
ಬೆಂಗಳೂರು (ಜೂ.6) : ರಾಜಧಾನಿ ಬೆಂಗಳೂರಿಗೆ 39ನೇ ಪೊಲೀಸ್ ಕಮಿಷನರ್ ಆಗಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಗುರುವಾರ ತಡರಾತ್ರಿಯೇ ಅಧಿಕಾರ ಸ್ವೀಕರಿಸಿದ್ದಾರೆ.
ಬಿಹಾರ ಮೂಲದ ಸೀಮಂತ್ ಕುಮಾರ್ ಸಿಂಗ್ 1996ನೇ ಸಾಲಿನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಬೆಂಗಳೂರು, ಬಳ್ಳಾರಿ, ಮಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.
ಬೆಂಗಳೂರು ನಗರದಲ್ಲಿ ಡಿಸಿಪಿ, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ, ಕೇಂದ್ರ ವಲಯ, ಮಂಗಳೂರು ಐಜಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಎಸಿಬಿ, ಕೆಎಸ್‌ಆರ್‌ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಸೀಮಂತ್ ಕುಮಾರ್ ಸಿಂಗ್‌ರನ್ನು ಕೆಲ ತಿಂಗಳ ಹಿಂದಷ್ಟೇ ಬಿಎಂಟಿಎಫ್ ಎಡಿಜಿಪಿಯನ್ನಾಗಿ ನೇಮಿಸಲಾಗಿತ್ತು. ಇದೀಗ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.
ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ಅಮಾನತು ಬೆನ್ನಲ್ಲೇ ನೂತನ ನಗರ ಪೊಲೀಸ್ ಆಯುಕ್ತರಾಗಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಿಸಲಾಗಿದೆ. ಹೀಗಾಗಿ ಅವರು ಗುರುವಾರ ರಾತ್ರಿಯೇ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ದಯಾನಂದ ಮುಂಬಡ್ತಿಗೆ ಬ್ರೇಕ್:
ಅಮಾನತುಗೊಂಡಿರುವ ಬಿ.ದಯಾನಂದ ನಗರ ಪೊಲೀಸ್ ಆಯುಕ್ತರಾಗಿ ಶೀಘ್ರದಲ್ಲೇ 2 ವರ್ಷ ಪೂರೈಸಲಿದ್ದರು. ಅಂತೆಯೆ ಅವರು ಶೀಘ್ರದಲ್ಲೇ ಡಿಜಿಪಿ ಹುದ್ದೆಗೆ ಮುಂಬಡ್ತಿ ಪಡೆಯಲಿದ್ದರು. ಸರ್ಕಾರದ ಮಟ್ಟದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಬದಲಾವಣೆಗೆ ಚರ್ಚೆಗಳು ಆರಂಭವಾಗಿದ್ದವು. ಇದೀಗ ಕಾಲ್ತುಳಿತ ಪ್ರಕರಣ ಸಂಬಂಧ ದಯಾನಂದ ಅವರ ತಲೆದಂಡವಾಗಿದೆ. ಅಮಾನತಿನಿಂದ ಮುಂಬಡ್ತಿಗೆ ಅಡ್ಡಿಯಾಗಿದೆ.
ಡಿಸಿಆರ್‌ಇ ಎಡಿಜಿಪಿ ಅರುಣ್ ಚಕ್ರವರ್ತಿ, ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ಹಾಗೂ ಅಗ್ನಿಶಾಮಕ ಇಲಾಖೆ ಎಡಿಜಿಪಿ ಎಂ.ನಂಜುಂಡಸ್ವಾಮಿ ಸೇರಿದಂತೆ ಕೆಲ ಹಿರಿಯ ಐಪಿಎಸ್ ಅಧಿಕಾರಿಗಳು ನಗರ ಪೊಲೀಸ್ ಆಯುಕ್ತರ ಹುದ್ದೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು. ಇದೀಗ ಅಚ್ಚರಿಯ ಎಂಬಂತೆ ರಾಜ್ಯ ಸರ್ಕಾರ ಸೀಮಂತ್ ಕುಮಾರ್ ಸಿಂಗ್ ಅವರನ್ನು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