ಮದ್ಯದಿಂದ ನಿರೀಕ್ಷೆಗೂ ಮೀರಿ ಆದಾಯ, ದರ ಹೆಚ್ಚಿಸಲ್ಲ: ಸಚಿವ Gopalaiah

Kannadaprabha News   | Asianet News
Published : Feb 25, 2022, 03:30 AM IST
ಮದ್ಯದಿಂದ ನಿರೀಕ್ಷೆಗೂ ಮೀರಿ ಆದಾಯ, ದರ ಹೆಚ್ಚಿಸಲ್ಲ: ಸಚಿವ Gopalaiah

ಸಾರಾಂಶ

ರಾಜ್ಯದಲ್ಲಿ ಅಬಕಾರಿ ತೆರಿಗೆ ಆದಾಯ ನಿಗದಿತ ಗುರಿಗಿಂತ ಉತ್ತಮವಾಗಿದೆ. ಹೀಗಾಗಿ ಮುಂಬರುವ ಬಜೆಟ್‌ನಲ್ಲಿ ಮದ್ಯದ ದರ ಹೆಚ್ಚಳದ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.

ಬೆಂಗಳೂರು (ಫೆ.25): ರಾಜ್ಯದಲ್ಲಿ (Karnataka) ಅಬಕಾರಿ ತೆರಿಗೆ ಆದಾಯ ನಿಗದಿತ ಗುರಿಗಿಂತ ಉತ್ತಮವಾಗಿದೆ. ಹೀಗಾಗಿ ಮುಂಬರುವ ಬಜೆಟ್‌ನಲ್ಲಿ (Karnataka Budget) ಮದ್ಯದ ದರ (Liquor Price) ಹೆಚ್ಚಳದ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ (K Gopalaiah) ಹೇಳಿದ್ದಾರೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಅಬಕಾರಿ ಇಲಾಖೆ ಬಜೆಟ್‌ ಪೂರ್ವ ಸಿದ್ಧತೆ ಬಳಿಕ ಮಾತನಾಡಿದ ಅವರು, 2021-22ನೇ ಸಾಲಿನಲ್ಲಿ ಕೊರೋನಾ ನಡುವೆಯೇ ಉದ್ದೇಶಿತ ಗುರಿಗಿಂತ ಹೆಚ್ಚು ಅಬಕಾರಿ ಆದಾಯ ಬಂದಿದೆ. ಪ್ರಸಕ್ತ ಸಾಲಿನಲ್ಲಿ 24,570 ಕೋಟಿ ರು. ತೆರಿಗೆ ಸಂಗ್ರಹ ಗುರಿ ಇತ್ತು. ಆದರೆ 23,247 ಕೋಟಿ ರು. ಸಂಗ್ರಹವಾಗಿದ್ದು, ಬಾಕಿ ಉಳಿದಿರುವ 24 ದಿನಗಳಲ್ಲಿ ಆದಾಯ 25 ಸಾವಿರ ಕೋಟಿ ರು. ದಾಟಲಿದೆ. ಹೀಗಾಗಿ ದರ ಏರಿಕೆಯಂತಹ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಮಿಷನ್‌ ಹೆಚ್ಚಳ, ಶುಲ್ಕ ಪರಿಷ್ಕರಣೆ ಬಗ್ಗೆ ಸಿಎಂ ನಿರ್ಧಾರ: ಬಾರ್‌ ಮಾಲೀಕರಿಂದ ಕಮಿಷನ್‌ ಹೆಚ್ಚಳಕ್ಕೆ ಬಂದಿರುವ ಮನವಿ ಬಗ್ಗೆ ಪ್ರತಿಕ್ರಿಯಿಸಿದ ಗೋಪಾಲಯ್ಯ, ಶುಕ್ರವಾರ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆಯೊಂದಿಗೆ ಸಭೆ ನಡೆಸಲಿದ್ದಾರೆ. ಕಮಿಷನ್‌ ಹೆಚ್ಚಳ, ಪರವಾನಗಿ ಹಾಗೂ ಪರವಾನಗಿ ನವೀಕರಣ ಶುಲ್ಕ ಪರಿಷ್ಕಣೆ ಪ್ರಸ್ತಾವನೆ ಬಗ್ಗೆ ಈ ವೇಳೆ ನಿರ್ಧರಿಸಲಿದ್ದಾರೆ. 

