ನೌಕ್ರಿ ಕೊಡೋದು ಹ್ಯಾಂಗರ ಇರಲಿ, ಬದುಕಿದ್ರ ಸಾಕು: ಭೂ ಸಂತ್ರಸ್ತರ ಅಳಲು

Published : Apr 23, 2025, 09:46 AM ISTUpdated : Apr 23, 2025, 09:49 AM IST
ನೌಕ್ರಿ ಕೊಡೋದು ಹ್ಯಾಂಗರ ಇರಲಿ, ಬದುಕಿದ್ರ ಸಾಕು: ಭೂ ಸಂತ್ರಸ್ತರ ಅಳಲು

ಸಾರಾಂಶ

ಕೈಗಾರಿಕೆಗಳ ಸ್ಥಾಪನೆಗೆ ಜಮೀನು ನೀಡಿದರೆ ನಮಗೆಲ್ಲ ಉದ್ಯೋಗದ ಭರವಸೆ ನೀಡಲಾಗಿತ್ತು. ನೀವು ಅಥವಾ ನಿಮ್ಮ ಮಕ್ಕಳಿಗೆ ಗಾರ್ಮೆಂಟ್ಸ್‌ ಕಂಪನಿಗಳಲ್ಲಿ ಕೆಲಸ, ಒಳ್ಳೆ ಪಗಾರ ಕೊಡಲಾಗುತ್ತದೆ ಎಂದು ನಮ್ಮನ್ನು ನಂಬಿಸಿ, ನಮ್ಮ ಫಲವತ್ತಾದ ಜಮೀನುಗಳನ್ನು ಕೊಟ್ಟು ಮೋಸ ಹೋದ್ವಿ. 

ಆನಂದ್‌ ಎಂ. ಸೌದಿ

ಯಾದಗಿರಿ (ಏ.23): "ಕೈಗಾರಿಕೆಗಳ ಸ್ಥಾಪನೆಗೆ ಜಮೀನು ನೀಡಿದರೆ ನಮಗೆಲ್ಲ ಉದ್ಯೋಗದ ಭರವಸೆ ನೀಡಲಾಗಿತ್ತು. ನೀವು ಅಥವಾ ನಿಮ್ಮ ಮಕ್ಕಳಿಗೆ ಗಾರ್ಮೆಂಟ್ಸ್‌ ಕಂಪನಿಗಳಲ್ಲಿ ಕೆಲಸ, ಒಳ್ಳೆ ಪಗಾರ ಕೊಡಲಾಗುತ್ತದೆ ಎಂದು ನಮ್ಮನ್ನು ನಂಬಿಸಿ, ನಮ್ಮ ಫಲವತ್ತಾದ ಜಮೀನುಗಳನ್ನು ಕೊಟ್ಟು ಮೋಸ ಹೋದ್ವಿ. ಸದ್ಯಕ್ಕೆ, ಇಲ್ಲಿನ ವಾತಾವರಣ ನೋಡಿದರೆ, ಇಲ್ಲಿರೋ ಕಂಪನಿಗಳಲ್ಲಿ ನೌಕ್ರಿ ಮಾಡೋದು ಹ್ಯಾಂಗರ ಇರಲಿ, ನಮ್ಮೂರಾಗ ನಾವು ಬದುಕಿದರೆ ಸಾಕು ಅನ್ನೋ ಹಂಗಾಗೇದ..." ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನಿರ್ಮಾಣಕ್ಕೆಂದು ಸಾವಿರಾರು ಎಕರೆ ಕೃಷಿಭೂಮಿ ನೀಡಿದ ಈ ಭಾಗದ ಮುಗ್ಧ ರೈತರಿಗೆ ಭರವಸೆಗಳ ಬ ಲೂನ್‌ಗಳನ್ನು ತೋರಿಸಿದ್ದ ಸರ್ಕಾರಗಳು, ನಂತರ ಎಲ್ಲವನ್ನೂ ಮರೆತವರಂತೆ, ಈಗ ವಿಷಗಾಳಿ, ರೋಗ- ರುಜಿನಳಿಗೆ ಜನರು ಬದಲಿಯಾಗುವಂತಹ ವಾತಾವರಣ ಸೃಷ್ಟಿಸಿದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಉದ್ಯೋಗ, ಮಕ್ಕಳ ಭವಿಷ್ಯ, ಆರೋಗ್ಯ-ಶಿಕ್ಷಣದ ಭದ್ರತೆ ಮುಂತಾದವುಗಳು ಕೈಗೆಟುಕಿ, ಜೀವನ ಸರಿಯಾಗಬಹುದು ಎಂದು ನಂಬಿದ್ದ ಇಲ್ಲಿನ ಜನರು, ಭರವಸೆಗಳ ಈಡೇರದಿರಲಿ, ಬದುಕು ಸಾಗಿಸಲೂ ಈಗಿಲ್ಲಿ ಬೆಚ್ಚಿ ಬೀಳುವಂತಾಗಿದೆ. ಮೊದಲಿಗೆ ಆರಂಭಗೊಂಡ ರೈಲು ಗಾಲಿಗಳ ಅಚ್ಚು (ರೈಲ್ವೆ ಕೋಚ್‌) ತಯಾರಿಕಾ ಬೋಗಿ ಕಾರ್ಖಾನೆಯಂತೂ ಇವರ ನೆರಳೂ ಬೀಳದಂತೆ ನಿಗಾವಹಿಸುತ್ತಿದೆ. ಭೂ ಸಂತ್ರಸ್ತರ ಕುಟುಂಬಸ್ಥರಿಗೆ ನೀಡಬೇಕಾದ ಶೈಕ್ಷಣಿಕ ಆಧಾರದ ಮೇಲೆ ಇಲ್ಲಿ ನೀಡಬೇಕಿದ್ದ ಉದ್ಯೋಗ ಬೇರೆಯವರ ಪಾಲಾಗುತ್ತಿದೆ. 

