ರಾಜ್ಯ ರಾಜಧಾನಿಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೋವಿಡ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿದ್ದ ಬೆಂಗಳೂರು ಸರ್ವಪಕ್ಷಗಳ ಶಾಸಕರ ಸಭೆ ಅಂತ್ಯವಾಗಿದೆ .ಹಾಗಾದ್ರೆ ಸಭೆಯಲ್ಲಿ ಏನೆಲ್ಲಾ ಆಯ್ತು ಎನ್ನುವದನ್ನ ಸಚಿವ ಅಶೋಕ್ ಅವರು ಮಾಹಿತಿ ಕೊಟ್ಟಿದ್ದು, ಅದು ಈ ಕೆಳಗಿನಂತಿದೆ.
ಬೆಂಗಳೂರು, (ಜೂನ್.26): ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಬೆಂಗಳೂರನ್ನು ಲಾಕ್‌ಡೌನ್ ಮಾಡಬೇಕೆನ್ನುವ ವಿಚಾರವಾಗಿ ನಡೆದಿದ್ದ ಬೆಂಗಳೂರು ಸರ್ವಪಕ್ಷಗಳ ಶಾಸಕರ ಸಭೆ ಅಂತ್ಯವಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ, ಕಂದಾಯ ಸಚಿವ ಹಾಗೂ ಬೆಂಗಳೂರು ಕೊರೋನಾ ನಿಯಂತ್ರಣ ಉಸ್ತುವಾರಿ ಆಗಿರುವ ಆರ್. ಅಶೋಕ್ ಅವರು ಸಭೆಯಲ್ಲಾದ ಚರ್ಚೆಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಅದು ಈ ಕೆಳಗಿನಂತಿದೆ.
undefined
ಬೆಂಗಳೂರು ಲಾಕ್‌ಡೌನ್: ಶಾಸಕರು -ಸಚಿವರು-ಸಂಸದರು ಹೇಳೋದೇನು..?
ಲಾಕ್‌ಡೌನ್ ಇಲ್ಲ
ಹೌದು....ಯಾವುದೇ ಕಾರಣಕ್ಕೂ ಬೆಂಗಳೂರು ಲಾಕ್‌ಡೌನ್ ಮಾಡುವುದಿಲ್ಲ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು. ಕೊರೋನಾ ಜತೆ ನಮ್ಮ ಜೀವನ ನಡೆಯಬೇಕು. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೆ ಮತ್ತೆ ಲಾಕ್‌ಡೌನ್ ಮಾಡುವುದಿಲ್ಲ ಎಂದು ಹೇಳಿದರು. ಅಲ್ಲದೇ ಕೊರೋನಾ ಸೋಂಕಿತರು ಕಂಡುಬಂದ ಏರಿಯಾವನ್ನು ಸೀಲ್‌ಡೌನ್ ಮಾಡುವುದಿಲ್ಲ. ಬದಲಾಗಿ ಸೋಂಕಿತ ಮನೆಗಳನ್ನ ಮಾತ್ರ ಸೀಲ್‌ಡೌನ್ ಮಾಡಲಾಗುವುದು ಎಂದು ಹೇಳಿದರು.
ಬೆಡ್ ಅಲಾರ್ಟ್‌ಮೆಂಟ್‌ಗೆ ಐಎಎಸ್ ಆಫೀಸರ್
ರಾಜ್ಯದಲ್ಲಿ ಈವರೆಗೆ 5.53 ಲಕ್ಷ ಜನರ ಸ್ಯಾಂಪಲ್ ಪರೀಕ್ಷೆ ನಡೆದಿದೆ. ಬೆಂಗಳೂರಿನಲ್ಲಿ ಪ್ರತಿದಿನ 5 ಸಾವಿರ ಸ್ಯಾಂಪಲ್ ಪರೀಕ್ಷೆ ಮಾಡಲಾಗುತ್ತಿದೆ. ಬೆಡ್ ಹಂಚಿಕೆ ಸಂಬಂಧ ವಿಧಾನಸಭಾವಾರು ನೋಡಲ್ ಆಫೀಸರ್ ಆಗಿ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರನ್ನ ನೇಮಿಸಲಾಗಿದೆ. ಕ್ವಾರಂಟೈನ್ ಮಾಡುವುದಕ್ಕೆ ಹೋಟೆಲ್ ಸಾಲದೇ ಹೋದರೆ, ಕಲ್ಯಾಣ ಮಂಟಪಗಳ ಬಳಕೆ ಮಾಡುತ್ತೇವೆ. ಅಲ್ಲದೇ ಆಯಾ ವಿಧಾಸಬಾ ಕ್ಷೇತ್ರ ಎಲ್ಲಾ ಶಾಸಕರಿಗೂ ಆಸ್ಪತ್ರೆಗಳನ್ನು ಪರಿಶೀಲನೆ ಮಾಡಲು ಮನವಿ ಮಾಡಿದ್ದೇವೆ ಎಂದರು.
ಎಲ್ಲಾ ಗೊಂದಲಗಳಿಗೆ ತೆರೆ
ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚುತ್ತಿರುವುದರಿಂದ ಮತ್ತೆ ಲಾಕ್‌ಡೌನ್ ಸುದ್ದಿ ಹರಿದಾಡುತ್ತಿತ್ತು. ಅದರಲ್ಲೂ ಬೆಂಗಳೂರು ಲಾಕ್‌ಡೌನ್ ಫಿಕ್ಸ್ ಅಂತೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದವು. ಆದ್ರೆ, ಯಾವುದೇ ಲಾಕ್‌ಡೌನ್ ಇಲ್ಲ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದ್ದು, ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಇದಕ್ಕೂ ಮುನ್ನ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಹ ಲಾಕ್‌ಡೌನ್ ಇಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.