ರಾಜ್ಯದ 75% ಸೋಂಕಿತರಿಗೆ ಕೊರೋನಾ ಲಕ್ಷಣವೇ ಇಲ್ಲ!

By Suvarna NewsFirst Published May 7, 2020, 7:26 AM IST
Highlights

ರಾಜ್ಯದ 75% ಸೋಂಕಿತರಿಗೆ ಕೊರೋನಾ ಲಕ್ಷಣವೇ ಇಲ್ಲ!| ಆರೋಗ್ಯ ಇಲಾಖೆಯ ಪರಿಶೀಲನೆಯಿಂದ ಬೆಳಕಿಗೆ| ಸದ್ದಿಲ್ಲದೆ ಹಬ್ಬುತ್ತಿದೆಯೇ?| ರೋಗ ನಿರೋಧಕ ಶಕ್ತಿಯೇ?| ಕೊರೋನಾಗೆ ಸಾಮೂಹಿಕ ಇಮ್ಯುನಿಟಿ ಬೆಳೆಯುತ್ತಿರುವ ಸೂಚನೆಯೇ?| ಗೊತ್ತಿಲ್ಲದೆಯೇ ಬೇರೆಯವರಿಗೆ ಸೋಂಕು ಹರಡುವ ಅಪಾಯ ಹೆಚ್ಚಳ| ಮೇ 4ರವರೆಗೆ ರಾಜ್ಯದಲ್ಲಿ 651 ಕೊರೋನಾ ಕೇಸ್‌ ಪತ್ತೆ| ಈ ಪೈಕಿ 486 ಮಂದಿಗೆ ಸೋಂಕಿನ ಗುಣಲಕ್ಷಣಗಳೇ ಇಲ್ಲ| ಕೊರೋನಾ ಲಕ್ಷಣ ಕಾಣಿಸಿದ್ದು ಶೇ.25.49 ಜನಕ್ಕೆ ಮಾತ್ರ

ಶ್ರೀಕಾಂತ್‌.ಎನ್‌.ಗೌಡಸಂದ್ರ

ಬೆಂಗಳೂರು(ಮೇ.07): ರಾಜ್ಯದಲ್ಲಿ ಕೊರೋನಾ ಸೋಂಕು ದೃಢಪಟ್ಟಒಟ್ಟು ಪ್ರಕರಣಗಳ ಪೈಕಿ ಬರೋಬ್ಬರಿ ಶೇ.74.50 ಮಂದಿಗೆ ಸೋಂಕಿನ ಲಕ್ಷಣಗಳೇ ವರದಿಯಾಗಿಲ್ಲ. ಈ ಪೈಕಿ ಶೇ.50ರಷ್ಟುಜನ ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯೂ ಆಗಿದ್ದಾರೆ ಎಂಬ ಮಹತ್ವದ ವಿಚಾರ ಆರೋಗ್ಯ ಇಲಾಖೆ ಪರಿಶೀಲನೆಯಲ್ಲಿ ತಿಳಿದುಬಂದಿದೆ.

ಮೇ 4ರವರೆಗೆ ವರದಿಯಾಗಿರುವ 651 ಪ್ರಕರಣಗಳ ಪೈಕಿ 486 ಮಂದಿಗೆ ಸೋಂಕಿನ ಲಕ್ಷಣಗಳು ವರದಿಯಾಗಿಲ್ಲ. ಸಾವು ಹೊರತುಪಡಿಸಿ ಸಕ್ರಿಯ ಹಾಗೂ ಗುಣಮುಖರಾದ ಶೇ.77.84 ಮಂದಿಗೆ ಸೋಂಕು ಲಕ್ಷಣಗಳು ಗೋಚರಿಸಿಯೇ ಇಲ್ಲ. ಶೇ.25.49 ಮಂದಿಗೆ ಮಾತ್ರ ಲಕ್ಷಣ ಕಾಣಿಸಿದೆ.

