
ಬೆಂಗಳೂರು: ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ ಹಾಸ್ಟೆಲ್ ಅಡುಗೆ ಮನೆ, ಅಂಗನವಾಡಿ ಹಾಗೂ ಬಸ್‌ನಿಲ್ದಾಣಗಳಲ್ಲಿನ ಆಹಾರ ಮಳಿಗೆಗಳ ಪರಿಶೀಲನೆ ಆರಂಭಿಸಿದ್ದು, ಬಸ್ ನಿಲ್ದಾಣಗಳಲ್ಲಿನ ನೈರ್ಮಲ್ಯ ಕಾಪಾಡದ 206 ಆಹಾರ ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಹಿಂದುಳಿದ ವರ್ಗಗಳ 629 ಹಾಸ್ಟೆಲ್‌ಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ 331 ಹಾಸ್ಟೆಲ್‌ಗಳಲ್ಲಿ ತಪಾಸಣೆ ನಡೆಸಿ ಕ್ರಮವಾಗಿ 1,860 ಹಾಗೂ 556 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಜತೆಗೆ 603 ಅಂಗನವಾಡಿ ಕೇಂದ್ರಗಳ ಪರಿಶೀಲನೆ ನಡೆಸಿ 549 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇದೇ ವೇಳೆ ರಾಜ್ಯಾದ್ಯಂತ 186 ಬಸ್ ನಿಲ್ದಾಣಗಳಲ್ಲಿನ 889 ಆಹಾರ ಮಳಿಗೆಗಳ ಪರಿಶೀಲನೆ ನಡೆಸಲಾಗಿದ್ದು, ನೈರ್ಮಲ್ಯ ಕಾಪಾಡಿಕೊಳ್ಳದ 206 ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಜತೆಗೆ ಸ್ಥಳದಲ್ಲೇ 55 ಸಾವಿರ ರು. ದಂಡ ವಿಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಾದ್ಯಂತ ವಿವಿಧ ಹೆದ್ದಾರಿಗಳ ರಸ್ತೆ ಬದಿಯ 99 ಡಾಬಾಗಳ ಮೇಲೆ ಇಲಾಖೆಯ 5 ತನಿಖಾ ತಂಡಗಳ ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ನ್ಯೂನತೆಗಳು ಕಂಡುಬಂದಿರುವ ಡಾಬಾಗಳಿಂದ 3,67,500 ರು. ದಂಡ ವಿಧಿಸಲಾಗಿದೆ.
ರಾಜ್ಯಾದ್ಯಂತ ಆಹಾರ ಉದ್ದಿಮೆಗಳ 236 ಗೋದಾಮುಗಳನ್ನು ತಪಾಸಣೆ ನಡೆಸಲಾಗಿದ್ದು, ನೈರ್ಮಲ್ಯ ಕಾಪಾಡದ 8 ಗೋದಾಮುಗಳಿಗೆ 1.97 ಲಕ್ಷ ರು. ದಂಡ ವಿಧಿಸಲಾಗಿದ. ಇನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ನಿಯಮಗಳನ್ನು ಉಲ್ಲಂಘಿಸಿದ 44 ಗೋದಾಮುಗಳ ವಿರುದ್ಧ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೆರೆರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ 25 ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅವುಗಳಲ್ಲಿ ಒಂದು ಮಾದರಿ ಕಳಪೆ ಗುಣಮಟ್ಟದ್ದು ಎಂದು ವರದಿಯಾಗಿದೆ.
ಶವರ್ಮಾ ಮತ್ತು ಕಬಾಬ್‌ಗಳ ತಯಾರಿಕೆಯಲ್ಲಿ ಅನೈರ್ಮಲ್ಯ ಹಾಗೂ ಕೃತಕ ಬಣ್ಣಗಳ ಬಳಕೆ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಶವರ್ಮಾದ 41 ಹಾಗೂ ಕಬಾಬ್‌ನ 21 ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಯಲ್ಲಿ 9 ಶವರ್ಮಾ ಮಾದರಿ ಹಾಗೂ ಒಂದು ಕಬಾಬ್ ಮಾದರಿ ಅಸುರಕ್ಷಿತ ಎಂದು ತಿಳಿದುಬಂದಿದೆ.
ಆಹಾರ ಸುರಕ್ಷತಾ ಇಲಾಖೆಯಿಂದಲೇ ರಾಜ್ಯಾದ್ಯಂತ ಪ್ರತಿದಿನ ಹೋಟೆಲ್‌ಗಳು ಹಾಗೂ ಆಹಾರ ಉದ್ದಿಮೆಗಳ ಮೇಲೆ ನಿಗಾ ವಹಿಸಲು ಸಾಧ್ಯವಾಗಿಲ್ಲ. ಹಾಗಾಗಿ ನಗರ ಪ್ರದೇಶಗಳಲ್ಲಿ ಹಿರಿಯ ನಾಗರಿಕರನ್ನು ಒಳಗೊಂಡ ಪರಿಶೀಲನಾ ತಂಡಗಳನ್ನು (ವಾಚ್‌ಟೀಂ) ರಚಿಸಿ ಅವರ ಮೂಲಕ ದೂರು ಸ್ವೀಕರಿಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