂದಾದರು. ಇದಕ್ಕೆ ಉಭಯ ಸದನಗಳಲ್ಲೂ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಚರ್ಚೆ ಪ್ರಸ್ತಾವನೆಯನ್ನು ಕೈಬಿಡುವಂತೆ ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಈ ವೇಳೆ ಇದು ಆರ್‌ಎಸ್‌ಎಸ್‌ ಅಜೆಂಡಾ. ನಿಯಮಬಾಹಿರವಾಗಿ ಚರ್ಚೆಗೆ ಕೈಗೆತ್ತಿಕೊಳ್ಳಲಾಗಿದೆ ಎಂದು ಟೀಕಿಸಿ ಅಜೆಂಡಾ ಪ್ರತಿ ಹರಿದು ಆಕ್ರೋಶ ವ್ಯಕ್ತಪಡಿಸಿದರೆ, ಜೆಡಿಎಸ್‌ ಸದಸ್ಯರು ಚರ್ಚೆ ಪ್ರಸ್ತಾವವನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು.

ಇನ್ನು ವಿಧಾನಪರಿಷತ್‌ನಲ್ಲೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ‘ಒಂದು ರಾಷ್ಟ್ರ, ಒಂದು ಚುನಾವಣೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭಾಪತಿ ಬಸವರಾಜ ಹೊರಟ್ಟಿಅವರು ಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸದೆ ವಿಷಯವನ್ನು ಚರ್ಚೆಗೆ ತಂದಿದ್ದಾರೆ ಎಂದು ಆಗ್ರಹಿಸಿದರು. ಈ ವೇಳೆ ಕಾಂಗ್ರೆಸ್‌ ಸದಸ್ಯರು ಸಭಾಪತಿಗಳ ಪೀಠದ ಎದುರು ಧರಣಿ ನಡೆಸಿದರು.

ಹೀಗಾಗಿ ಒಂದು ಬಾರಿ ಸದನ ಮುಂದೂಡಿ ವಿಪಕ್ಷ ನಾಯಕರೊಂದಿಗೆ ಚರ್ಚೆ ನಡೆಸಿದ ಸಭಾಪತಿಗಳು ಮಧ್ಯಾಹ್ನದ ಬಳಿಕ ಮತ್ತೆ ಚರ್ಚೆಗೆ ಅವಕಾಶ ನೀಡಿದರು. ಶುಕ್ರವಾರ ಕಲಾಪ ಸಲಹಾ ಸಮಿತಿ ನಿಗದಿಯಾಗಿದ್ದು, ಗುರುವಾರ ಒಂದು ದಿನದ ಮಟ್ಟಿಗೆ ಸದ್ಯಕ್ಕೆ ಚರ್ಚೆ ಮಾಡಿ ಎಂದು ಸೂಚಿಸಿದರು. ಆದರೆ, ಕಾಂಗ್ರೆಸ್‌ ಸದಸ್ಯರು ಪಟ್ಟು ಬಿಡದೆ ಧರಣಿ ಮುಂದುವರೆಸಿದ ಹಿನ್ನೆಲೆಯಲ್ಲಿ ವಿಧಾನಪರಿಷತ್‌ ಕಲಾಪವನ್ನೂ ಶುಕ್ರವಾರಕ್ಕೆ ಮುಂದೂಡಲಾಯಿತು.

ವಿಧಾನಸಭೆಯಲ್ಲಿ ಕೋಲಾಹಲ:

ಪ್ರತಿಪಕ್ಷ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ಭಾರೀ ಕೋಲಾಹಲ ಸೃಷ್ಟಿಸಿತು. ಮೊದಲಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ಇದು ಆರ್‌ಎಸ್‌ಎಸ್‌ ಅಜೆಂಡಾ. ಹೀಗಾಗಿ ಚರ್ಚೆಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು. ಇದು ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ನಡುವೆ ತೀವ್ರ ಜಟಾಪಟಿಗೆ ಎಡೆಮಾಡಿಕೊಟ್ಟಿತು.

