Dinesh Gundu Rao: ವಿಶೇಷ ಸಂದರ್ಶನ | ದಕ್ಷಿಣ ಕನ್ನಡದಲ್ಲಿ ಹಿಂದೂಗಳನ್ನಷ್ಟೇ ಗಡಿಪಾರು ಮಾಡ್ತಿಲ್ಲ; ದಿನೇಶ್ ಗುಂಡೂರಾವ್

Kannadaprabha News   | Kannada Prabha
Published : Jun 06, 2025, 08:05 AM ISTUpdated : Jun 06, 2025, 09:56 AM IST
Dinesh Gundurao

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ವೈಷಮ್ಯದ ಕೊಲೆಗಳು, ಪ್ರತಿಕಾರದ ಕೊಲೆಗಳು ಮತ್ತು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು 'ಕನ್ನಡಪ್ರಭ' ಜತೆ ಮುಖಾಮುಖಿ ಮಾತನಾಡಿದ್ದಾರೆ. 

-ಶ್ರೀಕಾಂತ್ ಎನ್. ಗೌಡಸಂದ್ರ

ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕೋಮು ದಳ್ಳುರಿಯಲ್ಲಿ ಬೇಯುತ್ತಿದೆ. ಕೋಮು ವೈಷಮ್ಯದ ಕೊಲೆ, ಪ್ರತಿಕಾರದ ಕೊಲೆಗಳಿಂದ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ತೀವ್ರವಾಗಿ ಶಾಂತಿ ಭಂಗ ಉಂಟಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದೇ ಸವಾಲಾಗಿದ್ದು, ಇದೇ ಕಾರಣಕ್ಕಾಗಿ ಸರ್ಕಾರ ಮಂಗಳೂರು ಪೊಲೀಸ್‌ ಆಯುಕ್ತ ಹಾಗೂ ದ.ಕ. ಜಿಲ್ಲೆ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಎತ್ತಂಗಡಿ ಮಾಡಿದೆ. ಜತೆಗೆ ಜಿಲ್ಲಾಡಳಿತವು ಕೋಮು ದ್ವೇಷ ಹರಡಲು ಕಾರಣರಾಗಿರುವ 36 ಮಂದಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಆದೇಶಿಸಿದೆ. ಈ ಕ್ರಮದ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತೀವ್ರ ಆರೋಪ-ಪ್ರತ್ಯಾರೋಪ ಶುರುವಾಗಿದೆ. ಮತ್ತೊಂದೆಡೆ ಮಳೆ ಅನಾಹುತದಿಂದಲೂ ಪ್ರಾಣ ನಷ್ಟ ಸಂಭವಿಸುತ್ತಿದೆ. ಕೊರೋನಾ ಪ್ರಕರಣ ಮತ್ತೆ ಹೆಚ್ಚಾಗಿರುವ ನಡುವೆಯೇ ಕೊರೋನಾ ನಿರ್ವಹಣೆ ಜತೆಗೆ ಉಸ್ತುವಾರಿ ಹೊತ್ತಿರುವ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಜಿಲ್ಲೆಯಲ್ಲಿನ ಕೋಮು ವೈಷಮ್ಯ ನಿಭಾಯಿಸುವ ಸವಾಲು ಹೆಗಲೇರಿದೆ. ಉಸ್ತುವಾರಿ ಸಚಿವರ ಬದಲಾವಣೆ ಎಂಬ ಸಣ್ಣ ಕೂಗೂ ಕೇಳಿಸತೊಡಗಿದೆ. ಈ ಎಲ್ಲಾ ವಿಷಯಗಳ ಕುರಿತು ಆರೋಗ್ಯ ಹಾಗೂ ದ.ಕ. ಜಿಲ್ಲೆ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ‘ಕನ್ನಡಪ್ರಭ’ ಜತೆ ಮುಖಾಮುಖಿ ಮಾತನಾಡಿದ್ದಾರೆ.

