
ಬೆಳಗಾವಿ(ಜ.05): ಸದ್ಯಕ್ಕೆ ಸಿಐಡಿ ಅಧಿಕಾರಿಗಳಿಗೆ ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೊಡುವುದಿಲ್ಲ ಎಂದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿ ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪರಿಷತ್ತಿನಲ್ಲಿ ಸಿಐಡಿ ತನಿಖೆಗೆ ಸ್ಥಳ ಮಹಜರಿಗೆ ಅನುಮತಿ ಕೊಡುತ್ತೀರಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸದನ ಅಡ್ಜರ್ನ್ ಆಗಿದೆ. ಸದನ ಲಾಕ್ ಆಗಿದೆ. ಸದನದ ಒಳಗಡೆ ಬಡಿದಾಟ ಹೊಡೆದಾಟವಾಗಿಲ್ಲ. ಪಂಚನಾಮೆ ಮಾಡಬೇಕು ಅಂದರೆ ಯಾವರೀತಿ ಮಾಡಬೇಕು ಎನ್ನುವುದನ್ನು ಸಿಐಡಿ ಹೇಳಲಿ. ಅನುಮತಿ ಕೊಡಬೇಕೋ ಕೊಡಬಾರದೋ ಅನೋದನ್ನ ಹೇಳೋಕೆ ಆಗೋದಿಲ್ಲ. ಪರಿಶೀಲನೆ ಮಾಡುತ್ತೇನೆ. ಸದ್ಯಕ್ಕೆ ಸಿಐಡಿ ಅಧಿಕಾರಿಗಳಿಗೆ ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಐಡಿಯವರು ಯಾವ ರೀತಿ ಸ್ಥಳ ಮಹಜರು ಮಾಡ್ತಾರೆ ಎಂದು ಹೇಳಬೇಕಾಗುತ್ತದೆ. ಅಲ್ಲೇನು ಕುರ್ಚಿ ಅಥವಾ ಟೇಬಲ್ ಸ್ಥಳ ಮಹಜರು ಮಾಡುತ್ತಾರೋ? ಅಥವಾ ಸದನಕ್ಕೆ ಕರೆದುಕೊಂಡು ಬಂದು ಮಾಡುತ್ತಾರೆ ಎನ್ನುವುದನ್ನು ಹೇಳಬೇಕು. ಯಾವ ರೀತಿ ಪಂಚನಾಮೆ ಮಾಡುತ್ತಾರೆ ಅನೋದನ್ನ ಸಿಐಡಿ ಹೇಳಲಿ. ಪಂಚನಾಮೆ ಮಾಡ್ತಾರೆ ಅಂದರೆ ಹೇಗೆ ಮಾಡ್ತಾರೆ ಎಂದು ಅವರು ಪ್ರಶ್ನಿಸಿದರು.
ಸಿಐಡಿ ಅಧಿಕಾರಿಗಳು ಸೂಕ್ತ ಸೂಕ್ತ ಕಾರಣ ಕಾರಣ ಕೊಟ್ಟರೆ ಮಹಜರಿಗೆ ಅವಕಾಶ ಕೊಡುತ್ತೀರಾ ಎಂಬ ಪ್ರ ಶ್ನೆಗೆ ಉತ್ತರಿಸಿ, ಸೂಕ್ತವಾದ ಕಾರಣವನ್ನು ಸಿಐಡಿ ನಮಗೆ ಕೊಡಲಿ. ಸದನ ಅಡ್ಡನ್ ಆಗಿದೆ. ಹೀ ಗಾಗಿ ನಮ್ಮೆ ಕ್ಯಾಮೆರಾ, ಆಡಿಯೋ, ವಿಡಿಯೋ ಆಟೋಮ್ಯಾಟಿಕ್ ಆಗಿ ಬಂದ್ ಆಗುತ್ತವೆ. ಸದನ ಮುಂದೂಡಲಾಗಿದೆ ಎಂದು ಹೇಳಿ ನಾನು ಒಂದು ಹೆಜ್ಜೆ ಮುಂದಿಟ್ಟರೂ ವಿಡಿಯೋ ಆಡಿಯೋ ಬಂದ್ ಆಗುತ್ತದೆ. ನಮಗೆ ಆ ವಿಡಿಯೋ, ಆಡಿಯೋ ಸಿಕ್ಕಿಲ್ಲ. ಮಾಧ್ಯಮಗಳು ಆಡಿಯೋ, ವಿಡಿಯೋ ಕೊಟ್ಟರೂ ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸುತ್ತೇನೆ ಎಂದರು.
