
ಬೆಂಗಳೂರು (ಜೂ.6): ಆರ್‌ಸಿಬಿ ತಂಡದ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವಿಗೀಡಾದ ಪ್ರಕರಣದಲ್ಲಿ ಹೈಕೋರ್ಟ್ ಗುರುವಾರ ಮಧ್ಯಪ್ರವೇಶಿಸಿದೆ. ವಿಜಯೋತ್ಸವವನ್ನು ಯಾವಾಗ ಮತ್ತು ಯಾರು, ಯಾವ ರೀತಿಯಲ್ಲಿ ನಡೆಸಲು ನಿರ್ಧರಿಸಿದರು? ದುರಂತಕ್ಕೆ ಕಾರಣಗಳೇನು? ಎಂಬುದೂ ಸೇರಿ ಒಂಬತ್ತು ಪ್ರಶ್ನೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿರುವ ಕೋರ್ಟ್, ಜೂ.10ರಂದು ಉತ್ತರದ ಜತೆಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆಯೂ ಸೂಚಿಸಿದೆ.
ಕಾಲ್ತುಳಿತ ಘಟನೆ ಸಂಬಂಧ ಮಾಧ್ಯಮಗಳ ವರದಿ ಆಧರಿಸಿ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ದಾಖಲಿಸಲು ರಿಜಿಸ್ಟ್ರಿಗೆ ಆದೇಶಿಸಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
ಇದಕ್ಕೂ ಮುನ್ನ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್‌ಸಿಬಿ ಫ್ರಾಂಚೈಸಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್, ಡಿಎನ್‌ಎ ಈವೆಂಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈಗಾಗಲೇ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದ್ದು, ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆಗೆ ಸರ್ಕಾರ ಸೂಚಿಸಿದೆ. ಸಾರ್ವಜನಿಕ ಸಭೆ, ಸಮಾರಂಭ ಮತ್ತು ಸಂಭ್ರಮಾಚರಣೆ ವೇಳೆ ಜನಸಂದಣಿ ನಿಯಂತ್ರಿಸಲು ಹೊಸದಾಗಿ ಎಸ್‌ಒಪಿ ಹೊರಡಿಸಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಸರ್ಕಾರಕ್ಕೆ ಒಂಬತ್ತು ಪ್ರಶ್ನೆಗಳು:
ಕಾಲ್ತುಳಿತ ದುರಂತಕ್ಕೆ ದಾರಿಮಾಡಿಕೊಟ್ಟ ಕಾರಣಗಳು, ದುರಂತ ತಡೆಯಬಹುದಿತ್ತೇ, ಭವಿಷ್ಯದಲ್ಲಿ ಇಂತಹ ದುರಂತ ತಡೆಗಟ್ಟಲು ಯಾವ ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಕಂಡುಕೊಳ್ಳಲು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲು ನ್ಯಾಯಾಲಯ ನಿರ್ಧರಿಸಿತು. ಹಾಗಾಗಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ರಿಜಿಸ್ಟ್ರಿಗೆ ನ್ಯಾಯಪೀಠ ಆದೇಶದಲ್ಲಿ ಸೂಚಿಸಿತು.
ಜೊತೆಗೆ, ವಿಜಯೋತ್ಸವವನ್ನು ಯಾವಾಗ ಮತ್ತು ಯಾರು, ಯಾವ ರೀತಿಯಲ್ಲಿ ನಡೆಸಲು ನಿರ್ಧರಿಸಿದರು? ಸಂಚಾರ ನಿಯಂತ್ರಣಕ್ಕೆ ಯಾವ ಕ್ರಮ ತೆಗೆದುಕೊಳ್ಳಲಾಗಿತ್ತು? ಸಾರ್ವಜನಿಕರು-ಜನಸಂದಣಿ ನಿಯಂತ್ರಿಸಲು ಯಾವ ಕ್ರಮ ತೆಗೆದುಕೊಳ್ಳಲಾಗಿತ್ತು? ಸ್ಥಳದಲ್ಲಿ ಯಾವ ವೈದ್ಯಕೀಯ ಮತ್ತು ಇತರ ಸೌಲಭ್ಯ ವ್ಯವಸ್ಥೆ ಮಾಡಲಾಗಿತ್ತು? ಆಚರಣೆಗಳ ಸಮಯದಲ್ಲಿ ಎಷ್ಟು ಜನ ಪಾಲ್ಗೊಳ್ಳಬಹುದು ಎಂಬ ಬಗ್ಗೆ ಮುಂಚಿತವಾಗಿ ಮೌಲ್ಯಮಾಪನ ಮಾಡಲಾಗಿತ್ತೇ ಎಂಬ ಬಗ್ಗೆ ಸರ್ಕಾರ ಉತ್ತರ ನೀಡಬೇಕು.
ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಸ್ಥಳದಲ್ಲಿ ವೈದ್ಯಕೀಯ ತಜ್ಞರು ತಕ್ಷಣವೇ ಚಿಕಿತ್ಸೆ ನೀಡಿದ್ದಾರೆಯೇ? ಇಲ್ಲದಿದ್ದರೆ ಏಕೆ? ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಎಷ್ಟು ಸಮಯ ಹಿಡಿಯಿತು? ಯಾವುದೇ ಕ್ರೀಡಾಕೂಟ ಮತ್ತು ಈ ರೀತಿಯ ಆಚರಣೆಗಳಲ್ಲಿ 50 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಜನಸಂದಣಿಯನ್ನು ನಿರ್ವಹಿಸಲು ಯಾವುದೇ ಎಸ್‌ಒಪಿ ರೂಪಿಸಲಾಗಿದೆಯೇ? ಕಾರ್ಯಕ್ರಮ ಆಯೋಜಿಸಲು ಯಾವುದೇ ಅನುಮತಿ ಕೋರಲಾಗಿತ್ತೇ ಎಂಬ ಪ್ರಶ್ನೆಗೆ ಉತ್ತರ ನೀಡುವಂತೆ ಸರ್ಕಾರಕ್ಕೆ ನ್ಯಾಯಪೀಠ ಸೂಚನೆ ನೀಡಿದೆ.