‘ಈ ವಿಷಯವನ್ನು ಸಂವಿಧಾನದ ಯಾವ ನಿಯಮದಡಿ ಚರ್ಚೆ ಕೈಗೆತ್ತಿಕೊಳ್ಳಲಾಗಿದೆ? ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇದೆಯೇ? ಕಳೆದ ಅಧಿವೇಶನದ ವೇಳೆ ಹೇಳಿದ್ದಿರಾದರೂ ನಾವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ಹೀಗಿದ್ದರೂ ಕಲಾಪ ಸಲಹಾ ಸಮಿತಿಯಲ್ಲಿ ಸಹ ತೀರ್ಮಾನಿಸಿಲ್ಲ’ ಎಂದು ಕಿಡಿ ಕಾರಿದರು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸಂವಿಧಾನದ 363ನೇ ನಿಯಮದಡಿ ನನಗಿರುವ ವಿಶೇಷ ಅಧಿಕಾರ ಬಳಸಿಕೊಂಡು ಚರ್ಚೆ ಕೈಗೆತ್ತಿಕೊಂಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು. ಇದನ್ನು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಸಮರ್ಥಿಸಿಕೊಂಡರು.

ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ರಮೇಶ್‌ ಕುಮಾರ್‌, ‘ಸಭಾಧ್ಯಕ್ಷರು ವಿಶೇಷ ಸಂದರ್ಭದಲ್ಲಿ ಮಾತ್ರ ನಿಯಮ ಬಳಸಬೇಕು. ನನಗೆ ವಿಶೇಷ ಅಧಿಕಾರ ಇದೆ ಎಂದು ಮನಸೋ ಇಚ್ಛೆ ನಡೆಯಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದರು. ಅಷ್ಟರಲ್ಲಿ ಪ್ರತಿಪಕ್ಷ ಸದಸ್ಯರು ಬಾವಿಗಿಳಿದು ಧರಣಿ ಆರಂಭಿಸಿದರು. ಸರ್ಕಾರ ಮತ್ತು ಸಭಾಧ್ಯಕ್ಷರು ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ಈ ನಡುವೆ, ಕಾಂಗ್ರೆಸ್‌ ಸದಸ್ಯ ಎಚ್‌.ಕೆ.ಪಾಟೀಲ್‌ ಅವರು ಕ್ರಿಯಾಲೋಪ ಎತ್ತಿದರು. ಆದರೆ, ಸಭಾಧ್ಯಕ್ಷರು ಅವಕಾಶ ನೀಡಲಿಲ್ಲ.

ಹೀಗಾಗಿ ಭೀಮಾನಾಯ್ಕ್ ಮತ್ತು ಪ್ರಿಯಾಂಕ್‌ ಖರ್ಗೆ ಅಜೆಂಡಾ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಆರ್‌ಎಸ್‌ಎಸ್‌ ಅಜೆಂಡಾವನ್ನು ಸಭಾಧ್ಯಕ್ಷರು ಓದುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಶಾಸಕ ಸಂಗಮೇಶ ಅಂಗಿ ಬಿಚ್ಚಿ ಬಿಚ್ಚಿ ಕ್ಷೇತ್ರದಲ್ಲಿ ತಮ್ಮ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರಿಂದ ಸದನದ ಕಲಾಪ ದಿಕ್ಕುತಪ್ಪಿತು. ಸ್ಪೀಕರ್‌ ಸಂಗಮೇಶ್‌ ಅವರನ್ನು ಅಮಾನತು ಮಾಡಿದರು. ಇದರಿಂದ ಕೋಲಾಹಲ ಉಂಟಾಗಿ ಸದನ ಮುಂದೂಡಿಕೆ ಕಂಡಿತು.ಮಧ್ಯಾಹ್ನವೂ ಚರ್ಚೆಗೆ ಅವಕಾಶ ನೀಡದೆ ಕಾಂಗ್ರೆಸ್‌ ಸದಸ್ಯರು ಸಂಗಮೇಶ ಅಮಾನತು ಹಿಂಪಡೆಯುವಂತೆ ಧರಣಿ ನಡೆಸಿದ್ದರಿಂದ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ಜೆಡಿಎಸ್‌ ಸದಸ್ಯರಿಂದ ಸಭಾತ್ಯಾಗ:

