ಅಕ್ರಮ ಬಿಪಿಎಲ್‌ ಕಾರ್ಡ್‌ : ಎಚ್ಚರ ಬೀಳಲಿದೆ ದಂಡಾಸ್ತ್ರ !

By Kannadaprabha NewsFirst Published Mar 3, 2020, 7:53 AM IST
Highlights

ಅನರ್ಹರು ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದರೆ ಅಂತವರ ವಿರುದ್ಧ ದಂಡಾಸ್ತ್ರ ಪ್ರಯೋಗ ಮಾಡಲು ಸರ್ಕಾರ ಮುಂದಾಗಿದ್ದು, ಇದೀಗ ಅಕ್ರಮಕ್ಕೂ ಇದಕ್ಕೆ ಸರ್ಕಾರವೇ ಕಾರಣ ಎನ್ನಲಾಗಿದೆ. 

ಸಂಪತ್‌ ತರೀಕೆರೆ 

ಬೆಂಗಳೂರು [ಮಾ.03]:  ಅನರ್ಹರು ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದಾರೆ ಎಂದು ಆಹಾರ ಇಲಾಖೆ ಏಕಾಏಕಿ ದಂಡಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಆದರೆ, ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಆಹಾರ ಇಲಾಖೆ ನಿಗದಿಪಡಿಸಿರುವ ಮಾನದಂಡಗಳೇ ವೈಜ್ಞಾನಿಕವಲ್ಲ. ಜತೆಗೆ, ಪಡಿತರ ಚೀಟಿ ಅನರ್ಹರ ಪಾಲಾಗಲು ಕಂದಾಯ ಇಲಾಖೆ ನೀಡುವ ಸುಳ್ಳು ಆದಾಯ ಪ್ರಮಾಣಪತ್ರಗಳೇ ಮೂಲ ಕಾರಣ ಎಂಬುದು ಬೆಳಕಿಗೆ ಬಂದಿದೆ.

ಆಹಾರ ಇಲಾಖೆಯು ವೈಜ್ಞಾನಿಕ ಮಾನದಂಡ ರೂಪಿಸದೆ ಹಾಗೂ ಕಂದಾಯ ಇಲಾಖೆಯು ಸುಳ್ಳು ಆದಾಯ ಪ್ರಮಾಣ ಪತ್ರ ನೀಡುವುದನ್ನು ತಡೆಯದೆ ಬೇರೇನೇ ಮಾಡಿದರೂ ಅಕ್ರಮ ಬಿಪಿಎಲ್‌ ಕಾರ್ಡ್‌ದಾರರು ಪಡಿತರ ಪಡೆಯುವುದನ್ನು ತಡೆಯುವುದು ಕಷ್ಟ.

ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಸರ್ಕಾರ ನಿಗದಿ ಮಾಡಿರುವ ಮಾನದಂಡಗಳು ಕಾಲಕಾಲಕ್ಕೆ ಪರಿಷ್ಕರಣೆ ಆಗುತ್ತಿಲ್ಲ. ಓಬೀರಾಯನ ಕಾಲದ ಮಾನದಂಡಗಳನ್ನೇ ನೆಚ್ಚಿಕೊಂಡು ಪಡಿತರ ಚೀಟಿ ವಿತರಣೆ ಮಾಡಲಾಗುತ್ತಿದೆ. ಸರ್ಕಾರದ ಮಾನದಂಡ ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ದಿನಗೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಕೃಷಿ ಕಾರ್ಮಿಕರೂ ಸಹ ಬಿಪಿಎಲ್‌ ಪಡಿತರ ಚೀಟಿ ಪಡೆಯುವುದು ಸಾಧ್ಯವಿಲ್ಲ.

