2020ರ ಏಪ್ರಿಲ್‌ನಿಂದ 2023ರ ಮಾರ್ಚ್‌ವರೆಗೆ ಘೋಷಿಸಲಾದ ಯೋಜನೆಗಳು ಹಾಗೂ ಅನುಷ್ಠಾನಗೊಳಿಸಬೇಕಾದ ಗಡುವು ಮೀರಿದರೂ ಪೂರ್ಣಗೊಳ್ಳದ ಯೋಜನೆಗಳನ್ನು ಲೆಕ್ಕ ಹಾಕಿರುವ ಮಹಾ ಲೆಕ್ಕಪರಿಶೋಧಕರು, ಒಟ್ಟು 5,911.16 ಕೋಟಿ ರು. ಮೊತ್ತದ 5,838 ಯೋಜನೆಗಳ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಗಿರೀಶ್ ಗರಗ
ಬೆಂಗಳೂರು(ಜು.30): ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ಸಾವಿರಾರು ಯೋಜನೆಗಳ ಪೈಕಿ 5,911.16 ಕೋಟಿ ರು. ಮೊತ್ತದ 5,838 ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಹಿಂದಿನ ಸರ್ಕಾರ ವಿಫಲವಾಗಿದೆ ಎಂದು ಮಹಾಲೆಕ್ಕಪರಿಶೋಧಕರು ಪತ್ತೆ ಹಚ್ಚಿದ್ದು, ಈ ಕುರಿತು 2022-23ನೇ ಸಾಲಿನ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಿ ವರ್ಷ ರಾಜ್ಯ ಬಜೆಟ್‌ನಲ್ಲಿ ಲಕ್ಷಾಂತರ ಕೋಟಿ ರು. ಮೊತ್ತದ ಯೋಜನೆಗಳನ್ನು ಘೋಷಿಸಲಾಗುತ್ತದೆ. ಅದಾದ ನಂತರ ಆಯಾ ಇಲಾಖೆಯಿಂದ ಯೋಜನೆಗಳಿಗೆ ಅನುದಾನ ನಿಗದಿ ಮಾಡಿ, ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಅನುಷ್ಠಾನಕ್ಕೆ ಗುತ್ತಿಗೆದಾರರನ್ನು ನೇಮಿಸಲಾಗುತ್ತದೆ. ಹೀಗೆ ಗುತ್ತಿಗೆದಾರರನ್ನು ನೇಮಿಸುವ ಸಂದರ್ಭದಲ್ಲಿ ಇಂತಿಷ್ಟು ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗಡುವು ನಿಗದಿ ಮಾಡಲಾಗುತ್ತದೆ. ಆದರೆ, 2020ರ ಏಪ್ರಿಲ್‌ನಿಂದ 2023ರ ಮಾರ್ಚ್‌ವರೆಗೆ ಘೋಷಿಸಲಾದ ಯೋಜನೆಗಳು ಹಾಗೂ ಅನುಷ್ಠಾನಗೊಳಿಸಬೇಕಾದ ಗಡುವು ಮೀರಿದರೂ ಪೂರ್ಣಗೊಳ್ಳದ ಯೋಜನೆಗಳನ್ನು ಲೆಕ್ಕ ಹಾಕಿರುವ ಮಹಾ ಲೆಕ್ಕಪರಿಶೋಧಕರು, ಒಟ್ಟು 5,911.16 ಕೋಟಿ ರು. ಮೊತ್ತದ 5,838 ಯೋಜನೆಗಳ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಅಷ್ಟು ಮೊತ್ತದ ಕಾಮಗಾರಿಗಳ ಆರ್ಥಿಕ ಪ್ರಗತಿ 3,420.12 ಕೋಟಿ ರು.ಗಳಷ್ಟಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಗೊಡ್ಡು ಬೆದರಿಕೆಗೆ ನಾವು ಮಣಿಯಲ್ಲ, ಮುಡಾ ಪಾದಯಾತ್ರೆ ನಿಶ್ಚಿತ: ವಿಜಯೇಂದ್ರ ಕಿಡಿ
1 ಕೋಟಿ ರು.ಗೂ ಹೆಚ್ಚಿನ ಮೊತ್ತದ ಕಾಮಗಾರಿಗಳೇ ಹೆಚ್ಚು:
ಬಾಕಿ ಕಾಮಗಾರಿಗಳ ಪೈಕಿ 1 ಕೋಟಿ ರು.ಗೂ ಹೆಚ್ಚಿನ ಮೊತ್ತದ ಕಾಮಗಾರಿಗಳ ಸಂಖ್ಯೆಯೇ ಹೆಚ್ಚಿದೆ. 5,911.16 ಕೋಟಿ ರು. ಮೊತ್ತದ ಕಾಮಗಾರಿಗಳ ಪೈಕಿ 4,928.57 ಕೋಟಿ ರು. ಮೊತ್ತದ ಕಾಮಗಾರಿಗಳು 1 ಕೋಟಿ ರು.ಗೂ ಹೆಚ್ಚಿನ ಮೊತ್ತದ್ದಾಗಿವೆ. ಅಲ್ಲದೆ, ಅವುಗಳ ಸಂಖ್ಯೆ 3,233. ಹಾಗೆಯೇ, 1 ಕೋಟಿ ರು.ಗೂ ಕಡಿಮೆ ಮೊತ್ತದ ಕಾಮಗಾರಿಗಳ ಮೌಲ್ಯ 980.77 ಕೋಟಿ ರು.ಗಳಾಗಿದ್ದು, 2,605 ಕಾಮಗಾರಿಗಳು ಪೂರ್ಣಗೊಂಡಿಲ್ಲ.