ಇದಕ್ಕೂ ಮೊದಲು ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆಗೆ ಜೆಡಿಎಸ್‌ ಸದಸ್ಯರೂ ವಿರೋಧ ವ್ಯಕ್ತಪಡಿಸಿದರು. ಕಲಾಪದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆಗೆ ಜೆಡಿಎಸ್‌ ವಿರೋಧ ಇದೆ ಎಂದು ಹೇಳಿದ ಶಾಸಕ ಬಂಡೆಪ್ಪ ಕಾಶೆಂಪೂರ್‌, ನಾವು ಚರ್ಚೆ ವಿರೋಧಿಸಿ ಸಭಾತ್ಯಾಗ ಮಾಡುತ್ತೇವೆ ಎಂದು ಸದನದಿಂದ ಹೊರನಡೆದರು.

ಆರೆಸ್ಸೆಸ್‌ ಅಜೆಂಡಾ ಹೇರಲು ಬಿಡೆವು

ಚುನಾವಣೆ ವ್ಯವಸ್ಥೆಗೆ ಸುಧಾರಣೆ ತರುವ ಬದಲು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎನ್ನುವ ಮೂಲಕ ‘ಒಂದು ರಾಷ್ಟ್ರ, ಒಬ್ಬ ನಾಯಕ’, ‘ಒಂದು ರಾಷ್ಟ್ರ, ಒಂದು ಪಕ್ಷ’ ಮಾಡಲು ಮುಂದಾಗಿದ್ದಾರೆ. ಆರ್‌ಎಸ್‌ಎಸ್‌ ಅಜೆಂಡಾ ಸದನದಲ್ಲಿ ಹೇರಲು ಬಿಡುವುದಿಲ್ಲ. ಚುನಾವಣೆ ಸುಧಾರಣೆ ಬಗ್ಗೆ ಪ್ರಸ್ತಾಪಿಸಿದ್ದರೆ ಚರ್ಚೆ ಮಾಡಬಹುದಿತ್ತು.

-ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ

ನಾನೂ ಆರೆಸ್ಸೆಸ್‌, ಮೋದೀನೂ ಆರೆಸ್ಸೆಸ್‌

ಈ ದೇಶದ ಪ್ರಧಾನಮಂತ್ರಿಯೇ ಆರ್‌ಎಸ್‌ಎಸ್‌ನವರು. ನಾನೂ ಸಹ ಆರ್‌ಎಸ್‌ಎಸ್‌ನಿಂದಲೇ ಬಂದವನು. ನಾನು ಆರ್‌ಎಸ್‌ಎಸ್‌ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಇಡೀ ದೇಶದಲ್ಲಿ ನಿಮ್ಮ ಪಕ್ಷ (ಕಾಂಗ್ರೆಸ್‌) ನೆಲಕಚ್ಚಿದೆ. ಇಲ್ಲಿ ಮಾತ್ರ 55 ಜನ ಇದ್ದೀರಿ. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಲು ನಿಮಗೆ ಏನು ಹಕ್ಕಿದೆ?

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಏಕ ಚುನಾವಣೆ, ಪರಿಣಾಮ ಅಗಾಧ

ಲೋಕಸಭೆ ಮತ್ತು ವಿಧಾನಸಭೆಗಳಿಗೆ ಒಂದು ಬಾರಿ ಚುನಾವಣೆ ನಡೆಸಿದರೆ ಮಾನವ ಶ್ರಮ, ಸಮಯ ಮತ್ತು ಭಾರಿ ಮೊತ್ತದ ಹಣ ಉಳಿತಾಯವಾಗುತ್ತದೆ. ತಿಂಗಳುಗಟ್ಟಲೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚುನಾವಣೆಯ ಗುಂಗಿನಲ್ಲಿರುವುದು ತಪ್ಪುತ್ತದೆ. ಅಮೆರಿಕದಂತಹ ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯುತ್ತದೆ.

click me!