ನಾಳೆಯೊಳಗೆ ರಾಜ್ಯಕ್ಕೆ 2 ರೇಕ್‌ ಕಲ್ಲಿದ್ದಲು : ಸಮಸ್ಯೆ ನಿರ್ಮಾಣವಾಗುವುದಿಲ್ಲ

Kannadaprabha News   | Asianet News
Published : Oct 12, 2021, 08:52 AM IST
ನಾಳೆಯೊಳಗೆ ರಾಜ್ಯಕ್ಕೆ 2 ರೇಕ್‌ ಕಲ್ಲಿದ್ದಲು : ಸಮಸ್ಯೆ ನಿರ್ಮಾಣವಾಗುವುದಿಲ್ಲ

ಸಾರಾಂಶ

 ರಾಜ್ಯದ ಕಲ್ಲಿದ್ದಲು ಸಮಸ್ಯೆ ಬಗ್ಗೆ ಕೇಂದ್ರದ ಗಣಿ ಸಚಿವ ಪ್ರಹ್ಲಾದ ಜೋಶಿ ಅವರ ಜೊತೆ ಚರ್ಚೆ ನಡೆಸಿದ್ದೇವೆ 14 ರೇಕ್‌ ಕಲ್ಲಿದ್ದಲು ಕೇಳಿದ್ದೇವೆ. ಈಗಾಗಲೇ ಒಡಿಶಾದಿಂದ 2 ರೇಕ್‌ ಕಲ್ಲಿದ್ದಲು ಹೊರಟಿದ್ದು, ಸಕಾಲದಲ್ಲಿ ರಾಜ್ಯಕ್ಕೆ ತಲುಪಲಿದೆ.

 ಬೆಂಗಳೂರು (ಅ.12):  ರಾಜ್ಯದ ಕಲ್ಲಿದ್ದಲು (Coal) ಸಮಸ್ಯೆ ಬಗ್ಗೆ ಕೇಂದ್ರದ ಗಣಿ ಸಚಿವ ಪ್ರಹ್ಲಾದ ಜೋಶಿ (prahlad Joshi) ಅವರ ಜೊತೆ ಚರ್ಚೆ ನಡೆಸಿದ್ದೇವೆ. ಒಟ್ಟು 14 ರೇಕ್‌ ಕಲ್ಲಿದ್ದಲು ಕೇಳಿದ್ದೇವೆ. ಈಗಾಗಲೇ ಒಡಿಶಾದಿಂದ (odisha) 2 ರೇಕ್‌ ಕಲ್ಲಿದ್ದಲು ಹೊರಟಿದ್ದು, ಸಕಾಲದಲ್ಲಿ ರಾಜ್ಯಕ್ಕೆ ತಲುಪಲಿದೆ. ಹೀಗಾಗಿ ರಾಜ್ಯದಲ್ಲಿ ಕಲ್ಲಿದ್ದಲು ಸಮಸ್ಯೆ ನಿರ್ಮಾಣವಾಗುವುದಿಲ್ಲ ಎಂದು ಇಂಧನ ಸಚಿವ ಸುನೀಲ್‌ಕುಮಾರ್‌ (Sunil Kumar) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಮಂಗಳವಾರದೊಳಗೆ ಒಂದು ರೇಕ್‌ ಮತ್ತು ಬುಧವಾರ ಇನ್ನೊಂದು ರೇಕ್‌ ಕಲ್ಲಿದ್ದಲು(Coal) ಆಗಮಿಸಲಿದ್ದು, ಕಲ್ಲಿದ್ದಲಿನ ಕೊರತೆಯ ಆತಂಕ ದೂರವಾಗಿದೆ ಎಂದರು.

Coal Crisis| ಕಲ್ಲಿದ್ದಲು ಬರ, ರಾಜ್ಯದಲ್ಲಿ ಪವರ್‌ ಕಟ್‌ ಆರಂಭ!

ಇಡೀ ದೇಶದಲ್ಲಿ ಕಲ್ಲಿದ್ದಲಿನ ಉತ್ಪಾದನೆಯಲ್ಲಿ ಕೊರತೆ ಆಗಿರುವುದು ಗಮನಕ್ಕೆ ಬಂದಿದೆ. ರಾಜ್ಯಕ್ಕೆ ಬರಬೇಕಾದ ಕಲ್ಲಿದ್ದಲು ತಡವಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗಣಿ ಸಚಿವ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಭೇಟಿ ಮಾಡಿ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅವರಿಗೆ ಮನವಿ ಮಾಡಿದ್ದೆವು. ಆದರೆ ಕೇಂದ್ರ ಸಚಿವರ ಸಕಾಲಿಕ ಕ್ರಮಗಳಿಂದ ಆತಂಕ ದೂರವಾಗಿದೆ ಎಂದು ತಿಳಿಸಿದರು.