-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ವೈಷಮ್ಯದ ಕೊಲೆಗಳು ನಿಲ್ಲುತ್ತಿಲ್ಲ. ನಿಜಕ್ಕೂ ಏನಾಗುತ್ತಿದೆ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ವೈಷಮ್ಯದ ಕೊಲೆಗಳು ಹೊಸದೇನಲ್ಲ. ಕೋಮುವಾದಿ ಸಂಘಟನೆಗಳ ಪ್ರಚೋದನೆಗಳಿಂದಾಗಿ ಆಗಾಗ್ಗೆ ಈ ರೀತಿ ನಡೆಯುತ್ತಿರುತ್ತದೆ. ಇದನ್ನು ಮಟ್ಟಹಾಕಲು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.

-ಕೋಮು ವೈಷಮ್ಯಕ್ಕೆ ಪ್ರಚೋದನೆ ನೀಡುತ್ತಿರುವುದು ಯಾವ ಕೋಮಿನವರು?

ಈ ಕೋಮು ವೈಷಮ್ಯ, ಸಂಚು, ಪ್ರಚೋದನೆಗಳು ಎರಡೂ ಕಡೆಯಿಂದಲೂ ಆಗುತ್ತಿವೆ. ಹಿಂದೂವೇ ಆಗಿರಬಹುದು ಅಥವಾ ಮುಸ್ಲಿಮರೇ ಆಗಿರಬಹುದು. ಎರಡೂ ಕಡೆಯವರೂ ಪ್ರಚೋದನೆ ಮಾಡುತ್ತಿದ್ದಾರೆ. ಅವರ ಜತೆಗೆ ಕೆಲ ರಾಜಕೀಯ ಶಕ್ತಿಗಳೂ ಬೆಂಬಲ ನೀಡುತ್ತಿವೆ. ಅವರ ರಾಜಕೀಯ, ಆರ್ಥಿಕ ಲಾಭಗಳಿಗಾಗಿ ಇಂತಹ ಕೃತ್ಯಗಳಿಗೆ ಸಾಥ್‌ ನೀಡುತ್ತಿದ್ದಾರೆ.

-ಇದನ್ನು ಮಟ್ಟಹಾಕಲು ನೀವು ಕೈಗೊಂಡ ಕ್ರಮಗಳೇನು?

ನಾವು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಿದ್ದೇವೆ. ಅವರು 36 ಮಂದಿಯನ್ನು ಗಡಿಪಾರು ಮಾಡಲು ಆದೇಶಿಸಿದ್ದಾರೆ. ಜತೆಗೆ ಸ್ಥಳೀಯ ಮಟ್ಟದಲ್ಲಿ ಕಾನೂನು ಸುವ್ಯವಸ್ಥೆ ಸರಿದಾರಿಗೆ ತರಲು ಹಲವು ಕ್ರಮ ಕೈಗೊಂಡಿದ್ದೇವೆ. ಯಾವುದೇ ರಾಜಕೀಯ ಒತ್ತಡಗಳಿಗೂ ಮಣಿಯದೆ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಲು ಸಂಪೂರ್ಣ ಅಧಿಕಾರ ನೀಡಿದ್ದೇವೆ.

-ಮುಸ್ಲಿಂ ನಾಯಕರ ಒತ್ತಡಕ್ಕೆ ಮಣಿದು ಅವರ ತುಷ್ಟೀಕರಣಕ್ಕಾಗಿಯೇ ಗಡಿಪಾರು ನಡೆದಿದೆ ಎಂಬುದು ಬಿಜೆಪಿ ನಾಯಕರ ಆರೋಪವಿದೆಯಲ್ವಾ?

ಗಡಿಪಾರಿಗೆ ನೋಟಿಸ್‌ ನೀಡಿರುವವರಲ್ಲಿ ಕೇವಲ ಹಿಂದೂಗಳು ಮಾತ್ರವಿಲ್ಲ. ಸಾಕಷ್ಟು ಮಂದಿ ಮುಸ್ಲಿಮರೂ ಇದ್ದಾರೆ. ಇಲ್ಲಿ ಹಿಂದೂಪರ ಸಂಘಟನೆ ಅಥವಾ ಕೋಮು ಪ್ರಚೋದನೆಯಲ್ಲಿ ತೊಡಗಿರುವ ಹಿಂದೂಗಳನ್ನು ಮುಟ್ಟಿದರೆ ಬಿಜೆಪಿಯವರು ಹಿಂದೂ ವಿರೋಧಿ ಎನ್ನುತ್ತಾರೆ. ಮುಸ್ಲಿಮರನ್ನು ಮುಟ್ಟಿದರೆ ಎಸ್‌ಡಿಪಿಐನಂಥ ಸಂಘಟನೆಗಳವರು ಮೃದು ಹಿಂದುತ್ವ ಎನ್ನುತ್ತಾರೆ. ನಮಗೆ ಹಿಂದೂ ಮುಸ್ಲಿಂ ಎಂಬುದು ಇಲ್ಲ. ಸುಹಾಸ್‌ ಶೆಟ್ಟಿ ಕೊಲೆ ಪೂರ್ವ ಯೋಜಿತ. ಒಟ್ಟು ಮೂವರು ಸತ್ತಿದ್ದಾರೆ. ಕೊಲೆ ಆರೋಪಿಗಳನ್ನು ಬಂಧಿಸಿದ್ದೇವೆ.

