Hijab Row: ಸ್ತ್ರೀಯರು ತಲೆ ಮುಚ್ಚೋದರಿಂದ ಏನು ಸಮಸ್ಯೆ?

Kannadaprabha News   | Asianet News
Published : Feb 25, 2022, 02:00 AM IST
Hijab Row: ಸ್ತ್ರೀಯರು ತಲೆ ಮುಚ್ಚೋದರಿಂದ ಏನು ಸಮಸ್ಯೆ?

ಸಾರಾಂಶ

‘ಹಿಜಾಬ್‌ ನಿರ್ಬಂಧ ಆದೇಶದಿಂದ ವಿದ್ಯಾರ್ಥಿನಿಯರು ಒಂದೋ ಶಿಕ್ಷಣ ಬಿಡಬೇಕು, ಇಲ್ಲವೇ ನಮ್ಮ ತತ್ವಗಳನ್ನು ಬಿಡಬೇಕಾಗುತ್ತದೆ. ಆದ್ದರಿಂದ ಹಿಜಾಬ್‌ ಧರಿಸಿ ತರಗತಿಗಳ ಪ್ರವೇಶಕ್ಕೆ ಅವಕಾಶ ನೀಡಬೇಕು’ ಎಂದು ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯರ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದರು.

ಬೆಂಗಳೂರು (ಫೆ.25): ‘ಹಿಜಾಬ್‌ (Hijab) ನಿರ್ಬಂಧ ಆದೇಶದಿಂದ ವಿದ್ಯಾರ್ಥಿನಿಯರು ಒಂದೋ ಶಿಕ್ಷಣ ಬಿಡಬೇಕು, ಇಲ್ಲವೇ ನಮ್ಮ ತತ್ವಗಳನ್ನು ಬಿಡಬೇಕಾಗುತ್ತದೆ. ಆದ್ದರಿಂದ ಹಿಜಾಬ್‌ ಧರಿಸಿ ತರಗತಿಗಳ ಪ್ರವೇಶಕ್ಕೆ ಅವಕಾಶ ನೀಡಬೇಕು’ ಎಂದು ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯರ ಪರ ವಕೀಲರು ಹೈಕೋರ್ಟ್‌ಗೆ (High Court) ಮನವಿ ಮಾಡಿದರು.

ಹಿಜಾಬ್‌ ಧರಿಸಿ ಕಾಲೇಜು ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು (Muslim Students) ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌ ಅವರಿದ್ದ ವಿಸ್ತೃತ ಪೀಠದ ಮುಂದೆ ನ್ಯೂ ಹೊರೈಜಾನ್‌ ಕಾಲೇಜಿನ ವಿದ್ಯಾರ್ಥಿನಿಯರ ಪರ ಹಿರಿಯ ವಕೀಲ ಎ.ಎಂ.ಧರ್‌ ಗುರುವಾರ ವಾದ ಮಂಡಿಸಿದರು.

‘ವಿಗ್ರಹಗಳನ್ನು ಅಪವಿತ್ರಗೊಳಿಸಿದರೆ, ಜನರ ಭಾವನೆಗಳನ್ನು ಘಾಸಿಯಾಗಿ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎನ್ನಬಹುದು. ಆದರೆ, ಮಹಿಳೆಯರು ತಲೆಯನ್ನು ಮುಚ್ಚುವುದು ಯಾವ ರೀತಿಯ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ?’ ಎಂದು ಅವರು ವಾದಿಸಿದರು. ‘ಪ್ರವಾದಿಯವರು ಹೇಳಿರುವ ಎಲ್ಲದಕ್ಕೂ ನಾವು ಬದ್ಧವಾಗಿರಬೇಕು. ಇಲ್ಲವಾದರೆ ನಾವು ಮುಸ್ಲಿಮರಾಗಲು ಸಾಧ್ಯವಿಲ್ಲ. ಉತ್ತಮ ಜೀವನ ನಡೆಸಬೇಕಾದರೆ ನಾವು ಅದನ್ನು ಅನುಸರಿಸಬೇಕು’ ಎಂದರು.

Hijab Row: ಹಿಜಾಬ್‌ಗೆ ಸಿಎಫ್‌ಐ ಕುಮ್ಮಕ್ಕು, ಅವಕಾಶ ಬೇಡ: ಕಾಲೇಜು

ಜಾತ್ಯತೀತ ಶಿಕ್ಷಣಕ್ಕೆ ಸಮವಸ್ತ್ರ: ಉಪನ್ಯಾಸಕರ ಪರ ವಕೀಲ ಗುರು ಕೃಷ್ಣಕುಮಾರ್‌ ವಾದ ಮಂಡಿಸಿ, ‘ಸಮವಸ್ತ್ರ ನಿಯಮವನ್ನು ಸಂವಿಧಾನದ 25(1) ಆಧರಿಸಿ ಪ್ರಶ್ನಿಸುವುದು ಸರಿಯಲ್ಲ. ಮಕ್ಕಳ ನಡುವೆ ಜಾತಿ, ಧರ್ಮ, ಅಂತಸ್ತುಗಳ ತಾರತಮ್ಯ ಇರಬಾರದು. ಜಾತ್ಯತೀತ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯ. ಸಮವಸ್ತ್ರ ಜಾರಿ ಮಾಡಲಾಗಿದ್ದು, ಇದರಲ್ಲಿ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಮಧ್ಯಪ್ರವೇಶಿಸುವುದು ಸರ್ಕಾರದ ಆದೇಶದ ಉದ್ದೇಶವಲ್ಲ. ಜಾತ್ಯತೀತ ಶಿಕ್ಷಣ ಜಾರಿಯಾಗುವಂತೆ ನೋಡಿಕೊಳ್ಳುವುದಷ್ಟೇ ಸರ್ಕಾರದ ಉದ್ದೇಶ’ ಎಂದು ವಿವರಿಸಿದರು.

