ಕೈಕೊಟ್ಟಹಿಂಗಾರು ಮಳೆ : ಕೇವಲ ಶೇ.38ರಷ್ಟು ಬಿತ್ತನೆ

By Web DeskFirst Published Nov 11, 2018, 9:01 AM IST
Highlights

ಹಿಂಗಾರು ವಿಳಂಬದಿಂದ ಈವರೆಗೆ ರಾಜ್ಯದಲ್ಲಿ ಶೇ.38ರಷ್ಟುಮಾತ್ರ ಬಿತ್ತನೆಯಾಗಿದ್ದು, ಇದೀಗ ಹಿಂಗಾರು ದುರ್ಬಲವಾಗಿರುವುದು ರೈತರಲ್ಲಿ ಮತ್ತಷ್ಟುಆತಂಕ ಸೃಷ್ಟಿಮಾಡಿದೆ.

ಬೆಂಗಳೂರು :  ಹಿಂಗಾರು ವಿಳಂಬದಿಂದ ಈವರೆಗೆ ರಾಜ್ಯದಲ್ಲಿ ಶೇ.38ರಷ್ಟುಮಾತ್ರ ಬಿತ್ತನೆಯಾಗಿದ್ದು, ಇದೀಗ ಹಿಂಗಾರು ದುರ್ಬಲವಾಗಿರುವುದು ರೈತರಲ್ಲಿ ಮತ್ತಷ್ಟುಆತಂಕ ಸೃಷ್ಟಿಮಾಡಿದೆ.

ಮುಂಗಾರು ಅವಧಿಯಲ್ಲಿ ಕೆಲವೆಡೆ ಅತಿವೃಷ್ಟಿ, ಇನ್ನು ಕೆಲವೆಡೆ ಅನಾವೃಷ್ಟಿಯಿಂದ ಕಂಗಾಲಾಗಿರುವ ರಾಜ್ಯದ ರೈತರಿಗೆ ಮತ್ತೊಂದು ಸಂಕಷ್ಟಎದುರಾಗಿದೆ. ಈಗಾಗಲೇ ತಡವಾಗಿ ಆರಂಭವಾಗಿರುವ ಹಿಂಗಾರು ದುರ್ಬಲವಾಗಿ ನಿರೀಕ್ಷಿತ ಮಳೆ ತರದಿರುವುದು ರೈತರಲ್ಲಿ ನಿರಾಶೆ ಉಂಟುಮಾಡಿದೆ.

ವಾಡಿಕೆಯಂತೆ ಪ್ರತಿವರ್ಷ ಅಕ್ಟೋಬರ್‌ ಮೊದಲ ವಾರದಲ್ಲಿ ಹಿಂಗಾರು ಪ್ರವೇಶ ಮಾಡಬೇಕಾಗಿತ್ತು. ಆದರೆ, ಸೆಪ್ಟೆಂಬರ್‌ ಕೊನೆ ಹಾಗೂ ಅಕ್ಟೋಬರ್‌ ಆರಂಭದಲ್ಲಿ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಹಿಂಗಾರು ಆರಂಭಕ್ಕೆ ಹಿನ್ನಡೆ ಉಂಟಾಗಿದೆ. ಇದೀಗ ನ.1ರಿಂದ ಹಿಂಗಾರು ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಘೋಷಣೆ ಮಾಡಿದೆ. ಆದರೆ, ನವೆಂಬರ್‌ ಆರಂಭದ ಎರಡು ದಿನಗಳಿಂದ ದಕ್ಷಿಣ ಭಾರತದ ರಾಜ್ಯದಲ್ಲಿ ಮಳೆಯಾಗಿದ್ದು ಬಿಟ್ಟರೆ ಮತ್ತೆ ರಾಜ್ಯದಲ್ಲಿ ಮಳೆಯಾಗಿಲ್ಲ. ಪ್ರಸಕ್ತ ವರ್ಷದಲ್ಲಿ ಹಿಂಗಾರು ಮಾರುತಗಳು ದುರ್ಬಲವಾಗಿರುವುದರಿಂದ ತಮಿಳುನಾಡು ಹಾಗೂ ಕೇರಳದಲ್ಲಿ ಮಾತ್ರ ಮಳೆಯಾಗುತ್ತಿದ್ದು, ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ.

11,500 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ:  ರಾಜ್ಯದಲ್ಲಿ ಹಿಂಗಾರು ಅವಧಿಯಲ್ಲಿ 32 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಬೇಕಾಗಿತ್ತು. ಆದರೆ, ಪ್ರಸಕ್ತ ವರ್ಷ ಹಿಂಗಾರು ಅವಧಿಯಲ್ಲಿ ಕೆಲವೆಡೆ ಸುರಿದ ಹಗುರ ಮಳೆಗೆ ಕೇವಲ 11,500 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಈವರೆಗೆ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 25 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಇದೀಗ ಹಿಂಗಾರು ದುರ್ಬಲವಾಗುವ ಮುನ್ಸೂಚನೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ ಬೆಳೆ ನಾಶವಾಗುವ ಆತಂಕ ಶುರುವಾಗಿದೆ.