ವಿಡಿಯೋ ಸಾಕ್ಷಿ ಕೊಡಿ ಎಂದು ಸಿಐಡಿ ನೀಡಿರುವ ಪತ್ರದ ಕುರಿತು ಮಾತನಾಡಿದ ಅವರು, ನಿನ್ನೆ ವಿಡಿಯೋ ಸಾಕ್ಷಿಯನ್ನು ಲಕ್ಷ್ಮೀ ಹೆಬ್ಬಾಳಕರ್ ಕೊಟ್ಟಿದ್ದಾರೆ. ಮೊದಲು ರವಿ ಕೊಟ್ಟಿದ್ದರು. ರವಿಯವರು ಕೊಟ್ಟಾಗ ಒಂದು ಸೈಡ್ ಆಗಿತ್ತು. ಈಗ ಎರಡು ಕಡೆಯಿಂದ ಬಂದಿದೆ. ನಮ್ಮ ಕಾರ್ಯದರ್ಶಿ ಜತೆಗೆ ನಮ್ಮದೇ ಆಗಿರುವ ತಂಡಕ್ಕೆ ವಿಡಿಯೋ ಕೊಟ್ಟಿದ್ದೇನೆ. ಅವರು ಏನು ರಿಪೋರ್ಟ್ ಕೊಡುತ್ತಾರೆ ನೋಡಿ ಎಫ್‌ಎಸ್‌ಎಲ್‌ಗೆ ಕಳುಹಿಸುತ್ತೇವೆ. ಅಲ್ಲಿಂದ ಬಂದ ಬಳಿಕ ಸತ್ಯಾಂಶ ನೋಡಿಕೊಂಡು ನಮ್ಮದೆಯಾಗಿರುವ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಸಿಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಡುವೆ ಸಂಧಾನದ ಕುರಿತಾಗಿ ಮಾತನಾಡಿದ ಅವರು, ಇವತ್ತು ನಮ್ಮ ಕಾರ್ಯದರ್ಶಿಗೆ ಹೇಳಿದ್ದೇನೆ. ನಾಳೆ ಅಥವಾ ನಾಡಿದ್ದು ಇಬ್ಬರಿಗೂ ಪತ್ರ ಬರೆಯಲು ನಿರ್ಧಾರ ಮಾಡಿದ್ದೇನೆ. ಈಗ ಇಬ್ಬರನ್ನು ನೋಡಿದರೆ ಸಂಧಾನ ಆಗುವ ರೀತಿ ಕಾಣಿಸುತ್ತಿಲ್ಲ. ಏಕೆಂದರೆ ಈಗ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಆದರೂ ಇಬ್ಬರಿಗೂ ಫೋನ್ ಮಾಡಿ ಸಂಧಾನ ಮಾಡಲು ಪ್ರಯತ್ನಿಸುವೆ. ಆದರೆ, ಶೇ.99ರಷ್ಟು ಸಂಧಾನ ಆಗಲ್ಲ ಎಂದು ಹೇಳಿದರು.
ಲಕ್ಷ್ಮಿ ಹೆಬ್ಬಾಳಕರ್ ಮತ್ತು ಸಿ.ಟಿ.ರವಿ ಇಬ್ಬರೂ 19ರಂದು ದೂರು ಕೊಟ್ಟಿದ್ದರು. 19ಕ್ಕೆ ಎರಡು ಕಂಪ್ಲೇಂಟ್ ನೋಡಿ ಅಂದೇ ನಾನು ತೀರ್ಮಾನ ಮಾಡಿದೆ. ಅಲ್ಲಿಗೆ ನಂದು ಮುಗಿತು. ಲಕ್ಷ್ಮೀ ಹೆಬ್ಬಾಳಕರ್‌ಮತ್ತೊಮ್ಮೆ ಸಿ.ಟಿ.ರವಿ ವಿರುದ್ಧ ದೂರು ಕೊಟ್ಟಿದ್ದಾರೆ. ಹೆಬ್ಬಾಳಕರ್ ಕೊಟ್ಟಿರುವ ದೂರನ್ನು ಸೋಮವಾರ ಪರಿಶೀಲನೆ ಮಾಡುತ್ತೇನೆ. ಸೋಮವಾರ ಮತ್ತು ಮಂಗಳವಾರ ಮತ್ತೊಮ್ಮೆ ವಿಡಿಯೋ ಆಡಿಯೋ ನೋಡುತ್ತೇವೆ. ಎಫ್‌ಎಸ್‌ಎಲ್‌ಗೆ ಕಳುಹಿಸುವ ಹಾಗೆ ಇದ್ದರೆ ಕಳುಹಿಸುತ್ತೇವೆ ಎಂದರು.
ಮತ್ತೊಮ್ಮೆ ಸಂಧಾನಕ್ಕೆ ಪ್ರಯತ್ನ ಮಾಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನೋಡೋಣ ಪಕ್ಷ, ಪಕ್ಷದಲ್ಲಿ ನಡೆದಿದೆ. ನಾನು ರವಿನ ಕೇಳಿದ್ರೆ ನಮ್ಮ ಅಧ್ಯಕ್ಷರನ್ನು ಕೇಳಿ ಅಂತಾನೆ. ಲಕ್ಷ್ಮೀ ಹೆಬ್ಬಾಳಕರ್ ಕೇಳಿದ್ರೆ ಸಿಎಂ ಕೇಳು ಅಂತಾರೆ. ಹೆಬ್ಬಾಳಕರ್ ಒಬ್ರು ರಾಜಕಾರಣಿ. ಅವರನ್ನು ಶಾಸಕಿ ನಾನು ಮಂತ್ರಿ ಅಂತಾ ಕನ್ಸಿಡರ್ ಮಾಡಿಲ್ಲ. ನಮ್ಮ ಮನೆಯಲ್ಲೂ ಹೆಣ್ಣುಮಗಳು ಇದ್ದಾರೆ. ಮರ್ಯಾದೆಯಿಂದ ಬಂದರೆ ನಾನು ಜವಾಬ್ದಾರಿ ಆಗುತ್ತೇನೆ. ಕಾಳಜಿ ವಹಿಸುತ್ತೇನೆ. ಒಬ್ಬ ಹೆಣ್ಣು ಮಗಳಿಗೆ ಯಾರು ಅನ್ನದೇ ಈ ರೀತಿ ಕಂಪ್ಲೇಂಟ್ ಕೊಡೋಕೆ ಬರಲ್ಲ. ಇಡೀ ದೇಶದ ತುಂಬಾ ಇದು ಹೋಗಿದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