ಹೀಗಾಗಿ ಸೋಂಕಿತರಲ್ಲಿ ಕೊರೋನಾ ವೈರಾಣು ವಿರುದ್ಧ ಸಾಮೂಹಿಕ ರೋಗ ನಿರೋಧಕ ಶಕ್ತಿ ರೂಪುಗೊಳ್ಳುತ್ತಿದೆಯೇ ಎಂಬ ಆಶಾಭಾವನೆಯೂ ಮೂಡಿದೆ. ರಾಜ್ಯದಲ್ಲಿ ಸಕ್ರಿಯ ಸೋಂಕಿಗಿಂತಲೂ ಹೆಚ್ಚು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಅಲ್ಲದೆ ಬಹುತೇಕರಲ್ಲಿ ಸೋಂಕಿನ ಲಕ್ಷಣಗಳೂ ಕಾಣುತ್ತಿಲ್ಲ. ಇದಕ್ಕೆ ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತಿರುವುದೇ ಕಾರಣ ಎನ್ನುತ್ತಾರೆ ತಜ್ಞರು.

ರಾಜ್ಯದಲ್ಲಿ ನಿನ್ನೆ 20 ಜನಕ್ಕೆ ಸೋಂಕು, ಒಂದೂ ಸಾವಿಲ್ಲ!

ಸೋಂಕಿತರಿಗೆ ಸೋಂಕು ಲಕ್ಷಣಗಳು ವ್ಯಕ್ತವಾಗದಿರುವುದು ಸಾಮೂಹಿಕ ರೋಗನಿರೋಧಕ ಶಕ್ತಿ ವೃದ್ಧಿಸುತ್ತಿದೆ ಎಂಬ ಆಶಾಭಾವನೆ ಮೂಡಿಸುವ ಜೊತೆಗೆ ರೋಗಿ ಬೇಗ ಗುಣಮುಖರಾಗಲು ನೆರವಾಗುತ್ತದೆ. ಆದರೆ, ರಾಜ್ಯದಲ್ಲಿ ಇಂತಹ ರೋಗ ಲಕ್ಷಣಗಳಿಲ್ಲದ ಕೊರೋನಾ ಸೋಂಕಿತರು ಪರೀಕ್ಷೆಗೆ ಒಳಪಡದೆ ಮುಕ್ತವಾಗಿ ಓಡಾಡುತ್ತಿರುವುದರಿಂದ ಸಾಕಷ್ಟುಜನರಿಗೆ ಸೋಂಕು ಹರಡುತ್ತಿರಬಹುದು. ಅಲ್ಲದೆ, ಇದೀಗ ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಇಂತಹ ರೋಗ ಲಕ್ಷಣಗಳಿಲ್ಲದ ಸೋಂಕಿತರು (ಎಸಿಮ್ಟಮ್ಯಾಟಿಕ್‌ ಕ್ಯಾರಿಯ​ರ್‍ಸ್) ರಾಜ್ಯಕ್ಕೆ ಭಾರೀ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸೋಂಕಿನ ಲಕ್ಷಣಗಳಾದ ತೀವ್ರ ಜ್ವರ, ನೆಗಡಿ, ಕೆಮ್ಮು, ತೀವ್ರ ಆಯಾಸ ಬಹುತೇಕರಲ್ಲಿ ಉಂಟಾಗುವುದಿಲ್ಲ. ಬಹುತೇಕರಿಗೆ ನಿರ್ಲಕ್ಷಿಸಬಹುದಾದಂತಹ ಸ್ವಲ್ಪ ತಲೆ ನೋವು ಅಥವಾ ಜ್ವರದ ಅನುಭವ ಆಗಿರುತ್ತದೆ. ಇದಕ್ಕೆ ಅವರಿಗೆ ಆಸ್ಪತ್ರೆಗೆ ಹೋಗಬೇಕು ಎಂದೂ ಸಹ ಅನಿಸುವುದಿಲ್ಲ. ಔಷಧ ಮಳಿಗೆಗಳಲ್ಲಿ ಮಾತ್ರೆ ತೆಗೆದುಕೊಂಡು ಸುಮ್ಮನಾಗುತ್ತಿದ್ದಾರೆ. ಹೀಗಾಗಿ ಇಂತಹವರ ಮೇಲೆ ಕಣ್ಣಿಡುವ ಸಲುವಾಗಿಯೇ ಔಷಧ ಮಳಿಗೆಗಳಲ್ಲಿ ಮಾತ್ರೆ ಖರೀದಿಸುವವರ ಪರಿಶೀಲನೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ಜಂಟಿ ನಿರ್ದೇಶಕ ಪ್ರಕಾಶ್‌ಕುಮಾರ್‌ ತಿಳಿಸಿದ್ದಾರೆ.

