ಮುಡಾ ಹಗರಣ: ಬಿಜೆಪಿ ಪಾದಯಾತ್ರೆಗೆ ಅನುಮತಿ ನೀಡೋದಿಲ್ಲ, ಸಚಿವ ಜಿ.ಪರಮೇಶ್ವರ್‌

By Kannadaprabha News  |  First Published Jul 30, 2024, 5:30 AM IST

ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ- ಜೆಡಿಎಸ್‌ ಆ.3ರಿಂದ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಸರ್ಕಾರ ಹಾಗೂ ಪ್ರತಿಪಕ್ಷದ ನಡುವೆ ಸಂಘರ್ಷದ ಕಿಡಿ ಹೊತ್ತಿಸಿದೆ.
 


ಬೆಂಗಳೂರು(ಜು.30): ಮುಡಾ ಅಕ್ರಮದ ನೆಪದಲ್ಲಿ ಬಿಜೆಪಿ ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಗೆ ಅನುಮತಿ ನೀಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.
ಅಲ್ಲದೆ, ಒಂದು ವೇಳೆ ಬಿಜೆಪಿಯವರು ಪಾದಯಾತ್ರೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ನಾವು ರಾಜ್ಯದ ಜನರಿಗೆ ಬಿಜೆಪಿಗರ ಪಾದಯಾತ್ರೆಯ ದುರುದ್ದೇಶವನ್ನು ತಿಳಿಸುತ್ತೇವೆ ಎಂದು ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪ ಮಾಡಿ, ರಾಜ್ಯದ ಜನರಿಗೆ ತಪ್ಪು ಸಂದೇಶ ನೀಡುವ ಉದ್ದೇಶ ಬಿಜೆಪಿಯದ್ದು. ಕಾಂಗ್ರೆಸ್ ಈ ಹಿಂದೆ ನಡೆಸಿದ ಪಾದಯಾತ್ರೆಯಲ್ಲಿ ನಿಜಾಂಶವಿತ್ತು. ರಾಜ್ಯದ ಸಂಪತ್ತು ಉಳಿಸುವ ಸದುದ್ದೇಶದಿಂದ ಪಾದಯಾತ್ರೆ ನಡೆಸಿತ್ತು. ಆದರೆ, ಈಗ ಬಿಜೆಪಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ ಎಂದರು.

Tap to resize

Latest Videos

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ ಒಳಗೂ ರಾಜಕೀಯ!

ಕಾನೂನು ಬಾಹಿರವಾಗಿ ನಡೆಯದೇ ಇರುವ ಪ್ರಕರಣದ ಬಗ್ಗೆ ಜನರಿಗೆ ಪಾದಯಾತ್ರೆ ಮಾಡುವ ಮೂಲಕ ತಪ್ಪು ಮಾಹಿತಿ ಕೊಡಲು ಪ್ರಯತ್ನಿಸುತ್ತಿದ್ದಾರೆ.‌ ಈ ಪಾದಯಾತ್ರೆಗೆ ಅನುಮತಿ ನೀಡುವುದಿಲ್ಲ. ಬೇಕಾದರೆ ಅವರು ಪಾದಯಾತ್ರೆ ಮಾಡಲಿ. ನಮ್ಮದೇನೂ ಅಭ್ಯಂತರವಿಲ್ಲ. ನಾವು ರಾಜ್ಯದ ಜನರಿಗೆ ಬಿಜೆಪಿಗರ ಪಾದಯಾತ್ರೆಯ ದುರುದ್ದೇಶ ಮತ್ತು ಹಿಂದಿನ ನಮ್ಮ ಪಾದಯಾತ್ರೆಯ ಸದುದ್ದೇಶದ ವ್ಯತ್ಯಾಸವನ್ನು ತಿಳಿಸುತ್ತೇವೆ. ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಕಾನೂನುಬಾಹಿರವಾಗಿ ಯಾವುದೂ ನಡೆದಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸುತ್ತೇವೆ ಎಂದು ತಿಳಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರವನ್ನು ನಾವು ಸಮರ್ಥಿಸಿಕೊಳ್ಳುವ ಮಾತೇ ಇಲ್ಲ. ಈ ಕಾರಣಕ್ಕಾಗಿಯೇ ವಾಲ್ಮೀಕಿ ಹಗರಣ ಮತ್ತು ಮುಡಾ ಬಗ್ಗೆ ಸರಿಯಾದ ತನಿಖೆ ನಡೆಸಲು ಸಿದ್ದರಾಮಯ್ಯ ಅವರು ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ವರದಿ ಬಂದ ನಂತರ ಜನರಿಗೆ ತಿಳಿಯುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ತಿಳಿಸಿದರು.