ಕೊಲೆ ಮಾಡಿದವರನ್ನು ಬಂಧಿಸಿದರೆ ಸಾಕೇ? ಅವರ ಹಿಂದೆ ಯಾರೂ ಇಲ್ಲವೇ?

ಕೊಲೆಗೆ ಯೋಜನೆ ಮಾಡಿದವರನ್ನೂ ಹಿಡಿಯಬೇಕು. ಇವೆಲ್ಲವೂ ಪೂರ್ವ ಯೋಜಿತ ಕೃತ್ಯಗಳು. ಹೀಗಾಗಿ ಅವುಗಳ ಹಿಂದೆ ಯಾರಿದ್ದಾರೆ ಎಂಬುದೂ ಮುಖ್ಯ. ಇಲ್ಲಿ ಮುಸ್ಲಿಂ ಕೊಲೆಯಾದರೆ ಬಿಜೆಪಿಯವರು ಚಕಾರ ಎತ್ತುವುದಿಲ್ಲ. ಹಿಂದೂ ಕೊಲೆಯಾದರೆ ಎಸ್‌ಡಿಪಿಐ ಸೇರಿ ಮುಸ್ಲಿಮರು ಯಾರೂ ಚಕಾರ ಎತ್ತುವುದಿಲ್ಲ. ಈ ಧೋರಣೆ ಬದಲಾಗಿ ಯಾವುದೇ ಮನುಷ್ಯನ ಕೊಲೆಯಾದರೂ ಒಟ್ಟಾಗಿ ಧ್ವನಿ ಎತ್ತಬೇಕು.

ಗಡಿಪಾರು ಪಟ್ಟಿಯಲ್ಲಿ ಕಾಂಗ್ರೆಸ್ಸಿಗರೂ ಇದ್ದಾರೆ. ಕೋಮು ದ್ವೇಷ ಹರಡುವಲ್ಲಿ ಕಾಂಗ್ರೆಸ್ಸಿಗರ ಪಾತ್ರವೂ ಇದೆ ಎಂಬ ಆರೋಪ ಕೇಳಿ ಬಂದಿದೆಯಲ್ಲಾ?

ಗಡಿಪಾರು ಪಟ್ಟಿಯಲ್ಲಿ ಯಾರಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಯಾರು ಎಂಬುದನ್ನು ನಾವೂ ಕೇಳಲು ಹೋಗಿಲ್ಲ. ಕಾನೂನು ಪ್ರಕಾರ ನಡೆದುಕೊಳ್ಳಿ ಎಂದು ಹೇಳಿದ್ದೇವೆ.

ಸರ್ಕಾರ ಜೇನುಗೂಡಿಗೆ ಕಲ್ಲು ಹಾಕುತ್ತಿದೆ ಎಂದು ಬಿಜೆಪಿಯವರು ಎಚ್ಚರಿಸಿದ್ದಾರೆ?

ವಿಜಯೇಂದ್ರ, ಅಶೋಕ್‌, ಶೋಭಾ ಕರಂದ್ಲಾಜೆ ಅವರ ಮಾತು ಕೇಳಿದ್ದೇನೆ. ನಮ್ಮವರೂ ಮಾತನಾಡಿದ್ದಾರೆ. ಅವರಿಗೆ ನೋಟಿಸ್‌ ಜಾರಿಮಾಡಿದ್ದೇವೆ. ಜೇನುಗೂಡಿಗೆ ಕಲ್ಲು ಹಾಕಬೇಡಿ ಎಂದರೆ ಏನರ್ಥ? ನಾವು ಏನು ಬೇಕಾದರೂ ಮಾಡುತ್ತೇವೆ. ನಮ್ಮನ್ನು ಮುಟ್ಟಿದರೆ ಬಿಡಲ್ಲ ಎನ್ನುತ್ತಿದ್ದಾರಾ? ಇಂತಹ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ.

ಈ ಕೋಮು ದ್ವೇಷ, ವೈಷಮ್ಯಗಳ ಹಿಂದಿನ ಮುಖ್ಯ ಉದ್ದೇಶವೇನು?

ಇಂತಹ ಕೋಮು ದ್ವೇಷ, ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಹಿಂದೆ ಅನೈತಿಕ ಚಟುವಟಿಕೆ ಹಾಗೂ ಅಕ್ರಮ ವ್ಯವಹಾರ ಇದೆ. ಮರಳು ಮಾಫಿಯಾ, ಮಟ್ಕಾ, ಡ್ರಗ್ಸ್‌, ಜೂಜು ಅಡ್ಡೆ ಎಲ್ಲಾ ರೀತಿಯ ಅನೈತಿಕ ಚಟುವಟಿಕೆಯಲ್ಲಿ ಅವರು ತೊಡಗಿದ್ದಾರೆ. ತಮಗೆ ರಕ್ಷಣೆ ಹಾಗೂ ರಾಜಕೀಯ ಬೆಂಬಲ ಸಿಗುತ್ತದೆ. ಜತೆಗೆ ತಮ್ಮ ಅನಾಚಾರಗಳಿಗೆ ಅವಕಾಶ ಸಿಗುತ್ತದೆ. ಅದರಿಂದ ಲಾಭವೂ ಆಗುತ್ತದೆ ಎಂದು ಕೋಮು ವೈಷಮ್ಯ ಹರಡುವುದರಲ್ಲಿ ತೊಡಗಿದ್ದಾರೆ.

ನಿಮ್ಮ ಪ್ರಕಾರ ಇದರಲ್ಲಿ ಬಿಜೆಪಿಯವರು ಮಾತ್ರ ಇದ್ದಾರೆಯೇ?

ಹಾಗೇನೂ ಇಲ್ಲ. ಕಾಂಗ್ರೆಸ್‌ನವರೂ ಇದ್ದಾರೆ. ಅಲ್ಲಿನ ಸ್ಥಳೀಯ ಕಾಂಗ್ರೆಸ್ಸಿಗರಲ್ಲೂ ಅವ್ಯವಹಾರಗಳು ಇವೆ. ಆದರೆ ಹೋಲಿಕೆ ಮಾಡಿದಾಗ ಬಿಜೆಪಿಯವರದ್ದು ಹೆಚ್ಚು ಇವೆ. ಬಿಜೆಪಿ, ಕಾಂಗ್ರೆಸ್‌, ಎಸ್‌ಡಿಪಿಐ ಎಲ್ಲರೂ ಇದರಲ್ಲಿ ಇದ್ದಾರೆ.

ಕೋಮು ವೈಷಮ್ಯದ ಸ್ಥಿತಿ ಸುಧಾರಿಸಲು ಆಗಬೇಕಿರುವುದು ಏನು?

ಆ ಭಾಗದಲ್ಲಿ ಮುಸ್ಲಿಂ, ಹಿಂದೂ ಎರಡೂ ಕಡೆ ಕೋಮುವಾದಿಗಳ ಧ್ವನಿ ಜೋರಾಗಿದೆ. ಬುದ್ಧಿವಂತರು, ಜ್ಞಾನಿಗಳು, ಉದ್ಯಮಿಗಳು, ಶಿಕ್ಷಣ ತಜ್ಞರು ತಟಸ್ಥರಾಗಿದ್ದಾರೆ. ಅವರೆಲ್ಲರೂ ಇದರಿಂದ ಆಗುತ್ತಿರುವ ನಷ್ಟಗಳ ಬಗ್ಗೆ ಧ್ವನಿ ಎತ್ತಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಅದಕ್ಕಾಗಿ ವೇದಿಕೆ ಕಲ್ಪಿಸಲು ಚಿಂತನೆ ನಡೆಸಿದ್ದೇವೆ.

