ನಗರದ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಗುಣಮಟ್ಟದ ಈಜುಕೊಳ ಕಾಮಗಾರಿ ಸಂಪೂರ್ಣಗೊಂಡಿದ್ದು, ನ.24ರಿಂದ ನಡೆಯಲಿರುವ 19ನೇ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ಗೆ ಸನ್ನದ್ಧಗೊಂಡಿದೆ.
ಮಂಗಳೂರು (ನ.15): ನಗರದ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಗುಣಮಟ್ಟದ ಈಜುಕೊಳ ಕಾಮಗಾರಿ ಸಂಪೂರ್ಣಗೊಂಡಿದ್ದು, ನ.24ರಿಂದ ನಡೆಯಲಿರುವ 19ನೇ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ಗೆ ಸನ್ನದ್ಧಗೊಂಡಿದೆ. ಈ ಚಾಂಪಿಯನ್‌ಶಿಪ್ ಉದ್ಘಾಟನೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈಜುಕೊಳವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ಸಂದರ್ಭ ಎಮ್ಮೆಕೆರೆ ಆಟದ ಮೈದಾನಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿಈ ಕುರಿತು ಮಾಹಿತಿ ನೀಡಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಇಂಟರ್ ನ್ಯಾಷನಲ್ ಈಜು ಫೆಡರೇಶನ್ ನಿಗದಿಪಡಿಸಿದ ಮಾನದಂಡದಲ್ಲಿ ಈಜುಕೊಳವನ್ನು ನಿರ್ಮಿಸಲಾಗಿದೆ.
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಡಿಯಲ್ಲಿ ಒಟ್ಟು 24.94 ಕೋಟಿ ರು. ಯೋಜನಾ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು. ಈಜುಕೊಳವು 50 ಮೀ. ಉದ್ದ, 25 ಮೀ. ಅಗಲ ಮತ್ತು 2.2 ಮೀ.ನಿಂದ 1.4 ಮೀ.ವರೆಗಿನ ಆಳವನ್ನು ಹೊಂದಿದೆ. ಸ್ಪರ್ಧೆಯ ಪೂಲ್ ಜತೆಗೆ 25 ಮೀ. ಉದ್ದ- 10 ಮೀಟರ್ ಅಗಲ, 2.2 ಮೀ. ಆಳದ ಅಭ್ಯಾಸ ಪೂಲ್‌ನ್ನೂ ನಿರ್ಮಿಸಲಾಗಿದೆ. ಸ್ಪರ್ಧಾತ್ಮಕ ಈಜು ಸ್ಪರ್ಧೆಗೆ ಮಕ್ಕಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 13.8 ಮೀ. ಉದ್ದ- 10 ಮೀ. ಅಗಲ, 1.2 ಮೀಟರ್ ಆಳದ ಕಿಡ್ ಪೂಲ್ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ರಾಮನಗರದಲ್ಲಿ ಒನಕೆ ಓಬವ್ವ ಭವನ ನಿರ್ಮಾಣಕ್ಕೆ ಕ್ರಮ: ಶಾಸಕ ಇಕ್ಬಾಲ್ ಹುಸೇನ್
ಈಜುಕೊಳದ ವೈಶಿಷ್ಟ್ಯವೆಂದರೆ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ನೆಲಮಾಳಿಗೆಯಲ್ಲಿ ಪಾರ್ಕಿಂಗ್ ಮಾಡಲು ಅವಕಾಶವಿದೆ. ಕೆಳಭಾಗದಲ್ಲಿ ಫಿಲ್ಟರೇಶನ್ ಘಟಕ ಮಾಡಲಾಗಿದೆ. ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ವಸತಿ ನಿಲಯಗಳು, ಜಿಮ್ನಾಷಿಯಂ, ಬಟ್ಟೆ ಬದಲಾಯಿಸುವ ಕೊಠಡಿಗಳು, ಶೌಚಾಲಯಗಳು, ಲಾಕರ್‌ಗಳು, ಆಡಳಿತ ಕಚೇರಿ ಮತ್ತು ಕ್ರೀಡಾ ಔಷಧಕ್ಕಾಗಿ ಸ್ಥಳ, ಫಿಸಿಯೋಥೆರಪಿ, ಡೋಪಿಂಗ್ ಕೊಠಡಿ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ನಡೆಸಲು ಇತರ ಅಗತ್ಯ ಸೌಲಭ್ಯಗಳನ್ನು ಹೊಂದಿದೆ ಎಂದು ಖಾದರ್ ವಿವರ ನೀಡಿದರು.