2.50 ಲಕ್ಷ ಜನ ಬಂದಿದ್ದರಿಂದ ದುರಂತ-ಸರ್ಕಾರ:
ಮಧ್ಯಾಹ್ನ ಪ್ರಕರಣದ ವಿಚಾರಣೆಗೆ ಕೈಗೆತ್ತಿಕೊಂಡಾಗ ಸರ್ಕಾರದ ಪರ ರಾಜ್ಯ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಜರಾಗಿ, ವಿಜಯೋತ್ಸವ ಆಚರಣೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಪೇದೆಗಳು ಸೇರಿ 1,380 ಸಿಬ್ಬಂದಿ ನಿಯೋಜಿಸಲಾಗಿತ್ತು. ತಲಾ 25 ಸಿಬ್ಬಂದಿ ಒಳಗೊಂಡ 13 ಕೆಎಸ್‌ಆರ್‌ಪಿ ತುಕಡಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿತ್ತು. ಪೊಲೀಸ್ ಆಯುಕ್ತರು, ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರ, ಡಿಸಿಪಿ, ಎಸಿಪಿ ಸೇರಿ ಒಟ್ಟು 1,643 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು ಎಂದು ವಿವರಿಸಿದರು.
ಅಲ್ಲದೆ ಮೂರು ಅಗ್ನಿಶಾಮಕ ವಾಹನ, 2 ಆ್ಯಂಬುಲೆನ್ಸ್, 2ಡಿ-ಸ್ವಾಟ್, ಒಂದು ವಾಟರ್ ಟ್ಯಾಂಕರ್, 1 ಕಮಾಂಡ್-ಕಂಟ್ರೋಲ್ ವಾಹನ ನಿಯೋಜಿಸಲಾಗಿತ್ತು. ಈ ಹಿಂದೆ ಕ್ರಿಕೆಟ್ ಮ್ಯಾಚ್ ನಡೆಯುವಾಗ 789 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನಷ್ಟೇ ನಿಯೋಜಿಸಲಾಗಿತ್ತು. ಈ ಬಾರಿ ಅದರ ಎರಡುಪಟ್ಟು ನಿಯೋಜಿಸಲಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 34 ಸಾವಿರ ಜನರಷ್ಟೇ ಕೂಡಲು ಸ್ಥಳಾವಕಾಶವಿದೆ. ಆದರೆ, ರಾಜ್ಯದ ವಿವಿಧ ಭಾಗಗಳಿಂದ ವಿಜಯೋತ್ಸವಕ್ಕೆ 2.50 ಲಕ್ಷ ಮಂದಿ ಬಂದ ಕಾರಣ ಕಾಲ್ತುಳಿತ ಉಂಟಾಗಿ ಕ್ರೀಡಾಂಗಣದ ಗೇಟ್ ನಂ-7ರಲ್ಲಿ 2, ಗೇಟ್ ನಂ-6ರ ಬಳಿ 2, ಗೇಟ್ ನಂ 1 ಮತ್ತು 4ರ ಬಳಿ ತಲಾ ಒಂದರಂತೆ 11 ಮಂದಿ ಸಾವಿಗೀಡಾಗಿ, 56 ಜನ ಗಾಯಗೊಂಡಿದ್ದರು ಎಂದು ವಿವರಿಸಿದರು.
ಗಾಯಾಳುಗಳಿಗೆ ಕೂಡಲೇ ಅಗತ್ಯ ಚಿಕಿತ್ಸೆ ಕಲ್ಪಿಸಲಾಗಿದೆ. ಗಾಯಾಳುಗಳ ಪೈಕಿ 50 ಮಂದಿಯನ್ನು ಹೊರ ರೋಗಿಗಳಾಗಿ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಳಿದ 6 ಮಂದಿ ಒಳರೋಗಿಗಳಾದ್ದು ಚಿಕಿತ್ಸೆ ಮುಂದುವರಿಸಲಾಗಿದೆ. ಮೃತರಿಗೆ ತಲಾ 10 ಲಕ್ಷ ರು. ಪರಿಹಾರವನ್ನು ಸರ್ಕಾರ ಘೋಷಿಸಿದೆ. ಈಗಾಗಲೇ ಪ್ರಕರಣ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದು, ವರದಿ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ. ವರದಿ ಬಂದ ಕೂಡಲೇ ನ್ಯಾಯಾಲಯದ ಮುಂದೆ ಸಲ್ಲಿಸಲಾಗುವುದು. ಪ್ರಕರಣದಲ್ಲಿ ಸರ್ಕಾರ ಯಾವ ವಿಚಾರವನ್ನು ಬಚ್ಚಿಡುವುದಿಲ್ಲ. ನ್ಯಾಯಾಲಯಕ್ಕೆ ಅಗತ್ಯ ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಲು ಸಹಕಾರ ನೀಡಲಿದೆ ಎಂದು ಅಡ್ವೋಕೇಟ್ ಜನರಲ್ ನ್ಯಾಯಪೀಠಕ್ಕೆ ಭರವಸೆ ನೀಡಿದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