ಬೆಂಗಳೂರಿನ ಖ್ಯಾತಿ ಉಳಿಸಲು ಸರ್ಕಾರ ಬದ್ಧ: Basavaraj Bommai

ಅಧಿಕಾರಿಗಳ ಕಿರುಕುಳ ತಪ್ಪಿಸುವುದು, ಇಲಾಖೆಗೆ ಹೊಸ ರೂಪ ನೀಡುವ ಬಗ್ಗೆಯೂ ಭರವಸೆ ನೀಡಿದ್ದಾರೆ ಎಂದರು.ಸಭೆಯಲ್ಲಿ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌, ಅಬಕಾರಿ ಆಯುಕ್ತ ರವಿಶಂಕರ್‌ ಸೇರಿ ಹಲವರು ಹಾಜರಿದ್ದರು.

ಅಂಗನವಾಡಿ ಸಿಬ್ಬಂದಿಗೆ ಬಜೆಟ್‌ನಲ್ಲಿ ಬಂಪರ್ ಸುದ್ದಿ: ಅಂಗನವಾಡಿ ಕಾರ್ಯಕರ್ತೆಯರು (Anganwadi Workers)ಮತ್ತು ಸಹಾಯಕಿಯರ ವೇತನ ಹಾಗೂ ಭತ್ಯೆಯನ್ನು ಹೆಚ್ಚಳ ಮಾಡುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದು, ಆಯವ್ಯಯದಲ್ಲಿ ವೇತನ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ (Halappa Achar) ಭರವಸೆ ನೀಡಿದ್ದಾರೆ.

ಬಿಜೆಪಿಯ (BJP)ಎಸ್‌.ವಿ. ಸಂಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವೇತನ ಹಾಗೂ ಭತ್ಯೆ ಹೆಚ್ಚಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದೇನೆ. ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ 4500 ರು. ರಾಜ್ಯ ಸರ್ಕಾರ 7300 ರು. ಸೇರಿಸಿ ವೇತನ ಕೊಡುತ್ತಿದ್ದೇವೆ. ಇದನ್ನು ಇನ್ನೂ ಹೆಚ್ಚಿಗೆ ಮಾಡಲು ಯತ್ನಿಸಲಾಗುವುದು ಎಂದರು.

ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಂಜೂರಾದ ಎ, ಬಿ, ಸಿ ಮತ್ತು ಡಿ ದರ್ಜೆಯ 2656 ಹುದ್ದೆಗಳು ಖಾಲಿ ಇವೆ. ಈ ಪೈಕಿ ನೇರ ನೇಮಕಾತಿ ಮೂಲಕ ಪ್ರಥಮ ದರ್ಜೆ ಸಹಾಯಕ 50, ದ್ವಿತೀಯ ದರ್ಜೆ ಸಹಾಯಕ 60, ಗೃಹ ಪಾಲಕ 45 ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವರು ವಿವರಿಸಿದರು. ಸೇವಾ ಹಿರಿತನದ ಆಧಾರದಲ್ಲಿ ವೇತನ ಮತ್ತು ನಿವೃತ್ತರಿಗೆ ಪಿಂಚಣಿ (Pension)ಕೊಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು  ಮತ್ತು ಸಹಾಯಕರು ಬೃಹತ್‌ ಪ್ರತಿಭಟನೆ ನಡೆಸಿದರು.

Karnataka Politics: ಕಾಂಗ್ರೆಸ್‌ನಿಂದ ನೀತಿಪಾಠ ಬೇಕಿಲ್ಲ: ಬೊಮ್ಮಾಯಿ

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ನಿಯಮಾವಳಿ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ 18 ಸಾವಿರ ರು.ಕನಿಷ್ಠ ವೇತನ ಕೊಡಬೇಕು. ಆದರೆ, ಈಗಲೂ 10 ಸಾವಿರ ರೂ.ಗಳಿಗೆ ದುಡಿಸಲಾಗುತ್ತಿದೆ. 

ರಾಜ್ಯದಲ್ಲಿ 62 ಸಾವಿರ ಅಂಗನವಾಡಿಗಳಲ್ಲಿ 1.24 ಲಕ್ಷ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. 2017ರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸತ್ಯಾಗ್ರಹ ನಡೆಸಿದಾಗ ಸರ್ಕಾರ ವೇತನ ಹೆಚ್ಚಿಸುವ ಆಶ್ವಾಸನೆ ನೀಡಿತ್ತು. ಅದನ್ನು ನಂಬಿ ನಾವು ಹೋರಾಟ ನಿಲ್ಲಿಸಿದ್ದೆವು. ಇದಾಗಿ ಐದು ವರ್ಷವಾದರೂ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಕೋವಿಡ್‌ ಕಾರಣದಿಂದಾಗಿ ಕಳೆದೆರಡು ವರ್ಷ ಸುಮ್ಮನಿದ್ದೆವು. ಈ ಬಾರಿ ಅನಿವಾರ್ಯವಾಗಿ ಬೀದಿಗಿಳಿದಿದ್ದೇವೆ ಎಂದು ಪ್ರತಿಭಟನಾನಿರತರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