400 ವೀಕ್ಷಕರಿಗೆ ಅವಕಾಶ: ತೆರೆದ ಈಜುಕೊಳವು 400 ಜನರ ಸಾಮರ್ಥ್ಯದ ವೀಕ್ಷಕರ ಆಸನ ಹೊಂದಿದ್ದು, ಎದುರುಗಡೆಯ ಭಾಗವನ್ನು ಈಜುಗಾರರು, ಅಧಿಕಾರಿಗಳು, ತರಬೇತುದಾರರಿಗೆ ಮೀಸಲಿರಿಸಲಾಗಿದೆ. ಈಜು ಸ್ಪರ್ಧೆಯ ಪ್ರದೇಶ ಮತ್ತು ವೀಕ್ಷಕರ ಗ್ಯಾಲರಿ ಪ್ರವೇಶಿಸಲು ಎರಡು ಪ್ರತ್ಯೇಕ ಲಿಫ್ಟ್ ಸೌಲಭ್ಯ ಒದಗಿಸಲಾಗಿದೆ. ಈಗಾಗಲೇ ಈಜುಕೊಳಗಳು, ನೀರೊಳಗಿನ ಬೆಳಕಿನ ವ್ಯವಸ್ಥೆ, ಓವರ್‌ಫ್ಲೋ ಚಾನಲ್‌ಗಳು, ಆರಂಭಿಕ ಬ್ಲಾಕ್‌ಗಳು, ಲೇನ್ ವಿಭಾಜಕಗಳ ಕೆಲಸಗಳೂ ಪೂರ್ಣಗೊಂಡಿವೆ. ಈಜುಕೊಳ ನಿರ್ವಹಣೆಗೆ 2 ಕೋಟಿ ರು. ಮೀಸಲಿಡಲಾಗಿದೆ ಎಂದು ಖಾದರ್ ತಿಳಿಸಿದರು.
ಈಜುಕೊಳ ಎದುರು 2 ಕೋಟಿ ರು. ವೆಚ್ಚದ ಆಟದ ಮೈದಾನ: ಈಜುಕೊಳ ನಿರ್ಮಿಸುವ ಸಂದರ್ಭ ಸ್ಥಳೀಯ ನಿವಾಸಿಗಳಿಗೆ ಭರವಸೆ ನೀಡಿದಂತೆ 2 ಕೋಟಿ ರು. ವೆಚ್ಚದಲ್ಲಿ ಈಜುಕೊಳದ ಮುಂಭಾಗದಲ್ಲಿ ಆಟದ ಮೈದಾನ ಅಭಿವೃದ್ಧಿಪಡಿಸಲಾಗುವುದು. ಆಟದ ಮೈದಾನವನ್ನು ಅಭಿವೃದ್ಧಿಪಡಿಸುವ ಮೊದಲು ಸ್ಥಳೀಯ ನಿವಾಸಿಗಳೊಂದಿಗೆ ಅವರ ಅಗತ್ಯತೆಗಳ ಕುರಿತು ಚರ್ಚೆ ನಡೆಸುತ್ತೇವೆ. ಆಟದ ಮೈದಾನದಲ್ಲಿ ವಾಕಿಂಗ್ ಟ್ರ್ಯಾಕ್, ರನ್ನಿಂಗ್ ಟ್ರ್ಯಾಕ್, ಕ್ರಿಕೆಟ್, ವಾಲಿಬಾಲ್, ಫುಟ್‌ಬಾಲ್ ಆಡುವ ಸೌಲಭ್ಯ ಇರಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಮಿನಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಿಸಲು ಸರ್ಕಾರ ಮುಂದಾಗಲಿದೆ ಎಂದು ಯು.ಟಿ. ಖಾದರ್ ತಿಳಿಸಿದರು.
ಕಾಡಾನೆ ಹಾವಳಿ ತಡೆ: ಸಿಎಂ ಭೇಟಿ ಮಾಡಿದ ಸಂಸದ ಡಿ.ಕೆ.ಸುರೇಶ್
ರಾಷ್ಟ್ರೀಯ ಈಜು ಸ್ಪರ್ಧೆಗೆ 850 ಮಂದಿ: 19ನೇ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ನಲ್ಲಿ 850 ಈಜುಗಾರರು, ಈಜು ಫೆಡರೇಶನ್ ಆಫ್ ಇಂಡಿಯಾದ 150 ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಭಾಗವಹಿಸಲಿದ್ದಾರೆ. ಕರ್ನಾಟಕ ಈಜು ಸಂಸ್ಥೆಯ ತಂಡ ಈಗಾಗಲೇ ಈಜುಕೊಳವನ್ನು ಪರಿಶೀಲಿಸಿದೆ. ನ.15ರಂದು ಈಜು ಫೆಡರೇಶನ್ ಆಫ್ ಇಂಡಿಯಾದ ತಾಂತ್ರಿಕ ತಂಡ ಆಗಮಿಸಲಿದೆ ಎಂದು ಈಜು ಚಾಂಪಿಯನ್‌ಶಿಪ್ ಕಾರ್ಯಾಧ್ಯಕ್ಷ ಕೆ. ತೇಜೋಮಯ ತಿಳಿಸಿದರು.