ಇನ್ನು ಮನೇಲೆ ಕೂತು ರೆಂಟ್‌ ಅಗ್ರಿಮೆಂಟ್‌ ಮಾಡ್ಕೊಳ್ಳಿ!

Kannadaprabha News   | Kannada Prabha
Published : Dec 02, 2025, 06:52 AM IST
krishna byregowda

ಸಾರಾಂಶ

ಇ-ಸ್ಟ್ಯಾಂಪ್‌ ನಕಲು ತಡೆ, ಜನರಿಗೆ ಸುಲಭವಾಗಿ ಛಾಪಾ ಕಾಗದ ಸಿಗುವಂತೆ ಮಾಡಲು ಕ್ಯೂಆರ್‌ ಕೋಡ್‌ ಅಳವಡಿಸಿರುವ ಡಿಜಿಟಲ್‌ ಇ-ಸ್ಟ್ಯಾಂಪ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬೆಂಗಳೂರು : ಇ-ಸ್ಟ್ಯಾಂಪ್‌ ನಕಲು ತಡೆ, ಜನರಿಗೆ ಸುಲಭವಾಗಿ ಛಾಪಾ ಕಾಗದ ಸಿಗುವಂತೆ ಮಾಡಲು ಕ್ಯೂಆರ್‌ ಕೋಡ್‌ ಅಳವಡಿಸಿರುವ ಡಿಜಿಟಲ್‌ ಇ-ಸ್ಟ್ಯಾಂಪ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇ-ಸ್ಟ್ಯಾಂಪ್‌ನಲ್ಲೂ ಸಾಕಷ್ಟು ದುರುಯೋಗ ನಡೆಯುತ್ತಿದೆ. ಎರಡು ವರ್ಷಗಳಿಂದ ಇ-ಸ್ಟ್ಯಾಂಪ್‌ ವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗಿದ್ದು, ಅದರಲ್ಲಿ ಕಲರ್‌ ಪ್ರಿಂಟ್‌ ತೆಗೆದುಕೊಂಡು, ನಕಲಿ ಇ-ಸ್ಟ್ಯಾಂಪ್‌ ರೂಪಿಸಿ ಅಕ್ರಮ ಮಾಡಲಾಗುತ್ತಿದೆ. ಅದಕ್ಕಾಗಿ ಡಿಜಿಟಲ್‌ ಇ-ಸ್ಟ್ಯಾಂಪ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಇದರ ಮೂಲಕ ಜನ ಇ-ಸ್ಟ್ಯಾಂಪ್‌ ವೆಂಡರ್ಸ್‌ ಬದಲು ತಾವಿರುವಲ್ಲೇ ಕಾವೇರಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು ಡಿಜಿಟಲ್‌ ಇ-ಸ್ಟ್ಯಾಂಪ್‌ ಖರೀದಿ ಮಾಡಬಹುದು ಎಂದರು.