ಸೋಂಕು ಹರಡುವ ಅಪಾಯ:

ಸೋಂಕು ಲಕ್ಷಣಗಳಿಲ್ಲದೆ ಸೋಂಕು ಹೊತ್ತು ತಿರುಗುವವರಿಂದ ತೀವ್ರ ಅಪಾಯ ಕಾದಿದೆ. ಹೀಗಾಗಿ ಸಾರ್ವಜನಿಕರು ಪ್ರತಿಯೊಬ್ಬರನ್ನೂ ಸೋಂಕಿತರು ಎಂದು ಭಾವಿಸಿಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಏಕೆಂದರೆ, ರಾಜ್ಯದಲ್ಲಿ ಈವರೆಗೂ ಪತ್ತೆಯಾಗಿರುವ 240 ಸೋಂಕಿತರಿಗೆ ಸೋಂಕು ಮೂಲ ಪತ್ತೆಯಾಗಿಲ್ಲ. ಹೀಗಾಗಿ ಸ್ವಲ್ಪ ಅನಾರೋಗ್ಯದ ಅನುಭವ ಆದರೂ ಫೀವರ್‌ ಕ್ಲಿನಿಕ್‌ನಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ರಾಜ್ಯದ 14 ರೈಲ್ವೆ ಸ್ಟೇಷನಲ್ಲಿ ಸೋಂಕಿತರಿಗೆ ಟ್ರೀಟ್‌ಮೆಂಟ್‌: ಎಲ್ಲೆಲ್ಲಿ?

50 ವರ್ಷ ಮೇಲ್ಪಟ್ಟವರು ಪರೀಕ್ಷಿಸಿ

ರಾಜ್ಯದಲ್ಲಿನ ಸೋಂಕಿತರಲ್ಲಿ 20ರಿಂದ 40 ವರ್ಷದ ವಯೋಮಾನದ ಸದೃಢರೇ 313 ಮಂದಿ ಇದ್ದಾರೆ. ಹೀಗಾಗಿ ಬಹುತೇಕ ಸೋಂಕಿತರಿಗೆ ಲಕ್ಷಣಗಳು ಅನುಭವಕ್ಕೆ ಬರುವುದಿಲ್ಲ. ಹೀಗಾಗಿ ಸ್ವಲ್ಪ ಅನಾರೋಗ್ಯದ ಅನುಭವ ಆದರೂ ತಕ್ಷಣ ಫೀವರ್‌ ಕ್ಲಿನಿಕ್‌ಗೆ ಹೋಗಿ. 50 ವರ್ಷ ಮೇಲ್ಪಟ್ಟವರು ಹಾಗೂ ಕಿಡ್ನಿ, ಹೃದಯ, ಮಧುಮೇಹದಂತಹ ಸಮಸ್ಯೆಯುಳ್ಳವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.

- ಡಾ.ಸಿ. ನಾಗರಾಜ್‌, ನಿರ್ದೇಶಕರು, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ

click me!