ನವರಾತ್ರಿಯ (Navratri) ಸಂದರ್ಭದಲ್ಲಿ ದೀಪಾಲಂಕಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ. ಹೀಗಾಗಿ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಮಹಾರಾಷ್ಟ್ರದ (Maharashtra) ಬಾರಂಜಿ ಹಾಗೂ ಒಡಿಶಾದ ಮಂದಾಕಿನಿಯಲ್ಲಿ ಕರ್ನಾಟಕದ (karnataka) ಕಲ್ಲಿದ್ದಲು ಗಣಿ ಆರಂಭವಾಗಬೇಕಾಗಿತ್ತು. ಆದರೆ ಅರಣ್ಯ ಇಲಾಖೆಯಿಂದ ಉಂಟಾಗಿದ್ದ ತೊಡಕನ್ನು ನಿವಾರಿಸಿ ಒಂದು ತಿಂಗಳೊಳಗೆ ಅನುಮತಿ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಅಲ್ಲಿ ಗಣಿಗಾರಿಕೆ ಆರಂಭವಾದರೆ ಕರ್ನಾಟಕಕ್ಕೆ ಕಲ್ಲಿದ್ದಲಿನ ಕೊರತೆ ಆಗುವುದಿಲ್ಲ ಎಂದು ಇಂಧನ ಸಚಿವರು ಹೇಳಿದರು.

ತೈಲು ಸುಂಕ ಕಡಿತ ಸೂಕ್ತ ನಿರ್ಧಾರ:

ತೈಲ ಸುಂಕ ಕಡಿತದ ಬಗ್ಗೆ ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ನೋಡಿಕೊಂಡು ರಾಜ್ಯದ ಜನರಿಗೆ ಅನುಕೂಲ ಆಗುವಂತಹ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆಗೆದುಕೊಳ್ಳುತ್ತಾರೆ ಎಂದು ಸುನೀಲ್‌ ಕುಮಾರ್‌ ತಿಳಿಸಿದರು.

ಕೆಪಿಟಿಸಿಎಲ್‌ ಹುದ್ದೆ ಭರ್ತಿಗೆ ಚಾಲನೆ, 21 ಮಂದಿಗೆ ನೇಮಕಾತಿ ಪತ್ರ

 ಕೆಪಿಟಿಸಿಎಲ್‌ನ 1899 ಕಿರಿಯ ಪವರ್‌ ಮ್ಯಾನ್‌ ಹುದ್ದೆ ನೇಮಕಾತಿ ಪ್ರಕ್ರಿಯೆಯ ಮೊದಲ ಹಂತವಾಗಿ 21 ಜನರಿಗೆ ನೇಮಕಾತಿ ಆದೇಶ ಪತ್ರವನ್ನು ಇಂಧನ ಸಚಿವ ಸುನೀಲ್‌ ಕುಮಾರ್‌ ಅವರು ಬೆಂಗಳೂರಿನಲ್ಲಿ ಸೋಮವಾರ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುನೀಲ್‌ ಕುಮಾರ್‌, ಈ ಹುದ್ದೆಗಳನ್ನು ತುಂಬಲು 2019ರ ಫೆಬ್ರವರಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಈ ನೇಮಕಾತಿ ಪ್ರಕ್ರಿಯೆ ನಾನಾ ಕಾರಣಗಳಿಗಾಗಿ ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಅನೇಕರು ನನ್ನ ಗಮನ ಸೆಳೆದಾಗ ನಾನು ಕೂಡಲೇ ಅಗತ್ಯವಾದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ, ಆದೇಶ ಪತ್ರ ನೀಡುವಂತೆ ಸೂಚನೆ ನೀಡಿದ್ದೆ. ಅದರಂತೆ ಇಂದು 21 ಜನ ಕಿರಿಯ ಪವರ್‌ ಮ್ಯಾನ್‌ಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಅತ್ಯಂತ ಶೀಘ್ರದಲ್ಲೇ ಉಳಿದ 1878 ಜನರಿಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ್‌ ಹಾಗೂ ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಂ. ಮಂಜುಳಾ ಅವರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!