ಶೇ.18ರಷ್ಟು ಮಂದಿ ಪ್ರವಾಸಿಗರಿಗೋಸ್ಕರ ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿರುವ ಮೈಸೂರು ಸಂಸದ ಪ್ರತಾಪ್ ಸಿಂಹಗೆ ಬಾಲಕಿಯೊಬ್ಬಳು ಭಾವನಾತ್ಮಕವಾಗಿ ಪ್ರತಿಕ್ರಿಯಸಿದ್ದು, ಭಾವನಾತ್ಮಕ ಬರಹದ ಬಿತ್ತಿ ಪತ್ರ ವೈರಲ್ ಆಗಿದೆ. ಹಾಗಾದ್ರೆ ಪತ್ರದಲ್ಲೇನಿದೆ..? ಮುಂದಿದೆ ನೋಡಿ.
ಕೊಡಗು, [ಮಾ.02]: ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಕೊಡಗಿನ ಬಾಲಕಿ, ಸಂಸದ ಪ್ರತಾಪ್ ಸಿಂಹಗೆ ಬರೆದಿರುವ ಭಾವನಾತ್ಮಕ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಲಕಿಯ ಪತ್ರಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಸಹ ಪ್ರತಿಕ್ರಿಯಿಸಿದ್ದಾರೆ. ಪ್ರತಾಪ್ ಸಿಂಹ ಅವರ ಪ್ರತಿಕ್ರಿಯೆ ನೋಡುವುದಕ್ಕೂ ಮೊದಲು ಬಾಲಕಿ ಬರೆದ ಬಿತ್ತಿ ಪತ್ರದಲ್ಲೇನಿದೆ ಎನ್ನುವುದನ್ನ ನೋಡೋಣ.
ವಿಶ್ವಾಸ ಕಳೆದುಕೊಂಡಿತಾ ಜೆಡಿಎಸ್, ಸದ್ದು ಮಾಡುತ್ತಿದೆ ದೀಪಿಕಾ ಡ್ರೆಸ್; ಮಾ.2ರ ಟಾಪ್ 10 ಸುದ್ದಿ!
ಸಂಸದರಿಗೊಂದು ಬಾಲಕಿ ಪತ್ರ
ನೀವು ಒಬ್ಬ ಮಗಳ ತಂದೆ, ನಾನು ಒಬ್ಬ ತಂದೆಯ ಮಗಳು ಎನ್ನುತ್ತಾ ರಾಷ್ಟ್ರೀಯ ಹೆದ್ದಾರಿ ಕೊಡಗಿಗೆ ಬರುವುದರಿಂದ ಜಿಲ್ಲೆಯ ಪರಿಸರಕ್ಕೆ ಮಾರಕವಾಗುತ್ತದೆಯೇ ಹೊರತು ಇಲ್ಲಿನವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾಳೆ.
ಶೇ.18ರಷ್ಟು ಮಂದಿ ಪ್ರವಾಸಿಗರಿಗೋಸ್ಕರ ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿಯೇ ಜಿಲ್ಲೆಯಲ್ಲಿ ಅರಣ್ಯ ನಾಶ ಆಗುತ್ತಿದೆ. ಜಿಲ್ಲೆಯ ಮಳೆಯ ಪ್ರಮಾಣ ಕುಸಿತಕ್ಕೆ ಕಾರಣವಾಗುತ್ತಿದೆ. ವಾರ್ಷಿಕ ಸರಾಸರಿ 220 ಇಂಚು ಮಳೆಯಾಗುತ್ತಿದ್ದಲ್ಲಿ ಈಗ 170 ಇಂಚು ಮಳೆಯಾಗುತ್ತಿದೆ.
ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಅಪರೂಪದ ಪ್ರಾಣಿ, ಪಕ್ಷಿಗಳು ಕಣ್ಮರೆಯಾಗುತ್ತಿದೆ. ಜಿಲ್ಲೆಯ ಹವಾಮಾನದಲ್ಲಿ ಬದಲಾವಣೆಗಳು ಕಂಡುಬರುತ್ತಿದೆ. ಕೊಡಗು ಪ್ಲಾಸ್ಟಿಕ್ ಮಯ ಆಗುತ್ತಿದ್ದು, ಜಿಲ್ಲೆಯ ಶೇ. 82ರಷ್ಟು ಮಂದಿ ಪಶ್ಚಿಮಘಟ್ಟದ ಕಾಡು, ಕಾವೇರಿ ನದಿಯನ್ನು ರಕ್ಷಿಸುವ ವ್ಯವಸಾಯವನ್ನೇ ನಂಬಿಕೊಂಡಿದ್ದಾರೆ ಎಂದಿದ್ದಾಳೆ.
ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ, ಕರಿಮೆಣಸು,ಭತ್ತಕ್ಕೆ ಬೆಂಬಲ ಬೆಲೆ ಕೊಡುವ ಮೂಲಕ ನೆರವಾಗಿ ಎಂದು ಸಂಸದರಿಗೆ ಮನವಿ ಮಾಡಿದ್ದಾಳೆ. ನಾನು ಮತ್ತು ನಿಮ್ಮ ಮಗಳು ಈಗಲೂ ಕಾವೇರಿ ನೀರು ಕುಡಿಯುತ್ತಿದ್ದೇವೆ. ಜಿಲ್ಲೆಯ ಪರಿಸರಕ್ಕೆ ನೀವು ಹಾನಿ ಮಾಡುವುದಿಲ್ಲವೆಂಬ ಭರವಸೆ ಇದೆ.
ಒಂದು ವೇಳೆ ಇಲ್ಲಿಯ ಪರಿಸರ ನಾಶ ಆದರೆ ಮುಂದೆ ನಾವು ಕಣ್ಮರೆಯಾಗುತ್ತೇವೆ. ಮುಂದೆ ನಿಮ್ಮ ಮಗಳು ಕಣ್ಮರೆಯಾದ ಕೊಡಗು ಮತ್ತು ಕೊಡವರು ಎಂಬ ಲೇಖನ ಬರೆಯುತ್ತಾರೆ ಎಂದು ಬಾಲಕಿ ಬಿತ್ತಿಪತ್ರದಲ್ಲಿ ಉಲ್ಲೇಖಿಸಿದ್ದಾಳೆ.
ಪ್ರತಾಪ್ ಸಿಂಹ ಪ್ರತಿಕ್ರಿಯೆ
ಬಾಲಕಿಯ ಸಾಮಾಜಿಕ ಕಳಕಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮತ್ತೊಂದೆಡೆ ಬಾಲಕಿಯ ಪತ್ರಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಉತ್ತರಿಸಿರುವ ಸಂಸದ ಪ್ರತಾಪ್ ಸಿಂಹ, ಪುಟಾಣಿ ರಾಜಕುಮಾರಿ, ನೀನು ಭಾರತದ ಭವಿಷ್ಯ. ಒಬ್ಬ ಜನಸೇವಕನಾಗಿ ನಿನ್ನ ಭವಿಷ್ಯವನ್ನು ಕಾಪಾಡುವುದು ನನ್ನ ಕರ್ತವ್ಯ. ನಿನ್ನ ಪತ್ರಕ್ಕೆ ವಿವರಣೆ ಕೊಡುತ್ತೇನೆ. ಸದ್ಯಕ್ಕೆ ಸಂಸತ್ ಅಧಿವೇಶನದಲ್ಲಿ ಇರುವುದರಿಂದ ಬ್ಯುಸಿಯಾಗಿದ್ದೇನೆ. ಒಂದೆರೆಡು ದಿನ ಸಮಯ ಕೊಡು. ಫೇಸ್‌ಬುಕ್ ಅಥವಾ ಲಿಖಿತವಾಗಿ ಉತ್ತರಿಸುತ್ತೇನೆ ಎಂದಿದ್ದಾರೆ.