ಆಹಾರ ಇಲಾಖೆಯು ಅವೈಜ್ಞಾನಿಕ ಮಾನದಂಡದ ಮೂಲಕ ಬಡವರ ಬಿಪಿಎಲ್‌ ಪಡಿತರ ಚೀಟಿ ಕಸಿಯಲು ಯತ್ನಿಸುತ್ತಿದ್ದರೆ, ಕಂದಾಯ ಇಲಾಖೆಯು ಸುಳ್ಳು ಪ್ರಮಾಣ ಪತ್ರ ವಿತರಿಸುವ ಮೂಲಕ ಅನರ್ಹರಿಗೆ ಹಾಗೂ ಉಳ್ಳವರಿಗೆ ಬಿಪಿಎಲ್‌ ಪಡಿತರ ಚೀಟಿ ಸೌಲಭ್ಯ ಒದಗಿಸುತ್ತಿದೆ.

- ಇದನ್ನು ಖುದ್ದು ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳೂ ಸೇರಿದಂತೆ ಸರ್ಕಾರದ ಬಹುತೇಕರು ಒಪ್ಪಿಕೊಳ್ಳುತ್ತಾರೆ. ಆದರೆ, ಸಾರ್ವಜನಿಕರ ಮೇಲೆ ದಂಡಾಸ್ತ್ರ ಪ್ರಯೋಗ ಮಾಡುವ ಮೊದಲು ತಮ್ಮ ಲೋಪಗಳನ್ನು ಸರಿಪಡಿಸಿಕೊಳ್ಳಲು ಮಾತ್ರ ಇಲಾಖೆಗಳು ಮುಂದಾಗುತ್ತಿಲ್ಲ ಎಂಬ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಕುಟುಂಬದ ಎಲ್ಲಾ ಸದಸ್ಯರ ಒಟ್ಟು ವಾರ್ಷಿಕ ವರಮಾನ 1.20 ಲಕ್ಷ ಮೀರಬಾರದು. ಜತೆಗೆ, ಗ್ರಾಮೀಣ ಭಾಗದಲ್ಲಿ 3 ಹೆಕ್ಟೇರ್‌ ಒಣ ಭೂಮಿ ಹೊಂದಿದ್ದರೂ ಬಿಪಿಎಲ್‌ ಪಡಿತರ ಚೀಟಿ ಪಡೆಯುವಂತಿಲ್ಲ. ನಗರ ಭಾಗದಲ್ಲಿ ಕನಿಷ್ಠ 1000 ಚದರಡಿ ವಿಸ್ತೀರ್ಣದ ಪಕ್ಕಾ ಮನೆಯಿದ್ದರೂ ಅವರ ಆದಾಯದ ಜತೆ ಸಂಬಂಧವಿಲ್ಲದೇ ಬಿಪಿಎಲ್‌ ಕಾರ್ಡ್‌ ನಿರಾಕರಿಸಬಹುದು!

ನಿಯಮಗಳು ಹೀಗಿರುವಾಗ, ಕಾನೂನುಬದ್ಧವಾಗಿ ಬಡವರು ಬಿಪಿಎಲ್‌ ಕಾರ್ಡ್‌ ಪಡೆಯಲು ಸಾಧ್ಯವೇ ಇಲ್ಲ. ಈ ನಿಯಮವನ್ನು ಯಥಾವತ್ತಾಗಿ ಪಾಲಿಸಿದರೆ ಶೇ.60ರಿಂದ 70ರಷ್ಟುಬಡ ಕುಟುಂಬಗಳೇ ಅನ್ನಭಾಗ್ಯದಿಂದ ವಂಚಿತರಾಗಬೇಕಾಗುತ್ತದೆ.

