
ಬೆಂಗಳೂರು(ಸೆ.02): ರಾಜ್ಯದ ರೈತರ ಹಿತ ಕಾಪಾಡುವುದು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತಡೆಯಲು ರಾಜ್ಯ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಿದ್ಧವಿದೆ. ಹೀಗಾಗಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿನ ನೀರು ಶೇಖರಣೆಯ ವಸ್ತುಸ್ಥಿತಿ ಅರಿಯಲು ತಜ್ಞರನ್ನು ನೇಮಿಸಬೇಕು ಎಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ಕಾವೇರಿ ನದಿಯಿಂದ 24 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಪಟ್ಟು ಹಿಡಿದಿತ್ತು. ಆದರೆ, ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳ ಒಳಹರಿವಿನ ಕೊರತೆ, ಜಲಾಶಯಗಳಲ್ಲಿ ಶೇಖರಣೆಯಾಗಿರುವ ನೀರಿನ ಪ್ರಮಾಣವನ್ನು ಗಮನಿಸಿ ಅಷ್ಟುಪ್ರಮಾಣದ ನೀರು ಬಿಡಲು ಸಾಧ್ಯವಿಲ್ಲ ಎಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ತಿಳಿಸಿತ್ತು. ಅಲ್ಲದೆ, ನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸುವುದಾಗಿ ಹೇಳಲಾಗಿತ್ತು. ಅಂತಿಮವಾಗಿ 15 ದಿನಗಳವರೆಗೆ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶಿಸಲಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ಪ್ರಮಾಣದ ನೀರು ಹರಿಸಲು ಸಾಧ್ಯವಿಲ್ಲ. ಹೀಗಾಗಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿನ ಕಾವೇರಿ ನದಿಯ ಜಲಾಶಯಗಳಲ್ಲಿನ ಪರಿಸ್ಥಿತಿ ಅವಲೋಕಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಕೇಳುವ ಮೊದಲೇ ತಮಿಳುನಾಡಿಗೆ ನೀರು: ಕಾಂಗ್ರೆಸ್ ಸರ್ಕಾರದ ಸಿ.ಟಿ.ರವಿ ಕಿಡಿ
ತಮಿಳುನಾಡಿನಿಂದ ಹೊರ ಹರಿವು ಹೆಚ್ಚಳ:
ತಮಿಳುನಾಡಿನ ಮೆಟ್ಟೂರು, ಭವಾನಿಸಾಗರ, ಅಮರಾವತಿ ಜಲಾಶಯಗಳಿಂದ ಜೂನ್ 1ರಿಂದ ಆಗಸ್ಟ್ 27ರವರೆಗೆ 77.53 ಟಿಎಂಸಿ ನೀರು ಹರಿಸಲಾಗಿದೆ. ಹೀಗೆ ಜಲಾಶಯಗಳಲ್ಲಿನ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳದೆ, ಕೃಷಿ ಚಟುವಟಿಕೆಗೆ ಹರಿಸಲಾಗಿದೆ. ಇದೀಗ ನೀರಿನ ಕೊರತೆಯಿದೆ ಎಂದು ಹೇಳಲಾಗುತ್ತಿದೆ. ಅದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಈ ವರ್ಷ ಭವಾನಿಸಾಗರ ಜಲಾಶಯದಿಂದ ಶೇ.103.20ರಷ್ಟು ನೀರು ಹೊರಗೆ ಬಿಡಲಾಗಿದೆ. ಅದೇ ಮೆಟ್ಟೂರು ಜಲಾಶಯದಿಂದ ಶೇ.93.06 ಹಾಗೂ ಅಮರಾವತಿ ಜಲಾಶಯದಿಂದ ಶೇ.86.60ರಷ್ಟು ನೀರನ್ನು ಹೊರಗೆ ಬಿಡಲಾಗಿದೆ. ಕರ್ನಾಟಕದಲ್ಲಿ ನೀರಿನ ಕೊರತೆ ಇರುವಾಗ ತಮಿಳುನಾಡು ನೀರು ಹರಿಸುವುದರಲ್ಲಿ ಕಡಿವಾಣ ಹಾಕಬಹುದಿತ್ತು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾವೇರಿ ಕೊಳ್ಳದ ಜಲಾಶಯಗಳಲ್ಲಿನ ನೀರಿನ ಕೊರತೆಯಿಂದಾಗಿ ಕೃಷಿ ಚಟುವಟಿಕೆಗೆ, ಬೆಂಗಳೂರು ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತದೆ. ಈ ಕುರಿತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೂ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುವುದು. ಅಲ್ಲದೆ, ಕಾವೇರಿ ನದಿ ನೀರು ಹಂಚಿಕೆ ವಿಚಾರ ಸುಪ್ರೀಂಕೋರ್ಚ್‌ನಲ್ಲಿದ್ದು, ಬುಧವಾರ ಅದರ ವಿಚಾರಣೆ ನಡೆಯಲಿದೆ. ಅದಕ್ಕೂ ಮುನ್ನ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ನಮ್ಮ ಪ್ರಸ್ತಾವನೆಯನ್ನು ಸಲ್ಲಿಸಿ, ನೀರು ಹರಿಸುವುದಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಲಾಗುವುದು. ಈ ಕುರಿತು ಕಾನೂನು ತಜ್ಞರು ಸೇರಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಆಸ್ಪತ್ರೆಯಿಂದಲೇ ಕಾವೇರಿ ಹೋರಾಟಕ್ಕೆ ಕರೆಕೊಟ್ಟ ಮಾಜಿ ಸಿಎಂ ಕುಮಾರಸ್ವಾಮಿ
ಮೇಕೆದಾಟು ಯೋಜನೆಯೊಂದೇ ಪರಿಹಾರ
ಕಾವೇರಿ ನದಿ ನೀರು ಹಂಚಿಕೆ ಕುರಿತು ಪದೇಪದೆ ವಿವಾದ ಸೃಷ್ಟಿಯಾಗುತ್ತಿರುವುದಕ್ಕೆ ಮೇಕೆದಾಟು ಯೋಜನೆ ಜಾರಿಯೊಂದೇ ಪರಿಹಾರವಾಗಿದೆ. ಮೇಕೆದಾಟು ಯೋಜನೆ ಜಾರಿಯಿಂದಾಗಿ ಸುಮ್ಮನೆ ಹರಿದು ಹೋಗುತ್ತಿರುವ ಕಾವೇರಿ ನದಿ ನೀರನ್ನು ಹಿಡಿದಿಡುವ ಕೆಲಸವಾಗಲಿದೆ. ಅದರಿಂದ ಸಂಕಷ್ಟದ ಸಮಯದಲ್ಲಿ ಅದನ್ನು ಬಳಸಿಕೊಳ್ಳಬಹುದಾಗಿದೆ. ಹೀಗಾಗಿ ಮೇಕೆದಾಟು ಯೋಜನೆ ಜಾರಿಯ ಮಹತ್ವದ ಕುರಿತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜತೆಗೆ ತಮಿಳುನಾಡಿಗೂ ಮನವರಿಕೆ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕಾವೇರಿ ವಿಚಾರ ರಾಜಕೀಯ ಮಾಡಬೇಡಿ
ರಾಜ್ಯದ ರೈತರ ಹಿತ ಕಾಪಾಡಲು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತಡೆಯಲು ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ. ಆದರೆ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪ್ರತಿಭಟನೆ ನಡೆಸಲು ಮುಂದಾಗಿವೆ. ಅದು ಅವರ ಪಕ್ಷಗಳ ನಿರ್ಧಾರ. ಅದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಕಾವೇರಿ ನದಿ ನೀರಿನ ವಿಚಾರವಾಗಿ ರಾಜಕೀಯ ಮಾಡಬಾರದು. ಸಂಕಷ್ಟದ ಸಮಯದಲ್ಲಿ ಒಟ್ಟಾಗಿರಬೇಕು ಎಂಬುದನ್ನು ವಿಪಕ್ಷಗಳು ತಿಳಿಯಬೇಕು. ಕಾವೇರಿ ನದಿ ನೀರಿನ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ಶೀಘ್ರ ದಿನಾಂಕ ನಿಗದಿ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