
ಬೆಂಗಳೂರು (ನ.16) : ಆಹಾರ ಪದಾರ್ಥಗಳ ಮೇಲೆ ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕ ಅಥವಾ ಸಸ್ಯಾಹಾರ ಅಥವಾ ಮಾಂಸಾಹಾರ ಚಿಹ್ನೆ ನಮೂದಿಸದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಹೈಕೋರ್ಟ್ ಆದೇಶಿಸಿದೆ.
ಕಾಫಿ ಪೊಟ್ಟಣದ ಮೇಲೆ ಬ್ಯಾಚ್ ಸಂಖ್ಯೆ ಹಾಗೂ ಎಕ್ಸ್‌ಪೈರಿ ದಿನಾಂಕ ನಮೂದಿಸದೇ ಮಾರಾಟ ಮಾಡಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ಶಿಕ್ಷೆ ವಿಧಿಸಿ ಹಾಸನದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಚ್ ಹೊರಡಿಸಿದ ಆದೇಶವನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಡಾ.ಎಚ್.ಬಿ. ಪ್ರಭಾಕರ ಶಾಸ್ತಿ್ರ ಅವರು ಈ ಆದೇಶ ಮಾಡಿದ್ದಾರೆ.
‘ವಿದ್ಯಾರ್ಥಿಗಳಿಂದ ಪಡೆದ ಹೆಚ್ಚುವರಿ ಶುಲ್ಕಕ್ಕೆ ಬಡ್ಡಿ ಸೇರಿಸಿ ವಾಪಸ್ ಕೊಡಿ’ : ಹೈಕೋರ್ಟ್
ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಸಕಲೇಶಪುರದ ಸೆಲೆಕ್ಟ್ ಕಾಫಿ ವರ್ಕ್ಸ್ನ ಮಾಲೀಕ ಸಯ್ಯದ್ ಅಹ್ಮದ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಚ್, ಅರ್ಜಿದಾರನಿಗೆ 6 ತಿಂಗಳು ಸಾಧಾರಣ ಶಿಕ್ಷೆ ಹಾಗೂ 1 ಸಾವಿರ ರು. ದಂಡ ಕಾಯಂಗೊಳಿಸಿದೆ. ಅಲ್ಲದೆ, ಅರ್ಜಿದಾರರು 45 ದಿನಗಳಲ್ಲಿ ಸಕಲೇಶಪುರದ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಶರಣಾಗಿ ಶಿಕ್ಷೆ ಅನುಭವಿಸಬೇಕು ಎಂದು ನಿರ್ದೇಶಿಸಿದೆ.
ಏನಿದು ಪ್ರಕರಣ?
ಸಕಲೇಶಪುರದ ಆಹಾರ ನಿರೀಕ್ಷಕರು 2008ರ ಜೂ.20ರಂದು ಸಯ್ಯದ್ ಅಹ್ಮದ್ ಮಾಲೀಕತ್ವದ ಸೆಲೆಕ್ಟ್ ಕಾಫಿ ವರ್ಕ್ಸ್ಗೆ ಭೇಟಿ ನೀಡಿ, 600 ಗ್ರಾಂ ಕಾಫಿ ಪುಡಿ ಖರೀದಿಸಿ ವೈಜ್ಞಾನಿಕ ಪರೀಕ್ಷೆಗೆ ರವಾನಿಸಿದ್ದರು. ಪರೀಕ್ಷೆಯಲ್ಲಿ ಕಾಫಿ ಪುಡಿ ಕಲಬೆರಕೆಯಾಗಿರುವುದು, ಪುಡಿಯಲ್ಲಿ ಶೇ 0.4 ಕೆಫೀನ್ ಮತ್ತು ಶೇ.55 ನೀರಿನ ಅಂಶ ಇರುವುದು ಖಚಿತವಾಗಿತ್ತು. ಮಾರಾಟದ ಸಂದರ್ಭದಲ್ಲಿ ಯಾವುದೇ ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕಗಳನ್ನು ಸಹ ಮುದ್ರಿಸಿರಲಿಲ್ಲ. ಹೀಗಾಗಿ ಅರ್ಜಿದಾರನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ಸಯ್ಯದ್ ಅಹ್ಮದ್‌ಗೆ ಶಿಕ್ಷೆ ವಿಧಿಸಿತ್ತು.
ಮೈಸೂರು ರಸ್ತೆ ಸ್ಯಾಟಲೈಟ್ ಬಳಿ ಸ್ಕೈವಾಕ್ ಅಳವಡಿಸಿ: ಹೈಕೋರ್ಟ್
ಅದನ್ನು ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಕಾಫಿ ಪುಡಿಯಲ್ಲಿ ಕೆಫೀನ್‌ನ ಪ್ರಮಾಣ ಶೇ. 0.6ಕ್ಕಿಂತ ಕಡಿಮೆ ಮತ್ತು ಜಲೀಯ ಸಾರದ ಪ್ರಮಾಣ ಶೇ.50ಕ್ಕಿಂತ ಹೆಚ್ಚಿರಬಾರದು. ಆದರೆ, ಈ ಪ್ರಕರಣದಲ್ಲಿ ತಪಾಸಣೆಗೊಳಪಡಿಸಿರುವ ಮಾದರಿಯಲ್ಲಿ ಕೇವಲ ಶೇ.0.4 ಪ್ರಮಾಣದ ಕೆಫೀನ್ ಇದೆ ಹಾಗೂ ನೀರಿನ ಅಂಶ ಶೇ.55ರಷ್ಟಿದೆ. ಲೇಬಲ್ ಮೇಲೆ ಕಾಫಿ ಪುಡಿ ತಯಾರಾದ ಸಂಸ್ಥೆಯ ಹೆಸರು ಹೊರತುಪಡಿಸಿ, ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕ, ಸಸ್ಯಾಹಾರ ಅಥವಾ ಮಾಂಸಾಹಾರದ ಚಿಹ್ನೆ ನಮೂದಿಸಿಲ್ಲ. ಇದು ಆಹಾರ ಕಲಬೆರಕೆ ತಡೆ ಕಾಯ್ದೆಯ ಸೆಕ್ಷನ್ 7(ಜಿ) ಮತ್ತು 7(ಜಿಜಿ) ಅಡಿಯಲ್ಲಿ ಅಪರಾಧವಾಗುವುದರಿಂದ ದೋಷಿಗೆ ಸೆಕ್ಷನ್ 16(1)(ಎ) ಅಡಿಯಲ್ಲಿ ಶಿಕ್ಷೆ ವಿಧಿಸಬಹುದಾಗಿದೆ ಎಂದು ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