ನೀರಾವರಿ ಸಂಬಂಧಿತ ಕಾಮಗಾರಿಗಳೇ ಹೆಚ್ಚು ಬಾಕಿ:
ಬಾಕಿ ಕಾಮಗಾರಿಗಳ ಪೈಕಿ ನೀರಾವರಿಗೆ ಸಂಬಂಧಿತ ಕಾಮಗಾರಿಗಳ ಮೊತ್ತ ಹಾಗೂ ಸಂಖ್ಯೆಯೇ ಹೆಚ್ಚಿದೆ. ಅದರಂತೆ ಜಲಸಂಪನ್ಮೂಲ ಇಲಾಖೆಗೆ ಸೇರಿದ 1,852.2 ಕೋಟಿ ರು. ಮೊತ್ತದ 2,688 ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಅದರಲ್ಲಿ ಚೆಕ್‌ಡ್ಯಾಂ ನಿರ್ಮಾಣ, ಏತ ನೀರಾವರಿ ಯೋಜನೆಗಳು, ತಡೆಗೋಡೆ ನಿರ್ಮಾಣ, ಕೆರೆಗಳ ಅಭಿವೃದ್ಧಿಯಂತಹ ಕಾಮಗಾರಿಗಳೂ ಸೇರಿವೆ. ಅದನ್ನು ಹೊರತುಪಡಿಸಿದರೆ 1,724.87 ಕೋಟಿ ರು. ಮೊತ್ತದ 1,845 ರಸ್ತೆ ಅಭಿವೃದ್ಧಿ ಕಾಮಗಾರಿಗಳು, 742.17 ಕೋಟಿ ರು. ಮೊತ್ತದ 445 ಕಟ್ಟಡಗಳ ನಿರ್ಮಾಣ ಕಾಮಗಾರಿ, 516.68 ಕೋಟಿ ರು. ಮೊತ್ತದ 588 ಸೇತುವೆಗಳ ನಿರ್ಮಾಣ ಕಾಮಗಾರಿಗಳು ಹಾಗೂ 1,075.2 ಕೋಟಿ ರು. ಮೊತ್ತದ 272 ಇತರ ಕಾಮಗಾರಿಗಳು ಬಾಕಿ ಉಳಿದಿವೆ. ಹೀಗೆ ಬಾಕಿ ಉಳಿದಿರುವ ಕಾಮಗಾರಿಗಳ ಆರ್ಥಿಕ ಪ್ರಗತಿ 3,420.12 ಕೋಟಿ ರು.ಗಳಷ್ಟಾಗಿದೆ. ಅದರಲ್ಲಿ 1 ಕೋಟಿ ರು.ಗೂ ಕಡಿಮೆ ಮೊತ್ತದ ಕಾಮಗಾರಿಗಳ ಆರ್ಥಿಕ ಪ್ರಗತಿ 408 ಕೋಟಿ ರು.ಗಳೂ ಸೇರಿದೆ.
2020-23ರವರೆಗಿನ ಬಾಕಿ ಕಾಮಗಾರಿಗಳ ವಿವರ
(1 ಕೋಟಿ ರು.ಗೂ ಹೆಚ್ಚಿನ ಮೊತ್ತದ ಕಾಮಗಾರಿಗಳು)
ವಿಭಾಗ ಒಟ್ಟು ಮೊತ್ತ (ಕೋಟಿ ರು.ಗಳಲ್ಲಿ) ಆರ್ಥಿಕ ಪ್ರಗತಿ (ಕೋಟಿ ರು.ಗಳಲ್ಲಿ) ಕಾಮಗಾರಿಗಳ ಸಂಖ್ಯೆ
ನೀರಾವರಿ 1,411.49 806.20 1,313
ರಸ್ತೆ 1,271.29 632.27 984
ಕಟ್ಟಡ ನಿರ್ಮಾಣ 696.56 433.14 307
ಸೇತುವೆ 475.8 301.43 366
ಇತರೆ 1073.40 839.67 263
ಒಟ್ಟು 4928.57 ಲಕ್ಷ ಕೋಟಿ ರು. 3012.73 ಕೋಟಿ ರು. 3,233
(1 ಕೋಟಿ ರು.ಗೂ ಕಡಿಮೆ ಮೊತ್ತದ ಕಾಮಗಾರಿಗಳು)
ವಿಭಾಗ ಒಟ್ಟು ಮೊತ್ತ (ಕೋಟಿ ರು.ಗಳಲ್ಲಿ) ಆರ್ಥಿಕ ಪ್ರಗತಿ (ಕೋಟಿ ರು.ಗಳಲ್ಲಿ) ಕಾಮಗಾರಿಗಳ ಸಂಖ್ಯೆ
ನೀರಾವರಿ 440 207 1,375
ರಸ್ತೆ 453 155 861
ಕಟ್ಟಡ ನಿರ್ಮಾಣ 45.61 26.80 138
ಸೇತುವೆ 40.87 18.36 222
ಇತರೆ 1.80 00 9
ಒಟ್ಟು 982.59 ಕೋಟಿ ರು. 408.12 ಕೋಟಿ ರು. 2,605