ಎಲ್ಲ ರೀತಿಯ ಪ್ರಕ್ರಿಯೆಗೂ ಡಿಜಿಟಲ್‌ ಇ-ಸ್ಟ್ಯಾಂಪ್‌

ಕಡ್ಡಾಯ ನೋಂದಣಿ ಮತ್ತು ನೋಂದಣಿಯೇತರ ಪ್ರಕ್ರಿಯೆಗಳಿಗೆ ಡಿಜಿಟಲ್‌ ಇ-ಸ್ಟ್ಯಾಂಪ್‌ ಬಳಕೆ ಮಾಡಬಹುದು. ಕೇಂದ್ರ ಸರ್ಕಾರ ಛಾಪಾ ಕಾಗದ ವ್ಯವಸ್ಥೆಯನ್ನು ಡಿಜಿಟಲ್‌ ಮಾಧ್ಯಮಕ್ಕೆ ತರುವಂತೆ ಸೂಚಿಸಿದೆ. ಅದಕ್ಕಾಗಿ ಡಿಜಿಟಲ್‌ ಇ-ಸ್ಟ್ಯಾಂಪ್‌ ಪರಿಚಯಿಸಲಾಗುತ್ತಿದೆ. ರಾಜ್ಯದ ಸ್ಥಿತಿಗತಿಯನ್ನಾಧರಿಸಿ ಇದನ್ನು ಜಾರಿಗೆ ಸೂಚಿಸಿತ್ತು. ಅದರಂತೆ ಇದೀಗ ಎಲ್ಲ ರೀತಿಯ ಪ್ರಕ್ರಿಯೆಗೂ ಅನ್ವಯವಾಗುವಂತೆ ಡಿಜಿಟಲ್‌ ಇ-ಸ್ಟ್ಯಾಂಪ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಅದಕ್ಕೆ ಅಗತ್ಯವಿರುವ ಕಾನೂನು ತಿದ್ದುಪಡಿ ಮಾಡಿ, ನಿಯಮ ರೂಪಿಸಲಾಗಿದೆ. ನೋಂದಣಿ ಮತ್ತು ನೋಂದಣಿಯೇತರ (ಬಾಡಿಗೆ ಮನೆ ಕರಾರು) ಸೇವೆಗಳಿಗೂ ಡಿಜಿಟಲ್‌ ಇ-ಸ್ಟ್ಯಾಂಪ್‌ ಅನ್ವಯವಾಗಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಕ್ಯೂಆರ್‌ ಕೋಡ್‌ ಅಳವಡಿಕೆ:

ಡಿಜಿಟಲ್‌ ಇ-ಸ್ಟ್ಯಾಂಪ್‌ಗಳ ನಕಲಿ ತಡೆಗೆ ಕ್ಯೂಆರ್‌ ಕೋಡ್‌ ಅಳವಡಿಸಲಾಗುತ್ತಿದೆ. ಅಲ್ಲದೆ, ಡಿಜಿಟಲ್‌ ಇ-ಸ್ಟ್ಯಾಂಪ್‌ ಖರೀದಿ ನಂತರ ಯಾವ ಪ್ರಕ್ರಿಯೆಗೆ ಅದನ್ನು ಖರೀದಿಸಲಾಗಿದೆ ಎಂಬುದರ ಬಗ್ಗೆ ದಾಖಲೆ ನೀಡಬೇಕಿದೆ. ಆ ದಾಖಲೆ ಸರ್ಕಾರದಿಂದಲೇ ನಿರ್ವಹಣೆ ಮಾಡಬಹುದು. ಅಲ್ಲದೆ, ಡಿಜಿಟಲ್‌ ಇ-ಸ್ಟ್ಯಾಂಪ್‌ನಲ್ಲಿನ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಮೂಲ ದಾಖಲೆಯ ಮಾಹಿತಿ ದೊರೆಯಲಿದೆ. ಅಲ್ಲದೆ, ಡಿಜಿಟಲ್‌ ಇ-ಸ್ಟ್ಯಾಂಪ್‌ ಖರೀದಿಗೂ ಮುನ್ನ ಆಧಾರ್‌ ಆಧಾರಿತ ಪರಿಶೀಲನೆ ಮೂಲಕ ಗುರುತು ದೃಢೀಕರಿಸುವ ವ್ಯವಸ್ಥೆ ಮಾಡಲಾಗಿದೆ. ಈ ಕ್ರಮಗಳಿಂದ ಡಿಜಿಟಲ್‌ ಇ-ಸ್ಟ್ಯಾಂಪ್‌ ನಕಲಿಯೋ ಅಥವಾ ಅಸಲಿಯೋ ಎಂಬುದು ತಿಳಿಯಲಿದೆ. ಇದರಿಂದ ನಕಲು ಮಾಡುವುದು ಅಸಾಧ್ಯವಿಲ್ಲ ಎಂದು ಕೃಷ್ಣ ವಿವರಿಸಿದರು.

