
ಬೆಂಗಳೂರು(ಅ.28): ‘ರಾಜ್ಯದ 236 ತಾಲೂಕುಗಳ ಪೈಕಿ 216 ತಾಲೂಕುಗಳು ಭೀಕರ ಬರದಿಂದ ಕಂಗೆಟ್ಟಿವೆ. ಕೇಂದ್ರ ಬರ ಅಧ್ಯಯನ ತಂಡ ಅಧ್ಯಯನ ಮಾಡಿ ವಾಸ್ತವಿಕತೆಯ ವರದಿ ನೀಡಿದ್ದರೂ ಈವರೆಗೆ ಕೇಂದ್ರದಿಂದ ನಯಾಪೈಸೆ ಪರಿಹಾರ ಬಿಡುಗಡೆಯಾಗಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಜಗತ್ತಿನ ಕಷ್ಟ-ದುಃಖಗಳೆಲ್ಲ ಮಿಡಿಯುವ ನಿಮ್ಮ ವಿಶಾಲ ಹೃದಯ ಕನ್ನಡಿಗರ ಬಗ್ಗೆ ಇಷ್ಟು ಕಟುಕವಾಗಿರುವುದು ಯಾಕೆ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ 2019ರಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ರಾಜ್ಯ ಸಾವು ನೋವಿನಲ್ಲಿ ಮುಳುಗಿತು. ಲಕ್ಷಾಂತರ ಕುಟುಂಬಗಳು ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಬೀದಿ ಪಾಲಾದವು, ಆದರೂ ನೀವು ಕರ್ನಾಟಕಕ್ಕೆ ಬರಲಿಲ್ಲ. ರಾಜ್ಯದ ಜನರಿಗಾದ ಅಪಾರ ನಷ್ಟಕ್ಕೆ ಕೇಂದ್ರದ ನೆರವಿನ ಮೊರೆ ಹೋದರೆ ಮತ್ತೆ ಕನ್ನಡಿಗರಿಗೆ ಸಿಕ್ಕಿದ್ದು ಬಿಡಿಗಾಸು ಮಾತ್ರ. ನಿಮ್ಮ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆಯಲ್ಲ, ನಾಡಿನ ಆರೂವರೆ ಕೋಟಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ’ ಎಂದು ಪ್ರಶ್ನೆ ಮಾಡಿದ್ದಾರೆ.
ಬರನಿರ್ವಹಣೆಯಲ್ಲಿ ಸಿದ್ದರಾಮಯ್ಯ ಸರಕಾರ ಸಂಪೂರ್ಣ ವಿಫಲ, ಬಿಡಿಗಾಸು ಕೊಟ್ಟಿಲ್ಲ
2017ರಲ್ಲಿ ಬರದಿಂದ ತತ್ತರಿಸಿಹೋಗಿದ್ದ ಕರ್ನಾಟಕದ ಜನತೆ ಕೇಂದ್ರದ ನೆರವಿಗಾಗಿ ನಿಮ್ಮತ್ತ ನೋಡುತ್ತಿದ್ದರು. ಆದರೆ ನಿಮ್ಮಿಂದ ನಮಗೆ ಸಿಕ್ಕಿದ್ದು ಬಿಡಿಗಾಸು ಪರಿಹಾರ. ರಾಜ್ಯದಲ್ಲಿ ಅಂದಾಜು 30 ಸಾವಿರ ಕೋಟಿ ರು. ನಷ್ಟ ಉಂಟಾದರೆ 1,435 ಕೋಟಿ ರು. ಪರಿಹಾರ ಬಿಡುಗಡೆಯಾಯಿತು. ಅದೇ ಮಹಾರಾಷ್ಟ್ರ ರಾಜ್ಯಕ್ಕೆ 8,195 ಕೋಟಿ ರು. ಹಾಗೂ ಗುಜರಾತ್‌ಗೆ 4,894 ಕೋಟಿ ರು. ಬಿಡುಗಡೆ ಮಾಡಿದ್ದೀರಿ. ಕನ್ನಡಿಗರ ಮೇಲೇಕೆ ಈ ಮಲತಾಯಿ ಧೋರಣೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ 236 ತಾಲೂಕುಗಳ ಪೈಕಿ 216 ರಲ್ಲಿ ಬರ ಬಂದಿದೆ. 33,770 ಕೋಟಿ ರು. ನಷ್ಟ ಉಂಟಾಗಿದೆ. 17,901 ಕೋಟಿ ರು. ಪರಿಹಾರಕ್ಕೆ ಮನವಿ ಸಲ್ಲಿಸಿದ್ದೆವೆ. ಕೇಂದ್ರದ ತಂಡವು ಪರಿಶೀಲನೆ ಮಾಡಿಕೊಂಡು ಹೋಗಿ ವಾಸ್ತವ ತಿಳಿಸಿದ್ದರೂ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕನ್ನಡಿಗರ ಬಗ್ಗೆ ನಿಮಗೆ ಯಾಕೆ ಇಷ್ಟು ನಿರ್ಲಕ್ಷ್ಯ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