ಆದಾಯ ಮಿತಿಯೇ ಅವೈಜ್ಞಾನಿಕ:

ಬಿಪಿಎಲ್‌ ಕಾರ್ಡು ಪಡೆಯಲು ನಿಗದಿ ಮಾಡಿರುವ ವಾರ್ಷಿಕ ಆದಾಯ ಮಿತಿ 1.20 ಲಕ್ಷ ರುಪಾಯಿ. ಅಸಂಘಟಿತ ಕಾರ್ಮಿಕರು, ದಿನಗೂಲಿ ನೌಕರರು, ಗುತ್ತಿಗೆ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಸ್ಥೆಗಳಲ್ಲಿ ದುಡಿಯುವ ಗಾರ್ಮೆಂಟ್ಸ್‌ ಕಾರ್ಮಿಕರ ಕುಟುಂಬಕ್ಕೂ ಸಹ ವಾರ್ಷಿಕ ವರಮಾನ 1.20 ಲಕ್ಷ ರು.ಗಿಂತ ಹೆಚ್ಚಿರುತ್ತದೆ. ಏಕೆಂದರೆ, ಮನೆಯಲ್ಲಿ ಇಬ್ಬರು ದುಡಿಯುವ ಸದಸ್ಯರಿದ್ದರೆ ಇದೇ ಅಸಂಘಟಿತ ವಲಯದಲ್ಲಿದ್ದರೂ 2 ಲಕ್ಷ ರು.ಗಳಿಗಿಂತ ಹೆಚ್ಚಿನ ವರಮಾನ ಇರುತ್ತದೆ. ಹೀಗಿದ್ದಾಗ ಕುಟುಂಬದ ಒಟ್ಟು ಆದಾಯ ಮಾಸಿಕ 10 ಸಾವಿರ ರು.ಗಿಂತ ಹೆಚ್ಚಿದ್ದರೆ ಬಿಪಿಎಲ್‌ ಕಾರ್ಡ್‌ ಪಡೆಯುವಂತಿಲ್ಲ ಎನ್ನುವುದು ಯಾವ ನ್ಯಾಯ? ಸರ್ಕಾರವೇ ಈ ಅವೈಜ್ಞಾನಿಕ ನೀತಿ ಅಳವಡಿಸಿಕೊಂಡಿರುವ ಪರಿಣಾಮವಾಗಿ ಸಾರ್ವಜನಿಕರು ಸುಳ್ಳು ಮಾಹಿತಿ ಹಾಗೂ ದಾಖಲೆ ಒದಗಿಸುವ ಮೂಲಕ ಪಡಿತರ ಚೀಟಿ ಗಿಟ್ಟಿಸಲು ಅಡ್ಡಮಾರ್ಗ ತುಳಿಯುತ್ತಿದ್ದಾರೆ.

‘ಕೂಡಲೇ ರೇಷನ್‌ ಕಾರ್ಡ್‌ ಮರಳಿಸಲು ಸೂಚನೆ

‘ವೈಜ್ಞಾನಿಕ ಮಾನದಂಡ ರೂಪಿಸಿ ಅಗತ್ಯವಿರುವವರಿಗೆ ಪಡಿತರ ಚೀಟಿ ದೊರೆಯುವಂತೆ ಮಾಡುವ ದಿಸೆಯಲ್ಲಿ ಸರ್ಕಾರ ಯತ್ನಿಸಬೇಕು. ಪ್ರಸ್ತುತ ಬಿಪಿಎಲ್‌ ಕಾರ್ಡ್‌ ಪಡೆಯುತ್ತಿರುವ ಶೇ.80ರಷ್ಟುಮಂದಿಯ ವಾರ್ಷಿಕ ವರಮಾನ 1.20 ಲಕ್ಷ ರು. ಇದೆ. ಅವರ ಕಾರ್ಡ್‌ ಕಿತ್ತುಕೊಳ್ಳಲು ಸಾಧ್ಯವೇ’ ಎಂದು ಟ್ರೇಡ್‌ ಯೂನಿಯಲ್‌ ಕೋಆರ್ಡಿನೇಷನ್‌ ಸೆಂಟರ್‌ (ಟಿಯುಸಿಸಿ) ಪ್ರಧಾನ ಕಾರ್ಯದರ್ಶಿ ಜಿ.ಆರ್‌.ಶಿವಶಂಕರ್‌ ಪ್ರಶ್ನೆ ಮಾಡುತ್ತಾರೆ.