15,000 ಡಿಜಿಟಲ್‌ ಸೇವಾ ಕೇಂದ್ರಗಳಲ್ಲಿ ಶೀಘ್ರ ಲಭ್ಯ:

ಡಿಜಿಟಲ್‌ ಇ-ಸ್ಟ್ಯಾಂಪ್‌ಗಳನ್ನು ಕಾವೇರಿ ವೆಬ್‌ಸೈಟ್‌ಗೆ ಭೇಟಿ ನೀಡಿ ಪಡೆಯಬಹುದು. ಇಲ್ಲದಿದ್ದರೆ ಇ-ಸ್ಟ್ಯಾಂಪ್‌ ವೆಂಡರ್‌ಗಳಲ್ಲೂ ಖರೀದಿಸಬಹುದು. ಉಳಿದಂತೆ ಗ್ರಾಮ ಒನ್‌, ಬೆಂಗಳೂರು ಒನ್‌, ಬಾಪೂಜಿ ಸೇವಾ ಕೇಂದ್ರ, ನಾಡ ಕಚೇರಿ ಸೇರಿ ರಾಜ್ಯದಲ್ಲಿನ 15 ಸಾವಿರ ಡಿಜಿಟಲ್‌ ಸೇವಾ ಕೇಂದ್ರಗಳಲ್ಲಿ ದೊರೆಯುವಂತೆ ಮಾಡಲಾಗುವುದು. ಈ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದ್ದು, ಶೀಘ್ರ ಅದಕ್ಕೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಸಚಿವರು ಹೇಳಿದರು.

ಡಿಜಿಟಲ್‌ ಇ-ಸ್ಟ್ಯಾಂಪ್‌ ವ್ಯವಸ್ಥೆ ಜಾರಿಗೊಳಿಸಿದರೂ ಇ-ಸ್ಟ್ಯಾಂಪ್‌ ರದ್ದು ಮಾಡುವುದಿಲ್ಲ. ಒಮ್ಮೆಲೆ ಹೊಸ ವ್ಯವಸ್ಥೆಗೆ ಜನ ಹೊಂದಿಕೊಳ್ಳಲು ಕಷ್ಟವಾಗುವ ಕಾರಣ ಇ-ಸ್ಟ್ಯಾಂಪ್‌ ವ್ಯವಸ್ಥೆಯೂ ಇರಲಿದೆ. ಆದರೆ, ಒಂದೇ ಉದ್ದೇಶಕ್ಕೆ ಎರಡು ವ್ಯವಸ್ಥೆ ಇದ್ದರೆ ಗೊಂದಲ ಸೃಷ್ಟಿಯಾಗುವ ಕಾರಣ ಕ್ರಮೇಣವಾಗಿ ಇ-ಸ್ಟ್ಯಾಂಪ್‌ ರದ್ದು ಮಾಡಿ ಡಿಜಿಟಲ್‌ ಇ-ಸ್ಟ್ಯಾಂಪ್‌ ಕಡ್ಡಾಯ ಮಾಡುತ್ತೇವೆ ಎಂದರು. ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 14.28 ಕೋಟಿ ಇ-ಸ್ಟ್ಯಾಂಪ್‌ ಖರೀದಿಸಲಾಗಿದೆ. ಅದರಿಂದ ಸರ್ಕಾರಕ್ಕೆ 6,222 ಕೋಟಿ ರು.ಗೂ ಹೆಚ್ಚಿನ ಆದಾಯ ಬಂದಿದೆ ಎಂದು ತಿಳಿಸಿದರು.

ಡಿಜಿಟಲ್‌ ಇ-ಸ್ಟ್ಯಾಂಪ್‌ ಹೀಗೆ ಖರೀದಿ ಮಾಡಿ

-www.kaveri.karnataka.gov.inನಲ್ಲಿ ಖರೀದಿ

- ಕಾವೇರಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು ಖಾತೆ ಸೃಷ್ಟಿಸಬೇಕು

-ಲಾಗಿನ್‌ ಆದ ನಂತರ ಯಾವ ಉದ್ದೇಶಕ್ಕೆ ಎಂದು ಖರೀದಿ ವಿವರ ನಮೂದಿಸಬೇಕು (ಬಾಡಿಗೆ ಒಪ್ಪಂದ, ಅಫಿಡವಿಟ್‌, ಮಾರಾಟ ಒಪ್ಪಂದ)