ಶೇ.44ರಷ್ಟುಅಕ್ಟೋಬರ್‌ನಲ್ಲಿ ಕೊರತೆ:  ಅಕ್ಟೋಬರ್‌ನಲ್ಲಿ ವಾಡಿಕೆಯಂತೆ ರಾಜ್ಯದಲ್ಲಿ ಸರಾಸರಿ 136 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, ಕೇವಲ 77 ಮಿ.ಮೀ. ಮಾತ್ರ ಮಳೆಯಾಗಿದೆ. ಹೀಗಾಗಿ ಶೇ.44ರಷ್ಟುಕೊರತೆ ಉಂಟಾಗಿದೆ. ದಕ್ಷಿಣ ಒಳನಾಡಿನಲ್ಲಿ 146 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, 96 ಮಿ.ಮೀ. ಮಳೆಯಾಗುವ ಮೂಲಕ ಶೇ.34ರಷ್ಟುಕೊರತೆ ಉಂಟಾಗಿದೆ. ಉತ್ತರ ಒಳನಾಡಿನಲ್ಲಿ ಶೇ.64ರಷ್ಟು, ಮಲೆನಾಡಿನಲ್ಲಿ ಶೇ.36ರಷ್ಟುಹಾಗೂ ಕರಾವಳಿಯಲ್ಲಿ ಶೇ.16ರಷ್ಟುಕೊರತೆ ಉಂಟಾಗಿದೆ. ಈ ಕೊರತೆಯನ್ನು ಹಿಂಗಾರು ನವೆಂಬರ್‌ನಲ್ಲಿ ನೀಗಿಸುವುದು ಅನುಮಾನವಾಗಿದ್ದು, ನ.10ರ ವೇಳೆ ರಾಜ್ಯದಲ್ಲಿ ಶೇ.48ರಷ್ಟುಹಿಂಗಾರು ಕೊರತೆ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಮತ್ತೆ ವಾಯುಭಾರ ಕುಸಿತ:

ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ತಗ್ಗಿದ್ದು, ಇದೀಗ ಅಂಡಮಾನ್‌ ಭಾಗದಲ್ಲಿ ವಾಯುಭಾರ ಕುಸಿತಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ. ಅದು ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಗಳಿವೆ. ಇದರಿಂದ ನ.15ರ ನಂತರ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಎರಡ್ಮೂರು ದಿನ ಮಳೆಯಾಗುವ ಸೂಚನೆಗಳಿವೆ ಕೆಎಸ್‌ಎನ್‌ಡಿಎಂಸಿ ತಜ್ಞರು ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ವರ್ಷ ಹಿಂಗಾರು ಅಷ್ಟೊಂದು ಪ್ರಬಲವಾಗಿಲ್ಲ. ಮಳೆಯಾದರೂ ದಕ್ಷಿಣ ಮತ್ತು ಕರಾವಳಿ ಭಾಗದ ಕೆಲವೆಡೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಲಕ್ಷಣಗಳು ಮಾತ್ರ ಕಂಡುಬರುತ್ತಿವೆ. ನಿರೀಕ್ಷಿತ ಮಳೆಯ ಸಾಧ್ಯತೆಗಳಿಲ್ಲ.

- ಶ್ರೀನಿವಾಸ್‌ ರೆಡ್ಡಿ, ನಿರ್ದೇಶಕ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ


ಹಿಂಗಾರು ಕೊರತೆ ವಿವರ

ಅ.1ರಿಂದ ನ.10)

ಪ್ರದೇಶ    ವಾಡಿಕೆ    ಆದ ಮಳೆ    ಶೇ.

ದಕ್ಷಿಣ ಒಳನಾಡು    170    102    -40

ಉತ್ತರ ಒಳನಾಡು 124    40    -68

ಮಲೆನಾಡು    187    112    -40

ಕರಾವಳಿ 215    163 -24

ಒಟ್ಟಾರೆ ರಾಜ್ಯ    156    80    -48

ಬಾಕ್ಸ್‌

ಅಕ್ಟೋಬರ್‌ತಿಂಗಳ ಮಳೆ ಕೊರತೆ ಪ್ರಮಾಣ( ಮಿ.ಮೀ)

ಪ್ರದೇಶ    ವಾಡಿಕೆ    ಆದ ಮಳೆ    ಶೇ

ದಕ್ಷಿಣ ಒಳನಾಡು    146    96 -34

ಉತ್ತರ ಒಳನಾಡು 111    39    -64

ಮಲೆನಾಡು    161    104    -36

ಕರಾವಳಿ 187    157 -16

ರಾಜ್ಯ    136    77    -44


ವರದಿ :  ವಿಶ್ವನಾಥ ಮಲೇಬೆನ್ನೂರು

click me!