ಶೇ.87 ಅಸಂಘಟಿತ ಕಾರ್ಮಿಕರು ಬಡವರು:

ರಾಜ್ಯದಲ್ಲಿ ಅಂದಾಜು ಶೇ.87ರಷ್ಟುಮಂದಿ ಅಸಂಘಟಿತ ಕಾರ್ಮಿಕರು ಬಡತನದಲ್ಲಿದ್ದಾರೆ. ಅವರ ಇಡೀ ಕುಟುಂಬದ ಆದಾಯ 1.20 ಲಕ್ಷಕ್ಕಿಂತ ಹೆಚ್ಚಿದೆ ಎಂಬ ಕಾರಣಕ್ಕೆ ಸರ್ಕಾರ ಬಿಪಿಎಲ್‌ ಕಾರ್ಡು ವಾಪಸ್‌ ಪಡೆಯಲು ಸಾಧ್ಯವಿಲ್ಲ. ಪ್ರಸ್ತುತ ಜೀವನ ವೆಚ್ಚ ಆಧರಿಸಿ ಈ ಮಾನದಂಡವನ್ನು ಪರಿಷ್ಕರಿಸಬೇಕು. ಇಲ್ಲವೇ ಕಾರ್ಮಿಕರ ಕನಿಷ್ಠ ವೇತನವನ್ನು ತಿಂಗಳಿಗೆ 20 ಸಾವಿರ ರು. ನಿಗದಿ ಮಾಡಬೇಕು. ಇಲ್ಲದಿದ್ದರೆ ಕಾರ್ಮಿಕರ ಕುಟುಂಬ ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಸರ್ಕಾರ ಬಿಪಿಎಲ್‌ ಕಾರ್ಡ್‌ ವಾಪಸ್‌ ಪಡೆಯುವ ವೇಳೆಯಲ್ಲಿ ಕಾರ್ಮಿಕರ ಜೀವನದ ಬಗ್ಗೆಯೂ ಯೋಚಿಸಬೇಕು ಎಂದು ಶಿವಶಂಕರ್‌ ಒತ್ತಾಯಿಸುತ್ತಾರೆ.

ಕಂದಾಯ ಇಲಾಖೆಯಿಂದ ಸುಳ್ಳು ಆದಾಯ ಪತ್ರ:

ಆಹಾರ ಇಲಾಖೆಯು ಅವೈಜ್ಞಾನಿಕ ಮಾನದಂಡದ ಮೂಲಕ ಬಡವರ ಬಿಪಿಎಲ್‌ ಪಡಿತರ ಚೀಟಿ ಕಸಿಯಲು ಯತ್ನಿಸುತ್ತಿದ್ದರೆ, ಕಂದಾಯ ಇಲಾಖೆಯು ಸುಳ್ಳು ಪ್ರಮಾಣ ಪತ್ರದ ಮೂಲಕ ಅನರ್ಹರಿಗೆ ಬಿಪಿಎಲ್‌ ಪಡಿತರ ಚೀಟಿ ಸೌಲಭ್ಯ ಒದಗಿಸುತ್ತಿದೆ.