ಸಿಡಿ ಶಿವಕುಮಾರನಿಂದ ಸರ್ಕಾರ ಹಾಳಾಗಿದೆ; ರಾಜ್ಯ ದಿವಾಳಿಯಾಗಿದೆ: ಡಿಕೆಶಿ ವಿರುದ್ಧ ಮತ್ತೆ ಹರಿಹಾಯ್ದ ರಮೇಶ್ ಜಾರಕಿಹೊಳಿ

ಕೈಗಾರಿಕೆಗಳು ವಾಪಸ್‌ ಹೋಗಿಲ್ಲ:

ಕೆಲ ಕೈಗಾರಿಕೆಗಳು ಪರ್ಯಾಯ ಆಯ್ಕೆಗಳನ್ನು ಇಟ್ಟುಕೊಂಡು ಬಂಡವಾಳ ಹೂಡಿಕೆ ಮಾಡಲು ಬಂದಿರುತ್ತವೆ. ಭೂಮಿ, ವಿದ್ಯುತ್‌, ನೀರು, ತೆರಿಗೆ ಇತ್ಯಾದಿ ಲಾಭವನ್ನು ನೋಡುತ್ತವೆ. ಎಲ್ಲಿ ಲಾಭ ಸಿಗುತ್ತದೆಯೋ ಅಲ್ಲಿಗೆ ಹೋಗುತ್ತವೆ. ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಹೀಗೆ ಎಲ್ಲಿಗಾದರೂ ಹೋಗುತ್ತವೆ. ರಾಜ್ಯಕ್ಕೆ ಬಂದ ಯಾವುದೇ ಕೈಗಾರಿಕೆಗಳು ವಾಪಸ್‌ ಹೋಗಿಲ್ಲ. ವಾಪಸ್‌ ಹೋಗುತ್ತೇವೆ ಎಂದು ಯಾರೂ ಹೇಳಿಲ್ಲ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಸುಮ್ಮನೆ ಆಪಾದನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಬಜೆಟ್‌ನಲ್ಲಿ ಏನೂ ಕೊಟ್ಟಿಲ್ಲ:

ಕೇಂದ್ರ ಬಜೆಟ್‌ನಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ಭದ್ರಾ ಯೋಜನೆಗೆ ಹಣ ಕೊಡಬೇಕಿತ್ತು, ಆದರೆ ಕೊಟ್ಟಿಲ್ಲ. ಜಿಎಸ್‌ಟಿ ಪಾಲು ಕೊಡುತ್ತಿಲ್ಲ. ಕೊಟ್ಟಿದ್ದೇವೆ, ಕೊಟ್ಟಿದ್ದೇವೆ ಅಂತಾರೆ. ಏನು ಕೊಟ್ಟಿದ್ದೇವೆ ಎಂಬುದನ್ನು ಹೇಳುತ್ತಿಲ್ಲ. ಬೆಂಗಳೂರು ದೇಶದ ಪ್ರತಿಷ್ಠಿತ ನಗರ. ಅದನ್ನು ಪ್ರಪಂಚಕ್ಕೆ ತೋರಿಸಬೇಕಲ್ವಾ? ನೀತಿ ಆಯೋಗಕ್ಕೆ ಮಮತಾ ಹೋಗಿ ವಾಕ್‌ಔಟ್‌ ಮಾಡಿ ಬಂದಿದ್ದಾರೆ. ನಾವೂ ಹೋಗಿ ವಾಕ್‌ಔಟ್‌ ಮಾಡಬೇಕಿತ್ತಾ ಎಂದು ಪ್ರಶ್ನಿಸಿದ ಅವರು, ರಾಜ್ಯ ಹಾಗೂ ಕೇಂದ್ರದ ನಡುವಿನ ಸಂಬಂಧ ಚೆನ್ನಾಗಿರಬೇಕು. ಅದಕ್ಕೆ ರಾಜ್ಯವನ್ನು ಚೆನ್ನಾಗಿ ನಡೆಸಿಕೊಳ್ಳಬೇಕು ಎಂದು ಹೇಳಿದರು.

click me!