ಸಿಡಿಸಿ ಕಾನೂನು ಬದ್ಧವಲ್ಲ-ಕಾಮತ್‌: ಅರ್ಜಿದಾರರ ಪರವಾಗಿ ಹೆಚ್ಚುವರಿ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ತ ಕಾಮತ್‌, ‘ಕಾಲೇಜುಗಳಲ್ಲಿ ರಚನೆ ಮಾಡುವ ಕಾಲೇಜು ಅಭಿವೃದ್ದಿ ಸಮಿತಿ (ಸಿಡಿಸಿ) ಕಾನೂನುಬದ್ಧವಲ್ಲ. ಶಾಸಕ ನೇತೃತ್ವದ ಸಮಿತಿಗೆ ಶಾಸನದ ಬೆಂಬಲ ಇಲ್ಲ. ಸಮಿತಿಗೆ ಅಧಿಕಾರ ಕೊಡುವ ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿಲ್ಲ ನಿಜ. ಆದರೆ, ಶಿಕ್ಷಣ ಕಾಯ್ದೆಯ ಅಧಿಕಾರವನ್ನು ಸಿಡಿಸಿಗೆ ನೀಡಿರುವುದು ನಿಯಮ ಬಾಹಿರ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಕಾಲೇಜಿನ ಸಮವಸ್ತ್ರ ನೀತಿಯಲ್ಲಿ ಹಿಜಾಬ್‌ಗೆ ಅವಕಾಶ ನೀಡಿಲ್ಲ. ನೀವು ಹಿಜಾಬ್‌ ಧಾರ್ಮಿಕ ಹಕ್ಕು ಎನ್ನುತ್ತೀರಿ. ಹೀಗಾಗಿ, ಹಿಜಾಬ್‌ ಮೂಲಭೂತ ಹಕ್ಕೇ ಎಂಬುದನ್ನು ಪರಿಶೀಲಿಸಬೇಕು’ ಎಂದರು. ವಾದ ಮುಂದುವರೆಸಿದ ಕಾಮತ್‌, ‘ಹಿಜಾಬ್‌ ಧರಿಸಬೇಕೆಂಬುದು ವಿದ್ಯಾರ್ಥಿನಿಯರ ನಂಬಿಕೆಯಾಗಿದೆ. ಇದನ್ನು ನಿಯಂತ್ರಿಸಲು ಕಾನೂನಿನ ಬೆಂಬಲ ಎಲ್ಲಿದೆ? ಸರ್ಕಾರದ ಆದೇಶದಿಂದ ಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರದ ಆದೇಶಕ್ಕೇ ಕಾನೂನಿನ ಬಲವಿಲ್ಲ, ಆದ್ದರಿಂದ ಅದನ್ನು ರದ್ದುಪಡಿಸಬೇಕು’ ಎಂದರು.

Hijab Row : ಹಿಜಾಬ್ ಧಾರಣೆ ಕಡ್ಡಾಯ ಎಂದಾದರೆ  ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಅಲ್ಲವೇ?

ಮಾಧ್ಯಮಗಳ ನಿರ್ಬಂಧ ಕೋರಿದ್ದ ಅರ್ಜಿ ವಜಾ: ಹಿಜಾಬ್‌ ಧರಿಸಿರುವ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರನ್ನು ಮಾಧ್ಯಮಗಳು ಬೆನ್ನತ್ತಿ ಚಿತ್ರೀಕರಿಸದಂತೆ ಮತ್ತು ಪ್ರಸಾರ ಮಾಡದಂತೆ ಕೋರಿ ಅರ್ಜಿದಾರರ ಪರ ವಕೀಲರ ಕೋರಿದ್ದ ಮನವಿನ್ನು ಹೈಕೋರ್ಟ್‌ ವಜಾಗೊಳಿಸಿತು. ಅರ್ಜಿದಾರರ ಪರ ವಕೀಲರು ಹಾಜರಾಗದ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸಲಾಯಿತು.

ಸಿಎಫ್‌ಐ ವಿರುದ್ಧ ಎಫ್‌ಐಆರ್: ಶಿಕ್ಷಕರಿಗೆ ಬೆದರಿಕೆ ಹಾಕಿದ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (ಸಿಎಫ್‌ಐ) ಸಂಘಟನೆ ವಿರುದ್ಧ ಶಿಕ್ಷಕರು ನೀಡಿರುವ ದೂರಿನ ಮೇರೆಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಈ ಎಫ್‌ಐಆರ್‌ ಹಾಗೂ ಇತರೆ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವುದಾಗಿ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!