ದ್ವೇಷ ಭಾಷಣಕಾರರ ಹತ್ತಿಕ್ಕಲು ಹೊಸ ಕಾನೂನು ತರಬೇಕಿದೆ ಎಂದಿದ್ದೀರಿ. ಏನದು ಕಾನೂನು?

ಜನ ಪ್ರತಿನಿಧಿಗಳೇ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಇದಕ್ಕೆ ನಿಯಂತ್ರಣ ಬೇಕು. ಬೇಕಾಬಿಟ್ಟಿ ಮಾತನಾಡಿ ಬಳಿಕ ಕೋರ್ಟಿಗೆ ಹೋಗಿ ಜಾಮೀನು ಪಡೆದುಕೊಳ್ಳುತ್ತಾರೆ. ಮತ್ತೆ ಮಾಡುತ್ತಾರೆ. ಇಂತಹ ಭಾಷಣಗಳ ಮೂಲಕ ಧರ್ಮಗಳ ನಡುವೆ ವೈಷಮ್ಯ ಸೃಷ್ಟಿ ಮಾಡಿ ಪ್ರಚೋದನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಜಿಲ್ಲಾ ಪೊಲೀಸ್‌ ವಿಭಾಗಕ್ಕೆ ಮೇಜರ್ ಸರ್ಜರಿ ಮಾಡಿದ್ದು ಯಾಕೆ?

ಬದಲಾವಣೆ ಬೇಕಾಗಿದೆ ಎಂದು ನಮಗೆ ಅನಿಸಿತ್ತು. ಅವರು ತಪ್ಪು ಮಾಡಿದ್ದಾರೆ, ಮಾಡಿಲ್ಲ ಎಂಬುದಕ್ಕಿಂತ ಜನರಿಗೆ ವಿಶ್ವಾಸ ಮೂಡಿಸುವ ಪ್ರಯತ್ನ ಅಷ್ಟೇ. ಹೊಸಬರನ್ನು ಬಿಜೆಪಿಯವರೇ ಸ್ವಾಗತಿಸಿದ್ದಾರೆ.

ಇದರ ಜತೆಗೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರ ಬದಲಾವಣೆ ಕೂಗೂ ಕೇಳಿ ಬಂದಿತ್ತಂತೆ?

ಎಲ್ಲೂ ಬಂದಿರಲಿಲ್ಲ, ಅದು ಸೃಷ್ಟಿ ಅಷ್ಟೇ. ಎಲ್ಲಿಂದ ಬಂತು ಎಂಬುದೇ ಗೊತ್ತಿಲ್ಲ. ಸಿಎಂ ಹಾಗೂ ನನ್ನ ಹಂತದಲ್ಲೂ ಚರ್ಚೆ ಆಗಿಲ್ಲ. ನನ್ನ ಬಗ್ಗೆ ಕೇವಲ ಊಹಾಪೋಹ ಮಾಡಿದ್ದಾರೆ ಅಷ್ಟೇ.

ಕೋಮುದ್ವೇಷದ ಜತೆಗೆ ಮಳೆಯಿಂದಲೂ ಜೀವಹಾನಿ ಆಗಿದೆ. ಮಳೆಗೆ ಸಿದ್ಧತೆ ಹೇಗಿದೆ?

ಪ್ರಕೃತಿ ಜತೆ ನಮ್ಮ ಸಂಬಂಧ ಸರಿಯಾಗಿರಬೇಕು. ಈ ಅನಾಹುತ ನಮ್ಮ ಅಭಿವೃದ್ದಿಯಿಂದ ಆಗಿರುವ ಅನಾಹುತ. ಬೆಟ್ಟಗುಡ್ಡ ಕೊರೆದು ಅಭಿವೃದ್ಧಿ ಮಾಡಿದ ಪರಿಣಾಮ ಒಂದು ಕುಟುಂಬವೇ ಮೃತಪಟ್ಟಿದೆ. ಇದು ನೋವಿನ ಸಂಗತಿ. ಮೀನುಗಾರರು ಸಹ ಮುನ್ನೆಚ್ಚರಿಕೆ ಹೊರತಾಗಿಯೂ ಮೀನುಗಾರಿಕೆಗೆ ಹೋಗಿದ್ದಾರೆ. ಸರ್ಕಾರದ ಮುನ್ನೆಚ್ಚರಿಕೆಯನ್ನು ಜನರು ಪಾಲಿಸಬೇಕು.