-ಅರ್ಜಿದಾರರು ಆಧಾರ್‌ ಆಧಾರಿತ ಪರಿಶೀಲನೆ ಮೂಲಕ ಗುರುತು ದೃಢೀಕರಿಸಬೇಕು

- ಆಸ್ತಿ ಸಂಬಂಧಿತ ದಸ್ತಾವೇಜುಗಳಿದ್ದರೆ ಸರ್ಕಾರಿ ಡೇಟಾಬೇಸ್‌ಗಳಿಂದ ಆಸ್ತಿ ಮಾಹಿತಿ ಸ್ವಯಂ ಚಾಲಿತವಾಗಿ ಪರಿಶೀಲನೆಯಾಗುತ್ತದೆ

-ಡಿಜಿಟಲ್‌ ರೂಪದಲ್ಲಿ ದಸ್ತಾವೇಜು ರಚಿಸಬೇಕು

- ಆನ್‌ಲೈನ್‌ ಮೂಲಕ ಸ್ಟ್ಯಾಂಪ್ ಶುಲ್ಕ ಪಾವತಿಸಬೇಕು

- ನಂತರ ಯುನಿಕ್‌ ಸೀರಿಯಲ್‌ ನಂಬರ್‌, ಕ್ಯೂಆರ್ ಕೋಡ್‌ ಮತ್ತು ಡಿಜಿಟಲ್‌ ವಾಟರ್‌ಮಾರ್ಕ್‌ ಇರುವ ಡಿಜಿಟಲ್‌ ಇ-ಸ್ಟ್ಯಾಂಪ್‌ ರಚನೆ ಆಗಲಿದೆ.

- ಮೊಬೈಲ್‌ಗೆ ಲಿಂಕ್ ಬರಲಿದ್ದು, ಅದರ ಮೂಲಕ ಆಧಾರ್ ಇ-ಸಹಿ ಮಾಡಬೇಕು

-ತರುವಾಯ ಡಿಜಿಟಲ್‌ ಇ-ಸ್ಟ್ಯಾಂಪ್‌ ಡೌನ್‌ಲೋಡ್ ಮಾಡಿ ನೋಂದಣಿಗೆ ಬಳಸಬಹುದು

ಡಿಜಿಟಲ್‌ ಇ-ಸ್ಟಾಂಪ್‌ ಜಾರಿಗೆ ಕಾರಣಗಳೇನು?

- ಹೆಚ್ಚುತ್ತಿರುವ ನಕಲಿ ಇ-ಸ್ಟಾಂಪ್‌ಗಳ ಹಾವಳಿ ತಡೆಗೆ- ಖರೀದಿ ಉದ್ದೇಶ ಹೊರತು ಬೇರೆ ಉದ್ದೇಶಕ್ಕೆ ಬಳಕೆ ತಡೆಗೆ

- ಸ್ಟ್ಯಾಂಪ್‌ ಶುಲ್ಕ ವಂಚನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾರಿ

ಡಿಜಿಟಲ್‌ ಇ-ಸ್ಟ್ಯಾಂಪ್‌ನಿಂದಾಗುವ ಲಾಭ

- ಮಧ್ಯವರ್ತಿಗಳ ನೆರವಿಲ್ಲದೆ ಜನರೇ ಡಿಜಿಟಲ್‌ ಇ-ಸ್ಟ್ಯಾಂಪ್‌ ಖರೀದಿಸಬಹುದು

- ಎಲ್ಲ ಸೇವೆಗಳು ಸಂಪೂರ್ಣ ಡಿಜಿಟಲ್‌ ಆಗಿರಲಿದ್ದು, ಆನ್‌ಲೈನ್‌ ಮೂಲಕವೇ ಹಣ ಪಾವತಿ. ಅದು ನೇರವಾಗಿ ಸರ್ಕಾರದ ಖಜಾನೆಗೆ ಪಾವತಿ

- ಯಾವ ಉದ್ದೇಶಕ್ಕೆ ಡಿಜಿಟಲ್‌ ಇ-ಸ್ಟ್ಯಾಂಪ್‌ ಖರೀದಿಸುತ್ತಾರೋ ಅದೇ ಉದ್ದೇಶಕ್ಕೆ ಬಳಕೆ

- ಆಧಾರ್‌ ಆಧಾರಿತ ಇ-ಸೈನ್‌ ಬಳಕೆಯಿಂದ ನಕಲಿ ಸಹಿ, ಗುರುತು ವಂಚನೆ ತಡೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್