ಪ್ರತ್ಯೇಕ ಕೃಷಿ ಬಜೆಟ್‌ ಇಲ್ಲ: ಆದರೆ ಸಿಎಂ ರಿಂದ ಸಿಗುತ್ತಾ ಗುಡ್ ನ್ಯೂಸ್?

By Kannadaprabha News  |  First Published Mar 3, 2020, 8:02 AM IST

2020-21ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ನಿರೀಕ್ಷೆಯಂತೆ ಕೃಷಿ ಸಂಬಂಧಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಿದ್ದು, ಅದರೊಂದಿಗೆ ಕೈಗಾರಿಕಾ ಕ್ಷೇತ್ರಕ್ಕೂ ಆದ್ಯತೆ ಸಿಗುವುದು ಬಹುತೇಕ ಖಚಿತವಾಗಿದೆ.


ಬೆಂಗಳೂರು [ಮಾ.03]:  ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಡಿಸಲಿರುವ 2020-21ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ನಿರೀಕ್ಷೆಯಂತೆ ಕೃಷಿ ಸಂಬಂಧಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಿದ್ದು, ಅದರೊಂದಿಗೆ ಕೈಗಾರಿಕಾ ಕ್ಷೇತ್ರಕ್ಕೂ ಆದ್ಯತೆ ಸಿಗುವುದು ಬಹುತೇಕ ಖಚಿತವಾಗಿದೆ.

ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸುವುದು ಬೇಡ ಎಂಬ ನಿಲುವಿಗೆ ಬಂದಿರುವ ಯಡಿಯೂರಪ್ಪ ಅವರು ಹೊಸದಾಗಿ ಜನಪ್ರಿಯ ಯೋಜನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಘೋಷಿಸುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ. ಅಲ್ಲದೆ, ಈಗಿರುವ ಯೋಜನೆಗಳ ಪೈಕಿ ಬಹುತೇಕವುಗಳನ್ನು ಮುಂದುವರೆಸುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.

Latest Videos

undefined

ಹಿಂದೆ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಯಡಿಯೂರಪ್ಪ ಅವರು ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸುವ ಮೂಲಕ ದಾಖಲೆ ಮೆರೆದಿದ್ದರು. ಅವರ ನಂತರ ಪ್ರತ್ಯೇಕ ಕೃಷಿ ಬಜೆಟ್‌ ಮಂಡನೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಯಡಿಯೂರಪ್ಪ ಅವರು ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸಬಹುದು ಎಂಬ ಮಾತು ಕೇಳಿಬಂದಿತ್ತು. ಆದರೆ, ಇದೀಗ ಅದನ್ನು ಸ್ವತಃ ಯಡಿಯೂರಪ್ಪ ಅವರೇ ಅಲ್ಲಗಳೆದಿದ್ದಾರೆ.

ಶಾಸಕರಿಗೆ ವಿಪ್‌ ಜಾರಿಗೊಳಿಸಿದ ಕಾಂಗ್ರೆಸ್‌, ತೀವ್ರ ಕುತೂಹಲ ಕೆರಳಿಸಿದ ಸಿದ್ದರಾಮಯ್ಯ ನಡೆ...

ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲದ ಕಾರಣ ಈಗಿರುವ ಯೋಜನೆಗಳ ಪೈಕಿ ಕೆಲವು ಯೋಜನೆಗಳ ಗಾತ್ರ ಕಡಿಮೆಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಬಡವರಿಗೆ ಉಚಿತವಾಗಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣವನ್ನು ಕಡಿತಗೊಳಿಸುವ ಬಗ್ಗೆ ಚರ್ಚೆ ನಡೆದಿದ್ದು, ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ.

ಕೇಂದ್ರದಿಂದ ರಾಜ್ಯಕ್ಕೆ ಈ ಬಾರಿ ಸುಮಾರು 12ರಿಂದ 13 ಸಾವಿರ ಕೋಟಿ ರು. ಅನುದಾನ ಕಡಿಮೆ ಬಂದಿದೆ. ಇದರಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ಭರಿಸುವಂತೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅದು ಬಂದಲ್ಲಿ ಹಣಕಾಸು ಪರಿಸ್ಥಿತಿ ಮತ್ತಷ್ಟುಉತ್ತಮಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಒತ್ತುವರಿ ಭೂಮಿ ಮಾರಾಟ ಮಾಡಿ ಹಣ ಸಂಗ್ರಹ

ಒತ್ತುವರಿಯಾಗಿರುವ ಸರ್ಕಾರಿ ಭೂಮಿ ವಶಪಡಿಸಿಕೊಂಡು ಅದನ್ನು ಮಾರಾಟ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಸಂಪನ್ಮೂಲ ಕ್ರೋಢೀಕರಿಸುವ ಉದ್ದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹೊಂದಿದ್ದಾರೆ.

ಸರ್ಕಾರಿ ಒತ್ತುವರಿ ಭೂಮಿ ತೆರವು ಸಮಿತಿಗೆ ಇದೀಗ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಮುಂದಿನ ಆರು ತಿಂಗಳ ಒಳಗಾಗಿ ವಶಪಡಿಸಿಕೊಂಡ ಭೂಮಿ ಮಾರಾಟ ಮಾಡುವ ಮೂಲಕ ಸುಮಾರು 6ರಿಂದ 7 ಸಾವಿರ ಕೋಟಿ ರು.ಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ತಿಳಿದುಬಂದಿದೆ.

click me!