ಇದನ್ನೂ ಓದಿ: ಹೃದಯವೇ ಬೆಳೆದಿರಲಿಲ್ಲ, 2ನೇ ಕೂಸನ್ನೂ ತೆಗೆಸಿಬಿಟ್ವಿ: ಗರ್ಭಪಾತಕ್ಕೆ ವೈದ್ಯರ ಸಲಹೆ

ಈ ಭಾಗದವರೇ ಅಲ್ಲದ ಹತ್ತಿಪ್ಪತ್ತು ಜನರಿಗೆ ಇಲ್ಲಿ ಗುತ್ತಿಗೆ ಆಧಾರದ ಮೇಲೆ ತರಬೇತಿ-ಉದ್ಯೋಗ ನೀಡುವ ಕಣ್ಣಾಮುಚ್ಚಾಲೆಯಾಟ ನಡೆದಿದೆ. ಆದರೆ, ವಾಸ್ತವದಲ್ಲಿ ಭೂಮಿ ಕಳೆದುಕೊಂಡು, ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದವರಿಂದ ಅರ್ಜಿಯೇನೋ ಪಡೆಯುತ್ತಾರೆ. ಆದರೆ, ನೌಕರಿ ಈವರೆಗೆ ನೀಡಿಲ್ಲ ಎಂದು ಶೆಟ್ಟಿಹಳ್ಳಿ ಗ್ರಾಮದ ಕಾಶೀನಾಥ್‌ ರೈಲ್ವೆ ಕೋಚ್‌ ಫ್ಯಾಕ್ಟರಿಯ ವರ್ತನೆ ಬಗ್ಗೆ ಕೆಂಡ ಕಾರುತ್ತಾರೆ. ನಮ್ಮ ಜಮೀನುಗಳಲ್ಲಿ ಕಾರ್ಖಾನೆ ಸ್ಥಾಪಿಸಿದ ಕಂಪನಿಗಳು, ಅಲ್ಲಿನ ಗೇಟನ್ನೂ ನಮ್ಮಿಂದ ಮುಟ್ಟಲು ಬಿಡುವುದಿಲ್ಲ. ಒಳಗೆ ಬಿಡುವ ಮಾತೆಲ್ಲಿಂದ ಬಂತ ಅಂತಾರೆ ಅವರು.

ಇದನ್ನೂ ಓದಿ: 35ಕ್ಕೆ ಕಣ್ಮಂಜು, 40 ವರ್ಷ ವಯಸ್ಸಿಗೇ ಕ್ಷಯರೋಗ: ಗ್ರಾಮಸ್ಥರಿಂದ ವಾಸ್ತವತೆಯ ಅನಾವರಣ

ಇನ್ನು, ಭೂಸ್ವಾಧೀನ ವೇಳೆ ಗಾರ್ಮೆಂಟ್‌ ಫ್ಯಾಕ್ಟರಿಯ ಬಗ್ಗೆ ಕಲ್ಪನೆ, ಭರವಸೆ, ಕನಸುಗಳನ್ನು ಸರ್ಕಾರ ತೋರಿಸಿತ್ತು. ವಿಷಗಾಳಿ ಕಾರುವ ಕೆಮಿಕಲ್‌- ತ್ಯಾಜ್ಯ ಕಂಪನಿಗಳನ್ನು ಇಲ್ಲಿ ಸ್ಥಾಪಿಸಲಾಗುತ್ತದೆ ಎಂಬುದು ಮೊದಲೇ ಗೊತ್ತಿದ್ದರೆ ನಾವ್ಯಾರೂ ಇಲ್ಲಿನ ಭೂಮಿ ನೀಡುತ್ತಿರಲಿಲ್ಲ ಎನ್ನುವ ಕಡೇಚೂರಿನ ಶರಣಪ್ಪ, ಕೆಮಿಕಲ್‌ ಕಂಪನಿಗಳಲ್ಲೂ ನಮಗೆ ವಾಚ್ಮೆನ್‌ ಕೆಲಸ ಸಿಗೋಲ್ಲ. ಅಲ್ಲಿನ ಒಳಗುಟ್ಟು ರಟ್ಟಾದೀತೆಂಬ ಕಾರಣಕ್ಕೆ ಸ್ಥಳೀಯರನ್ನು ಅಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ. ಕೊಟ್ಟರೂ, ಭಾರಿ ದುರ್ನಾತ ಹಾಗೂ ಕೆಮಿಕಲ್‌ ಘಾಟಿನ ವಿಭಾಗಕ್ಕೆ ಕಳುಹಿಸುತ್ತಾರೆ. ಸಹಜವಾಗಿ ಇದು ಸರಿಹೊಂದದ ಕಾರಣ, ಬದುಕಿದರೆ ಸಾಕು ಎಂಬ ಕಾರಣಕ್ಕೆ ನಮ್ಮವರು ನೌಕರಿ ಬಿಟ್ಟು ಹೊರಬರುತ್ತಾರೆ ಎಂದು ಕಂಪನಿಗಳ ಮರ್ಮ ಹೊರಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!