
ಚಾಮರಾಜನಗರ : ಸರ್ಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆ ದಲಿತ ಮಹಿಳೆಯನ್ನು ನೇಮಿಸಿದ್ದಕ್ಕೆ ಚಾಮರಾಜನಗರ ಜಿಲ್ಲೆಯ ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯ 21 ಮಕ್ಕಳು ಶಾಲೆ ತೊರೆದಿದ್ದ ಘಟನೆ ಬೆನ್ನಲ್ಲೇ ಬುಧವಾರ ಶಾಲೆಗೆ ಪೊಲೀಸ್ ವರಿಷ್ಠಾಧಿಕಾರಿ, ಪ್ರಭಾರ ಜಿಲ್ಲಾಧಿಕಾರಿ, ಡಿಡಿಪಿಐ ಹಾಗೂ ಶಿಕ್ಷಣ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರು ಹಾಗೂ ಪೋಷಕರೊಂದಿಗೆ ಸಂಧಾನ ಸಭೆ ನಡೆಸಿದ್ದಾರೆ. ಶಾಲೆ ಬಿಟ್ಟಿದ್ದ 21 ಮಕ್ಕಳ ಪೈಕಿ 6 ಮಕ್ಕಳು ಮರಳಿ ಶಾಲೆಗೆ ದಾಖಲಾಗಿದ್ದಾರೆ.
ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಗೆ ದಲಿತ ಮಹಿಳೆಯನ್ನು ನೇಮಕ ಮಾಡಲಾಗಿತ್ತು. ಇದರಿಂದಾಗಿ ಶಾಲೆಯಲ್ಲಿದ್ದ 22 ವಿದ್ಯಾರ್ಥಿಗಳ ಪೈಕಿ 21 ಮಕ್ಕಳು ಶಾಲೆ ತೊರೆದಿದ್ದರು. ಈ ಘಟನೆ ಸಂಬಂಧ ‘ಕನ್ನಡಪ್ರಭ’ ಜೂ.25ರಂದು ವರದಿ ಮಾಡಿತ್ತು. ಇದರ ಬೆನ್ನಲ್ಲೇ ವರದಿ ನೀಡುವಂತೆ ಮುಖ್ಯಮಂತ್ರಿ ಕಚೇರಿಯಿಂದ ಜಿಲ್ಲಾಧಿಕಾರಿಗೆ ಸೂಚನೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಶಾಲೆಗೆ ಪ್ರಭಾರ ಜಿಲ್ಲಾಧಿಕಾರಿ ಮೋನಾರೋತ್ ಅವರು ಎಸ್ಪಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಗ್ರಾಮಸ್ಥರು ಹಾಗೂ ಪೋಷಕರೊಂದಿಗೆ ಸಭೆ ನಡೆಸಿದರು.
ಈ ವೇಳೆ ಶಾಲೆಯ ಅಡುಗೆ ಸಿಬ್ಬಂದಿ ಮಾತನಾಡಿ, ನಾನು ಅಡುಗೆ ಮಾಡುತ್ತಿರುವುದಕ್ಕೆ 21 ಮಕ್ಕಳು ವರ್ಗಾವಣೆ ಪತ್ರ ಪಡೆದು ಪಕ್ಕದ ಆಲೂರು ಶಾಲೆಗೆ ದಾಖಲಾಗಿದ್ದಾರೆ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಅಲ್ಲದೇ ಶಿಕ್ಷಕ ರವಿ ಹಾಗೂ ಮತ್ತೊರ್ವ ಶಿಕ್ಷಕ ನಟರಾಜು ನಡುವೆ ಮನಸ್ತಾಪ ಉಂಟಾಗಿ, ಅವರು ಶಾಲೆಗೆ ಸರಿಯಾಗಿ ಬರದೇ ಮಕ್ಕಳಿಗೆ ಪಾಠ ಪ್ರವಚನಕ್ಕೆ ತೊಂದರೆಯಾಗಿತ್ತು. ಈ ಬಗ್ಗೆ ಅನೇಕ ಬಾರಿ ಪೋಷಕರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಸಹ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಅನೇಕ ಮುಖಂಡರು ಮಾತನಾಡಿ, ಶಾಲೆಯಲ್ಲಿ ಶಿಕ್ಷಕರು ಸರಿಯಾದ ಪಾಠ ಪ್ರವಚನ ಮಾಡದಿರುವ ಕಾರಣ ನಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರು. ಆದ್ದರಿಂದ ನಾವು ಪಕ್ಕದ ಆಲೂರು ಶಾಲೆಗೆ ದಾಖಲು ಮಾಡಿದ್ದೇವೆ. ಅಲ್ಲದೇ ಕಳೆದ 26 ವರ್ಷಗಳಿಂದ ಅಡುಗೆ ಸಹಾಯಕರಾಗಿದ್ದ ನಿಂಗಮ್ಮ ಅವರು ಮಕ್ಕಳ ದಾಖಲಾತಿ ಕಡಿಮೆಯಾದ ಹಿನ್ನೆಲೆಯಲ್ಲಿ ಮುಖ್ಯ ಅಡುಗೆಯವರಾಗಿ ಬಡ್ತಿ ಪಡೆದುಕೊಂಡಿದ್ದರು. ಅವರು ನಿವೃತ್ತಿ ಅಂಚಿನಲ್ಲಿದ್ದು, ರುಚಿಯಾದ ಅಡುಗೆ ಮಾಡುವಲ್ಲಿ ವಿಫಲರಾಗಿದ್ದರು. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರೇ ನಮಗೆ ಅನೇಕ ಬಾರಿ ಸಭೆ ನಡೆಸಿ ತಿಳಿಸಿದ್ದರು. ಈ ಕಾರಣದಿಂದ ನಮ್ಮ ಮಕ್ಕಳು ಊಟ ಮಾಡಲು ಹಿಂಜರಿಕೆ ಮಾಡುತ್ತಿದ್ದವು ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಡಿಡಿಪಿಐ ರಾಮಚಂದ್ರೇ ಅರಸ್ ಮಾತನಾಡಿ, ನಿಮ್ಮ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸಲಿದೆ. ಶಾಲೆಯಲ್ಲಿ ಶಿಕ್ಷಕರಿಂದ ತಪ್ಪು ನಡೆದಿದ್ದರೆ ಅವರ ವಿರುದ್ಧ ಶಿಸ್ತು ಕ್ರಮವಾಗುತ್ತದೆ. 21 ಮಕ್ಕಳನ್ನು ಶಾಲೆಗೆ ದಾಖಲು ಮಾಡಿದರೆ, ಮತ್ತೊಬ್ಬ ಅಡುಗೆ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ. ಈಗ ಇಬ್ಬರು ಬೇರೆ ಶಿಕ್ಷಕರನ್ನು ನಿಯೋಜನೆ ಮಾಡಿದ್ದು, ಮತ್ತೊಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತದೆ. ಶಾಲೆ ಬಿಟ್ಟು ಹೋಗಿರುವ ಎಲ್ಲಾ ಮಕ್ಕಳನ್ನು ಮತ್ತೇ ಶಾಲೆಗೆ ಸೇರಿಸಲು ಪೋಷಕರು ಮುಂದಾಗಬೇಕು. ಮುಂದಿನ ವರ್ಷಕ್ಕೆ ಶತಮಾನ ಪೊರೈಸಿರುವ ಸರ್ಕಾರಿ ಶಾಲೆಗೆ ಸರ್ಕಾರ ₹10 ಲಕ್ಷ ಅನುದಾನ ನೀಡುತ್ತದೆ. ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತದೆ ಎಂದು ತಿಳಿಸಿದರು.
ಬಳಿಕ ಪೋಷಕರು ಅಧಿಕಾರಿಗಳಿಗೆ ತಮ್ಮ ಮಕ್ಕಳನ್ನು ವಾಪಸ್ ಇದೇ ಶಾಲೆಗೆ ಸೇರಿಸುವ ಭರವಸೆ ನೀಡಿದರು. ಶಾಲೆ ಬಿಟ್ಟು ಹೋಗಿದ್ದ ಮಕ್ಕಳ ಪೈಕಿ ಈಗಾಗಲೇ 6 ಮಕ್ಕಳು ಮತ್ತೇ ಶಾಲೆಗೆ ಸೇರ್ಪಡೆಯಾಗಿದ್ದು, ಇನ್ನುಳಿದ ಮಕ್ಕಳು ನಾಳೆಯಿಂದಲೇ ಶಾಲೆಗೆ ಬರುವಂತೆ ಕ್ರಮ ವಹಿಸುವಂತೆ ಬಿಇಒಗೆ ಅಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಗಿರಿಜಾ, ಡಿವೈಎಸ್ಪಿ ಲಕ್ಷ್ಮಯ್ಯ, ಬಿಇಒ ಹನುಮಶೆಟ್ಟಿ, ಬಿಸಿಯೂಟ ಅಧಿಕಾರಿ ರೇವಣ್ಣ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ನಂಜುಂಡೇಗೌಡ, ತಾ.ಪಂ. ಇಒ ಶ್ರೀಕಂಠೇರಾಜ್ ಅರಸ್, ಶಾಲೆಯ ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಹಾಗೂ ಪೋಷಕರು ಹಾಜರಿದ್ದರು.
ಬಿಸಿಯೂಟ ಸೇವನೆ ಮಾಡದಿರುವ ಬಗ್ಗೆ ನೊಂದ ಮಹಿಳೆ ದೂರು ನೀಡಿದರೆ ಅಂಥವರ ವಿರುದ್ದ ನಿರ್ದಾಕ್ಷಿಣ್ಯವಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಗ್ರಾಮದಲ್ಲಿ ಯಾವುದೇ ತಾರತಮ್ಯ ಮಾಡದೆ ಸಾಮರಸ್ಯ ಕಾಪಾಡಬೇಕು.
- ಡಾ. ಬಿ.ಟಿ. ಕವಿತಾ, ಎಸ್ಪಿ, ಚಾಮರಾಜನಗರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