ಮತ್ತೆ ಕೋವಿಡ್ ಅಬ್ಬರ ಶುರುವಾಗಿದೆಯೇ?

ಇದು ಹಳೆಯ ಓಮಿಕ್ರಾನ್‌ನ ಉಪ ತಳಿ ಅಷ್ಟೇ. ರೂಪಾಂತರಿ ತಳಿ ಅಲ್ಲ. 6-9 ತಿಂಗಳಿಗೆ ಒಮ್ಮೆ ವೈರಸ್‌ ನೆಗಡಿ, ಇನ್‌ಫ್ಲ್ಯೂಯೆಂಜಾ ರೀತಿ ಬಂದು ಹೋಗುವ ಸೀಸನಲ್‌ ಕಾಯಿಲೆ. ಆತಂಕ ಬೇಕಾಗಿಲ್ಲ.

ಎಚ್ಎಂಪಿವಿ, ಓಮಿಕ್ರಾನ್ ವೇಳೆಯೂ ಸಿದ್ಧತೆ ಹೆಸರಲ್ಲಿ ಒಂದಷ್ಟು ಟೆಂಡರ್, ಖರೀದಿ ಪ್ರಕ್ರಿಯೆ ಆಯ್ತು. ಈಗ ಮತ್ತೆ ಶುರುವಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿನ ಮಾತು?

ನಾವು ಈಗ ಏನೂ ಖರೀದಿ, ಟೆಂಡರ್‌ ಮಾಡುತ್ತಿಲ್ಲ. ಪರೀಕ್ಷಾ ಕಿಟ್‌ ಮಾತ್ರ ಖರೀದಿಸಿದ್ದೇವೆ. ವೆಂಟಿಲೇಟರ್‌ ಇದ್ದರೆ ಪರೀಕ್ಷೆ ಮಾಡಿ, ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿದ್ದೇವೆ ಅಷ್ಟೇ.

ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲವೇ?

ಬಾಣಂತಿಯರು, ದೀರ್ಘಕಾಲೀನ ಅನಾರೋಗ್ಯ ಸಮಸ್ಯೆ ಹೊಂದಿರುವ ವೃದ್ಧರು ಮಾಸ್ಕ್ ಧರಿಸಿ ಎಂದಷ್ಟೇ ಹೇಳಿದ್ದೇವೆ. ಅದನ್ನು ಬಿಟ್ಟರೆ ಬೇರೆ ಸಲಹೆ ಏನಿಲ್ಲ. ಆತಂಕ ಪಡುವ ಅಗತ್ಯವೇ ಇಲ್ಲ.

ಪ್ರತಿ ಬಾರಿ ಕೊರೋನಾ ಹೆಸರಿನಲ್ಲಿ ಟೆಂಡರ್‌ ಆಗುತ್ತವೆ. ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳೇ ಲಭ್ಯವಿಲ್ಲ?

ಅಗತ್ಯ ಔಷಧಗಳ ಕೊರತೆ ಇಲ್ಲ. ನಾವು ಮೊದಲೇ ಹಣ ನೀಡಿದ್ದೇವೆ. ಸರಬರಾಜು ಲೋಪ ಉಂಟಾದರೆ ಆಸ್ಪತ್ರೆಗಳ ಮಟ್ಟದಲ್ಲಿಯೇ ಖರೀದಿಸಲು ತಿಳಿಸಿದ್ದೇವೆ.

ಹಾಗಾದರೆ ಮಂಡ್ಯದಲ್ಲಿ ಬೈಕ್‌ ಅಪಘಾತದಲ್ಲಿ ಮೃತಪಟ್ಟ ಮಗುವಿಗೆ ಯಾಕೆ ನಾಯಿಕಡಿತಕ್ಕೆ ಔಷಧಿ ನೀಡಲಿಲ್ಲ?

ಮಗುವಿನ ತಲೆಗೆ ನಾಯಿ ಕಚ್ಚಿತ್ತು. ಪ್ರಕರಣದ ಸೂಕ್ಷ್ಮತೆಯಿಂದಾಗಿ ಎಲ್ಲಾ ಔಷಧ ಇದ್ದರೂ ಮಂಡ್ಯಗೆ ಹೋಗಿ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