ಬೆಂಗಳೂರು(ಜ.05): ರಾಜ್ಯದಲ್ಲಿ ಮಂಗಳವಾರ ಒಮಿಕ್ರೋನ್ (Omicron) ಘಟ ಸ್ಫೋಟವಾಗಿದ್ದು, ಒಂದೇ ದಿನ 149 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಒಮಿಕ್ರೋನ್ ಸೋಂಕಿತರ ಸಂಖ್ಯೆ 226ಕ್ಕೆ ಹೆಚ್ಚಳವಾಗಿದೆ. ಇದೇ ವೇಳೆ ನಗರದಲ್ಲಿ ಒಂದೇ ದಿನ ಮೂರು ಸಾವಿರ ಕೇಸ್ ದಾಖಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ (Sudhakar) ತಿಳಿಸಿದ್ದಾರೆ. ರಾಜ್ಯದಲ್ಲಿ ಡಿ.1ರಿಂದ ಜನವರಿ 3ವರೆಗೂ 77 ಒಮಿಕ್ರೋನ್ ಪ್ರಕರಣಗಳು ವರದಿಯಾಗಿದ್ದವು. ಮಂಗಳವಾರ ಒಂದೇ ದಿನ 149 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಹಿಂದೆ ಒಂದೇ ದಿನ 23 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಸೋಂಕಿತರ ಮಾಹಿತಿ ಆರೋಗ್ಯ ಇಲಾಖೆ (Health Department) ಬಹಿರಂಗ ಪಡಿಸಿಲ್ಲ. ಹೊಸದಾಗಿ 149 ಪ್ರಕರಣಗಳು ಪತ್ತೆಯಾಗಿರುವ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ರಾಜಧಾನಿಯಲ್ಲಿ 3000 ಕೇಸು: ಬೆಂಗಳೂರಿನಲ್ಲಿ (Bengaluru) ಒಂದೇ ದಿನ ಮೂರು ಸಾವಿರ ಮಂದಿಗೆ ಸೋಂಕು ಸೋಂಕು ದೃಢಪಟ್ಟಿದ್ದು, ಬುಧವಾರದ ವರದಿಯಲ್ಲಿ ಮಾಹಿತಿ ಲಭ್ಯವಾಗಿದೆ. ಕಳೆದ ವಾರ 250 ಇದ್ದ ಪ್ರಕರಣಗಳು, ಸೋಮವಾರ ಒಂದು ಸಾವಿರಕ್ಕೆ, ಮಂಗಳವಾರ ಎರಡು ಸಾವಿರಕ್ಕೆ ಹೆಚ್ಚಳವಾಗಿದ್ದವು. ಮತ್ತೆ ಮೂರು ಸಾವಿರಕ್ಕೆ ಹೆಚ್ಚಿದೆ.
ಫೆಬ್ರವರಿಗೆ ರಾಜ್ಯದಲ್ಲಿ ನಿತ್ಯ 1.2 ಲಕ್ಷ ಕೇಸ್!
ರಾಜ್ಯದಲ್ಲಿ ಫೆಬ್ರವರಿ ಮೊದಲ ವಾರ ಕೊರೋನಾ ಮೂರನೇ ಅಲೆ ಉಚ್ಛ್ರಾಯ ಸ್ಥಿತಿ ತಲುಪಲಿದ್ದು, ಗರಿಷ್ಠ ದೈನಂದಿನ 1.2 ಲಕ್ಷ ಪ್ರಕರಣಗಳು ವರದಿಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಸಂಶೋಧನಾ ಸಂಸ್ಥೆ (ಐಐಎಸ್ಸಿ) ಅಂದಾಜಿಸಿದೆ. ಐಐಎಸ್ಸಿಯ ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆ ತಜ್ಞರ ತಂಡವು ದಕ್ಷಿಣ ಆಫ್ರಿಕಾ ಒಮಿಕ್ರೋನ್ ಸೋಂಕಿನ ಸ್ಥಿತಿ, ಈ ಹಿಂದಿನ ಅಲೆಗಳ ಸೋಂಕಿನ ಏರಿಳಿತ, ಜನರಲ್ಲಿನ ರೋಗನಿರೋಧಕ ಶಕ್ತಿ, ಲಸಿಕೆ ಪ್ರಮಾಣ, ಕಳೆದ ಐದು ದಿನಗಳಿಂದ ಒಮಿಕ್ರೋನ್ ಅಂಕಿ -ಅಂಶ ಅವಲೋಕಿಸಿ ವರದಿ ಸಿದ್ಧಪಡಿಸಿದೆ. ಈ ವರದಿಯಲ್ಲಿ ಸೋಂಕು ಗರಿಷ್ಠ (ಶೇ.100) ಕೆಟ್ಟ ಪರಿಸ್ಥಿತಿಗೆ ತಿರುಗಿದರೆ, ಮಧ್ಯಮ ಸ್ಥಿತಿಯಲ್ಲಿದ್ದರೆ ಹಾಗೂ ಕನಿಷ್ಠ ಮಟ್ಟದಲ್ಲಿದ್ದರೆ ಎಷ್ಟು ಮಂದಿಗೆ ಸೋಂಕು ತಗುಲಬಹುದು ಎಂದು ಅಂದಾಜಿಸಲಾಗಿದೆ. ಭಾರತದ ಮತ್ತು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದಲ್ಲಿ (Karnataka) ಜನವರಿ ಕೊನೆಯ ವಾರದಿಂದ ಕೊರೋನಾ (Corona) ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿ ಫೆಬ್ರವರಿ ಮೊದಲ ವಾರ ಉಚ್ಛ್ರಾಯ ಹಂತ ತಲುಪಲಿವೆ. ಈ ಅವಧಿಯಲ್ಲಿ ಸೋಂಕು ಕನಿಷ್ಠ ಮಟ್ಟದಲ್ಲಿದ್ದರೆ (ಉತ್ತಮ) ಗರಿಷ್ಠವೆಂದರೆ 40000 ಕೇಸು, ಮಧ್ಯಮ ಮಟ್ಟದಲ್ಲಿದ್ದರೆ 80000 ಕೇಸು, ಗರಿಷ್ಠ (ಕೆಟ್ಟ ಪರಿಸ್ಥಿತಿ) ಮಟ್ಟದಲ್ಲಿದ್ದರೆ 1.2 ಲಕ್ಷ ಹೊಸ ಪ್ರಕರಣಗಳು ನಿತ್ಯ ವರದಿಯಾಗುತ್ತವೆ ಎಂದು ಸಂಖ್ಯಾಶಾಸ್ತ್ರಜ್ಞರು ಅಂದಾಜಿಸಿದ್ದಾರೆ.
ಭಾರಿ ಏರಿಕೆ : ರಾಜಧಾನಿಯಲ್ಲಿ ಕೊರೋನಾ ಆರ್ಭಟ (Covid 19) ಜೋರಾಗಿದ್ದು, ಬರೋಬ್ಬರಿ 201 ದಿನಗಳ ಬಳಿಕ ಕೊರೋನಾ ಸೋಂಕಿನ ಪ್ರಕರಣ ಎರಡು ಸಾವಿರದ ಗಡಿ ದಾಟಿದೆ. ಮಂಗಳವಾರ 2053 ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ನಗರದಲ್ಲಿ (Bengaluru) ಸಕ್ರಿಯ ಸೋಂಕಿತ ಪ್ರಕರಣಗಳ ಸಂಖ್ಯೆ 11,423ಕ್ಕೆ ಏರಿಕೆಯಾಗಿದೆ. ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಜೂ.12ರಂದು 2454 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗಿನ ಅತ್ಯಧಿಕ ಗರಿಷ್ಠ ಸಂಖ್ಯೆಯಾಗಿತ್ತು. ನಂತರದ ದಿನಗಳಲ್ಲಿ ಸೋಂಕು ಇಳಿಕೆಯಾಗಿದ್ದು, 201 ದಿನಗಳಲ್ಲಿ ಯಾವತ್ತೂ ಎರಡು ಸಾವಿರದ ಗಡಿ ದಾಟಿರಲಿಲ್ಲ.
ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,68,445ಕ್ಕೆ ಏರಿಕೆಯಾಗಿದೆ. 202 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,40,610ಕ್ಕೆ ಏರಿಕೆಯಾಗಿದೆ. ಮೂವರು ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 16,412ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.
ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ 8ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಳ್ಳಂದೂರು ವಾರ್ಡ್ ಒಂದರಲ್ಲಿಯೇ 40 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ದೊಡ್ಡನೆಕ್ಕುಂದಿ 17, ಹಗದೂರು 15, ಎಚ್‌ಎಸ್‌ಆರ್ ಲೇಔಟ್ 14, ಅರಕೆರೆ 13, ವರ್ತೂರು 13, ಹೊರಮಾವು 12, ನ್ಯೂತಿಪ್ಪಸಂದ್ರ 11, ಕೋರಮಂಗಲ 10, ಹೊಯ್ಸಳ ನಗರ ವಾರ್ಡ್‌ನಲ್ಲಿ 9 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.