ಆದಾಯ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವವರು ಅರ್ಜಿಯಲ್ಲಿ ಎಷ್ಟುವರಮಾನ ಇದೆ ಎಂದು ನಮೂದು ಮಾಡಿರುತ್ತಾರೋ ಅಷ್ಟೇ ಆದಾಯಕ್ಕೆ ಕಂದಾಯ ಇಲಾಖೆ ಪ್ರಮಾಣಪತ್ರ ವಿತರಿಸುತ್ತದೆ. ಬಿಪಿಎಲ್‌ ಕಾರ್ಡ್‌ದಾರರ ಕುಟುಂಬದ ವಾರ್ಷಿಕ ವರಮಾನ ಕಂದಾಯ ಇಲಾಖೆಯ ಪ್ರಮಾಣ ಪತ್ರಗಳಲ್ಲಿ 11 ಸಾವಿರ ರು.ದಿಂದ 20 ಸಾವಿರ ರು. ಇರುತ್ತದೆ. ಇದು ಸತ್ಯಕ್ಕೆ ದೂರವಾದ ಹಾಗೂ ಸುಳ್ಳು ಮಾಹಿತಿ ಎಂದು ಗೊತ್ತಿದ್ದರೂ ಕಂದಾಯ ಇಲಾಖೆ ಈ ಪ್ರಮಾಣಪತ್ರ ನೀಡುತ್ತದೆ. ಇದನ್ನು ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಜತೆಗೆ ಆಹಾರ ಇಲಾಖೆಯೂ ಕಂದಾಯ ಇಲಾಖೆ ವಿತರಿಸುವ ಪ್ರಮಾಣಪತ್ರವನ್ನು ಕುರುಡಾಗಿ ಆಧರಿಸಿ ಬಿಪಿಎಲ್‌ ಕಾರ್ಡ್‌ ವಿತರಿಸುತ್ತಿದೆ. ಹೀಗಾಗಿ ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಪಡಿತರ ಚೀಟಿ ಪಡೆಯುವ ಸಾರ್ವಜನಿಕರಷ್ಟೇ ಹೊಣೆಗಾರಿಕೆ ಕಂದಾಯ ಇಲಾಖೆ ಹಾಗೂ ಆಹಾರ ಇಲಾಖೆಯದ್ದೂ ಇದೆ ಎಂಬುದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಅಭಿಪ್ರಾಯ.

ಮಾನದಂಡ ಪರಿಷ್ಕರಣೆಯಾಗಲಿ:

ಬಿಪಿಎಲ್‌ ಕಾರ್ಡ್‌ ಪಡೆಯಲು ಇರುವ ಮಾನದಂಡ ಪರಿಷ್ಕರಣೆ ಮಾಡಬೇಕು. ಪ್ರತಿ ತಿಂಗಳು 150 ಯುನಿಟ್‌ಗಿಂತ ಹೆಚ್ಚಿನ ವಿದ್ಯುಚ್ಛಕ್ತಿ ಬಳಕೆ ಮಾಡುವ ಕುಟುಂಬಕ್ಕೆ ಬಿಪಿಎಲ್‌ ಕಾರ್ಡ್‌ ಕೊಡಬಾರದು ಎಂಬ ನಿಯಮವನ್ನು 2017ರಲ್ಲಿ ತೆಗೆಯಲಾಗಿದೆ. ಇದೇ ರೀತಿ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರು.ಗಿಂತ ಕಡಿಮೆ ಇರಬೇಕೆಂಬ ನಿಯಮಕ್ಕೆ ತಿದ್ದುಪಡಿ ತಂದು 2.50-3 ಲಕ್ಷ ರು.ಗಿಂತ ಕಡಿಮೆ ಇರುವವರು ಬಿಪಿಎಲ್‌ ಕಾರ್ಡು ಪಡೆಯಲು ಅರ್ಹರು ಎಂದು ಪರಿಷ್ಕರಿಸಬೇಕು. ಇಲ್ಲಿದ್ದರೆ ತಮ್ಮ ಆದಾಯದಲ್ಲಿ ಶೇ.95ಕ್ಕಿಂತ ಹೆಚ್ಚು ಹಣವನ್ನು ಕುಟುಂಬದ ನಿರ್ವಹಣೆ, ಶಿಕ್ಷಣ, ಬಾಡಿಗೆ ಇತ್ಯಾದಿಗಳಿಗೆ ಖರ್ಚು ಮಾಡುವ ಬಡಕುಟುಂಬಗಳು ಅನ್ನಭಾಗ್ಯದಿಂದ ವಂಚಿತರಾಗಿ ಬೀದಿಗೆ ಬೀಳಬೇಕಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಸಿಐಟಿಯು ಅಧ್ಯಕ್ಷೆ ವರಲಕ್ಷ್ಮೇ ಒತ್ತಾಯಿಸಿದ್ದಾರೆ.

click me!